
ಪತಿ ಗೋವಿಂದ ಬಗ್ಗೆ ಪತ್ನಿ ಸುನೀತಾ ಹೇಳಿದ್ದೇನು?
ಬಾಲಿವುಡ್ ಹಿರಿಯ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನಿತಾ ಅಹುಜಾ (Sunita Ahuja) ನಡುವಿನ ದಾಂಪತ್ಯದ ಕಲಹ ಗೊತ್ತೇ ಇದೆ. ಡಿವೋರ್ಸ್ ಆಗುತ್ತೆ, ಆಗಲ್ಲ ಅನ್ನೋ ಸುದ್ದಿಗಳು, ಗಂಡನ ಬಗ್ಗೆ ಹೆಂಡತಿ ಸುನೀತಾ ಅಪಸ್ವರ, ಹೆಂಡತಿ ಬಗ್ಗೆ ನಟ ಗೋವಿಂದರ ಆರೋಪ ಇವೆಲ್ಲವೂ ಹಲವು ವರ್ಷಗಳಿಂದ ಸುದ್ದಿ ಆಗುತ್ತಲೇ ಇದೆ. ಸುನೀತಾ ಅಹುಜಾ ಅವರು ತಮ್ಮ ವೈವಾಹಿಕ ಜೀವನದ ಏಳುಬೀಳುಗಳು ಹಾಗೂ ಪತಿಯ ಅಕ್ರಮ ಸಂಬಂಧಗಳ ಕುರಿತು ರಿಯಾಲಿಟಿ ಶೋ ಒಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಲಾಕ್ ಅಪ್ 2’ (Lock Upp 2) ರಿಯಾಲಿಟಿ ಶೋನ ಹೊಸ ಸಂಚಿಕೆಯಲ್ಲಿ ಸುನೀತಾ ಅಹುಜಾ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.
"ನಮ್ಮ ವಿವಾಹದ ಆರಂಭದಿಂದಲೂ ಈ ಸವಾಲುಗಳು ಇದ್ದವು. ಅವರೊಬ್ಬ ದೊಡ್ಡ ಹೀರೋ ಆಗಿರುವುದರಿಂದ ನಾವೇನೂ ಹೇಳಲು ಸಾಧ್ಯವಿರಲಿಲ್ಲ. ಈಗಂತೂ ನಾನು ಅಸಹಾಯಕಳು. ಈ ವಯಸ್ಸಿನಲ್ಲಿ ನಾನು ಈಗ ಇದರ ಬಗ್ಗೆ ಹೆಚ್ಚು ಯೋಚಿಸಿದರೆ ನನ್ನ ಡಯಾಬಿಟಿಸ್ ಹೆಚ್ಚಾಗಬಹುದು. ಆದ್ದರಿಂದ ಈಗ ಹೇಗೆ ನಡೆಯುತ್ತಿದೆಯೋ ಹಾಗೆಯೇ ನಡೆಯಲು ಬಿಟ್ಟಿದ್ದೇನೆ. ಸದ್ಯಕ್ಕೆ ನಾನು ನನ್ನ ಮಕ್ಕಳಿಗಾಗಿ ಬದುಕುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
ಇಲ್ಯಾರನ್ನು ನಾವು ತಡೆಯಲು ಸಾಧ್ಯ?
ನಟ, ಅಂದರೆ ನಿಮ್ಮ ಪತಿ ಗೋವಿಂದ ಈಗಲೂ ಅಕ್ರಮ ಸಂಬಂಧ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ಸುನೀತಾ, "ಯಾರನ್ನಾದರೂ ತಡೆಯಲು ನಮ್ಮಿಂದ ಸಾಧ್ಯವೇ? ನಾನು ದಿನದ 24 ಗಂಟೆಯೂ ಅವರ ಎದುರು ಕಣ್ಣುಬಿಟ್ಟುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ನಮಗೆ ಎರಡು ಮನೆಗಳಿವೆ. ಅವರ ಮನೆಗೆ ಹಲವರು ಬರುತ್ತಾರೆ, ಆದರೆ ನನ್ನ ಸ್ವಂತ ಮನೆಯಲ್ಲಿ ನನಗೆ ಪ್ರೈವೆಸಿ ಅಗತ್ಯವಿದೆ" ಎಂದಿದ್ದಾರೆ.
ಗೋವಿಂದ ಅವರಂತಹ ಮಗ ಬೇಕು, ಪತಿಯಲ್ಲ!
