ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕಿಯ ಸಹೋದರನ ಪಾತ್ರದಲ್ಲಿ ನಟಿಸುತ್ತಿರುವ ನಟ ಧ್ರುವ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಕಲರ್ಸ್ ವಾಹಿನಿಯ ಯುಗಾದಿ ಸಂಚಿಕೆ ವಿಶೇಷ ಕಾರ್ಯಕ್ರಮದಲ್ಲಿ ಧ್ರುವ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಸೆಲೆಬ್ರಿಟಿಗಳು, ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚುತ್ತಿರುತ್ತಾರೆ ಅಂದಮಾತ್ರಕ್ಕೆ ಅವರಿಗೆ ಯಾವುದೇ ಕಷ್ಟಗಳಿರಲ್ಲ, ನೆಮ್ಮದಿಯಾಗಿ, ಖುಷಿಯಾಗಿ, ಬಿಂದಾಸ್ ಆಗಿ ಜೀವನ ನಡೆಸುತ್ತಿರುತ್ತಾರೆ ಅಂತ ತಿಳಿದುಕೊಳ್ಳೋದು ತಪ್ಪು. ಅನೇಕ ಕಲಾವಿದರು ತುಂಬಾ ಕಷ್ಟಪಟ್ಟು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಇನ್ನೂ ಕಷ್ಟಪಡುತ್ತಲೆ ಇದ್ದಾರೆ. ತೆರೆ ಮೇಲೆ ತುಂಬಾ ಶ್ರೀಮಂತ ಮನೆಯ ಮಗಳಾಗಿ ಅಥವಾ ಮಗನಾಗಿ ಕಾಣಿಸಿಕೊಂಡ ಮಾತ್ರಕ್ಕೆ ನಿಜ ಜೀವನದಲ್ಲೂ ಹಾಗೆ ಇರ್ತಾರೆ ಅಂತಲ್ಲ. ಅದು ತೆರೆಮೇಲಿನ ಜೀವನ ಅಷ್ಟೆ. ತೆರೆ ಹಿಂದೆ ತುಂಬಾ ಕಷ್ಟದ ಜೀವನ ನಡೆಸುತ್ತಿರುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ಯಾಕುಮಾರಿ'(Kanyakumari) ಧಾರಾವಾಹಿ(serial) ನಟ ಧ್ರುವ.
ನಟ ಧ್ರುವ ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಬಂದವರು. ಮಗನ್ನು ಚೆನ್ನಾಗಿ ಓದಿಸಬೇಕೆಂದು ಧ್ರುವ ತಾಯಿ ಹಗಲು ರಾತ್ರಿ ಕಷ್ಟುಪಟ್ಟು ಕೆಲಸ ಮಾಡಿ, ಸಾಲ ಮಾಡಿ ಉತ್ತಮ ಶಾಲಿಗೆ ಸೇರಿಸಿದ್ದರು. ತಂದೆಯ ಬೆಂಬಲವಿಲ್ಲದೆ, ತಾಯಿ ಆಶ್ರಯದಲ್ಲಿ ಬೆಳೆದ ಧ್ರುವ ಜೀವನ ನಡೆಸಲು ಮೆಡಿಕಲ್ ಶಾಪ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದರು. ಅಂದು ಪಟ್ಟ ಶ್ರಮಕ್ಕೆ ಇಂದು ಫಲಸಿಕ್ಕಿದೆ. ಧ್ರುವ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ಯಾಕುಮಾರಿ ಧಾರಾವಾಹಿ ಮೂಲಕ ಧ್ರುವ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.
ಧ್ರುವ ತಾನು ಬೆಳೆದು ಬಂದ ರೀತಿ ಮತ್ತು ಕಷ್ಟದ ಹಾದಿಯನ್ನು ಕಲರ್ಸ್ ವಾಹಿನಿಯಲ್ಲಿ ಹೇಳಿಕೊಂಡಿದ್ದಾರೆ. ಯುಗಾದಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಧ್ರುವ ತನ್ನ ಕಷ್ಟದ ದಿನಗಳ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ, 'ಚಿಕ್ಕವನಿದ್ದಾಗ ಆಕ್ಟಿಂಗ್ ಬಗ್ಗೆ ಇಷ್ಟ ಇರಲಿಲ್ಲ ಆದರೆ ಬಳಿಕ ಸ್ನೇಹತರು ಹೇಳ್ತಿದ್ರು, ನಾನು ನಾಟಕ ಮಾಡುತ್ತಿದ್ದೆ. ಆದರೆ ಹೇಗೆ ಹೋಗಬೇಕು, ಯಾರ ಹತ್ರ ಹೇಳಬೇಕು ಗೊತ್ತಿರ್ಲಿಲ್ಲ. ತಾಯಿ ನನ್ನನ್ನು ಸಾಲ ಮಾಡಿ ಓದಿಸಿದ್ದಾರೆ. ಇಂಗ್ಲೀಷ್ ಕಲಿಬೇಕು ಅಂತ ಕಾನ್ವೆಂಟ್ ಶಾಲೆಯಲ್ಲೇ ಓದ್ಸಿದ್ರು. ನಾನು ಸಿಂಗಲ್ ಪೇರೆಂಟ್' ಎಂದಿದ್ದಾರೆ.
