
ಬಾಲಿವುಡ್ ಕ್ವೀನ್ ಅಂತನೆ ಪ್ರಸಿದ್ಧಿ ಪಡೆದಿರುವ ಹಿರಿಯ ನಟಿ ಆಶಾ ಪರೇಖ್ ಅವರಿಗೆ ಈ ವರ್ಷದ 52ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದೆ. ಭಾರತೀಯ ಸಿನಿಮಾರಂಗಕ್ಕೆ ನೀಡಿದ ಅದ್ಬುತ ಕೊಡುಗೆಗಾಗಿ ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿರುವ ಹೇಳಿಕೆಯನ್ನು ಎ ಎನ್ ಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
79 ವರ್ಷದ ನಟಿ ಆಶಾ ಪರೇಖ್ ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದರು. 1952ರಿಂದನೇ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಆಶಾ ಪರೇಖ್ ಭಾರತೀಯ ಸಿನಿಮಾರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. 1959ರಲ್ಲಿ ಆಶಾ ಪರೇಖ್ ದಿಲ್ ದೇಕೆ ದೇಖೋ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ತೆರೆಮೇಲೆ ಮಿಂಚಿದರು. ಅನೇಕ ಸಿನಿಮಾಗಳಲ್ಲಿ ಮಿಂಚಿರುವ ಆಶಾ ಕೊನೆಯದಾಗಿ ಆಂದೋಲನ್ ಸಿನಿಮಾದಲ್ಲಿ ನಟಿಸಿದರು. 1995ರಲ್ಲಿ ಆ ಸಿನಿಮಾ ರಿಲೀಸ್ ಆಗಿತ್ತು. ಬಳಿಕ ಬಣ್ಣದ ಲೋಕದಿಂದ ದೂರ ಸರಿದ ಆಶಾ ಸದ್ಯ ಡಾನ್ಸ್ ಅಕಾಡೆಮಿ ನಡೆಸುತ್ತಿದ್ದಾರೆ.
ಅಂದಹಾಗೆ ಕಳೆದ ಬಾರಿ ಅಂದರೆ 51ನೇ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಆಯ್ಕೆಯಾಗಿದ್ದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನಿಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಮಾಹಿತಿ ಪ್ರಸಾರ ಸಚಿವಾಯಲವು ಸ್ಥಾಪಿಸಿದ ಚನಲಚಿತ್ರೋತ್ಸವಗಳ ನಿರ್ದೇಶನಾಲಯವು ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾರ್ಷಿಕವಾಗಿ ಪ್ರಸ್ತುತಪಡಿಸುತ್ತದೆ. ಈಗಾಗಲೇ ಲತಾ ಮಂಗೇಶ್ಕರ್, ಡಾ.ರಾಜ್ ಕುಮಾರ್, ವಿನೋದ್ ಖನ್ನಾ, ಅಮಿತಾಭ್ ಬಚ್ಚನ್, ರಜನಿಕಾಂತ್ ಸೇರಿದಂತೆ ಅನೇಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ಬಾಲಿವುಡ್ ಖ್ಯಾತ ನಟಿ ಆಶಾ ಪರೇಖ್ ಅವರಿಗೆ ದೊರೆತಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಬಗ್ಗೆ ಅನೇಕರು ಟ್ವೀಟ್ ಮಾಡಿ ಅಬಿನಂದನೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.