Mohan Juneja Death; 'ದುನಿಯಾ' ಪಾತ್ರಕ್ಕೆ ಅಭಿಮಾನಿಯಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದರು ಮೋಹನ್

By Shruiti G KrishnaFirst Published May 7, 2022, 11:54 AM IST
Highlights

ಸ್ಯಾಂಡಲ್ ವುಡ್‌ನ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಜುನೇಜ ಚಿಕ್ಕ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತ ಪಾತ್ರ ಆಗಿರುತ್ತಿತ್ತು. ಚೆಲ್ಲಾಟ ಸಿನಿಮಾದ ಮದುಮಗ, ಜೋಗಿ ಸಿನಿಮಾದ ಕುಡುಕನ ಪಾತ್ರ, ದುನಿಯಾ ಸಿನಿಮಾದ ಪಾತ್ರ ಹಾಗೂ ಕೆಜಿಎಫ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿಸಿದ್ದಾರೆ.

ಸ್ಯಾಂಡಲ್ ವುಡ್‌ನ ಹಿರಿಯ ಹಾಸ್ಯ ಕಲಾವಿದ ಮೋಹನ್ ಜುನೇಜ(Mohan Juneja) ನಿಧನರಾಗಿದ್ದಾರೆ. ಆನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಜುನೇಜರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ. ಮೋಹನ್ ಜುನೇಜ ನಿಧನಕ್ಕೆ ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಮೋಹನ್ ಜುನೇಜ ಅವರು ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದರು. ಕೆಜಿಎಫ್ ಸಿನಿಮಾದ ಪಾತ್ರ ಮೋಹನ್ ಜುನೇಜ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿತ್ತು.

ಸ್ಯಾಂಡಲ್ ವುಡ್‌ನ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಜುನೇಜ ಚಿಕ್ಕ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತ ಪಾತ್ರ ಆಗಿರುತ್ತಿತ್ತು. ಚೆಲ್ಲಾಟ ಸಿನಿಮಾದ ಮದುಮಗ, ಜೋಗಿ ಸಿನಿಮಾದ ಕುಡುಕನ ಪಾತ್ರ, ದುನಿಯಾ ಸಿನಿಮಾದ ಪಾತ್ರ ಹಾಗೂ ಕೆಜಿಎಫ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿಸಿದ್ದಾರೆ. ಈ ಎಲ್ಲಾ ಸಿನಿಮಾಗಳಲ್ಲಿಯೂ ಪಾತ್ರ ಚಿಕ್ಕದಾಗಿದ್ದರೂ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.

ಜೋಗಿ ಸಿನಿಮಾದ ಬಗ್ಗೆ ಮೋಹನ್ ಮಾತು

ಜೋಗಿ ಸಿನಿಮಾದ ಬಗ್ಗೆ ಏನು ಗೊತ್ತಿಲ್ಲದೇ ಆ ಸಿನಿಮಾದಲ್ಲಿ ನಟಿಸಿದ್ದರು ಮೋಹನ್. ನಿರ್ದೇಶಕ ಪ್ರೇಮ್ ಶೂಟಿಂಗ್ ಸ್ಪಾಟ್‌ನಲ್ಲಿ ಸ್ಕ್ರಿಪ್ಟ್ ಕೈಗೆ ಕೊಟ್ಟ ಬಳಿಕವಷ್ಟೇ ಅವರ ಪಾತ್ರದ ಬಗ್ಗೆ ಗೊತ್ತಾಗಿದ್ದು. ಸ್ಕ್ರಿಪ್ಟ್ ನೋಡಿ ಒಂದೇ ಶಾಟ್‌ನಲ್ಲಿ ಮುಗಿಸೋಣ ಎಂದು ಹೇಳಿದನ್ನು ಕೇಳಿ ಪ್ರೇಮ್ ಶಾಕ್ ಆಗಿದ್ದರಂತೆ. ಒಂದೇ ಶಾಟ್ ನಲ್ಲಿ ಆಗುತ್ತಾ ಎಂದು ಕೇಳಿದ್ದರಂತೆ. ಅಷ್ಟು ಪ್ರತಿಭಾವಂತ ನಟ ಮೋಹನ್ ಜುನೇಜ. ಈ ಬಗ್ಗೆ ವೆಬ್ ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದರು. 'ಜೋಗಿ ಸಿನಿಮಾದಲ್ಲಿ ಒಂದೇ ಒಂದು ದೃಶ್ಯದಲ್ಲಿ ನಟಿಸಿದ್ದೇನೆ. ಆದರೆ ಶಿವಣ್ಣ ಅವರು ಇವತ್ತು ಯಾರಿಗೇ ಪರಿಚಯ ಮಾಡಿಕೊಡಬೇಕಾದರೂ ಇವರ್ಯಾರು ಗೊತ್ತಾ ಜೋಗಿ...ಎಂದು ಹೇಳುತ್ತಿದ್ದರು. ಇದು ಮತ್ತೊಂದು ಮೆಟ್ಟಿಲು ಹತ್ತಲು ಅವಕಾಶ ಮಾಡಿಕೊಟ್ಟಿತು' ಎಂದಿದ್ದರು.

