ದಕ್ಷಿಣ ಭಾರತದ ಸೂಪರ್‌ಸ್ಟಾರ್ ಒಬ್ಬರು ಬಾಲಿವುಡ್‌ನಲ್ಲಿ ಹೇಗೆ ಫ್ಲಾಪ್ ಆದರು ಎಂಬುದರ ಕಥೆ. ಮೊದಲ ಚಿತ್ರದ ಯಶಸ್ಸಿನ ನಂತರ, ಸತತ ಎರಡು ಸೋಲುಗಳಿಂದಾಗಿ ಮರಳಿ ದಕ್ಷಿಣ ಭಾರತಕ್ಕೆ ಮರಳಿದ ನಟ ಯಾರು?
ಮುಂಬೈ: ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಕೋಟ್ಯಂತರ ಜನರು ರಂಗೀನ ಲೋಕಕ್ಕೆ ಬರುತ್ತಾರೆ. ಆದ್ರೆ ಎಲ್ಲರೂ ಸೂಪರ್ ಸ್ಟಾರ್ ಆಗಲು ಸಾಧ್ಯವಾಗಲ್ಲ. ಸಿನಿಮಾ ಉದ್ಯಮದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ನಾಳೆ ನಾನೇ ಸ್ಟಾರ್ ಅನ್ನೋರನ್ನು ಈ ಉದ್ಯಮ ಮಕಾಡೆ ಮಲಗಿಸಿದ್ದುಂಟು. ಭಾರತದಲ್ಲಿ ಭಾಷೆಯಾಧರಿತ ಸಿನಿಮಾ ಉದ್ಯಮಗಳಿವೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಭೋಜಪುರಿ, ಬಾಲಿವುಡ್ ಹೀಗೆ ಹಲವು ಬಗೆ ಬಗೆಯ ಉದ್ಯಮಗಳಿವೆ. ಅದರಲ್ಲಿಯೂ ಬಾಲಿವುಡ್ ಅಂದ್ರೆ ಬಿಗ್ ಬಜೆಟ್ ಎಂದರ್ಥವಾಗಿದೆ. ಹಾಗಾಗಿ ಬಾಲಿವುಡ್‌ನಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಬೇಕೆಂದು ಕನಸು ಕಂಡಿರುತ್ತಾರೆ. ಆದ್ರೆ ಎಲ್ಲರಿಗೂ ರಾಜೇಶ್ ಖನ್ನಾ, ದಿಲೀಪ್ ಕುಮಾರ್, ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಅವರ ರೀತಿಯಲ್ಲಿ ಸೂಪರ್ ಸ್ಟಾರ್ ಆಗಲ್ಲ. ಸ್ಟಾರ್‌ಡಮ್ ಅನ್ನೋ ಪಟ್ಟಕ್ಕಾಗಿ ಎಲ್ಲಾ ಕಲಾವಿದರು ಕಾಯುತ್ತಿರುತ್ತಾರೆ.
ಇಂದು ನಾವು ನಿಮಗೆ ಸೌಥ್ ಅಂಗಳದಿಂದ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಲು ಬಂದ ನಟನ ಬಗ್ಗೆ ಹೇಳುತ್ತಿದ್ದೇವೆ. ಸೌಥ್ ಸಿನಿ ಅಂಗಳದಲ್ಲಿ ಸೂಪರ್ ಸ್ಟಾರ್ ಆಗಿದ್ರೂ, ಬಾಲಿವುಡ್‌ನಲ್ಲಿ ಮಾತ್ರ ಫ್ಲಾಪ್ ಸ್ಟಾರ್ ಅಂತ ಗುರುತಿಸಿಕೊಂಡರು. ಮೊದಲ ಬಾಲಿವುಡ್ ಸಿನಿಮಾ ಸೂಪರ್ ಹಿಟ್ ಆಯ್ತು. ಆದರೆ ನಂತರದ ಎರಡು ಸಿನಿಮಾಗಳು ಸೋಲು ಕಂಡಿದ್ದರಿಂದ ಮತ್ತೆ ಸೌಥ್ ಅಂಗಳಕ್ಕೆ ಹಿಂದಿರುಗಿದರು. ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟ, ಕನ್ನಡದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್‌ಗೆ ಪ್ರತಿಸ್ಪರ್ಧಿ ಆಗ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಎರಡು ಸಿನಿಮಾ ಸೋತ ಪರಿಣಾಮ ದಕ್ಷಿಣ ಭಾರತಕ್ಕೆ ಹಿಂದಿರುಗಿದರು.
ನಾವು ಹೇಳುತ್ತಿರೋದು ಮೆಗಾಸ್ಟಾರ್ ಚಿರಂಜೀವಿ ಅವರ ಬಾಲಿವುಡ್ ಸಿನಿಮಾಗಳ ಕುರಿತು. ಚಿರಂಜೀವಿ ಖಳನಾಯಕನಾಗಿ ತನ್ನ ಸಿನಿ ಕೆರಿಯರ್ ಆರಂಭಿಸಿದರು. 1983ರಲ್ಲಿ ಬಿಡುಗಡೆಗೊಂಡ 'ಖೈದಿ' ಸಿನಿಮಾ ಚಿರಂಜೀವಿಗೆ ದೊಡ್ಡ ಬ್ರೇಕ್ ನೀಡಿತು. ನಂತರ 1980-1990ರ ಕಾಲಘಟ್ಟದಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಪಸಿವಾದಿ ಪ್ರಣಾಮ್ (1987), ಯಮುದಿಕಿ ಮೊಗುಡು (1988), ಅಟ್ಟಕು ಯಮುಡು ಅಮ್ಮಾಯಿಕಿ ಮೊಗುಡು (1989), ಜಗದೇಕ ವೀರುಡು ಅತಿಲೋಕ ಸುಂದರಿ (1990), ಗ್ಯಾಂಗ್ ಲೀಡರ್ (1991), ಮತ್ತು ಘರಾನಾ ಮೊಗುಡು ಸಿನಿಮಾಗಳು ಚಿರಂಜೀವಿ ಅವರಿಗೆ ತೆಲಗು ಇಂಡಸ್ಟ್ರಿಯಲ್ಲಿ ಭದ್ರನೆಲೆಯೂರಲು ಸಾಧ್ಯವಾಯ್ತು.