ಕನ್ಯಾಕುಮಾರಿ ಧಾರಾವಾಹಿಯಿಂದ ಹೊರ ನಡೆದ ಚರಣ್ ಸಹೋದರಿ ಸಹನಾ ಅಣ್ಣಪ್ಪ!
'ಸಿಂಗಲ್ ಪೇರೆಂಟ್ ಅಂತ ನಾನು ಹೆಮ್ಮೆಯಿಂದ ಹೇಳುತ್ತೇನೆ. ಅಮ್ಮ ಯಾವುದಕ್ಕೂ ಕೊರತೆ ಮಾಡಿಲ್ಲ, ಅಪ್ಪನ ಸ್ಥಾನವನ್ನು ತುಂಬಿ ಸಾಕಿದ್ದಾರೆ. ಅಮ್ಮನ ದುಡ್ಡಿನಲ್ಲಿ ಓದುತ್ತಿದ್ದೆ. ಒಂದು ದಿನ ಅಮ್ಮಗೆ ಅಪರೇಶನ್ ಮಾಡಬೇಕಾಯಿತು. ಮತ್ತೆ ಜೀವನ ಕಷ್ಟ ಆಯ್ತು. ಆಗ ನಾನು ಮೆಡಿಕಲ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರಿದೆ. ಹೀಗೆ ಮಾಡುತ್ತಿದ್ರೆ ಆಗಲ್ಲ ಎಂದು ಅಮ್ಮನ ಹತ್ರ ಹೇಳಿದೆ. ಒಂದು ತಿಂಗಳ ಮಟ್ಟಿಗೆ ಬೆಂಗಳೂರಿಗೆ ಹೋಗ್ತಿನಿ ಅಂತ ಹೇಳಿ ಬಂದೆ. ಇಲ್ಲಿ ಕೆಲಸಕ್ಕೆ ಸೇರಿದೆ. ನೈಟ್ ಶಿಫ್ಟ್ ಕೆಲಸಕ್ಕೆ ಸೇರಿದೆ. ಕೋವಿಡ್ ಮೊದಲ ಅಲೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ 2ನೇ ಅಲೆಯ ವೇಳೆ ಕೆಲಸ ಇಲ್ಲವಾಯ್ತು. ಜೀವನ ತುಂಬ ಕಷ್ಟ ಆಯ್ತು. ಮತ್ತೆ ಊರಿಗೆ ವಾಪಾಸ್ ಹೋದರೆ ಬರಕ್ಕೆ ಆಗ ಅಂತ ಸ್ನೇಹಿತರು ಹೇಳಿದರು. ಬಳಿಕ ನಾನು ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದೆ'
'ದಯವಿಟ್ಟು ಯಾರು ಡಿಲಿವರಿ ಬಾಯ್ ಗೆ ಬೈಬೇಡಿ. ಮಳೆ ಬರ್ತಿರುತ್ತೆ ಊಟ ತೆಗೆದುಕೊಂಡು ಹೋಗಿ ಕೊಟ್ಟಿರುತ್ತೀವಿ, ಆದರೂ ಕೆಟ್ಟ ಕೆಟ್ಟ ಮಾತಲ್ಲಿ ಬೈತಾರೆ. ಹೀಗೆ ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಅಪ್ಪನ ಮುದ್ದಿನ ಮಗಳು 'ದೊರೆಸಾನಿ' ರೂಪಿಕಾ ರಿಯಲ್ ಜೀವನದ ಕಥೆ!
'ಕೆಲಸ ಮಾಡುತ್ತಿರುವಾಗಲೇ ಕನ್ಯಾಕುಮಾರಿ ಧಾರಾವಾಹಿ ಸೇರಿದೆ. ಆಕ್ಟ್ ಮಾಡುತ್ತಿದ್ದಾಗಲೂ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದೆ. ಬಳಿಕ ನನ್ನ ಫೋಟೋ ನೋಡಿ ಎಲ್ಲರೂ ಕೇಳಲು ಶುರು ಮಾಡಿದರು. ಆರ್ಡರ್ ಕೊಡಲು ಹೋದಾಗ ಹೆಲ್ಮೆಟ್ ತೆಗೆಸಿ ನೋಡಿ ನೀವು ಕನ್ಯಾಕುಮಾರಿಯಲ್ಲಿ ಮಾಡ್ತೀರಾ ಅಲ್ವ, ನಿಮ್ಮದೆ ಸೀರಿಯಲ್ ಬರ್ತಿದೆ ಅದನ್ನೆ ನೋಡುತ್ತಿದ್ದೇವೆ ಅಂತ ಹೇಳ್ತಿದ್ರು' ಎಂದು ಧ್ರುವ ತನ್ನ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಆಗ ಪಕ್ಕದಲ್ಲೇ ಇದ್ದ ನಿರೂಪಕ ಮಂಜು ಅವರನ್ನು ಸಮಾಧಾನ ಪಡಿಸಿದರು.