ಆಸ್ಕರ್​ ಅಂಗಳದಿಂದ ಜಪಾನ್​ಗೆ ಹಾರಿದ 'ಕಾಣೆಯಾದ ಯುವತಿಯರು'! ವಿದೇಶದಲ್ಲೂ ವಾಂಟೆಡ್​

By Suchethana D  |  First Published Oct 4, 2024, 9:37 PM IST

ಆಸ್ಕರ್​ ಅಂಗಳದಿಂದ ಜಪಾನ್​ಗೆ ಹಾರಿದ್ದಾರೆ 'ಕಾಣೆಯಾದ ಯುವತಿಯರು'! ಬಾಲಿವುಡ್​ನಲ್ಲೇ ಮಹತ್ವದ ಮೈಲಿಗಲ್ಲು. ಏನಿದರ ವಿಶೇಷತೆ?
 


ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್​ನ ಲಾ ಪತಾ ಲೇಡೀಸ್​  (ಕಾಣೆಯಾದ ಯುವತಿಯರು) ಹಲವು ದಾಖಲೆಗಳನ್ನು ಇದಾಗಲೇ ಬರೆದಿದೆ. ಇದೀಗ ಈ ಚಲಚಿತ್ರವು ಆಸ್ಕರ್​ ಅಂಗಳಕ್ಕೆ ಕಾಲಿಟ್ಟಿದೆ. ಈ ಚಿತ್ರವು ಅಧಿಕೃತವಾಗಿ ಆಸ್ಕರ್​ ಪ್ರಶಸ್ತಿಗೆ ಕಳುಹಿಸಲಾಗಿದೆ. ಕಳೆದು ಹೋಗುವ ಇಬ್ಬರು ವಧುಗಳ ಬಗೆಗಿನ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ವಧು ಕಳೆದುಹೋಗಿರುವ ಕತೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆಮೀರ್ ಖಾನ್ ಬಂಡವಾಳ ಹೂಡಿರೋ ಈ ಚಿತ್ರಕ್ಕೆ  ಅವರ ಮಾಜಿ ಪತ್ನಿ, ನಿರ್ದೇಶಕಿ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ.  ಸಿನಿಮಾದಲ್ಲಿ ನಿತಾಂಶಿ ಘೋಯಲ್, ಪ್ರತಿಭಾ ರಂತಾ, ಸ್ಪರ್ಷ್ ಶ್ರೀವತ್ಸ, ಚಯ್ಯಾ ಕದಮ್ ಅಂಥಹಾ ಹೊಸ ನಟರು ನಟಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ರವಿ ಕಿಶನ್ ನಟಿಸಿದ್ದಾರೆ. ಈ ಚಿತ್ರವೀಗ ಅನಿಮಲ್​ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಈ ದಾಖಲೆ ಮುರಿದಿರುವುದು ನೆಟ್​ಫ್ಲಿಕ್ಸ್​ನಲ್ಲಿ. ಸಿನಿಮಾಕ್ಕೆ ನಾಲ್ಕು ಕೋಟಿ ಬಜೆಟ್​ನ ಈ ಸಿನಿಮಾ ಚಿತ್ರಮಂದಿರದಲ್ಲಿ 21 ಕೋಟಿ ಗಳಿಸಿತ್ತು. ಕೊನೆಗೆ ನೆಟ್​ಫ್ಲಿಕ್ಸ್​ನಲ್ಲಿಯೂ ಇದು ದಾಖಲೆ ಬರೆದಿದ್ದು, ಈಗ ಆಸ್ಕರ್​ ಅಂಗಳಕ್ಕೆ ಹೋಗಿದೆ.