'ನನ್ನ ಪತಿ ಗೋವಿಂದ ಅವರು ಒಬ್ಬ ಉತ್ತಮ ಮಗ ಮತ್ತು ಸಹೋದರ' ಎಂದು ಹೊಗಳಿರುವ ಸುನಿತಾ, "ಅವರಿಗೆ ಈಗ 60 ವರ್ಷ ವಯಸ್ಸಾಗಿದೆ. ಆದರೆ ಅವರು ಎಂದಿಗೂ ತಮಗಾಗಿ ಬದುಕಲಿಲ್ಲ. ಸದಾ ಕುಟುಂಬವನ್ನು ಸಲಹುವುದರಲ್ಲೇ ಮಗ್ನರಾಗಿದ್ದರು" ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ, "ನನಗೆ ಗೋವಿಂದ ಅವರಂತಹ ಮಗ ಬೇಕು, ಆದರೆ ಪತಿಯಲ್ಲ" ಎಂಬ ತಮ್ಮ ಈ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಅದೆಲ್ಲಾ ಸರಿ, ಡಿವೋರ್ಸ್ ಕಥೆ ಏನಾಯ್ತು? ಈ ಪ್ರಶ್ನೆಗೆ ಕೂಡ ಸುನೀತಾ ಅವರು ನಿರ್ದಿಷ್ಟ ಉತ್ತರ ಕೊಟ್ಟಿದ್ದಾರೆ. '40 ವರ್ಷಗಳ ಕಾಲ ಜೊತೆಯಾಗಿ ಬಾಳಿದ ನಂತರ ಈಗ ಬೇರ್ಪಡುವುದರ ಬಗ್ಗೆ ಯೋಚಿಸುವುದೂ ಸಹ ಒಂದು ಅಪರಾಧ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಸುನೀತಾ.
ಇದೆಲ್ಲಾ ನನ್ನ ವಿರುದ್ಧದ ಸಂಚು; ನಟ ಗೋವಿಂದ ಹೇಳಿಕೆ!
ಸುನೀತಾ ಅಹುಜಾ ಕಳೆದ ಒಂದು ವರ್ಷದಿಂದ ತಮ್ಮ ಬಗ್ಗೆ ಮಾಡುತ್ತಿರುವ 'ಅಕ್ರಮ ಸಂಬಂಧ' ಆರೋಪಗಳಿಗೆ ನಟ ಗೋವಿಂದ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. "ಇದು ನನ್ನ ವಿರುದ್ಧ ನಡೆಯುತ್ತಿರುವ ದೊಡ್ಡ ಷಡ್ಯಂತ್ರ. ನಾವು ಮೌನವಾಗಿ ಉಳಿದರೆ ಅದು ನಮ್ಮ ದೌರ್ಬಲ್ಯ ಎಂದೇ ಭಾವಿಸಲಾಗುತ್ತದೆ. ನನ್ನ ಕುಟುಂಬದ ಜನರೇ ತಿಳಿಯದೇ ಈ ಸಂಚಿನಲ್ಲಿ ಭಾಗಿಯಾಗಿರಬಹುದು. ಅಥವಾ, ತಮಗೇ ಗೊತ್ತಿಲ್ಲದಂತೆ ಅವರೇ ಬಳಕೆಯಾಗುತ್ತಿರಬಹುದು' ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನ್ನಾಡಿ ನಟ ಗೋವಿಂದ ಬೇಸರ ಹೊರಹಾಕಿದ್ದರು.
ಅಂದಹಾಗೆ, ಗೋವಿಂದ ಮತ್ತು ಸುನಿತಾ ದಂಪತಿ 1987ರಲ್ಲಿ ವಿವಾಹವಾಗಿದ್ದಾರೆ. ಟೀನಾ ಮತ್ತು ಯಶ್ವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿರುವ 'ಲಾಕ್ ಅಪ್ 2' ಶೋನಲ್ಲಿ ಸುನಿತಾ ಅವರೊಂದಿಗೆ ರಾಮ್ ಕಪೂರ್, ಹರ್ಷದ್ ಚೋಪ್ರಾ, ಧೀರಜ್ ಧೂಪರ್, ಶಿವಾಂಗಿ ಜೋಶಿ, ಶ್ರೇಯಾ ಕಲ್ರಾ ಮತ್ತು ಸೂಫಿ ಮೋತಿವಾಲಾ ಸೇರಿದಂತೆ ಹಲವು ತಾರೆಯರು ಭಾಗವಹಿಸಿದ್ದಾರೆ. ಸದ್ಯ ಪತಿ ಗೋವಿಂದ ವಿರುದ್ಧ ಪತ್ನಿ ಸುನೀತಾ ಹೇಳಿರೋ ಮಾತುಗಳು ಬಾಲಿವುಡ್ ಬಾಗಲು ದಾಟಿ ಹೊರಗಡೆಯೂ ಸುತ್ತಾಡತೊಡಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.