Actor Kishore: ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ ಎಂದು ಪ್ರಶ್ನಿಸಿದ ಕಿಶೋರ್‌!

By Santosh NaikFirst Published Mar 23, 2023, 11:01 AM IST
Highlights

ಟಿಪ್ಪು ಸುಲ್ತಾನ್‌ ಅವರನ್ನು ಉರಿಗೌಡ ಹಾಗೂ ನಂಜೇಗೌಡ ಕೊಂದಿದ್ದರು ಎನ್ನುವ ವಿಚಾರಕ್ಕೆ ಇದೇ ಮೊದಲ ಬಾರಿ ಮಾತನಾಡಿರುವ ನಟ ಕಿಶೋರ್‌, ಇದು ಚುನಾವಣಾ ಸಮಯ ಎಚ್ಚರಿಕೆಯಲ್ಲಿರುವಂತೆ ಜನರಿಗೆ ಹೇಳಿದ್ದಾರೆ.

ಬೆಂಗಳೂರು (ಮಾ.23): ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಯಾರ ಬಗ್ಗೆಯೂ ಇಷ್ಟು ಚರ್ಚೆಯಾಗಿಲ್ಲ. ಇತಿಹಾಸದಲ್ಲಿ ನಿಜವಾಗಿಯೂ ಇಂಥ ವ್ಯಕ್ತಿಗಳಿದ್ದರೂ ಅಥವಾ ಕಾಲ್ಪನಿಕ ಪಾತ್ರಗಳೋ  ಎನ್ನುವುದು ಕೂಡ ಇನ್ನೂ ಬಗೆಹರಿದಿಲ್ಲ. ಆದರೆ, ಉರಿಗೌಡ ಹಾಗೂ ನಂಜೇಗೌಡರಷ್ಟು ಈ ಒಂದು ತಿಂಗಳಲ್ಲಿ ಯಾರೊಬ್ಬರೂ ಸುದ್ದಿಯಾಗಿಲ್ಲ. ಟಿಪ್ಪು ಸುಲ್ತಾನನನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎನ್ನುತ್ತಿದ್ದ ಬಿಜೆಪಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಬಂದಿದ್ದಾಗ ಮಹಾದ್ವಾರವೊಂದಕ್ಕೆ ಇವರದೇ ಹೆಸರನ್ನಿಟ್ಟು ರಾಜಕೀಯ ವಿರೋಧಿಗಳನ್ನು ಕೆಣಕಿತ್ತು. ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಇವರಿಬ್ಬರ ಬಗ್ಗೆ ಸಿನಿಮಾ ಮಾಡುವುದಾಗಿಯೇ ಘೋಷಿಸಿ ಬಿಟ್ಟಿದ್ದರು. ಆದರೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರ ನಿರ್ಮಲಾನಂದನಾಥ ಸ್ವಾಮೀಜಿಗಳ ಸೂಚನೆ ಮಿಶ್ರಿತ ಎಚ್ಚರಿಕೆಯ ಬೆನ್ನಲ್ಲಿಯೇ ಮುನಿರತ್ನ ಈ ಯೋಜನೆಯನ್ನು ಡ್ರಾಪ್‌ ಮಾಡಿದ್ದಾರೆ. ಅದರೊಂದಿಗೆ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಉರಿಗೌಡ ಹಾಗೂ ನಂಜೇಗೌಡ ವಿವಾದ ತಣ್ಣಗಾಗಿದೆ. ಇವರಿಬ್ಬರ ಪರವಾಗಿ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದ ಬಿಜೆಪುಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ಸಚಿವ ಅಶ್ವಥ್‌ ನಾರಾಯಣ್‌ ಕೂಡ ನಿರ್ಮಲಾನಂದನಾಥ ಸ್ವಾಮೀಜಿ ಈ ವಿಚಾರದಲ್ಲಿ ಎಂಟ್ರಿ ಕೊಟ್ಟ ಬಳಿಕ ಮೌನವಾಗಿದ್ದಾರೆ. ಇದರ ನಡುವೆ ಸ್ಯಾಂಡಲ್‌ವುಡ್ ನಟ ಕಿಶೋರ್‌ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುವ ಮೂಲಕ ಉರಿಗೌಡ ಹಾಗೂ ನಂಜೇಗೌಡ ವಿವಾದದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟ ಕಿಶೋರ್‌ ಹೇಳಿದ್ದೇನು: ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ… ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ (Nanje Gowda) ಉರಿಗೌಡರ (Urigowda) ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಇತ್ತ ಟಿಪ್ಪುವನ್ನು ಕೊಂದವರೆಂದು ಹೇಳಿ ಮುಸ್ಲಿಮರನ್ನೂ ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ? ಎಂದು ಅವರು ಕೇಳಿದ್ದಾರೆ.

