Deepika Padukone: ಆಸ್ಕರ್​ ವೇದಿಕೆಯಿಂದ ತವರಿಗೆ ನಟಿ: ಕ್ವೀನ್​ ಈಸ್​ ಬ್ಯಾಕ್​ ಟ್ರೆಂಡ್​

By Suvarna News  |  First Published Mar 18, 2023, 8:08 PM IST

ಆಸ್ಕರ್​ ವೇದಿಕೆಯಲ್ಲಿ ನಿರೂಪಕಿಯಾಗಿ ಹೋಗಿದ್ದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಪುನಃ ಭಾರತಕ್ಕೆ ವಾಪಸಾಗಿದ್ದು, ಅದ್ಧೂರಿ ಸ್ವಾಗತ ಕೋರಲಾಗಿದೆ. 
 


ಅಮೆರಿಕದ ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದಿದ್ದ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಭಾರತೀಯರ ಪಾಲಿಗೆ ಹೆಮ್ಮೆಯ ಕಾರಣವಾಗಿ ಹೊಮ್ಮಲು ಅನೇಕ ಕಾರಣಗಳು ಇದ್ದವು. ಕನ್ನಡದ ನಂಟು ಹೊಂದಿರುವ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ‘ದಿ ಎಲಿಫೆಂಟ್ ವಿಸ್ಪರರ್ಸ್’ 95 ನೇ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರೆ, RRR ಚಿತ್ರದ ‘ನಾಟು ನಾಟು’ (Natu Natu) ಹಾಡಿಗೆ  ಆಸ್ಕರ್ ಪ್ರಶಸ್ತಿ ಸಂದಿರುವುದು ಮತ್ತೊಂದು.  ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಟ್ರೆಂಡ್ ಆಗಿದೆ. ಅನೇಕ ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು’ ಪ್ರಶಸ್ತಿ ಬಾಚಿಕೊಂಡಿರುವ ಹೆಮ್ಮೆ ಭಾರತಕ್ಕಿದೆ.  ಇವೆರಡಕ್ಕಿಂತ ಇನ್ನೊಂದು ವಿಷಯದಲ್ಲಿ ಭಾರತವು ಹೆಮ್ಮೆ ಪಡುವಂತಾಯಿತು. ಅದು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರಿಂದ.  ಆಸ್ಕರ್  ವೇದಿಕೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದರು. ಆಸ್ಕರ್ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಕ್ಲಾಸಿ ಬ್ಲ್ಯಾಕ್ ಗೌನ್‍ನಲ್ಲಿ ಮಿಂಚಿದ್ದರು.  ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಅವರು ಅಕಾಡೆಮಿ ಅವಾಡ್ರ್ಸ್ ಶಾಂಪೇನ್ ಕಾರ್ಪೆಟ್ ಮೇಲೆ ನಡೆದು ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.  ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ನಟಿ,  ಆರ್‌ಆರ್‌ಆರ್‌ನ 'ನಾಟು ನಾಟು' ಪ್ರದರ್ಶನವನ್ನು ಘೋಷಿಸಲು ಆಸ್ಕರ್  ವೇದಿಕೆಯನ್ನು ಅಲಂಕರಿಸಿದಾಗ  ಹರ್ಷೋದ್ಗಾರಗಳ ಸುರಿಮಳೆಯೇ ಆಯಿತು. ಈ ಸಂದರ್ಭದಲ್ಲಿ ನಾಟು ನಾಟುವಿನ ಕುರಿತು ಅವರು ಮಾತನಾಡುವಾಗ ಭಾವುಕರಾದರು. ನಾಟು ನಾಟು ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ (Best Original song) ವಿಭಾಗದಲ್ಲಿ ಆಸ್ಕರ್ ಪಡೆದಿದೆ. ಇದನ್ನು ಘೋಷಣೆ ಮಾಡುವಾಗ ನಟಿ ಭಾವುಕರಾಗಿರುವ ವಿಡಿಯೋ ವೈರಲ್​ ಆಗಿದೆ.  ನಾಟು ನಾಟು ಹಾಡಿಗೆ  ನೃತ್ಯ  ಮಾಡಿದ ಸಂದರ್ಭದಲ್ಲಿ  ನಟಿ ದೀಪಿಕಾ ಪಡುಕೋಣೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.  ಎಂ.ಎಂ.ಕೀರವಾಣಿ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿದಾಗ  ದೀಪಿಕಾ  ಭಾವುಕರಾಗಿದ್ದರು. ಇವರ ವಿಡಿಯೋ ವೈರಲ್​ ಆಗುತ್ತಲೇ ಇಡೀ ದೇಶವು ದೇಶದ ಹೆಮ್ಮೆಯ ಪುತ್ರಿ ಎಂದು ಕೊಂಡಾಡಿದ್ದರು.