Mohan Juneja : ಗೋವಾದಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಿದ್ದರಂತೆ ನಟ ಮೋಹನ್ ಜುನೇಜಾ!

ದುನಿಯಾ ಸಿನಿಮಾ ನೋಡಿ ಕಪಾಳಕ್ಕೆ ಬಾರಿಸಿದ್ದ ಅಭಿಮಾನಿ

ದುನಿಯಾ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ್ದ ಮೋಹನ್, 'ಸ್ಮಶಾನದಲ್ಲಿ ಹೆಣ ಹೂಳಲು ಹಣ ಇಲ್ಲದಿದ್ದಾದ ಹೆಣದ ಬೆರಳಲ್ಲಿ ಇದ್ದ ಉಂಗುರವನ್ನು ಕೀಳುತ್ತೇನೆ. ಈ ಪಾತ್ರ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂದರೆ, ಶೂಟಿಂಗ್‌ಗೆ ಎಂದು ರೈಲ್ವೆ ಸ್ಟೇಷನ್‌ಗೆ ಹೊಗುತ್ತಿದ್ದೆ. ಆಗ ಅಜ್ಜಿಯೊಬ್ಬರು ಕರೆದು ಮಖ ಮುಚ್ಚಾ..ಮಾನಮರ್ಯಾದೆ ಇದಿಯಾ ಎಂದು ಕಪಾಳಕ್ಕೆ ಹೊಡೆದರು. ಯಾಕೆ ಅಂತ ಕೇಳಿದ್ರೆ ಹೆಣದಲ್ಲಿ ಇರೋ ಉಂಗುರನೂ ಬಿಡಲ್ಲ ಅಂತಿಯಲ್ಲಾ ಎಂದು ಬೈದರು. ಅಯ್ಯೋ ಅಜ್ಜಿ ಪಾತ್ರ ಅಷ್ಟೆ ಎಂದು ಹೇಳಿದೆ. ಆ ಪಾತ್ರ ಅಷ್ಟು ಮನಸ್ಸಿಗೆ ನಾಟಿತ್ತು. ಈಗಲು ಜನ ಬೈತಾರೆ' ಎಂದು ಹೇಳಿದ್ದರು.

ಜೋಗಿ ಬಳಿಕ ಕುಡುಕನ ಪಾತ್ರಗಳೇ ಬಂದವು

'ಚೆಲ್ಲಾಟ ಸಿನಿಮಾ ಮತ್ತೊಂದು ಜೀವನ ಕೊಡ್ತು. ಮದುಮಗ ಎನ್ನುವ ಪಾತ್ರದಲ್ಲಿ ನಟಿಸಿದ್ದೆ. ಟೆನ್ನಿಸ್ ಕೃಷ್ಣ ಮತ್ತು ನಂದು ಒಳ್ಳೆ ಕಾಂಬಿನೇಷನ್. ನಾನು ಮತ್ತು ಟೆನ್ನಿಸ್ ಕೃಷ್ಣ ಅಭಿನಯತರಂಗದಲ್ಲಿ ನಾಟಕ ಮಾಡಿದವರು. ಅನೇಕ ನಾಟಕಗಳನ್ನು ಮಾಡಿದ್ದೇವೆ. ಚೆಲ್ಲಾಟ ಆದಮೇಲೆ ಸಾಕಷ್ಟು ಸಿನಿಮಾಗಳು ಬಂದವು. ಜೋಗಿ ಬಂದ ಬಳಿಕ ನನಗೆ ಎಲ್ಲಾ ಕುಡುಕನ ಪಾತ್ರಗಳೇ ಬಂದವು. ಜನ ಯಾವಾಗಲು ಇವನೇನು ಕುಡಿದೆ ಇರ್ತಾರೆ ಅಂತ' ಹೇಳುತ್ತಾರೆ ಎಂದಿದ್ದರು.

