ನವದೆಹಲಿ(ಅ.26): 67ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಸೋಮವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ‘ಕೋವಿಡ್ ಕಾರಣಕ್ಕೆ 2 ವರ್ಷದಷ್ಟುಅವಧಿಗೆ ಪ್ರಶಸ್ತಿ ಪ್ರದಾನ ವಿಳಂಬವಾಯಿತು. ಆದರೆ ಈಗ ಪ್ರದಾನ ಆಗುತ್ತಿರುವುದು ಸಂತಸ ತಂದಿದೆ. ಭಾರತೀಯ ಸಿನಿಮಾಗಳಿಗೆ ಸಂಸ್ಕೃತಿ ಹಾಗೂ ಪ್ರಾದೇಶಿಕ ಭಿನ್ನತೆಯನ್ನು ಮೀರಿ ತಮ್ಮದೇ ಆದ ಭಾಷೆ ಇದೆ’ ಎಂದು ಕೊಂಡಾಡಿದರು.
ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ ಭಾರತೀಯ ಚಲನಚಿತ್ರದ ಅತ್ಯುಚ್ಚ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಮನೋಜ್ ಬಾಜಪೇಯಿ, ಧನುಷ್‌ಗೆ ಅತ್ಯುತ್ತಮ ನಟ, ಕಂಗನಾ ರಾಣಾವತ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಜಪೇಯಿ, ಧನುಷ್ ಅತ್ಯುತ್ತಮ ನಟರು:
‘ಅಸುರನ್’ ಚಿತ್ರಕ್ಕೆ ರಜನೀಕಾಂತ್ ಅವರ ಅಳಿಯ ಧನುಷ್ ಹಾಗೂ ‘ಭೋಸ್ಲೆ’ ಚಿತ್ರಕ್ಕಾಗಿ ನಟ ಮನೋಜ್ ಬಾಜಪೇಯಿ ಶ್ರೇಷ್ಠ ನಟ ಪ್ರಶಸ್ತಿ ಸ್ವೀಕರಿಸಿದರು. ‘ನಮ್ಮನ್ನು ಮತ್ತೆ ಗುರುತಿಸಿದ್ದಕ್ಕೆ ಹರ್ಷವಾಗುತ್ತಿದೆ’ ಎಂದು ಬಾಜಪೇಯಿ ಹೇಳಿದರು.
undefined
ಇನ್ನು ನಟಿ ಕಂಗನಾ ರಾಣಾವತ್ ಅವರು ‘ಮಣಿಕರ್ಣಿಕಾ’ ಹಾಗೂ ‘ಪಂಗಾ’ ಚಿತ್ರಗಳಿಗೆ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು. ‘ನನ್ನ ತಂದೆ-ತಾಯಿಯೇ ಈ ಪ್ರಶಸ್ತಿಗೆ ಮೂಲ ಕಾರಣ’ ಎಂದು ಕಂಗನಾ ಹರ್ಷಿಸಿದರು.
ಪ್ರಶಸ್ತಿ ವಿಭಾಗ | ಪ್ರಶಸ್ತಿ ಪಡೆದ ನಟ/ನಟಿಯರು/ಸಿನಿಮಾ |
ಅತ್ಯುತ್ತಮ ನಟರು | ಬಾಜಪೇಯಿ, ಧನುಷ್ |
ಅತ್ಯುತ್ತಮ ನಟಿ | ಕಂಗನಾ ರಾಣಾವತ್ |
ಅತ್ಯುತ್ತಮ ಚಿತ್ರ | ಮರಕ್ಕರ್(ಮಲಯಾಳಂ) |
ಉತ್ತಮ ನಿರ್ದೇಶಕ | ಸಂಜಯ್ ಪೂರಣ್ ಸಿಂಗ್ |
ಉತ್ತಮ ಪೋಷಕ ನಟರು | ಪಲ್ಲವಿ ಜೋಶಿ, ವಿಜಯ್ ಸೇತುಪತಿ |
ಉತ್ತಮ ಹಿನ್ನೆಲೆ ಗಾಯಕ | ಬಿ. ಪ್ರಾಕ್ |
ಉತ್ತಮ ಹಿನ್ನೆಲೆ ಗಾಯಕಿ | ಸಾವನಿ ರವೀಂದ್ರ |
ರಾಜ್ಯಕ್ಕೆ 6 ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗರಿ
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಕ್ಕೆ 6 ಪ್ರಶಸ್ತಿಗಳ ಗೌರವ ಸಂದಿದೆ. ನೇತ್ರದಾನದ ಮಹತ್ವ ಹೇಳುವ ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪ್ರಾಪ್ತವಾಗಿದೆ.
‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕಾಗಿ ವಿಕ್ರಮ್ ಮೋರ್ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶಕ, ರಾಮದಾಸ ನಾಯ್ಡು ಅವರ ‘ಕನ್ನಡ ಸಿನಿಮಾ ಪ್ರೇರಣೆ-ಪ್ರಭಾವ’ ಕೃತಿಗೆ ಶ್ರೇಷ್ಠ ಪುಸ್ತಕ ಪ್ರಶಸ್ತಿ, ‘ವೈಲ್ಡ್ ಕರ್ನಾಟಕ’ ಎಂಬ ವನ್ಯಜೀವಿ ಆಧರಿತ ಚಿತ್ರಕ್ಕೆ ಅತ್ಯುತ್ತಮ ಸಂಶೋಧನಾ ಸಿನಿಮಾ ಹಾಗೂ ‘ವೈಲ್ಡ್ ಕರ್ನಾಟಕ’ಕ್ಕೆ ಕಂಠನಾದ ನೀಡಿದ ಸರ್ ಡೇವಿಡ್ ಅಟೆನ್‌ಬರೋ ಅವರಿಗೆ ಕಂಠದಾನ ಪ್ರಶಸ್ತಿ ಲಭಿಸಿವೆ.
ಇನ್ನು ದಕ್ಷಿಣ ಕನ್ನಡ-ಉಡುಪಿಯ ಪ್ರಮುಖ ಭಾಷೆ ಆಗಿರುವ ತುಳು ಚಿತ್ರ ‘ಪಿಂಗಾರ’ಕ್ಕೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿ ಸಂದಿದೆ. ಪ್ರೀತಮ್ ಶೆಟ್ಟಿಇದರ ನಿರ್ದೇಶಕರು ಹಾಗೂ ಅವಿನಾಶ್ ಶೆಟ್ಟಿನಿರ್ಮಾಪಕರು.
ಪ್ರಶಸ್ತಿ ವಿಭಾಗ | ಪ್ರಶಸ್ತಿ ಪಡೆದ ನಟ/ನಟಿಯರು/ಸಿನಿಮಾ |
ಅತ್ಯುತ್ತಮ ಕನ್ನಡ ಚಲನಚಿತ್ರ | ಅಕ್ಷಿ |
ಅತ್ಯುತ್ತಮ ತುಳು ಚಿತ್ರ | ಪಿಂಗಾರ |
ಶ್ರೇಷ್ಠ ಸಿನಿಮಾ ಪುಸ್ತಕ | ರಾಮದಾಸ ನಾಯ್ಡು |
ಅತ್ಯುತ್ತಮ ಸಾಹಸ ನಿರ್ದೇಶಕ | ವಿಕ್ರಮ್ ಮೋರ್ |
ಅತ್ಯುತ್ತಮ ಸಂಶೋಧನಾ ಸಿನಿಮಾ | ವೈಲ್ಡ್ ಕರ್ನಾಟಕ |
ವೈಲ್ಡ್ ಕರ್ನಾಟಕಕ್ಕೆ ಅತ್ಯುತ್ತಮ ಕಂಠದಾನ | ಡೆವಿಡ್ ಅಟೆನ್‌ಬರೋ |