ಇದರ ನಡುವೆಯೇ ಜಪಾನ್​ಗೂ ಲಾ ಪತಾ ಲೇಡೀಸ್​ ಹಾರಿದೆ.  ಜಪಾನ್​ ಭಾಷೆಯಲ್ಲಿ ಈ ಚಿತ್ರವನ್ನು ಡಬ್​ ಮಾಡಿ ಅದರ ಪ್ರದರ್ಶನ ಮಾಡಲಾಗಿದೆ. ಇದೊಂದು ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ. ಜಪಾನ್​ನಲ್ಲಿಯೂ ಈ ಚಿತ್ರಕ್ಕೆ ಅಷ್ಟೇ ಮನ್ನಣೆ ಸಿಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಂದಹಾಗೆ, ಆಸ್ಕರ್​ ರೇಸ್​ನಲ್ಲಿ ಈ ಚಿತ್ರವೂ ಸೇರಿದಂತೆ 29 ಸಿನಿಮಾಗಳಿದ್ದವು. ಆ ಪೈಕಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ'ವೇ ಆಯ್ಕೆಯಾಗಲಿದೆ ಎಂದೇ ಕೊನೆಯ ಕ್ಷಣದವರೆಗೂ ಅಂದುಕೊಳ್ಳಲಾಗಿತ್ತು. ಉಳಿದಂತೆ ತಮಿಳು ಚಿತ್ರ ಮಹಾರಾಜ, ತೆಲುಗುವಿನ  ಕಲ್ಕಿ 2898 AD ಮತ್ತು ಹನುಮಾನ್, ಬಾಲಿವುಡ್​ನ   ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ಆರ್ಟಿಕಲ್ 370 ಸಹ ಪಟ್ಟಿಯಲ್ಲಿದ್ದವು. ಆದರೆ ನಿರೀಕ್ಷೆಗೂ ಮೀರಿ ಲಾಪತಾ ಲೇಡೀಸ್​ ಆಯ್ಕೆಯಾಗಿದೆ. ಈ ಮೂಲಕ ಹೊಸದಾಗಿ ಎಂಟ್ರಿ ಕೊಟ್ಟಿರೋ, ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರು ಲಾಟರಿ ಹೊಡೆದಿದ್ದಾರೆ. ಮೊದಲ ಚಿತ್ರದಲ್ಲಿಯೇ ಈ ಪರಿಯ ಯಶಸ್ಸು ಕಂಡಿದ್ದಾರೆ.   ಯಾವುದೇ ಸ್ಟಾರ್ ನಟರಿಲ್ಲದ, ಸರಳವಾದ ಕತೆಯನ್ನಷ್ಟೆ ಹೊಂದಿದೆ. ಈ ಚಿತ್ರವನ್ನು  ಸುಪ್ರೀಂ ಕೋರ್ಟ್​ನ 75ನೇ ವಾರ್ಷಿಕೋತ್ಸವದ ಸಲುವಾಗಿ  ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರ ಸೂಚನೆ ಮೇರೆಗೆ ಪ್ರದರ್ಶನ ಮಾಡಲಾಗಿತ್ತು. ಈ ಮೂಲಕ ಮತ್ತೊಂದು ಐತಿಹಾಸಿಕ ಘಟನೆಗೆ ಚಿತ್ರ ಸಾಕ್ಷಿಯಾಗಿತ್ತು.  ಸಿಜೆಐ ಪತ್ನಿ ಕಲ್ಪನಾ ದಾಸ್​ ಅವರು ಈ ಚಿತ್ರವನ್ನು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡಿದ್ದರಂತೆ. ಅದರಂತೆಯೇ ಚಿತ್ರ ಕಳೆದ ಆಗಸ್ಟ್​ 9ರಂದು ಪ್ರದರ್ಶನ ಮಾಡಲಾಗಿತ್ತು. 

Tap to resize

Latest Videos

undefined

28 ಸಿನಿಮಾ ಹಿಂದಿಕ್ಕಿ ಆಸ್ಕರ್​ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ! ​

ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ದೀಪಕ್ ಮತ್ತು ಫೂಲ್ ಕುಮಾರಿ ನವವಿವಾಹಿತರು. ಮದುವೆ ಮುಗಿಸಿ ವರನ ಕಡೆಯವರು ಊರಿಗೆ ಹೊರಟು ಬಿಡುತ್ತಾರೆ. ನೂತನ ವಧೂವರರು ವಧುವಿನ ಮನೆಯಲ್ಲಿ ಕೆಲವು ಶಾಸ್ತ್ರಗಳಿಗಾಗಿ ಉಳಿದುಕೊಳ್ಳುತ್ತಾರೆ. ನಂತರ ಇಬ್ಬರೇ ವರನ ಊರಿಗೆ ಹೊರಡುತ್ತಾರೆ. ಫೂಲ್ ಕುಮಾರಿ ಇನ್ನೂ ಮುಗ್ಧತೆಯೇ ಕಳೆಯದ ಸುಂದರ ಯುವತಿ. ದೀಪಕ್ ಕೂಡಾ ಅಷ್ಟೇ ಸರಳ ಮನಸ್ಸಿನ ಭಾವುಕ ಯುವಕ. ಹೊರಡುವಾಗ ಬಿಳ್ಕೊಡುಗೆ ಶಾಸ್ತ್ರದ ನಂತರ ವಧುವಿಗೆ ಘೂಂಘಟ್ ಅನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಹಾಗೂ ಗಂಡನ ಹೆಸರನ್ನು ಹೇಳಬಾರದು ಎಂದು ಹಿರಿಯರು ಅಣತಿ ಮಾಡುತ್ತಾರೆ. ಈ ಸಂಪ್ರದಾಯ ಎಂತಹ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಚಿತ್ರ ನೋಡಿದರೆ ಪ್ರೇಕ್ಷಕನಿಗೆ ಅರಿವಾಗುತ್ತದೆ. ನೂತನ ವಧು-ವರರು ಎಕ್ಸೇಂಜ್​ ಆಗಿ ಅನುಭವಿಸುವ ನೋವುಗಳ ಚಿತ್ರಣ ಇದರಲ್ಲಿದೆ. 

ಕಿರಣ್ ರಾವ್ ಸೂಕ್ಷ್ಮ ಕಥೆಯನ್ನು ಕುಸುರಿ ಕೆಲಸದಂತೆ ಹೆಣೆದಿದ್ದಾರೆ. ತಾವೊಬ್ಬ ಅತ್ಯುತ್ತಮ ನಿದೇರ್ಶಕಿ ಎಂದು ತೋರಿಸಿದ್ದಾರೆ. ರವಿಕಿಶನ್ ನಟನೆ ಲವಲವಿಕೆಯಿಂದ ಕೂಡಿದೆ, ಫೂಲ್ ಕುಮಾರಿಯ ಮುಗ್ಧತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಹೆಂಡತಿಯನ್ನು ಕಳೆದುಕೊಂಡ ದೀಪಕ್ ವಿಷಾದ ನಮ್ಮನ್ನು ಕಾಡುತ್ತದೆ. ಕಣ್ಣಂಚು ಒದ್ದೆಯಾಗುತ್ತದೆ.  ಜಯಾ ಯಾರು ಅವಳೇಕೆ ಗಂಡನ ಮನೆಗೆ ಹೋಗಲು ಆತುರ ಪಡಲಿಲ್ಲ ಎಂದು ತಿಳಿದಾಗ ನಮಗೆ ಅಯ್ಯೋ ಅನಿಸದೆ ಇರದು. ಹೆಣ್ಣುಮಕ್ಕಳಿಗೂ ಕನಸುಗಳ ಗುರಿ ಇರುತ್ತದೆ ಎಂದು ಕಿರಣ್ ರಾವ್ ಸಶಕ್ತವಾಗಿ ತೋರಿಸಿದ್ದಾರೆ. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಕೊನೆಗೊಂಡಾಗ ಪ್ರೇಕ್ಷಕನ ಕಣ್ಣಲ್ಲಿ ಆನಂದ ಬಾಷ್ಪ ಮೂಡುವುದರಲ್ಲಿ ಸಂದೇಹವಿಲ್ಲ. 

ನಿನ್ನ ಜೊತೆ ಮಲಗಬೇಕು ಎಂದು ಆ ಹುಡುಗಿ ನೇರವಾಗೇ ಕೇಳಿದ್ಲು, ಆಮೇಲೆ... ಆಮೀರ್​ ಮಾತಿಗೆ ಪತ್ನಿ ಶಾಕ್​!

click me!