ಚಿರಂಜೀವಿ ಬಾಲಿವುಡ್ ಅದೃಷ್ಟ ಪರೀಕ್ಷೆ!
ಚಿರಂಜೀವಿ ಅವರು 'ಪ್ರತಿಬಂಧ್' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದ್ದರಿಂದ ಸೂಪರ್ ಹಿಟ್ ಆಯ್ತು. ಈ ಚಿತ್ರದ ಬಳಿಕ ಚಿರಂಜೀವಿ ಬಾಲಿವುಡ್ ಅಂಗಳದ ಮುಂದಿನ ಸೂಪರ್ ಸ್ಟಾರ್ ಅಗ್ತಾರೆ ಎಂಬ ವಿಶ್ಲೇಷಣೆಗಳು ಬಂದಿದ್ದವು. ಇದಾದ ಬಳಿಕ ಚಿರಂಜೀವಿ ನಟನೆಯ 'ಆಜ್ ಕಾ ಗೂಂಡಾ ರಾಜ್' ಮತ್ತು 'ಜಂಟಲ್‌ಮ್ಯಾನ್' ಸಿನಿಮಾಗಳಿಗೆ ನಿರೀಕ್ಷಿತ ಗೆಲುವು ಸಿಗಲಿಲ್ಲ ಮತ್ತು ಬಾಕ್ಸ್ ಆಫಿಸ್‌ನಲ್ಲಿ ಸದ್ದು ಸಹ ಮಾಡಲಿಲ್ಲ. ಎರಡು ಸಿನಿಮಾ ಸೋಲಿನ ಬಳಿಕ ಚಿರಂಜೀವಿ ಮತ್ತೆ ತೆಲುಗು ಸಿನಿಮಾ ಉದ್ಯಮಕ್ಕೆ ಹಿಂದಿರುಗಿ ಇಲ್ಲಿಯ ಚಿತ್ರಗಳಲ್ಲಿ ಬ್ಯುಸಿಯಾದರು.
undefined
ಇದನ್ನೂ ಓದಿ: ಫ್ಲಾಪ್ ನಟನಾದ ಸೂಪರ್‌ಸ್ಟಾರ್ ಮಗ, 12ನೇ ವಯಸ್ಸಿನಲ್ಲಿಯೇ ಡ್ರಗ್ಸ್ ದಾಸ, ಈಗ ಕನ್ನಡದ ನಟಿ ಜೊತೆ ಸ್ಕ್ರೀನ್ ಶೇರ್
ಕೆಲ ಮಾಧ್ಯಮಗಳ ವರದಿ ಪ್ರಕಾರ, ಚಿರಂಜೀವಿ 1992ರಲ್ಲಿ ಬಿಡುಗಡೆಯಾದ ಆಪದ್ಬಾಂಧವದು ಸಿನಿಮಾಗೆ 1.25 ಕೋಟಿ ರೂಪಾಯಿ ಪಡೆಯುವ ಮೂಲಕ ಅತಿಹೆಚ್ಚು ಸಂಭಾವನೆ ಪಡೆದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೋಟಿ ಸಂಭಾವನೆ ಪಡೆದ ಭಾರತದ ಮೊದಲ ನಟ ಎಂದೆನಿಸಿಕೊಂಡರು. ಘರಾನಾ ಮೊಗಡು ಸಿನಿಮಾ 10 ಕೋಟಿ ಗಳಿಸಿದ ದಕ್ಷಿಣ ಭಾರತದ ಮೊದಲ ಸಿನಿಮಾ ಆಗಿದೆ. ದಿ ವೀಕ್ ಮ್ಯಾಗ್‌ಜಿನ್ ಚಿರಂಜೀವಿ ಅವರನ್ನು "ಬಚ್ಚನ್‌ಗಿಂತ ದೊಡ್ಡವರು" ("Bigger than Bachchan") ಎಂಬ ಬಿರುದು ನೀಡಿತು.
ಸ್ಟಾಕ್ ಮಾರ್ಕೆಟ್ ಲೈವ್ ವರದಿ ಪ್ರಕಾರ, ಚಿರಂಜೀವಿ 1,650 ಕೋಟಿ ರೂಪಾಯಿ ಆಸ್ತಿಯ ಮಾಲೀಕರಾಗಿದ್ದಾರೆ. ಪುತ್ರ ರಾಮ್ ಚರಣ್ ಮತ್ತು ಸೊಸೆ ಉಪಾಸನಾ ಅವರ ಆಸ್ತಿ ಸೇರಿದಂತೆ ಕೊನ್ನೆದೆಲಾ ಕುಟುಂಬದ ಬಳಿ 4000 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿದೆ. ಸದ್ಯ ಚಿರಂಜೀವಿ ಅವರ 'ವಿಶ್ವಾಂಭರ' ಸಿನಿಮಾದಲ್ಲಿ ನಟಿಸುತ್ತಿದ್ದು, 2025ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: 25 ವರ್ಷಗಳಿಂದ ಹಿಟ್ ಚಿತ್ರಕ್ಕಾಗಿ ಕಾಯುತ್ತಿರೋ 43 ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