ಮನೋಜ್ ಬಾಜಪೇಯಿಗಾಗಿ ಕಾಲೆಳೆದುಕೊಂಡ ನೆಟ್‌ಫ್ಲಿಕ್ಸ್- ಅಮೆಜಾನ್ ಪ್ರೈಮ್!

By Suvarna NewsFirst Published Jun 9, 2021, 4:21 PM IST
Highlights

ಒಂದು ಕಾಲದಲ್ಲಿ ಒಂದು ವಡಾ ಪಾವ್ ಖರೀದಿಸಲೂ ಕಾಸು ಇಲ್ಲದ ವ್ಯಕ್ತಿಗಾಗಿ ಇಂದು ದೇಶದ ಎರಡು ದೊಡ್ಡ ಒಟಿಟಿ ವೇದಿಕೆಗಳು ಪರಸ್ಪರ ಕಾಲೆಳೆದುಕೊಳ್ಳುತ್ತಿವೆ!

ಹಿಂದಿ ನಟ ಮನೋಜ್‌ ಬಾಜ್‌ಪೇಯಿ ಈಗ ಅತ್ಯಂತ ಸಕ್ಸಸ್‌ಫುಲ್ ನಟ. ಒಟಿಟಿ ವೇದಿಕೆಗಳಲ್ಲಂತೂ ಈಗ ಅವರೇ ಮಿರಿಮಿರಿ ಮಿಂಚುತ್ತಿದ್ದಾರೆ. ಅಮೆಜಾನ್‌ ಪ್ರೈಮ್‌ನಲ್ಲಿ ಇತ್ತೀಚೆಗೆ ರಿಲೀಸ್ ಆದ ಫ್ಯಾಮಿಲಿ ಮ್ಯಾನ್-2 ವೆಬ್‌ ಸೀರೀಸ್‌ ಸೂಪರ್ ಡೂಪರ್ ಹಿಟ್ ಆಗಿದೆ. ಅವರ ನಟನೆ ಎಲ್ಲರ ಮನಸೂರಗೊಂಡಿದೆ. ಪ್ಯಾಮಿಲಿ ಮ್ಯಾನ್-1 ಕೂಡ ಹಿಟ್‌ ಆಗಿತ್ತು. 

ಇದೀಗ ಅವರನ್ನು ಸೆಳೆಯಲು ಒಟಿಟಿ ವೇದಿಕೆಗಳಲ್ಲೇ ಪರಸ್ಪರ ಕಾಲೆಳೆತ, ಆರೋಗ್ಯಕಾರಿ ಕಚ್ಚಾಟ ಶುರುವಾಗಿದೆ. ಇದನ್ನು ಆರಂಭಿಸಿದ್ದು ನೆಟ್‌ಫ್ಲಿಕ್ಸ್ ಕಂಪನಿ.
ಫ್ಯಾಮಿಲಿ ಮ್ಯಾನ್ ಸೀರೀಸ್‌ ಬಂದಿರುವುದು ಅಮೆಜಾನ್ ಪ್ರೈಮ್‌ನಲ್ಲಿ. ಆದರೆ ನೆಟ್‌ಫ್ಲಿಕ್ಸ್‌ನಲ್ಲೂ ಇದೇ ವಾರ ರಿಲೀಸ್ ಆಗುತ್ತಿರುವ ಇನ್ನೊಂದು ಸರಣಿಯಲ್ಲಿ ಮನೋಜ್‌ ನಟಿಸಿದ್ದಾರೆ. ಅದು ಸತ್ಯಜಿತ್ ರೇ ಅವರ ಕತೆಗಳನ್ನು ಆಧರಿಸಿದ 'ರೇ' ಎಂಬ ಸರಣಿ. ಅದರಲ್ಲಿ ಮನೋಜ್ ಒಬ್ಬ ಗಜಲ್ ಗಾಯಕನಾಗಿದ್ದಾರೆ.

ಈ ಸರಣಿಯನ್ನು ಪ್ರಮೋಟ್ ಮಾಡಲು ನೆಟ್‌ಫ್ಲಿಕ್ಸ್ ಅದರ ಪ್ರೊಮೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ಒಂದು ಕ್ಯಾಪ್ಷನ್ ನೀಡಿದೆ: 'ವಿ ಲವ್‌ ದೇಟ್ ಯು ಆರ್ ಎ ಪಾರ್ಟ್ ಆಫ್‌ ದಿಸ್ ಫ್ಯಾಮಿಲಿ, ಮ್ಯಾನ್!' ಇದು ಫ್ಯಾಮಿಲಿ ಮ್ಯಾನ್ ಸೀರೀಸ್‌ ಹೆಸರನ್ನು ಆಧರಿಸಿದ ಒಂದು ಚಮತ್ಕಾರಯುತ ವಾಕ್ಯ. ಇದು ನೆಟ್ಟಿಗರ ಗಮನ ಸೆಳೆಯಿತು.