ಮೊದಲು ಹಿಂದೂ ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು, ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು ನಂಜು ಕಾರಿದರು ಒಕ್ಕಲಿಗರೆಂದರು ಟಿಪ್ಪುವೆಂದರು ಬಿಹಾರಿಗಳೆಂದರು ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು ಭಾಷೆಯೆಂದರು ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು . ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೇವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು.. ಚುನಾವಣೆಯ ಕಾಲವಿದು ಎಚ್ಚರ..

ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ: ಟಿಪ್ಪು ಖಡ್ಗದ ಮೇಲಿನ ಬರಹ ರಿವೀಲ್

ಇನ್ನು ಒಂದು ದಿನದ ಹಿಂದೆ ಕಿಶೋರ್‌ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದೆ. 'ಅವರ‌ ಬೇಳೆ ಬೇಯಿಸಿಕೊಳ್ಳಲು ಬೇರೆಯವರ ಮನೆಗೂ ಬೆಂಕಿ ಹಚ್ಚಲು ಹಿಂಜರಿಯುವುದಿಲ್ಲ ಇವರು.. ಕೀಳು ಮನಸ್ಥಿತಿಯ ರಾಜಕಾರಣಿಗಳು... ಆದರೆ ಇದು ನಮ್ಮ ಸ(ತ್ತ)ತ್ಪೃಜೆ ಗಳಿಗೆ ಅರ್ಥ ಆಗ್ತಿಲ್ವಲ್ಲ ಅದೇ ದುರಂತ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಶ್ರೀಗಳ ಸಿನಿಮಾ ಆಕ್ಟಿಂಗ್‌ ಬಗ್ಗೆ ಮಾತನಾಡಿದ ಕುಮಾರಸ್ವಾಮಿ: ಕ್ಷಮೆಯಾಚಿಸಬೇಕು ಎಂದ ಚಲುವರಾಯಸ್ವಾಮಿ

'ಟಿಪ್ಪು ಸುಲ್ತಾನ್ ಅಂದ್ರೆ ಏನು ಅಂತ ನಮಗೆ ನಮ್ ಮೇಷ್ಟ್ರು ಹೇಳಿದ್ದು ಇವರು ಒಬ್ಬ ಭಾರತೀಯ ಮತ್ತು ಬ್ರಿಟಿಷ್ ವಿರುದ್ಧ ಹೋರಡಿದವರು ಅಂತ ಅಷ್ಟೇ ಹೇಳಿದ್ದು .ಅದ್ರಿಂದ ನಮಗೆ ಅನ್ಸಿದ್ದು ಇವ್ರು ಒಬ್ಬ ಸ್ವಾತಂತ್ರ ಹೋರಾಟಗಾರ ,ಕಿತ್ತೂರು ರಾಣಿ ಚೆನ್ನಮ್ಮ , ಸಂಗೊಳ್ಳಿ ರಾಯಣ್ಣ,ಇವರೆಲ್ಲ ನಮಗೆ ಒಂದು ಸ್ವಾತಂತ್ರ ಹೋರಾಟಗಾರರು ಅಂತ ಗೊತ್ತು ಅವ್ರು ಯಾವ ಜಾತಿ ಧರ್ಮ ಅಂತ ನಾವು ಕೇಳಿರಲಿಲ್ಲ ಯಾಕ್ ಅಂದ್ರೆ ಅವರ ಕಥೆ ಕೇಳಿದಾಗ ಬರ್ತಿದಿದ್ದು ದೇಶ ಭಕ್ತಿ ಬರ್ತಿತ್ತು ,ಆದ್ರೆ ಈವಾಗ ಈ ರಾಜಕಾರಣಿಗಳಿಂದ ಎಲ್ಲರಿಗೂ ಜಾತಿ ಧರ್ಮ ಅಂತ ಬೇರೆ ಬೇರೆ ಮಾಡೋಕೆ ಲಜ್ಜೆ ಬಿಟ್ಟು ನಿತ್ಕ್ಕೊಂಡಿದ್ದಾರೆ. ಇದು ಇನ್ನೂ ಎಲ್ಲಿಗೆ ಹೋಗುತ್ತೋ' ಎಂದು ಇನ್ನೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

click me!