ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಪ್ರಕರಣದಲ್ಲಿ 19 ವರ್ಷದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಹೇಳಿದ್ದೇನು?
ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ದೇಶಾದ್ಯಂತ ಭಾರಿ ಹಲ್ಚಲ್ ಸೃಷ್ಟಿಸಿದೆ. ಯಾರದ್ದೋ ದೇಹಕ್ಕೆ ಇನ್ನಾದರೋ ಮುಖ ಹಾಕಿ ಮೀಮ್ಸ್ ಮಾಡುವುದು ಮಾಮೂಲು. ಆದರೆ, ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್ ಫೇಕ್. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಯಿತು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಇದನ್ನುಮಾಡಲಾಗಿದೆ. ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನಟಿಯೊಬ್ಬಳು ಈ ರೀತಿ ಡ್ರೆಸ್ ಹಾಕಿದರೆ ಅದೇನು ದೊಡ್ಡ ವಿಷಯವೇ ಅಲ್ಲ. ಈ ರೀತಿ ದೇಹ ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ ಎನಿಸಿದೆ. ಆದರೆ ಸಾಮಾನ್ಯ ಮಹಿಳೆಯರ ವಿಷಯದಲ್ಲಿಯೂ ಹೀಗೆಯೇ ಆದರೆ ಮಾನ ಮರ್ಯಾದೆಗೆ ಅಂಜುವವರು ಯಾವ ಹಂತಕ್ಕಾದರೂ ಹೋಗಬಹುದು ಎಂಬ ಬಗ್ಗೆ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಆದ್ದರಿಂದ ಇಂಥ ವಿಡಿಯೋ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ, ಮುಂದೆ ಈ ರೀತಿ ಮಾಡಲು ಜನರು ಹೆದರುತ್ತಾರೆ ಎನ್ನುವ ಕಾರಣಕ್ಕೆ ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಇದೀಗ ಬಿಹಾರದ 19 ವರ್ಷದ ಯುವಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬ್ರಿಟಿಷ್ ಇಂಡಿಯನ್ ಮತ್ತು ಇನ್‌ಸ್ಟಾಗ್ರಾಮ್ ಪ್ರಭಾವಿ ಜಾರಾ ಪಟೇಲ್ ಎಂಬಾತ ಮೂಲ ವೀಡಿಯೊವನ್ನು ರಶ್ಮಿಕಾ ಅವರ ಮುಖದೊಂದಿಗೆ ಮಾರ್ಫ್ ಮಾಡಲಾಗಿತ್ತು. ಇದಾಗಲೇ ಜಾರಾ ಅವರು ಇದರಲ್ಲಿ ತಮ್ಮ ಕೈವಾಡ ಏನೂ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಜೊತೆಗೆ ಈ ರೀತಿಯಾದುದಕ್ಕೆ ಅವರು ವಿಷಾದ ಕೂಡ ವ್ಯಕ್ತಪಡಿಸಿದ್ದರು. ಈ ವಿಡಿಯೋದ ಮಾರ್ಫಿಂಗ್‌ನಲ್ಲಿ ತಾವು ಭಾಗಿಯಾಗಿಲ್ಲ ಎಂದು Instagram ಕೂಡ ಹೇಳಿತ್ತು.
ದೀಪಾವಳಿಯಲ್ಲೂ ಸದ್ದು ಮಾಡ್ತಿದೆ ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿ: ಏನಪ್ಪಾ ಈ ಗುಸುಗುಸು?
ಇದರ ಬೆನ್ನಲ್ಲೆ, ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಇದರ ಕಾರಣೀಕರ್ತರು ಯಾರು ಎಂಬ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ರಶ್ಮಿಕಾ ಅವರ ನಕಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಬಗ್ಗೆ ವಿವರಗಳನ್ನು ನೀಡುವಂತೆ ಪೊಲೀಸರು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾಗೆ ಪತ್ರ ಬರೆದಿತ್ತು. ಈ ವೀಡಿಯೋವನ್ನು ಶೇರ್ ಮಾಡಿದವರ ವಿವರಗಳನ್ನು ನೀಡುವಂತೆ ಮಾಡಿದ ಮನವಿಗೆ ಫೇಸ್ ಬುಕ್ ಮಾಲೀಕರು ಸಮ್ಮತಿಸಿದ್ದು, ಇತ್ತೀಚೆಗಷ್ಟೇ ಈ ವಿಡಿಯೋವನ್ನು ಶೇರ್ ಮಾಡಿದವರ ವಿವರವನ್ನು ಮೊದಲ ಬಾರಿಗೆ ಪೊಲೀಸರಿಗೆ ನೀಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ, ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಖಾತೆಯನ್ನು ಪೊಲೀಸರು ಗುರುತಿಸಲಾಗಿದೆ.
ಇದೀಗ ಬಿಹಾರದ 19 ವರ್ಷದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಯುವಕನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ರಶ್ಮಿಕಾ ಅವರ ಡೀಪ್ ಫೇಕ್ ವೀಡಿಯೊವನ್ನು ಮೊದಲು ಈತನ ಖಾತೆಯಿಂದ ನೆಟ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತನಿಖೆ ವೇಳೆ ಕಂಡುಬಂದಿದೆ. ಅದರ ನಂತರ, ವೀಡಿಯೊವನ್ನು ಅನೇಕ ಜನರು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ಬೇರೊಂದು ಸಾಮಾಜಿಕ ಜಾಲತಾಣದಿಂದ ಡೌನ್‌ಲೋಡ್ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ತನಿಖೆಯಷ್ಟೇ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೀಪ್‌ಫೇಕ್ ಫೋಟೋದ ಭಯಾನಕ ಅನುಭವ ಹಂಚಿಕೊಂಡ ನಟಿ ಸೊನ್ನಾಳ್ಳಿ ಸೇಗಲ್