ಇತ್ತ ಅಮೆಜಾನ್ ಪ್ರೈಮ್ ಸುಮ್ಮನಿರಲಿಲ್ಲ. ಅದು ಕೂಡ ನೆಟ್‌ಫ್ಲಿಕ್ಸ್‌ಗೆ ಪ್ರತಿಕ್ರಿಯೆಯನ್ನು ಹೀಗೆ ಹಾಕಿತು: 'ಶ್ರೀಕಾಂತ್, ಜಾಬ್‌ ಬದಲನೇ ಮೆ ಬಡಾ ಡ್ರಾಸ್ಟಿಕ್ ಚೇಂಜ್ ಹೋಗಾ ಹುವಾ ನ?' ಇದು ಫ್ಯಾಮಿಲಿ ಮ್ಯಾನ್ ಸೀರೀಸ್‌ನ ಒಂದು ಸಂಭಾಷಣೆ. ಹಾಗೂ ಅದರಲ್ಲಿ ಮನೋಜ್‌ನ ಪಾತ್ರ ಶ್ರೀಕಾಂತ್, ತನ್ನ ಕೆಲಸವನ್ನು ಬದಲಿಸುವ ಸನ್ನಿವೇಶವಿದೆ. ಇದನ್ನಿಟ್ಟುಕೊಂಡು ಈ ಚಮತ್ಕಾರ. ಅಂತೂ ಇವರಿಬ್ಬರ ಕಾಲೆಳೆದಾಟದಲ್ಲಿ ನೆಟ್ಟಿಗರಿಗಂತೂ ಪುಕ್ಕಟೆ ಮನರಂಜನೆ.
ಮನೋಜ್ ಬಾಜಪೇಯಿ ಬಿಹಾರದ ಸಣ್ಣ ಹಳ್ಳಿಯೊಂದರಿಂದ, ಬಡ ಕುಟುಂಬದಿಂದ ಬಂದವರು. ಅಮಿತಾಭ್ ಬಚ್ಚನ್ ಅವರ ದೊಡ್ಡ ಫ್ಯಾನ್. ಆದರೆ ಅವರ ಹಾಗೆ ನಟನೇ ಆಗಬೇಕು ಅಂತ ನಿರ್ಧರಿಸಿದ್ದರು. ಹದಿನಾರನೇ ವಯಸ್ಸಿನಲ್ಲಿ ಊರು ಬಿಟ್ಟು, ಶಾಲೆ ಬಿಟ್ಟು, ದಿಲ್ಲಿಗೆ ಬಂದರು. ರಂಗಭೂಮಿ ಸೇರಿಕೊಂಡರು. ನಂತರ ಏನಾಯಿತು ಅಂತ ಅವರ ಮಾತುಗಳಲ್ಲೇ ಕೇಳಿ:

ಆಕಾಶ ನೀಲಿ ಬಣ್ಣದ ಲೆಹಂಗಾದಲ್ಲಿ ಮೋಹಕವಾಗಿ ಮಿಂಚಿದ ಮಾಧುರಿ ...

ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ ಸೇರಲು ಅರ್ಜಿ ಹಾಕಿದೆ. ಆದರೆ ಮೂರು ಬಾರಿ ತಿರಸ್ಕೃತನಾದೆ. ಹತಾಶೆ ಆವರಿಸಿತು, ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿತು. ನನ್ನ ಗೆಳೆಯರು ನನ್ನ ಬಗ್ಗೆ ಭೀತರಾಗಿದ್ದರು. ಅವರು ನನ್ನನ್ನು ಒಂಟಿಯಾಗಿ ಬಿಟ್ಟು ಇರುತ್ತಿರಲೇ ಇಲ್ಲ. ನಾನು ಆತ್ಮವಿಶ್ವಾಸ ಗಳಿಸಿಕೊಳ್ಳುವವರೆಗೂ ಅವರು ನನ್ನ ಜೊತೆಯಾಗಿಯೇ ಇದ್ದರು.

