ಕಂಗನಾ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ | ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಕ್ಕೆ ತುಮಕೂರಲ್ಲಿ ಕೇಸ್ | ಮಾ.18ಕ್ಕೆ ಮತ್ತೆ ವಿಚಾರಣೆ
ಬೆಂಗಳೂರು(ಮಾ.03): ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ತುಮಕೂರಿನ ಪ್ರಧಾನ ಸಿವಿಲ್ (ಕಿರಿಯ ಶ್ರೇಣಿ) ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ತುಮಕೂರಿನ ವಕೀಲ ಎಲ್.ರಮೇಶ್ ನಾಯ್‌್ಕ ದಾಖಲಿಸಿರುವ ಖಾಸಗಿ ದೂರಿನ ಮೇರೆಗೆ ಕ್ಯಾತಸಂದ್ರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ನಟಿ ಕಂಗನಾ ರಣಾವತ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಏಕ ಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
undefined
ಪೋಷಕರ ಮನೆ ಅಲಂಕರಿಸಿ, ಪೋಟೋ ಶೇರ್ ಮಾಡಿದ ಕಂಗನಾ ರಣಾವತ್!
ವಿಚಾರಣೆ ವೇಳೆ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಕಿ ಹಾಜರಾಗಿ, ತುಮಕೂರಿನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿದರು. ಆ ಮನವಿ ಮಾನ್ಯ ಮಾಡಲು ನಿರಾಕರಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಎತ್ತಿರುವ ಆಕ್ಷೇಪಣೆಗಳನ್ನು ಮೊದಲು ಪರಿಹರಿಸಿ. ನಂತರ ನಿಮ್ಮ ವಾದ ಆಲಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಮಾ.18ಕ್ಕೆ ಮುಂದೂಡಿತು.
ಸೆ.25ರಂದು ಖಾಸಗಿ ದೂರು:
ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ನಟಿ ಕಂಗನಾ ಸೆ.21ರಂದು ಟ್ವೀಟ್ ಮಾಡಿದ್ದರು. ನಟಿಯ ಈ ಟ್ವೀಟ್ ದೇಶದ ರೈತರನ್ನು ಅಪಮಾನಿಸಿದೆಯಲ್ಲದೆ, ಶಾಂತಿ ಸೌಹಾರ್ದತೆಯನ್ನೂ ಕದಡಲು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ವಕೀಲ ರಮೇಶ್ ನಾಯ್‌್ಕ ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೆ.25ರಂದು ಖಾಸಗಿ ದೂರು ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ತುಮಕೂರಿನ ಪ್ರಧಾನ ಸಿವಿಲ್ (ಕಿರಿಯ ಶ್ರೇಣಿ) ಜೆಎಂಎಫ್‌ಸಿ ನ್ಯಾಯಾಲಯ, ನಟಿ ವಿರುದ್ಧ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಜರುಗಿಸುವಂತೆ ಕ್ಯಾತಸಂದ್ರ ಠಾಣೆ ಪೊಲೀಸರಿಗೆ ಅ.9ರಂದು ಆದೇಶಿಸಿತ್ತು. ಅದರಂತೆ ಪೊಲೀಸರು ನಟಿ ವಿರುದ್ಧ ಐಪಿಸಿ ಸೆಕ್ಷನ್ 153(ಎ), 504, 108 ಅಡಿ ಎಫ್‌ಐಆರ್ ದಾಖಲಿಸಿದ್ದರು. ಹೀಗಾಗಿ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ನಟಿ ಕಂಗನಾ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.