ವಿಜಯ್ ದೇವರಕೊಂಡ ನಟನೆಯ ಮತ್ತು ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ. ನಷ್ಟ ಭರಿಸಿಕೊಡುವಂತೆ ವಿತರಕರು ಪಟ್ಟು ಹಿಡಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ಮತ್ತು ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ. ಸಿನಿಮಾ ನಿರ್ಮಾಪಕರಿಗೆ ಮಾತ್ರವಲ್ಲದೇ ವಿತರಕರಿಗೂ ಭಾರೀ ನಷ್ಟವನ್ನುಂಟು ಮಾಡಿದೆ. ದೊಡ್ಡ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾವನ್ನು ಬಿಡುಗಡೆ ಮುಂಚೆಯೇ ಕೆಲ ವಿತರಕರು ಭಾರಿ ಮೊತ್ತಕ್ಕೆ ವಿತರಣಾ ಹಕ್ಕುಗಳನ್ನು ಪಡೆದಿದ್ದರು. ಆದರೆ, ಸಿನಿಮಾ ಗೆಲ್ಲಲೇ ಇಲ್ಲ. ಹಾಗಾಗಿ ವಿತರಕರಿಗೆ ಸಾಕಷ್ಟು ನಷ್ಟವಾಗಿದೆ. ಇದೀಗ ನಷ್ಟ ಭರಿಸಿಕೊಡುವಂತೆ ವಿತರಕರು ಪಟ್ಟು ಹಿಡಿದ್ದಾರೆ. ಲೈಗರ್ ರಿಲೀಸ್ ಆಗಿ ಅನೇಕ ದಿನಗಳೇ ಕಳೆದಿವೆ. ಆದರೆ ಪುರಿ ಜಗನ್ನಾಥ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ವಿತರಕರು ಧರಣಿಗೆ ಮುಂದಾಗಿದ್ದಾರೆ.
ಪುರಿ ಜಗನ್ನಾಥ್ ಮನೆಯ ಮುಂದೆ ಧರಣಿ ಕೂರುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಪುರಿ ಜಗನ್ನಾಥ್ ಮತ್ತು ವಿತರಕರೊಬ್ಬರು ಮಾತನಾಡಿರುವ ಫೋನ್ ಸಂಭಾಷಣೆ ವೈರಲ್ ಆಗಿದೆ. ವಿತರಕರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಪುರಿ ಜಗನ್ನಾಥ್ 'ನನಗೆ ನೀವು ಬ್ಲಾಕ್ ಮೇಲ್ ಮಾಡುತ್ತೀರಾ? ನಾನು ಯಾರಿಗೂ ಹಣ ವಾಪಸ್ ನೀಡಬೇಕು ಎಂಬುದಿಲ್ಲ. ಆದರೂ ಕೂಡ ನೈತಿಕತೆಯ ದೃಷ್ಟಿಯಿಂದ ನಾನು ವಾಪಸ್ ಕೊಡುತ್ತಿದ್ದೇನೆ. ಹೀಗೆಲ್ಲ ಬೆದರಿಕೆ ಹಾಕಿದರೆ ಖಂಡಿತವಾಗಿಯೂ ಹಣ ವಾಪಸ್ ಕೊಡಲ್ಲ’ ಎಂದು ವೈರಲ್ ಆಗಿರುವ ಆಡಿಯೋದಲ್ಲಿ ಪುರಿ ಹೇಳಿದ್ದಾರೆ.
ಲೈಗರ್ ಹೀನಾಯ ಸೋಲು; ಮುಂಬೈ ಮನೆ ಖಾಲಿ ಮಾಡಿದ ನಿರ್ದೇಶಕ ಪುರಿ ಜಗನ್ನಾಥ್
‘ಪ್ರಾಮಾಣಿಕತೆ ಇಲ್ಲದ ವಿತರಕರ ಜೊತೆ ವ್ಯವಹಾರ ಮಾಡಿ ನನಗೆ ಸಾಕಾಗಿದೆ. ಇವರೆಲ್ಲ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮೋಸ ಮಾಡ್ತಾರೆ. ಲೈಗರ್ ಚಿತ್ರವನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿದ ಅನಿಲ್ ಥಡಾನಿ ಅವರು ನಮಗೆ ಸರಿಯಾದ ಲೆಕ್ಕ ನೀಡ್ತಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದು ಹೆಚ್ಚಾಗಿತ್ತು. ಅದಕ್ಕಾಗಿಯೇ ನಾನು ಅವರ ಜೊತೆ ಕುಳಿತು ಮಾತನಾಡಲು ಇಷ್ಟಪಡುತ್ತೇನೆ. ಆದರೆ ಇಲ್ಲಿನ ನಮ್ಮ ವಿತರಕರನ್ನು ನೋಡಿದರೆ ನನಗೆ ಅಸಹ್ಯ ಆಗುತ್ತದೆ’ ಎಂದು ಪುರಿ ಜಗನ್ನಾಥ್ ಹೇಳಿರುವುದು ಚರ್ಚೆಗೆ ಕಾರಣ ಆಗಿದೆ.
'JGM'ಗಾಗಿ ಮತ್ತೆ ಒಂದಾದ ವಿಜಯ್ - ಪುರಿ ಜಗನ್ನಾಥ್; ಸೈನಿಕ ಪಾತ್ರದಲ್ಲಿ ದೇವರಕೊಂಡ ಮಿಂಚಿಂಗ್
ಈ ಕುರಿತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಟಾಲಿವುಡ್ನ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಪುರಿ ಜಗನ್ನಾಥ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ವಿತರಕರ ವಾಟ್ಸಪ್ ಗ್ರೂಪ್ಗಳಲ್ಲಿ ಪುರಿ ಜಗನ್ನಾಥ್ ವಿರುದ್ಧ ಹರಿದಾಡುತ್ತಿರುವ ಮೆಸೇಜ್ನ ಸ್ಕ್ರೀನ್ ಶಾಟ್ ಅನ್ನು ರಾಮ್ ಗೋಪಾಲ್ ವರ್ಮಾ ಬಹಿರಂಗಪಡಿಸಿದ್ದಾರೆ. ಲೈಗರ್ ಸೋಲು ಪುರಿ ಜಗನ್ನಾಥ್ ಅವರಿಗೆ ಸಾಕಷ್ಟು ಹಿನ್ನಡೆಯಾಗಿದೆ. ಇದೀಗ ನಷ್ಟವನ್ನು ಭರಿಸಿಕೊಡಬೇಕಾಗಿದೆ. ವಿತರಕರ ಮಾತುಗಳಿಂದ ನೊಂದಿರುವ ಪುರಿ ಜಗನ್ನಾಥ್ ಮುಂದಿನ ನಿರ್ಧಾರ ಏನು ಎನ್ನುವುದು ಕಾದುನೋಡಬೇಕಿದೆ.