ನಾನು ಸಿನಿಮಾಗಳನ್ನು ಲೆಕ್ಕಾ ಹಾಕಿಲ್ಲ

'ನಾನು ಇದುವುರೆಗೂ ಸಿನಿಮಾಗಳ ಲೆಕ್ಕ ಹಾಕಿಲ್ಲ. ಸಿನಿಮಾ ಮಾತುಕತೆ ಬಳಿಕ ನಿರ್ಮಾಪಕರು ಕೊಟ್ಟ ಹಣವನ್ನು ನಾನು ಎಣಿಸಲ್ಲ. ನಂಬಿಕೆ ಅಷ್ಟೆ. ಮನೆಯಲ್ಲೂ ಅಷ್ಟೆ ಎಷ್ಟು ತೆಗೆದುಕೊಂಡರು ಏನು ಮಾಡಿದ್ರು ಅಂತ ಕೇಳಲ್ಲ. ಸಮಯಕ್ಕೆ ಬೆಲೆ ಕೊಡುತ್ತೇನೆ. ಅನೇಕ ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ನಾನು ಯಾವತ್ತು ಸಿನಿಮಾ ಲೆಕ್ಕ ಹಾಕಿಲ್ಲ. ನನ್ನ ಆಲೋಚನೆ ಯಾವಾಗಲು ಮುಂದೆ ಏನು ಎನ್ನುವುದು' ಎಂದು ಹೇಳಿದ್ದರು.

'ಅವನು ಒಬ್ಬನೇ ಬರೋನು..ಮಾನ್ ಸ್ಟರ್' ಡೈಲಾಗ್ ಹೊಡೆದು KGFನಲ್ಲಿ ಮಿಂಚಿದ್ದ ನಟ ಮೋಹನ್ ಜುನೇಜ ಇನ್ನಿಲ್ಲ

ಪ್ರಶಸ್ತಿಗಳ ಮೋಹನ್ ಮಾತು

'ಅನೇಕರು ಕೇಳುತ್ತಾರೆ ಪ್ರಶಸ್ತಿ ಬಂದಿಲ್ಲವಾ ಎಂದು.. ಆದರೆ ಪ್ರಶಸ್ತಿಗಳನ್ನು ಯಾವತ್ತು ಬೇಡಿ ಪಡೆಯ ಬಾರದು. ಅದು ನಮ್ಮನ್ನು ಹುಡುಕಿ ಬರಬೇಕು. ಆದರೆ ನನಗೆ ಅತೀ ದೊಡ್ಡ ಪ್ರಶಸ್ತಿ ಸಿಕ್ಕಿದೆ ಅದು ಜನರ ಪ್ರೀತಿ. ಜನ ನನ್ನನ್ನು ನೋಡಿದಾಗ ಪ್ರೀತಿಯಿಂದ ಮಾತನಾಡಿಸುತ್ತಾರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಏನಿದೆ' ಎನ್ನುತ್ತಾರೆ.

'ಅತಿ ದೊಡ್ಡ ಗೆಲವು ಕೊಟ್ಟ ಮತ್ತೊಂದು ಪಾತ್ರ ಕೆಜಿಎಫ್. ಪ್ರಶಾಂತ್ ನೀಲ್ ಅವರು ನನಗೆ ಪಾತ್ರ ಕೊಟ್ಟರು. ಇವತ್ತು ಜನ ಎಲ್ಲೇ ಹೋದರು ಯುವಕರು ಹೇ ಮಾನ್ ಸ್ಟರ್ ಎನ್ನುತ್ತಾರೆ ಎಂದು ಸಂತಸ ಪಟ್ಟರು. ಮಾನ್ ಸ್ಟರ್ ಎನ್ನುವುದು ಯುವಕರ ಮನಸ್ಸಿಗೆ ನಾಟಿತು' ಎಂದು ಹೇಳಿದ್ದರು.

 

click me!