ಕೂಲಿ ಚಿತ್ರೀಕರಣದ ಬೆನ್ನಲ್ಲೇ ಮತ್ತೆ ಹಿಮಾಲಯದತ್ತ ಮುಖ ಮಾಡಿದ ರಜನೀಕಾಂತ್: ಏನಿದರ ಔಚಿತ್ಯ? ನಟ ಹೇಳಿದ್ದೇನು?
ಸೂಪರ್‌ಸ್ಟಾರ್ ರಜನೀಕಾಂತ್ (Rajinikanth) ಅವರು ದಿನದಿಂದ ದಿನಕ್ಕೆ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಆಗಾಗ್ಗೆ ಶಾಂತಿ ಕಂಡುಕೊಳ್ಳಲು ಹಿಮಾಲಯಕ್ಕೆ ಹೋಗುವುದು ಇದೆ. ಕಳೆದ ವರ್ಷ ಅವರ ಅಭಿನಯದ ಜೈಲರ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿದ್ದರೆ, ಅತ್ತ ರಜನೀಕಾಂತ್ ಹಿಮಾಲಯದಲ್ಲಿ ಪ್ರವಾಸದಲ್ಲಿದ್ದರು. ರಜನೀಕಾಂತ್ ಅವರು ಹಿಮಾಲಯಕ್ಕೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಕೋವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅವರಿಗೆ ಅಲ್ಲಿಗೆ ಹೋಗಿರಲಿಲ್ಲ. ಆದರೆ ಕಳೆದ ಆಗಸ್ಟ್ನಲ್ಲಿ ‘ಜೈಲರ್’ ಸಿನಿಮಾ ರಿಲೀಸ್ ಬೆನ್ನಲ್ಲೇ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಇದೀಗ ಅವರ ಕೂಲಿ ಚಿತ್ರದ ಶೂಟಿಂಗ್ ಶುರುವಾಗಬೇಕಿದೆ. ಈಗಲೂ ನಟ ಹಿಮಾಲಯದತ್ತ ಮುಖ ಮಾಡಿದ್ದಾರೆ. ಈಗಾಗಲೇ ಕೇದರನಾಥಕ್ಕೆ ಹೋಗಿರುವ ಅವರು ಹಿಮಾಲಯಕ್ಕೂ (Himalaya) ಭೇಟಿ ನೀಡಲಿದ್ದಾರೆ. ಅಲ್ಲಿನ ಗುಹೆಗಳಲ್ಲಿ ಅಧ್ಯಾತ್ಮದ ಹೊಸ ಅನುಭವ ಪಡೆಯಲಿದ್ದಾರೆ. ಅಲ್ಲಿಂದ ವಾಪಸ್ ಬಂದ ನಂತರ ‘ಕೂಲಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ರಜನೀಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ಆದರೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ರಜನೀಕಾಂತ್ ಅವರು ಹಲವು ವರ್ಷಗಳಿಂದ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿದ್ದಾರೆ. ತಮ್ಮ ಗುರು ಬಾಬಾಜಿ ಅವರ ಬಳಿ ತೆರಳಿ ಅಲ್ಲಿ ಸರಿಸುಮಾರು ಹದಿನೈದು ದಿನಗಳ ಕಾಲ ಧ್ಯಾನ ಮಾಡಿ ಮನಸ್ಸು ಹಾಗೂ ದೇಹವನ್ನು ಹಗುರ ಮಾಡಿಕೊಳ್ಳುವುದು ನಟ ರಜನೀಕಾಂತ್ ಅಭ್ಯಾಸ ಎನ್ನಲಾಗಿದೆ. ಈ ಮೂಲಕ ಆತ್ಮವನ್ನು ತಲುಪುವ ಹಲವು ವರ್ಷಗಳ ನಿರಂತರ ಪ್ರಯತ್ನದಲ್ಲಿ ನಟ ರಜನೀಕಾಂತ್ ಇದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡುತ್ತಾರೆ. ಬದ್ರಿನಾಥ್, ಕೇದಾರನಾಥ್ ಮುಂತಾದ ಸ್ಥಳಗಳಿಗೆ ತೆರಳುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಸಿನಿಮಾದಲ್ಲಿ ಹೀರೋ ಆಗಲು ಇಷ್ಟವಿಲ್ಲ... ಆದ್ರೆ... ಬಿಗ್ಬಾಸ್ ವಿನಯ್ ಗೌಡ್ ಓಪನ್ ಮಾತು...
ಇದೀಗ ಅವರು ಇಂದು ಅಂದರೆ ಮೇ 30ರಂದು ತಮ್ಮ ಅಧ್ಯಾತ್ಮದ ಪಯಣವನ್ನು ಆರಂಭಿಸಿದ್ದಾರೆ. ಇದಾಗಲೇ ಚೆನ್ನೈನಿಂದ ಡೆಹರಾಡೂನ್ ತಲುಪಿರುವ ನಟ ಅಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ‘ಪ್ರತಿ ವರ್ಷ ನಾನು ಹೊಸ ಅನುಭವ ಪಡೆಯುತ್ತೇನೆ. ಅದರಿಂದ ನನ್ನ ಅಧ್ಯಾತ್ಮದ ಪಯಣ ಮುಂದುವರಿಯುತ್ತದೆ. ಈ ಬಾರಿ ಕೂಡ ನನಗೆ ಹೊಸ ಅನುಭವ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ. ‘ಇಡೀ ಜಗತ್ತಿಗೆ ಅಧ್ಯಾತ್ಮ ಬೇಕು. ಪ್ರತಿಯೊಬ್ಬ ಮನುಷ್ಯರಿಗೂ ಅದು ಮುಖ್ಯ. ಆಧ್ಯಾತ್ಮಿಕವಾಗಿ ಇರುವುದು ಎಂದರೆ ಶಾಂತಿ, ನೆಮ್ಮದಿಯಿಂದ ಇರುವುದು ಮತ್ತು ದೇವರಲ್ಲಿ ನಂಬಿಕೆ ಇಡುವುದು’ ಎಂದಿದ್ದಾರೆ.
ಇದೇ ವೇಳೆ ತೂರಿ ಬಂದ ರಾಜಕೀಯ ಪ್ರಶ್ನೆಗಳಿಗೆ ಉತ್ತರ ಕೊಡಲು ನಿರಾಕರಿಸಿದ ರಜಿನಿಕಾಂತ್,ತಮ್ಮ ಮುಂದಿನ ಸಿನಿಮಾ ಕೂಲಿ ಚಿತ್ರಕ್ಕೆ ಇಳಯರಾಜಾ ನೀಡಿದ್ದ ನೋಟಿಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಕೂಡ ಉತ್ತರವನ್ನ ಕೊಡಲು ನಿರಾಕರಿಸಿದ್ದಾರೆ. ಇನ್ನು ಕೂಲಿ ಚಿತ್ರದ ಕುರಿತು ಹೇಳುವುದಾದರೆ, ‘ಕೂಲಿ’ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇದೆ. ಹಿಮಾಲಯದಿಂದ ರಜಿನಿಕಾಂತ್ ಜೂನ್ 03 ಅಥವಾ 04ಕ್ಕೆ ಚನೈಗೆ ಮರಳಿ ಬರಲಿದ್ದಾರೆ. ಆ ನಂತರ ಚೆನ್ನೈಗೆ ಮರಳಿದ ನಂತರ ರಜನೀಕಾಂತ್ 'ಕೂಲಿ' ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.