ಕಂಗನಾ ನಂಗೆ ಇಷ್ಟ ಅಂತಲ್ಲ, ಆದ್ರೆ ಅವಳ ಕೆನ್ನೆಗೆ ಹೊಡೆದಿದ್ದು ತಪ್ಪು: ಬಾಲಿವುಡ್ ಸೆಲೆಬ್ರಿಟಿಗಳು

By Suchethana D  |  First Published Jun 8, 2024, 12:03 PM IST

ಕಂಗನಾ ರಣಾವತ್​ ಕೆನ್ನೆಗೆ ಹೊಡೆಸಿಕೊಂಡ ಘಟನೆಗೆ ಬಾಲಿವುಡ್​ ಸೆಲೆಬ್ರಿಟಿಗಳು ಹೇಳಿದ್ದೇನು? ಸೋಷಿಯಲ್​ ಮೀಡಿಯಾದಲ್ಲಿ ಆಗ್ತಿರೋ ಚರ್ಚೆ ಏನು? 
 


  ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಪ್ರಥಮ ಹಂತದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಲಿರುವ ಅದರಲ್ಲಿಯೂ ಭರ್ಜರಿ ಗೆಲುವಿನೊಂದಿಗೆ ಸಂಸದೆಯಾಗ ಹೊರಟ ಬಾಲಿವುಡ್​ ನಟಿ ಕಂಗನಾ ಅವರ ಕೆನ್ನೆಗೆ ಹೊಡೆದ ಘಟನೆಗೆ ಸಂಬಂಧಿಸಿದಂತೆ ಭಾರಿ ಚರ್ಚೆ ಮುಂದುವರೆದಿದೆ. ಬಿಜೆಪಿ ವಿರೋಧಿಗಳು ಈ ಘಟನೆಯನ್ನು ಸಂಭ್ರಮಿಸುತ್ತಿದ್ದರೆ, ಹಲವು ಬಾಲಿವುಡ್​ ಸೆಲೆಬ್ರಿಟಿಗಳು ಸೇರಿದಂತೆ ಕಂಗನಾ ಅಭಿಮಾನಿಗಳು ಘಟನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. 2020 ರಲ್ಲಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ರಾಷ್ಟ್ರವ್ಯಾಪಿ ಪ್ರತಿಭಟನೆಯ ಬಗ್ಗೆ ನಡೆಯುತ್ತಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ಕಂಗನಾ ನೀಡಿರುವ ಹೇಳಿಕೆಗೆ ವಿರೋಧಿಸಿ ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಕೆನ್ನೆಗೆ ಹೊಡೆದಿದ್ದರು.

ಕೆನ್ನೆಗೆ ಹೊಡೆದಿರುವ ಸಿಐಎಸ್ಎಫ್  ಕುಲ್ವಿಂದರ್​ ಕೌರ್ ಅವರ ತಾಯಿ ಅಂದು ಪ್ರತಿಭಟನೆಯಲ್ಲಿ ನಿರತರಾಗಿದ್ದರಿಂದ, ಕಂಗನಾ ಹೇಳಿಕೆ ಅವರ ಕೋಪಕ್ಕೆ ಗುರಿಯಾಗಿತ್ತು. ಇವರು ದುಡ್ಡು ಪಡೆದು ಪ್ರತಿಭಟನೆಗೆ ಬಂದಿರುವುದಾಗಿ ಕಂಗನಾ ಹೇಳಿದ್ದು, ಅದರಿಂದ ಕುಲ್ವಿಂದರ್ ಕೆರಳಿದ್ದರು.  ಘಟನೆ ಬಳಿಕ ಅವರನ್ನು ಕೆಲಸದಿಂದ ಅಮಾನತು ಕೂಡ ಮಾಡಲಾಗಿದೆ. ಇದರ ಮಧ್ಯೆಯೇ ವಿಭಿನ್ನ ಕ್ಷೇತ್ರಗಳಿಂದ ಭದ್ರತಾ ಲೋಪದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಕಂಗನಾ ಅವರ ಅಭಿಮಾನಿಗಳು ಕೂಡ ಇದೀಗ ಕಂಗನಾ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಂದು ಅದು ಪ್ರಾಯೋಜಿತ ಪ್ರತಿಭಟನೆಯಾಗಿತ್ತೇ ವಿನಾ ಮತ್ತಿನ್ನೇನೂ ಅಲ್ಲ ಎನ್ನುತ್ತಿದ್ದಾರೆ. ಅಂದು ನಡೆದ ಘಟನೆಯಲ್ಲಿ ಪ್ರತಿಭಟನಾಕಾರರು ಬಂದ ರೀತಿಯನ್ನು ಉಲ್ಲೇಖಿಸಿರೋ ಕಂಗನಾ ಅಭಿಮಾನಿಗಳು, ಇದು ನಿಜಕ್ಕೂ ಕಂಗನಾ ಹೇಳಿದ ರೀತಿಯಲ್ಲಿಯೇ ದುರುದ್ದೇಶಪೂರ್ವಕವಾಗಿ ಮಾಡಿರುವ ಪ್ರತಿಭಟನೆ ಎಂದು ಆರೋಪಿಸುತ್ತಿದ್ದಾರೆ. 

