ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ದಿನ ಜಾಹ್ನವಿ ಕಪೂರ್ ಹೈ ಡ್ರಾಮಾ ಮಾಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದರು. ಅಷ್ಟಕ್ಕೂ ಏನಿದು ಗಲಾಟೆ?
ಸದ್ಯ ಬಿ-ಟೌನ್ನಲ್ಲಿ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ದೇ ಚರ್ಚೆ. ಇವರು ವಿಚ್ಛೇದನ ಕೊಡುತ್ತಿದ್ದಾರೆ ಎಂಬ ಬಗ್ಗೆ ಒಂದಿಷ್ಟು ಮಂದಿ ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದರೆ, ಇವೆಲ್ಲಾ ಸುಳ್ಳು ಎಂದು ಇನ್ನೊಂದಿಷ್ಟು ಘಟನೆಗಳು ಕಾಣಸಿಗುತ್ತಿವೆ. ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರೂ ಬಚ್ಚನ್ ಕುಟುಂಬದವರು ಇದುವರೆಗೆ ಯಾವುದೇ ಸ್ಪಷ್ಟನೆ ಕೊಡದೇ ಇರುವುದು ಇನ್ನಷ್ಟು ಕನ್ಫ್ಯೂಷನ್ಗೆ ಕಾರಣವಾಗಿದೆ. ಇತ್ತೀಚಿಗೆ ನಟ ಅಮಿತಾಭ್ ಬಚ್ಚನ್ ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹೇಳುವುದೆಲ್ಲಾ ಹೇಳಿಯಾಗಿದೆ ಎಂದು ಬರೆದಿದ್ದು, ಇದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಈ ಸುದ್ದಿ ಸುಳ್ಳೇ ಆಗಿದ್ದರೆ ಖುದ್ದು ದಂಪತಿಯಾಗಲೀ ಅಥವಾ ಅಮಿತಾಭ್ ಆಗಲೀ ಸ್ಪಷ್ಟನೆ ಕೊಟ್ಟು ವಿವಾದಕ್ಕೆ ತೆರೆ ಎಳೆಯುತ್ತಿದ್ದರು. ಆದರೆ ಇದುವರೆಗೆ ಈ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬರದೇ ಇರುವುದು ಕೂಡ ವಿಚ್ಛೇದನದ ಸುದ್ದಿ ನಿಜವೇ ಇರಬಹುದು ಎನ್ನುವ ವಾದವೂ ಇದೆ.
ಅದೇ ಇನ್ನೊಂದೆಡೆ, ಇದೀಗ ಕುತೂಹಲದ ವಿಷಯವೊಂದು ಬೆಳಕಿಗೆ ಬಂದಿದೆ. ಬಣ್ಣದ ಲೋಕದಲ್ಲಿ ಲವ್ ಮಾಡುವುದು, ಡೇಟಿಂಗ್ ಮಾಡುವುದು, ಸಂಬಂಧದಲ್ಲಿ ಇರುವುದು, ಕೈಕೊಡುವುದು, ಅಕ್ರಮ ಸಂಬಂಧ ಹೊಂದುವುದು... ಇವೆಲ್ಲವೂ ಮಾಮೂಲೇ. ಅದೇ ರೀತಿ ಐಶ್ವರ್ಯ ಅವರ ಹೆಸರು ಮದುವೆಗೂ ಮುನ್ನ ಸಲ್ಮಾನ್ ಖಾನ್ ಸೇರಿದಂತೆ ಕೆಲವು ನಟರ ಜೊತೆ ಥಳಕು ಹಾಕಿಕೊಂಡಿದ್ದರೆ, ಅಭಿಷೇಕ್ ಮತ್ತು ಕರಿಷ್ಮಾ ಕಪೂರ್ ಅವರ ಲವ್ ಸ್ಟೋರಿ ದೊಡ್ಡ ಸದ್ದೇ ಮಾಡಿತ್ತು. ಇವರಿಬ್ಬರೂ ಮದುವೆಯಾಗುವ ಮಟ್ಟಿಗೆ ಬಂದಿದ್ದರು. ಅಮಿತಾಭ್ ಅವರ ಪುತ್ರಿ ಶ್ವೇತಾ ಬಚ್ಚನ್ಗೆ ಕೂಡ ಈ ಮದುವೆ ತುಂಬಾ ಇಷ್ಟವಿತ್ತು. ಕರಿಷ್ಮಾ ಅವರನ್ನೇ ಅತ್ತಿಗೆಯಾಗಿ ಪಡೆಯಬೇಕು ಎನ್ನುವ ಪ್ರಯತ್ನವನ್ನು ಅವರು ಕೊನೆಯ ಕ್ಷಣದವರೆಗೂ ಮಾಡಿದ್ದರು. ಆದರೆ ಅದಾಗಲೇ ಅಭಿಷೇಕ್ ಮತ್ತು ಕರಿಷ್ಮಾ ಅವರ ಸಂಬಂಧ ಮುರಿದು ಐಶ್ವರ್ಯ ಜೊತೆ ಮದ್ವೆಯಾಯಿತು.
