ಕರ್ನಾಟಕ ಸಿನಿಮಾ ಕಾಯ್ದೆ 1964ರ ಸೆಕ್ಷನ್‌ಗಳ ಅಡಿಯಲ್ಲಿ 'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದ್ದು, ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಿದರೆ ಕೋಮುಗಲಭೆ ಸೃಷ್ಟಿಯಾಗುತ್ತದೆ ಎನ್ನಲಾಗಿದೆ.
ಬಾಲಿವುಡ್ 'ಹಮಾರೆ ಬಾರಾ' ಚಿತ್ರಕ್ಕೆ ಕರ್ನಾಟಕದಲ್ಲಿ ನಿಷೇಧ ಎದುರಾಗಿದೆ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮುಂದಿನ ಎರಡು ವಾರಗಳ ಕಾಲ ಬಾಲಿವುಡ್‌ನ ಹಮಾರೆ ಬಾರಾ (Hamare Baarah) ಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಬಂಧಿಸಿದೆ. ಈ ಸಿನಿಮಾ ಬಿಡುಗಡೆಯಾದರೆ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಆದೇಶದಲ್ಲಿ ಹೇಳಲಾಗಿದೆ. ಕಮಲ್ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಮಾರೆ ಬಾರಾ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಹೇಳಲಾಗಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೂ ಮೊದಲು, ಜೂನ್ 14ರವರೆಗೆ ಈ ಸಿನಿಮಾವನ್ನು ಬಿಡುಗಡೆ ಮಾಡದಂತೆ ಈ ಮೊದಲೇ ಬಾಂಬೆ ಹೈಕೋರ್ಟ್ ತಡೆ ನೀಡಿತ್ತು. ಬರೀ ಸಿನಿಮಾ ಮಾತ್ರವಲ್ಲದೆ ಈ ಚಿತ್ರದ ಟ್ರೇಲರ್ ಬಿಡುಗಡೆಗೂ ತಡೆಯಾಜ್ಞೆ ನೀಡಲಾಗಿತ್ತು. ಈಗ ಕರ್ನಾಟಕದಲ್ಲಿ ಎರಡು ವಾರಗಳ ಕಾಲ ಈ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸಿನಿಮಾ ಕಾಯ್ದೆ 1964ರ ಸೆಕ್ಷನ್‌ಗಳ ಅಡಿಯಲ್ಲಿ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದ್ದು, ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಿದರೆ ಕೋಮುಗಲಭೆ ಸೃಷ್ಟಿಯಾಗುತ್ತದೆ ಎನ್ನಲಾಗಿದೆ. ರಾಜ್ಯದಲ್ಲಿ ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ಹಮಾರೆ ಬಾರಾ ಸಿನಿಮಾ ಬಿಡುಗಡೆ ನಿಷೇಧಿಸಲಾಗಿದೆ. ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964, ಸೆಕ್ಷನ್ 15(1) ಮತ್ತು 15(5) ಅನುಸಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
'ಹಮಾರೆ ಬಾರಾ' ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಉಂಟಾಗುತ್ತದೆ ಎಂದು ಹಲವು ಅಲ್ಪಸಂಖ್ಯಾತ ಸಂಘಟನೆಗಳು ಸರ್ಕಾರದ ಮುಂದೆ ಮನವಿ ಮಾಡಿದ್ದವು. ಮನವಿ ಸ್ವೀಕರಿಸಿದ ನಿಯೋಗ ಚಿತ್ರದ ಟ್ರೇಲರ್ ವೀಕ್ಷಣೆ ಮಾಡಿ ಈ ನಿರ್ಧಾರ ಪ್ರಕಟಿಸಿದೆ. ಸರ್ಕಾರಗಳ ಈ ನಿರ್ಧಾರ, ನಿರ್ಮಾಪಕರನ್ನು ಸಂಕಷ್ಟಕ್ಕೆ ದೂಡಿದೆ. ಈ ಚಿತ್ರದಲ್ಲಿ ಅನ್ನು ಕಪೂರ್, ಮನೋಜ್ ಜೋಷಿ ಮತ್ತು ಪರಿತೋಷ್ ತ್ರಿಪಾಠಿ ನಟಿಸಿದ್ದಾರೆ.
ಈ ಹಿಂದೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾದಾಗ, ಅಜರ್ ಎಂಬುವವರು ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಗತಿಗಳಿವೆ. ಇಸ್ಲಾಂ ಧರ್ಮದ ಬಗ್ಗೆ ಕೆಟ್ಟದಾಗಿ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ನಡೆದಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ಪರಿಶೀಲನೆ ಮಾಡಿದ್ದ ಬಾಂಬೆ ಹೈಕೋರ್ಟ್ ಜೂನ್ 10ರ ವರೆಗೆ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿತ್ತು. ಅಂದಹಾಗೆ, ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್‌ಪಾಲ್ ಮತ್ತು ಶೀಯೋ ಬಾಲಕ್ ಸಿಂಗ್ ಜಂಟಿಯಾಗಿ ಹಮಾರಾ ಬಾರಾ ಸಿನಿಮಾ ನಿರ್ಮಿಸಿದ್ದಾರೆ.