ಆ ವರ್ಷ ನಾನು ಒಂದು ಮುರಿದ ಚಾಯ್‌ ಅಂಗಡಿಯ ಮುಂದೆ ಕೂತಿದ್ದೆ. ಶೇಖರ್‌ ಕಪೂರ್‌ ಅವರು ಬ್ಯಾಂಡಿಟ್‌ ಕ್ವೀನ್‌ ಫಿಲಂನಲ್ಲಿ ನನ್ನನ್ನು ಹಾಕಿಕೊಳ್ಳಲು ಬಯಸಿದ್ದಾರೆ ಎಂಬ ಸುದ್ದಿ ಬಂತು. ಕಡೆಗೂ ನಾನು ಅಂಗೀಕೃತನಾಗಿದ್ದೆ, ಮುಂಬಯಿಗೆ ಹೊರಟುಬಿಟ್ಟೆ. ಮೊದಲ ನಾಲ್ಕು ವರ್ಷಗಳು ಕಠಿಣವಾಗಿದ್ದವು. ಐವರು ಗೆಳೆಯರ ಜೊತೆಗೆ ಒಂದು ಸಣ್ಣ ಚಾಳ್‌ ಹಂಚಿಕೊಂಡಿದ್ದೆ. ಕೆಲಸಕ್ಕಾಗಿ ಒಂದು ಸ್ಟುಡಿಯೋದಿಂದ ಇನ್ನೊಂದಕ್ಕೆ ಅಲೆಯುತ್ತಿದ್ದೆ. ಯಾವುದೇ ಪಾತ್ರ ಸಿಗುತ್ತಿರಲಿಲ್ಲ. ಒಮ್ಮೆ ಜಾಹೀರಾತು ಕಂಪನಿಯವನೊಬ್ಬ ನನ್ನ ಫೋಟೋ ಹರಿದು ಮುಖಕ್ಕೆಸೆದಿದ್ದ. ಮತ್ತೊಮ್ಮೆ ಮೂರು ಪ್ರಾಜೆಕ್ಟ್‌ಗಳನ್ನು ಒಂದೇ ದಿನ ಕಳೆದುಕೊಂಡಿದ್ದೆ. ಮೊದಲ ಶೂಟಿಂಗ್‌ನ ಬಳಿಕ ನನ್ನ ಕಾಸ್ಟ್ಯೂಮ್‌ ಕಳಚಿಟ್ಟು ನಡೆ ಎಂದವರೂ ಇದ್ದರು. ನಾನು ಹೀರೋ ಪಾತ್ರಕ್ಕೆ ತಕ್ಕ ಮೆಟೀರಿಯಲ್ ಅಲ್ಲವೆಂದೂ, ನಾನು ಬಾಲಿವುಡ್‌ ಸೂಟ್‌ ಆಗೋಲ್ಲವೆಂದೂ ಅವರ ನಂಬಿಕೆಯಾಗಿತ್ತು. ಆಗೆಲ್ಲ ನನ್ನ ಕೈಯಲ್ಲಿ ಹಣವೇ ಇರಲಿಲ್ಲ. ಬಾಡಿಗೆ ಕೊಡಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ವಡಾ ಪಾವ್‌ ಸಹ ದುಬಾರಿಯಾಗುತ್ತಿತ್ತು.



ಆದರೆ ನನ್ನ ಹೊಟ್ಟೆಯ ಹಸಿವು, ನನ್ನ ಅಭಿನಯದ ಹಸಿವನ್ನು ಕಸಿಯಲಿಲ್ಲ. ನಾಲ್ಕು ವರ್ಷಗಳ ಒದ್ದಾಟದ ಬಳಿಕ ಮಹೇಶ್‌ ಭಟ್‌ ಅವರ ಟಿವಿ ಸೀರೀಸ್‌ನಲ್ಲಿ ಸಣ್ಣದೊಂದು ಪಾತ್ರ ಸಿಕ್ಕಿತು. ಒಂದು ಸರಣಿಗೆ ಸಾವಿರದ ಐನೂರು ರೂಪಾಯಿ ಸಂಬಳ. ಅದು ನನ್ನ ಆಗಿನ ಆದಾಯ. ಅದರಲ್ಲಿ ನನ್ನ ಅಭಿನಯ ಗುರುತಿಸಿದ ರಾಮ್‌ಗೋಪಾಲ್‌ ವರ್ಮಾ, ಸತ್ಯ ಫಿಲಂನಲ್ಲಿ ನನಗೆ ಪಾತ್ರ ಕೊಟ್ಟರು. ನಂತರ ನನ್ನ ಪಾತ್ರಗಳಿಗೆ ಪ್ರಶಸ್ತಿ ಎಲ್ಲ ಬಂತು. ನಂತರ ನಾನೊಂದು ಮನೆ ಕಟ್ಟಿದೆ. ಅರುವತ್ತೇಳು ಫಿಲಂಗಳಲ್ಲಿ ನಟಿಸಿದ ಬಳಿಕ, ನಾನು ಇಲ್ಲಿಗೆ ಸೇರಿದವನು ಎಂಬುದು ನನಗೆ ಖಚಿತವಾಗಿದೆ. ಇದು ನನ್ನ ಕನಸುಗಳ ನಡಿಗೆ. ಅವುಗಳನ್ನು ನಿಜವಾಗಿಸಲು ಹೊರಟಾಗ ಹೋರಾಟ ಹಸಿವು ಇವೆಲ್ಲಾ ಲೆಕ್ಕದಲ್ಲೇ ಇರೊಲ್ಲ. ಮುಖ್ಯವಾಗುವುದೆಂದರೆ ಆ ಒಂಬತ್ತು ವರ್ಷಗಳ ಹುಡುಗನ ಕನಸು ಮಾತ್ರ. 

KGF ನಿರ್ದೇಶಕ ಪ್ರಶಾಂತ್ ನೀಲ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ...
 

click me!