Radhe Shyam: ಕುತೂಹಲಕಾರಿ ಪೋಸ್ಟರ್‌ ಹಂಚಿಕೊಂಡ ನಟ ಪ್ರಭಾಸ್

By Suvarna NewsFirst Published Nov 13, 2021, 7:29 PM IST
Highlights

ರಾಧೆ ಶ್ಯಾಮ್‌ನಲ್ಲಿ ವಿಕ್ರಮಾದಿತ್ಯನ ಲುಕ್‌ನಲ್ಲಿ ಪ್ರಭಾಸ್ ಪರಿಚಯದ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇದೀಗ ನಟ ಪ್ರಭಾಸ್ ಚಿತ್ರದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. 

ಟಾಲಿವುಡ್‌ (Tollywood) ಹ್ಯಾಂಡ್ಸಮ್ ಹೀರೋ, ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ಅಭಿನಯದ ಬಹು ನಿರೀಕ್ಷಿತ 'ರಾಧೆ ಶ್ಯಾಮ್' (Radhe Shyam) ಚಿತ್ರದ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು! 'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ನಲ್ಲಿ ಪ್ರಭಾಸ್ ಪರಿಚಯದ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇದೀಗ ನಟ ಪ್ರಭಾಸ್ ಚಿತ್ರದ ಹಾಡಿನ ಬಿಡುಗಡೆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಟ ಪ್ರಭಾಸ್ 'ಸಾಹೋ' (Saaho) ಚಿತ್ರದ ನಂತರ 'ರಾಧೆ ಶ್ಯಾಮ್' ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೊದಲ ಲಿರಿಕಲ್ ಹಾಡನ್ನು (Lyrical Song) ನವೆಂಬರ್ 15, ಸಂಜೆ 5 ಗಂಟೆಗೆ ಕನ್ನಡ, ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಕುತೂಹಲಕಾರಿ ಪೋಸ್ಟರ್‌ನ್ನು (Poster) ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್‌ ಗಮನಿಸಿದಾಗ ಫ್ಯಾಂಟಸಿ ಲೋಕದ ಅಳವಾದ ನೀಲಿ ಸಾಗರದಲ್ಲಿ ದೂರದಿಂದ ಕಾರೊಂದು ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ಪೋಸ್ಟರ್‌ಗೆ ನೆಟ್ಟಿಗರು, ಅಭಿನಂದನೆಗಳು, ಅದಷ್ಟು ಬೇಗ ನಿಮ್ಮ ಚಿತ್ರದ ಹಾಡು ಬಿಡುಗಡೆಯಾಗಿ ಸೂಪರ್ ಹಿಟ್ ಆಗಲಿ ಮತ್ತು ನಿಮ್ಮ ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ತರೇಹವಾರಿ ಪ್ರತಿಕ್ರಿಯೆಯನ್ನು ಕಾಮೆಂಟಿಸಿದ್ದಾರೆ.

'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

'ರಾಧೆ ಶ್ಯಾಮ್' ಚಿತ್ರತಂಡ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಮಾದಿತ್ಯನ ಲುಕ್‌ನ್ನು ಪರಿಚಯಿಸಿತ್ತು. 'ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಪ್ರೀತಿಯಲ್ಲಿ ನಿನ್ನ ಮನಸು ಯಾವಾಗ ಹೊಡೆದೋಗುತ್ತೊ ನನಗೆ ಗೊತ್ತು, ಆದರೆ ನಿನಗೆ ಹೇಳಲ್ಲ. ನಿನ್ನ ಸೋಲುಗಳು ನನಗೆ ಕಾಣುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನಿನ್ನ ಸಾವಿನ ಅರಿವು ನನಗಾಗುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನನಗೆಲ್ಲಾ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ' ಎಂದು ಪ್ರಭಾಸ್ ಖಡಕ್ ಡೈಲಾಗ್ ಹೇಳಿದ್ದರು.

ರೊಮ್ಯಾಂಟಿಕ್​ ಕಥಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್, ವಿಕ್ರಮಾದಿತ್ಯ ಎಂಬ ಲವರ್​ ಬಾಯ್ (Lover Boy)​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಪೂಜಾ ಹೆಗ್ಡೆ ಪ್ರೇರಣಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಹಿಂದೆ ಪೂಜಾ ಹೆಗ್ಡೆ ಹುಟ್ಟುಹಬ್ಬದ ಪ್ರಯುಕ್ತ ಅವರ ಫೋಟೋವಿರುವ  ಪೋಸ್ಟರ್‌ನ್ನು ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು 'ಹುಟ್ಟು ಹಬ್ಬದ ಶುಭಾಶಯಗಳು ಪೂಜಾ' ಎಂದು ವಿಶ್ ಮಾಡಿದ್ದರು. ಈ ಪೋಸ್ಟರ್​​ನಲ್ಲಿ ಬಿಳಿ ಬಣ್ಣದ ಡ್ರೆಸ್​ನಲ್ಲಿ ಪೂಜಾ ಮಿಂಚಿದ್ದರು.

'ಸಲಾರ್' ಕಮಾಂಡರ್‌ಗೆ ಶುಭಾಶಯ ತಿಳಿಸಿದ ಪ್ರಶಾಂತ್ ನೀಲ್

ರಾಧಾ ಕೃಷ್ಣ ಕುಮಾರ್ (Radha Krishna Kumar) ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.  ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮತ್ತು ಚಿತ್ರದ ಚಿತ್ರೀಕರಣ ಇದುವರೆಗೆ ಹೈದರಾಬಾದ್, ಟುರಿನ್ (ಇಟಲಿ) ಮತ್ತು ಜಾರ್ಜಿಯಾದಲ್ಲಿ ನಡೆದಿದೆ. 'ರಾಧೆ ಶ್ಯಾಮ್' ಚಿತ್ರವು 2022ರ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. 
 

 
 
 
 
 
 
 
 
 
 
 
 
 
 
 

A post shared by Prabhas (@actorprabhas)

click me!