Tap to resize

Latest Videos

ಪಂಜಾಬ್​ ಉಗ್ರವಾದವನ್ನು ಪ್ರಶ್ನಿಸುತ್ತಲೇ ಕೆನ್ನೆಗೆ ಹೊಡೆದ ಘಟನೆಗೆ ಪ್ರತಿಕ್ರಿಯೆ ನೀಡಿದ ಕಂಗನಾ

ಇದೀಗ ನಟಿಯ ಕೆನ್ನೆಗೆ ಹೊಡೆದಿರುವುದಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ಸೆಲೆಬ್ರಿಟಿಗಳಾದ ವಿವೇಕ್ ಅಗ್ನಿಹೋತ್ರಿ,  ರಾಮ್‌ಗೋಪಾಲ್ ವರ್ಮಾ,  ಮಿಕಾಸಿಂಗ್, ನಾನಾಪಾಟೇಕರ್, ಶಬನಾ ಅಜ್ಮಿ ಸೇರಿದಂತೆ ಹಲವಾರು ಮಂದಿ ಸೋಷಿಯಲ್​ ಮೀಡಿಯಾಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಗನಾ ನನಗೆ ಇಷ್ಟ ಅಂತ ಅಲ್ಲ. ಆದರೆ ಭದ್ರತಾ ಸಿಬ್ಬಂದಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಾರಂಭಿಸಿದರೆ ನಾವು ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಶಬನಾ ಅಜ್ಮಿ ಹೇಳಿದ್ದಾರೆ. ಅದೇ ಇನ್ನೊಂದೆಡೆ,  ರಾಜಕಾರಣಿ ಸಂಜಯ್ ರಾವುತ್ ಅವರು 'ಕೆಲವರು ಮತ ನೀಡುತ್ತಾರೆ, ಕೆಲವರು ಕಪಾಳಮೋಕ್ಷ ಮಾಡುತ್ತಾರೆ' ಎಂದಿದ್ದರೆ,  ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್, “ನೀವು ಬೇರೆಯವರ ತಾಯಂದಿರಿಗೆ ಹೇಳಿದಂತಹ ಮಾತುಗಳನ್ನು ನಿಮ್ಮ ತಾಯಿಗೆ ಯಾರಾದರೂ ಹೇಳಿದರೆ, ಅದು ನಿಮಗೂ ಇಷ್ಟವಾಗುವುದಿಲ್ಲ ಎಂದಿದ್ದಾರೆ.  ನಟರಾದ ಶೇಖರ್​ ಸುಮನ್​, ಉರ್ಫಿ ಜಾವೇದ್​ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 

ಇನ್ನು ಸೋಷಿಯಲ್​ ಮೀಡಿಯಾಗಳಲ್ಲಿಯೂ ಅಂದು ನಡೆದ ಘಟನೆ ಕುರಿತು ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ.  ಅಂದು ಘಟನೆ ನಡೆದ ಸಂದರ್ಭದಲ್ಲಿ ಕೂಡ ರೈತ ಚಳವಳಿಗಳ ಬಗ್ಗೆ ಪರ-ವಿರೋಧಗಳ ನಿಲುವು ವ್ಯಕ್ತವಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಾಕಾರರು ನಿಜವಾದ ರೈತರು ಅಲ್ಲವೇ ಅಲ್ಲ ಎಂಬ ನಿಲುವು ಈ ಪ್ರತಿಭಟನೆಯನ್ನು ವಿರೋಧಿಸುವವರಲ್ಲಿ ವ್ಯಕ್ತವಾಗಿತ್ತು. ಇದು ಕೇಂದ್ರದ ವಿರುದ್ಧ ನಡೆಸುತ್ತಿರುವ ಫಂಡಿಂಗ್​ ಪಿತೂರಿ ಎಂದು ಕೃಷಿ ಕಾನೂನು ಪರವಾಗಿ ಇರುವವರು ಗಂಭೀರ ಆರೋಪ ಮಾಡಿದ್ದರು. ರೈತರು ಎಂದು ಹೇಳಿಕೊಂಡಿರುವ ಸಾವಿರಾರು ಮಂದಿ ಲಕ್ಷಾಂತರ ರೂಪಾಯಿಗಳ ಟ್ರ್ಯಾಕ್ಟರ್​ನಲ್ಲಿ, ಆಗ ತಾನೇ ಷೋರೂಮ್​ನಿಂದ ಕೊಂಡು ಬಂದಂತ್ತಿದ್ದ ಟ್ರ್ಯಾಕ್ಟರ್​ನಲ್ಲಿ ಪ್ರತಿಭಟನಾ ನಿತರ ಸ್ಥಳಕ್ಕೆ ನೂರಾರು ಕಿಲೋ ಮೀಟರ್​ ದೂರದವರೆಗಿನ ಪೆಟ್ರೋಲ್​ಗಳನ್ನು ಹಾಕಿ ಬಂದಿದ್ದಾರೆ. ಇಷ್ಟು ಶ್ರೀಮಂತರು ಕೃಷಿಕರಾಗಲು ಹೇಗೆ ಸಾಧ್ಯ ಎಂಬ ಗಂಭೀರ ಆರೋಪದ ನಡುವೆಯೇ ಇವೆಲ್ಲ ಪ್ರಾಯೋಜಿತ ಎಂದು ಹೇಳಲಾಗಿತ್ತು. ಕೃಷಿ ಕಾನೂನು ನಿಜವಾದ ರೈತರಿಗೆ ಅನುಕೂಲ ಕಲ್ಪಿಸುತ್ತದೆ, ಆದ್ದರಿಂದ ನಿಜವಾದ ಕೃಷಿಕರು ಯಾರೂ ಇದರಲ್ಲಿ ಪಾಲ್ಗೊಂಡಿಲ್ಲ. ಇವೆಲ್ಲವೂ ಬೇರೆ ಕಡೆಯಿಂದ ಫಂಡಿಂಗ್​ ಆಗಿ ಬಂದವರು ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ನಟಿ ಕಂಗನಾ ಕೂಡ ಇಲ್ಲಿಗೆ ಬಂದವರು ಹಣ ಪಡೆದು ಬಂದಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದರು. 

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

click me!