ಇದರ ನಡುವೆಯೇ ಕುತೂಹಲ ಎನ್ನುವ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ, ಐಶ್ವರ್ಯ ಮತ್ತು ಅಭಿಷೇಕ್ ಅವರ ಮದುವೆಯನ್ನು ನಿಲ್ಲಿಸಲು ಜಾಹ್ನವಿ ಕಪೂರ್ ಎಂಬ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ವಿಷಯ ಇದಾಗಿದೆ. ಹೌದು! ಸದ್ಯ ಜಾಹ್ನವಿ ಕಪೂರ್ ಎಂದರೆ, ನಟಿ ಶ್ರೀದೇವಿ ಪುತ್ರಿ ಎಂದುಕೊಂಡರೆ ಅದು ತಪ್ಪು. ಏಕೆಂದರೆ, 2007ರಲ್ಲಿ ನಟರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿವಾಹ ನಡೆದಿತ್ತು. ಈಗ 26 ವರ್ಷದ ಯುವತಿಯಾಗಿರುವ ಜಾಹ್ನವಿ 2007ರಲ್ಲಿ ಕೇವಲ 10 ವರ್ಷವಿತ್ತು. ಆದರೆ ಇಲ್ಲಿ ಐಷ್ ಮತ್ತು ಅಭಿ ಮದ್ವೆಯ ದಿನ ಹಂಗಾಮಾ ಸೃಷ್ಟಿಸಿದ್ದ ಖ್ಯಾತ ಮಾಡೆಲ್ ಆಗಿದ್ದ ಜಾಹ್ನವಿ ಕಪೂರ್. ಅಭಿಷೇಕ್ ತಮಗೆ ಮೋಸ ಮಾಡಿರುವುದಾಗಿ ಹೇಳಿಕೊಂಡು ಜಾಹ್ನವಿ ದೊಡ್ಡ ವಿವಾದವನ್ನು ಸೃಷ್ಟಿಸಿದ್ದರು. ಆಗ ಅದು ರಾಷ್ಟ್ರೀಯ ಚಾನೆಲ್‌ಗಳಲ್ಲಿ ಬಹು ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ಇಷ್ಟೇ ಅಲ್ಲದೇ ಜಾಹ್ನವಿ ಕಪೂರ್, ಅಭಿಷೇಕ್ ತಮಗೆ ಮೋಸ ಮಾಡಿದ್ದಾರೆ ಎಂದು ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇದು ಅಲ್ಲಿಗೇ ಮುಗಿದುಹೋಯ್ತು. ಜಾಹ್ನವಿ ಕಪೂರ್, ಅಭಿಷೇಕ್ ಜೊತೆ ‘ದಸ್’ ಚಿತ್ರದಲ್ಲಿ ಕೆಲಸ ಮಾಡಿದ್ದರು. ಅಭಿಷೇಕ್ ಮನೆಯ ಹೊರಗೆ, ಜಾಹ್ನವಿ ಮದುವೆಯ ದಿನ ತಮ್ಮ ಮಣಿಕಟ್ಟುಗಳನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಐಶ್ವರ್ಯಾ ತನ್ನಿಂದ ನಟನನ್ನು ಕದ್ದಿದ್ದಾಳೆ ಎಂದು ಜಾಹ್ನವಿ ಆರೋಪಿಸಿದ್ದರು. ನಂತರ ಜುಹು ಪೊಲೀಸರು ತನಿಖೆ ನಡೆಸಿ ಜಾಹ್ನವಿ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309 ರ ಅಡಿ ಕೇಸು ದಾಖಲು ಮಾಡಿ ಬಂಧಿಸಿ ನಂತರ ದಂಡ ಹಾಕಿ ಬಿಟ್ಟಿದ್ದರು. ಈ ಘಟನೆಯ ನಂತರ, ಜಾಹ್ನವಿ ಕಪೂರ್ ಅಭಿಷೇಕ್ ಅವರ ಮನೆಯ ಹೊರಗೆ ಎಂದಿಗೂ ಕಾಣಿಸಲಿಲ್ಲ ಮತ್ತು ಅವರು ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಅಷ್ಟೇ ಅಲ್ಲದೇ ಈ ವಿವಾದದ ನಂತರ ನಾಪತ್ತೆ ಕೂಡ ಆದರು.
ಕರಣ್ ಷೋನಲ್ಲಿ ಅಮಿತಾಭ್ ಪುತ್ರಿ ಶ್ವೇತಾ, ಐಶ್ವರ್ಯ ಬಗ್ಗೆ ಹೇಳಿದ್ದೇನು? ಕುತೂಹಲದ ವಿಡಿಯೋ ವೈರಲ್
ಅಂದಹಾಗೆ ಐಶ್ ಹಾಗೂ ಅಭಿ ಜೋಡಿ 2007 ರ 20 ಏಪ್ರಿಲ್ರಂದು ಬಚ್ಚನ್ ಕುಟುಂಬದ ನಿವಾಸ 'ಪ್ರತೀಕ್ಷಾ'ದಲ್ಲಿ ವಿವಾಹವಾದರು. ಆದರೆ ಈ ದಾಂಪತ್ಯ ಜೀವನದ ಬಗ್ಗೆ ಈಗ ಬಿರುಗಾಳಿಯೇ ಎದ್ದಿದ್ದು, ನಿಜಾಂಶ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.