
ಬಾಲಿವುಡ್ ನ ಅನೇಕ ಸ್ಟಾರ್ ಕಲಾವಿದರು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan), ಅಜಯ್ ದೇವಗನ್ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದರು. ಇದೀಗ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟ ಸಲ್ಮಾನ್ ಖಾನ್(Salman Khan) ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಲ್ಮಾನ್ ಖಾನ್ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಸ್ವತಃ ಮೆಗಾಸ್ಟಾರ್ ಚಿರಂಜೀವಿ(Chiranjeevi) ಖಚಿತ ಪಡಿಸಿದ್ದಾರೆ. ಸಲ್ಮಾನ್ ಖಾನ್ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೀಗ ಸಲ್ಮಾನ್ ಖಾನ್ ಅಧಿಕೃತವಾಗಿ ಚಿರಂಜೀವಿ ಸಿನಿಮಾಗೆ ಎಂಟ್ರಿ ಕೊಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್(God Father) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸಲ್ಲು ಭಾಯ್ ಬಣ್ಣ ಹಚ್ಚುತ್ತಿದ್ದಾರೆ.
ಈ ಬಗ್ಗೆ ಮೆಗಾಸ್ಟಾರ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಹೂ ಗುಚ್ಛ ನೀಡುತ್ತಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಗಾಡ್ ಫಾದರ್ ಗೆ ಸ್ವಾಗತ ಕೋರಿದ್ದಾರೆ. 'ಗಾಡ್ ಪಾಧರ್ ಚಿತ್ರಕ್ಕೆ ಸಲ್ಮಾನ್ ಖಾನ್ ಗೆ ಸ್ವಾಗತ. ನಿಮ್ಮ ಪ್ರವೇಶ ಎಲ್ಲರಿಗೂ ಶಕ್ತಿ ತುಂಬಿದೆ ಮತ್ತು ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ನಿಮ್ಮ ಜೊತೆ ತೆರೆಹಂಚಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷವಾಗುತ್ತಿದೆ. ನಿಮ್ಮ ಎಂಟ್ರಿ ಪ್ರೇಕ್ಷಕರಿಗೆ ಕಿಕ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಕಪ್ಪು ಬಣ್ಣದ ಕುರ್ತಾ ಧರಿಸಿದ್ದರೆ ಸಲ್ಮಾಲ್ ಖಾನ್ ಟಿ ಶರ್ಟ್ ನಲ್ಲಿ ಮಿಂಚಿದ್ದಾರೆ.
ಸ್ವಂತ OTT ಘೋಷಿಸಿದ ಶಾರುಖ್ ಖಾನ್; ಸಲ್ಮಾನ್ ಖಾನ್ ಹೇಳಿದ್ದೇನು?
ಅಂದಹಾಗೆ ಚಿರಂಜೀವಿ ಮತ್ತು ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಪೊಲಿಟಿಕಲ್ ಥ್ರಿಲ್ಲರ್ ಲೂಸಿಫರ್(Lucifer) ಚಿತ್ರದ ರಿಮೇಕ್ ಆಗಿದೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿಬಂದಿರುವ ಲೂಸಿಫರ್ ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆಲುಗಿನಲ್ಲಿ ಗಾಡ್ ಫಾದರ್ ಆಗಿ ರಿಮೇಕ್ ಆಗುತ್ತಿದೆ. ತೆಲುಗಿನಲ್ಲಿ ಚಿತ್ರಕ್ಕೆ ಮೋಹನ್ ರಾಜ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ(Nayanathara) ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಇನ್ನು ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಚಿತ್ರದ ಪ್ರಮುಖ ಹಾಡಿಗೆ ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಅವರನ್ನು ಕರೆತರುವ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಹೆಜ್ಜೆ ಹಾಕುವ ಸಾಧ್ಯತೆಯೂ ಇದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಮಲಯಾಳಂನಲ್ಲಿ ಪೃಥ್ವಿರಾಜ್ ನಿಭಾಯಿಸಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
Bholaa Shankar First Look: ಅಭಿಮಾನಿಗಳನ್ನು ಮೋಡಿ ಮಾಡಿದ ಚಿರಂಜೀವಿ!
ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಟೈಗರ್ ಪ್ರಾಂಚೈಸಿಯ 3ನೇ ಆವೃತ್ತಿ ಟೈಗರ್ 3 ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಸಂತಸ ಹೆಚ್ಚಿಸಿದ್ದರು. ಚಿತ್ರದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಈ ಸಿನಿಮಾ ಜೊತೆಗೆ ಸಲ್ಮಾನ್ ಖಾನ್ ಕಬಿ ಈದ್ ಕಬಿ ದಿವಾಲಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲೂ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕೊನೆಯದಾಗಿ ಸಲ್ಮಾನ್ ಖಾನ್ ಅಂತಿಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಇನ್ನು ಮೆಗಾಸ್ಟಾರ್ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಪುತ್ರ ರಾಮ್ ಚರಣ್ ತೇಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೊತೆಗೆ ಬೋಲಾ ಶಂಕರ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಮೆಗಾಸ್ಟಾರ್ ಸೈರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.