ಜಾಗತಿಕ ವೇದಿಕೆಯಲ್ಲಿ ಮಿಂಚಿದ ನಂತರ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಲಾಸ್ ಏಂಜಲೀಸ್‌ನಿಂದ ಭಾರತಕ್ಕೆ ಪುನಃ ಮರಳಿದ್ದಾರೆ. ಸಂಪೂರ್ಣ ಕಪ್ಪು ಬಣ್ಣದ ಉಡುಪಿನಲ್ಲಿ ಧರಿಸಿದ್ದ ದೀಪಿಕಾ ಅವರು ವಿಮಾನ ನಿಲ್ದಾಣದಲ್ಲಿ ಇಳಿದಾಗ ಅದ್ಧೂರಿ ಸ್ವಾಗತ ನೀಡಲಾಗಿದೆ.  ಆಕೆಯ ಮ್ಯಾಚಿಂಗ್ ಬೂಟುಗಳು, ಗ್ಲೇರ್‌ಗಳು ಮತ್ತು ಹ್ಯಾಂಡ್ ಬ್ಯಾಗ್ ಅವರ ಒಟ್ಟಾರೆ ಸ್ಟೈಲಿಶ್ ಲುಕ್‌ಗೆ ಪೂರಕವಾಗಿದ್ದು, ನಟಿಯ ಸೌಂದರ್ಯವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.  ನಟಿ ವಿಮಾನ ನಿಲ್ದಾಣದಿಂದ ತನ್ನ ಕಾರಿನ ಕಡೆಗೆ ಹೋಗುವಾಗ ಪಾಪರಾಜಿಗಳಿಗಾಗಿ ನಗು ಚೆಲ್ಲಿದರು. ಈ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡ ತಕ್ಷಣ, ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯಾಗಿದೆ.  ಈಕೆಯ ಫ್ಯಾನ್ಸ್​ ಕಮೆಂಟ್​ಗಳಲ್ಲಿ 'ದೀಪಿಕಾಗೆ ಸ್ವಾಗತ' ಎಂದು ಸ್ವಾಗತಿಸಿದ್ದಾರೆ.  ಅಭಿಮಾನಿಗಳು 'ಕ್ವೀನ್ ಈಸ್ ಬ್ಯಾಕ್' ಎಂದು ಕಮೆಂಟ್​ನಲ್ಲಿ ತಿಳಿಸಿದ್ದಾರೆ. ಇದೇ ಟ್ವಿಟರ್​ನಲ್ಲಿ ಟ್ರೆಂಡ್​ ಕೂಡ ಆಗಿದ್ದು, 'ಕ್ವೀನ್ ಈಸ್ ಬ್ಯಾಕ್' ಎನ್ನುತ್ತಿದ್ದಾರೆ. 

