ತೆಲುಗು ನಟ ಪ್ರಭಾಸ್ ಹೈದರಾಬಾದ್ ಉದ್ಯಮಿಯ ಪುತ್ರಿಯನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೈದರಾಬಾದ್: ಬಾಹುಬಲಿ ಚಿತ್ರದ ಮೂಲಕ ಭಾರಿ ಜನ ಮನ್ನಣೆಗಳಿಸಿದ್ದ ತೆಲುಗು ನಟ ಪ್ರಭಾಸ್ ಅವರು ಹೈದರಾಬಾದ್ ಮೂಲದ ಉದ್ಯಮಿಯೊಬ್ಬರ ಪುತ್ರಿ ಜೊತೆಗೆ ಹಸೆ ಮಣೆ ಏರಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಈ ಮದುವೆ ಕಾರ್ಯಕ್ರಮವು ತುಂಬಾ ಗೌಪ್ಯವಾಗಿ ನಡೆಯಲಿದ್ದು, ತೆಲುಗಿನ ರೆಬಲ್ ಸ್ಟಾರ್ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಅವರು ಮದುವೆಯ ಹೊಣೆ ಹೊತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಅವರನ್ನು ಪ್ರಭಾಸ್ ವಿವಾಹವಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಜಿಯೋ ಪ್ಲಾಟ್‌ಫಾರಂಗೆ ಎರಡು ಬೌದ್ಧಿಕ ಪ್ರಶಸ್ತಿ
ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಜಿಯೋ ಪ್ಲಾಟ್‌ಫಾರಂ ಲಿಮಿಟೆಡ್ (ಜೆಪಿಎಲ್) ಭಾರತದ ಸರ್ಕಾರದಿಂದ ಎರಡು ರಾಷ್ಟ್ರೀಯ ಬೌದ್ಧಿಕ ಆಸ್ತಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಯೋ ಪ್ಲಾಟ್‌ಫಾರಂ ಕಂಪನಿಗೆ ಸರ್ಕಾರದಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು ಈ ಪ್ರಶಸ್ತಿಗಳು ಸವಾಲುಗಳನ್ನು ಪರಿಹರಿಸು ಬದ್ಧತೆಯೊಂದಿಗೆ ನಾವೀನ್ಯತೆಯನ್ನು ಸಂಯೋಜಿಸುವ ನಮ್ಮ ವಿಧಾನವನ್ನು ದೃಢೀಕರಿಸುತ್ತವೆ. ನಾವು ಕೇವಲ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿಲ್ಲ. ನಾವು 5ಜಿ, 6ಜಿ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಡಿಜಿಟಲ್ ಯುಗದಲ್ಲಿ ರಾಷ್ಟ್ರೀಯ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದೇವೆ ಎಂದರು.
ಮಾ.29 ರಿಂದ 3 ದಿನ ರಜಾ ಅವಧಿಯಲ್ಲಿಯೂ ಐಟಿ ಕಚೇರಿ ಓಪನ್
ನವದೆಹಲಿ: ಮಾ.31ರಂದು ಪ್ರಸ್ತಕ ಸಾಲಿನ ಹಣಕಾಸು ವರ್ಷ ಅಂತ್ಯವಾಗುವ ಮುನ್ನ ತೆರಿಗೆದಾರರು ಬಾಕಿಯಿರುವ ಹಣಕಾಸು ಸಂಬಂಧಿತ ಕೆಲಸಗಳನ್ನು ಮುಗಿಸಿಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾ.29ರಿಂದ 31ರವರೆಗೆ ವಾರಂತ್ಯ ಮತ್ತು ಹಬ್ಬದ ದಿನವು ಆದಾಯ ತೆರಿಗೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸಲಿವೆ.ಶನಿವಾರ, ಭಾನುವಾರ ಮತ್ತು ರಂಜಾನ್ ರಜಾ ದಿನವಾದ ಮಾ.29, 30, 31ರಂದು ಗ್ರಾಹಕರ ಅನುಕೂಲಕ್ಕಾಗಿ ಆದಾಯ ತೆರಿಗೆ ಕಚೇರಿ ಕಾರ್ಯನಿರ್ವಹಿಸಲು ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಮಾಹಿತಿ ನೀಡಿದ್ದು, ‘ಬಾಕಿ ಇರುವ ಇಲಾಖಾ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ, ಭಾರತದಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು ಮಾ.29,30.31ರಂದು ತೆರೆದಿರುತ್ತವೆ’ ಎಂದಿದೆ. 2023-24ನೇ ಸಾಲಿನ ನವೀಕರಿಸಿದ ಐಟಿಆರ್‌ಗಳನ್ನು ಸಲ್ಲಿಸಲು ಮಾ.31 ಕೊನೆಯ ದಿನ.
ತೆಲಂಗಾಣದಲ್ಲೂ ಕ್ಷೇತ್ರ ಮರುವಿಂಗಡಣೆ ವಿರೋಧಿ ಸಭೆ: ಸಿಎಂ ಸಿದ್ದುಗೆ ಕರೆ
ಹೈದರಾಬಾದ್: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ ತಮಿಳುನಾಡಿನ ಡಿಎಂಕೆ ಸರ್ಕಾರದ ನೇತೃತ್ವದಲ್ಲಿ ವಿಪಕ್ಷ ಕೂಟದ ಸಭೆ ನಡೆದ ಬೆನ್ನಲ್ಲೇ, ತೆಲಂಗಾಣ ಕೂಡ ಅಂತಹ ಸಭೆ ನಡೆಸಲು ಮುಂದಾಗಿದೆ. ಇದರ ಸಿದ್ಧತೆಯೆಂಬಂತೆ, ಕ್ಷೇತ್ರಗಳ ಮರುವಿಂಗಡಣೆಗೆ ಜನಸಂಖ್ಯೆ ಒಂದೇ ಮಾನದಂಡ ಆಗಬಾರದು ಎಂದು ಪ್ರತಿಪಾದಿಸುವ ನಿರ್ಣಯವನ್ನು ತೆಲಂಗಾಣ ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದೆ. ಈ ವೇಳೆ ಸಿಎಂ ರೇವಂತ್ ರೆಡ್ಡಿ ಮಾತನಾಡಿ, ‘ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳನ್ನು ವಿಂಗಡಿಸಿದರೆ, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಶೇ.6ರಷ್ಟು ಇಳಿಕೆಯಾಗಿ, ಶೇ.24ರಿಂದ 19ಕ್ಕೆ ತಲುಪುತ್ತದೆ’ ಎಂದು ಆರೋಪಿಸಿದರು. ಜೊತೆಗೆ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಸಿಎಂಗಳಿಗೆ ತಮ್ಮ ಸರ್ಕಾರ ಆಯೋಜಿಸುವ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.