
ತುಂಬಾ ಜನ ಮಕ್ಕಳಿಲ್ಲದ ದಂಪತಿ ಒಂದು ಮಗುವಿಗಾಗಿ ನೂರಾರು ಹರಕೆ ಹೊರುತ್ತಾರೆ. ದೇವಸ್ಥಾನ ಗುಡಿ ಗೋಪುರಗಳನ್ನು ಸುತ್ತುತ್ತಾರೆ. ಆದರೂ ಕೆಲವರಿಗೆ ದೇವರೊಲಿಯುವುದಿಲ್ಲ, ಮಕ್ಕಳಾಗುವುದಿಲ್ಲ, ಆದರೆ ಇಲ್ಲೊಂದು ಕಡೆ ಹುಟ್ಟಿ 15 ದಿನವಷ್ಟೇ ಕಳೆದಿದ್ದ ಮಗುವನ್ನು ಪೋಷಕರು ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ಏನೂ ಅರಿಯದ ಮಾತು ಬಾಯಿ ಬಾರದ ಮಗುನ್ನು ಸುಮ್ಮನೇ ಬಿಟ್ಟು ಹೋಗುವುದೇ ಒಂದು ದೊಡ್ಡ ಅಪರಾಧ ಅಂತಹದ್ದರಲ್ಲಿ ಈ ಪಾಪಿಗಳು ನೋಡುಗರ ಕೇಳುಗರ ರಕ್ತ ಕುದಿಯುವಂತ ಕೃತ್ಯವೆಸಗಿದ್ದಾರೆ ಮುಗ್ಧ ಕಂದನ ಬಾಯಿಯೊಳಗೆ ಕಲ್ಲು ತುಂಬಿಸಿದ ಪಾಪಿಗಳು ತುಟಿಗೆ ಗಮ್ ಅಂಟಿಸಿ ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ಈ ಘಟನೆ ತೀವ್ರ ಆಕ್ರೋಶವನ್ನು ಉಂಟು ಮಾಡಿದೆ. ಬಹುಶಃ ಕ್ರೌರ್ಯಕ್ಕೂ ಒಂದು ಮುಖವಿದ್ದರೆ ಅದು ಈ ಮಗುವಿನ ಮೇಲೆ ಈ ರೀತಿಯ ಕ್ರೌರ್ಯ ತೋರಿದ್ದ ಪಾಪಿಗಳ ಮುಖವೇ ಆಗಿರುತ್ತದೆ ಎಂದರೆ ತಪ್ಪಾಗಲಾರದು.
ಹೌದು ಇಂಹ ರಾಕ್ಷಸೀಯ ಘಟನೆ ನಡೆದಿರುವುದು ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿ. ಬಿಲ್ವಾರ ಜಿಲ್ಲೆಯ ಕಾಡೊಂದರಲ್ಲಿ 15 ದಿನಗಳಷ್ಟೇ ತುಂಬಿದ್ದ ಮಗುವೊಂದನ್ನು ಪೋಷಕರು ಬಿಟ್ಟು ಹೋಗಿದ್ದರು. ಮಗುವಿನ ಬಾಯಲ್ಲಿ ಕಲ್ಲುಗಳನ್ನು ತುಂಬಲಾಗಿತ್ತು. ಗಮ್ ಅಂಟಿಸಿದ್ದರೂ ಕೂಡ ಈ ಮಗುವನ್ನು ಮೊದಲು ನೋಡಿದ ವ್ಯಕ್ತಿ ಈ ಕಂದನ ಬಾಯಿ ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗಮ್‌ನಿಂದ ಅಂಟಿದ್ದ ಮಗುವಿನ ಪುಟ್ಟ ಬಾಯನ್ನು ಯಶಸ್ವಿಯಾಗಿ ತೆರೆದ ವ್ಯಕ್ತಿಗೆ ಒಳಗೆ ನೋಡಿದಾಗ ಮತ್ತೊಂದು ಆಘಾತ ಕಾದಿತ್ತು. ಮಗುವನ್ನು ಬಿಟ್ಟು ಹೋದ ಪಾಪಿಗಳು ಬಾಯೊಳಗೆ ಕಲ್ಲುಗಳನ್ನು ತುಂಬಿಸಿ ಬಾಯನ್ನು ಬಂದ್ ಮಾಡಿದ್ದರು.