Tap to resize

Latest Videos

OSCAR ವೇದಿಕೆಯಲ್ಲಿ ದೀಪಿಕಾ ಪಡುಕೋಣೆ: ಹಾಡಿ ಹೊಗಳಿದ ಕಂಗನಾ ರಣಾವತ್

ಇವರ ನಿರೂಪಣೆಯ ಶೈಲಿಗೆ ಜನರು ಮನಸೋತಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು (Celebrities), ಗಣ್ಯರು ಈಕೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಯಾರನ್ನೂ ಸುಲಭವಾಗಿ ಹೊಗಳದ ನಟಿ ಕಂಗನಾ ರಣಾವತ್​ ಸಹ (Kangana Ranaut) ದೀಪಿಕಾರನ್ನು ಹಾಡಿ ಹೊಗಳಿದ್ದರು. ಪಠಾಣ್​ ಚಿತ್ರದ ಕುರಿತು ಈ ಹಿಂದೆ ಭಾರಿ ಟೀಕೆ ಮಾಡುವ ಸಮಯದಲ್ಲಿ ದೀಪಿಕಾ ಅವರ ವಿರುದ್ಧವೂ ಮಾತನಾಡಿದ್ದ ನಟಿ ಕಂಗನಾ ಅವರು, ಈಗ ದೀಪಿಕಾ ಅವರ ನಿರೂಪಣಾ ಶೈಲಿಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಅವರು, ಆಸ್ಕರ್​ನಂಥ  ಪ್ರತಿಷ್ಠಿತ ವೇದಿಕೆಯಲ್ಲಿ ಇಡೀ ರಾಷ್ಟ್ರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಆದರೆ ದೀಪಿಕಾ ಅದನ್ನು ಮಾಡಿ ತೋರಿಸಿದ್ದಾರೆ ಎಂದಿದ್ದರು ಕಂಗನಾ. 'ದೀಪಿಕಾ ಪಡುಕೋಣೆ (Deepika Padukone) ಎಷ್ಟು ಸುಂದರವಾಗಿ ಕಾಣುತ್ತಾರೆ, ಇಡೀ ರಾಷ್ಟ್ರವನ್ನು ಒಟ್ಟಿಗೆ ಹಿಡಿದುಕೊಂಡು, ಅದರ ಚಿತ್ರಣವನ್ನು, ಖ್ಯಾತಿಯನ್ನು ಆ ಸೂಕ್ಷ್ಮ ಹೆಗಲ ಮೇಲೆ ಹೊತ್ತುಕೊಂಡು  ತುಂಬಾ ಸೌಜನ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇಂಥ ಕಲೆ ಎಲ್ಲರಿಗೂ ಸುಲಭದಲ್ಲಿ ದಕ್ಕುವುದಿಲ್ಲ. ಭಾರತೀಯ ಮಹಿಳೆಯರು ಅತ್ಯುತ್ತಮ  ಎಂಬುದಕ್ಕೆ ದೀಪಿಕಾ ಸಾಕ್ಷಿಯಾಗಿ ನಿಂತಿದ್ದಾರೆ. ದೀಪಿಕಾ ಎತ್ತರದ ಸ್ಥಾನದಲ್ಲಿರುವಂತೆ ಭಾಸವಾಗುತ್ತಿದೆ,' ಎಂದು ಕಂಗನಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. 

ಇನ್ನು ದೀಪಿಕಾ ಅವರ ಕೆಲಸದ ವಿಷಯಕ್ಕೆ ಬರುವುದಾದರೆ, ಹೃತಿಕ್ ರೋಷನ್ ಅವರೊಂದಿಗೆ ಸಿದ್ಧಾರ್ಥ್ ಆನಂದ್ ಅವರ 'ಫೈಟರ್' ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ನಟಿ 'ದಿ ಇಂಟರ್ನ್' (The Intern) ನ ಅಧಿಕೃತ ಹಿಂದಿ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಜೊತೆಗಿನ ನಾಗ್ ಅಶ್ವಿನ್ (Nag Ashwin) ಅವರ ಹೆಸರಿಡದ ಮುಂದಿನ ಚಿತ್ರದಲ್ಲಿ ಅವರು ಸಹ ಒಂದು ಭಾಗವಾಗಿದ್ದಾರೆ.

Natu Natu ಎನ್ನುತ್ತ ದೀಪಿಕಾ ಭಾವುಕ: ಸೋಷಿಯಲ್ ಮೀಡಿಯಾ ತುಂಬಾ ಹಾಡಿನದ್ದೇ ಗುಂಗು

 

click me!