ದನಗಾಹಿಗಳಿಂದ ರಕ್ಷಣೆ: ಕ್ರೌರ್ಯವನ್ನು ಮೀರಿ ಬದುಕುಳಿದ ಮಗು
ಮಗು ಯಾವುದೇ ಸದ್ದು ಮಾಡಬಾರದು, ಯಾರನ್ನು ಸೆಳೆದು ಬದುಕುಳಿಯಬಾರದು ಮಗು ಸಾಯಲೇಬೇಕು ಎಂಬ ಉದ್ದೇಶದಿಂದ ಪಾಪಿಗಳು ಈ ಕೃತ್ಯವೆಸಗಿದ್ದರು. ಆದರೆ ಮಗುವನ್ನು ಸಾಯಿಸುವುದಕ್ಕಾಗಿ ರಾಕ್ಷಸ ಮನಸ್ಸಿನ ಮನುಷ್ಯರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಕಾಯುವವನು ಇದ್ದಾಗ ಕಾಡುವವರು ಎಷ್ಟಿದ್ದರೇನು ಎಂಬ ನಂಬಿಕೆಯಂತೆ ಪುಟ್ಟ ಮಗು ತನ್ನ ಮೇಲಿನ ಎಲ್ಲಾ ಕ್ರೌರ್ಯವನ್ನು ಮೀರಿ ಬದುಕುಳಿದಿದೆ. ದನ ಕಾಯುವ ವ್ಯಕ್ತಿಯೊಬ್ಬರಿಗೆ ಈ ಮಗು ಕಾಣಿಸಿದ್ದು, ಕೂಡಲೇ ಅವರು ಮಗುವಿನ ಬಾಯಿ ತೆರೆದು ಕಲ್ಲುಗಳನ್ನು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸೀತಾ ಕುಂಡ್ ದೇವಾಲಯದ ಮುಂಭಾಗದ ರಸ್ತೆಯ ಪಕ್ಕದ ಕಾಡಿನಲ್ಲಿ ಮಗು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಗುವಿನ ಪೋಷಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹತ್ತಿರದ ಆಸ್ಪತ್ರೆಗಳಲ್ಲಿ ಆಗಿರುವ ಇತ್ತೀಚಿನ ಹೆರಿಗೆ ವರದಿಯನ್ನು ಅವರು ಪರಿಶೀಲಿಸುತ್ತಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಜನರನ್ನು ಸಹ ಅವರು ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.
ಈ ಘಟನೆಯ ವೀಡಿಯೋ ನೋಡಿದ ಅನೇಕರು ದುಷ್ಕರ್ಮಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇವರಿಗೆ ನರಕದಲ್ಲೂ ಜಾಗ ಸಿಗಬಾರದು, ಮಕ್ಕಳು ಬೇಡವೆಂದರೆ ಏಕೆ ಜನ್ಮ ನೀಡಿ ಸಾಯಿಸ್ತೀರಿ ಕಾಂಡೋಮ್ ಬಳಸಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಪೋಷಕರಿಗೆ ಕಷ್ಟವಿದ್ದಿದ್ದರೆ ಒಳ್ಳೆಯ ಸ್ಥಳದಲ್ಲಿ ಮಗುವಿಗೆ ಏನು ಹಾನಿ ಆಗದಂತೆ ಬಿಟ್ಟು ಹೋಗುತ್ತಿದ್ದರು. ಆದರೆ ಇವರು ಉದ್ದೇಶಪೂರ್ವಕವಾಗಿಯೇ ಕೃತ್ಯವೆಸಗಿದ್ದಾರೆ ಇವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಅದೇನೆ ಇರಲಿ ಮಾತು ಆಡದ 15 ದಿನಗಳ ಮಗುವನ್ನು ಬಿಟ್ಟು ಹೋಗಿದ್ದಲ್ಲದೇ ಅದರ ತುಟಿಗೆ ಗಮ್ ಹಾಕಿ ಸೀಲ್ ಮಾಡಿದ ಈ ಪಾಪಿಗಳು ಸಿಕ್ಕರೆ ಜೀವಮಾನದಲ್ಲೆಂದು ಮರೆಯಲಾಗದ, ಪ್ರತಿದಿನವೂ ನೆನಪಿಟ್ಟುಕೊಳ್ಳುವಂತಹ ಶಿಕ್ಷೆಯನ್ನೇ ನೀಡಬೇಕು. ಈ ಬಗ್ಗೆ ನೀವೇನಂತಿರಿ ಕಾಮೆಂಟ್ ಮಾಡಿ...
ಇದನ್ನೂ ಓದಿ: ನೆಟ್‌ಫ್ಲಿಕ್ಸ್ ಸಿರೀಸ್, ಶಾರುಖ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖೆಡೆ
ಇದನ್ನೂ ಓದಿ: ಶಿಕ್ಷಣಾಧಿಕಾರಿಗೇ ಮುಖ್ಯ ಶಿಕ್ಷಕನ ಬೆಲ್ಟ್ ಟ್ರೀಟ್‌ಮೆಂಟ್: ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಥಳಿಸಿದ ಹೆಡ್‌ಮಾಸ್ಟರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.