ಶಂಕರ್‌ ನಾಗ್‌ ಬಗ್ಗೆ ಮನದನ್ನೆ ಅರುಂಧತಿ ನೆನಪಿಸಿಕೊಂಡ ಆ ದಿನಗಳ ಕಥೆ!

Published : Nov 27, 2025, 08:59 PM ISTUpdated : Nov 27, 2025, 09:01 PM IST
shankar nag

ಸಾರಾಂಶ

ನಟ ಶಂಕರ್‌ ನಾಗ್‌ (Shankar Nag) ಅವರ ಸರಳತೆ ಮತ್ತು ಮಾನವೀಯ ಗುಣಗಳ ಬಗ್ಗೆ ಅವರ ಪತ್ನಿ ಅರುಂಧತಿ ನಾಗ್‌ ಕೆಲವು ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಏರ್‌ಪೋರ್ಟ್‌ಗೆ ಹೋದಾಗ ವಯಸ್ಸಾದವರ ಬ್ಯಾಗ್‌ ಕಿತ್ಕೊಂಡುಬಿಡ್ತಿದ್ರಂತೆ ಶಂಕರ್!‌ 

ಶಂಕರ್‌ ನಾಗ್‌, ಕನ್ನಡಿಗರು ಎಂದೂ ಮರೆಯಲಾಗದ ಪ್ರತಿಭೆ. ಸಾವಿರಾರು ಸುಂದರ ಅಭಿನಯದ ಕ್ಷಣಗಳನ್ನು ನಮ್ಮ ಮುಂದಿಟ್ಟ ಪ್ರತಿಭಾವಂತ. ನೂರಾರು ಕನಸುಗಳನ್ನು ಕನ್ನಡಿಗರ ಮುಂದಿಟ್ಟು, ಇದನ್ನೆಲ್ಲ ನನಸು ಮಾಡಿಕೊಳ್ಳಿ ಎಂದು ಹೇಳಿ ಅವರಸದಿಂದ ನಿರ್ಗಮಿಸಿದ ಚಿನಕುರುಳಿ. ಅಂಥ ಶಂಕರ್‌ ಬಗ್ಗೆ ಅವರ ಆತ್ಮೀಯರಿಗೆ ಮಾತನಾಡಿದಷ್ಟೂ ಮುಗಿಯುವುದಿಲ್ಲ. ಅದರಲ್ಲೂ ಶಂಕರ್‌ ಪತ್ನಿ, ಬದುಕು ಹಾಗೂ ರಂಗದ ಮೇಲಿ ಬದುಕು ಎರಡರಲ್ಲೂ ಅವರ ಮನದನ್ನೆಯಾಗಿದ್ದ ಅರುಂಧತಿ ನಾಗ್‌ ಕೆಲವು ಸ್ವಾರಸ್ಯಕರ ಘಟನೆ ತಿಳಿಸಿದ್ದಾರೆ.

ಈಗ ರಂಗಶಂಕರವನ್ನು ಅಂತಾರಾಷ್ಟ್ರೀಯ ಮಟ್ಟದ ಥಿಯೇಟರ್‌ ಆಗಿಸಿ ನಡೆಸಿಕೊಂಡು ಹೋಗುತ್ತಿರುವ ಅರುಂಧತಿ ನಾಗ್‌ ಹೇಳಿದ ಘಟನೆಯೊಂದು ಇಲ್ಲಿದೆ. ಅಷ್ಟೊಂದು ಯಶಸ್ಸನ್ನು ಚಿಕ್ಕವಯಸ್ಸಿನಲ್ಲೇ ಕಂಡರೂ ಶಂಕರ್‌ ತಲೆಗೆ ಅದರ ಅಮಲು ಹೋಗಿರಲಿಲ್ಲವಂತೆ. ಅವನಾಯಿತು, ಅವನ ಕೆಲಸವಾಯಿತು. ಒಂದು ಪೈಜಾಮ, ಒಂದು ಕುರ್ತಾ, ಒಂದು ಹರಕಲು ಚಪ್ಪಲಿ- ಅಷ್ಟರಲ್ಲೇ ನಿಭಾಯಿಸುತ್ತಿದ್ದ. ಬೇರೇನೂ ಬೇಕಾಗಿಲ್ಲ, ಕೆಲಸ ಮಾಡಬೇಕು ಅಷ್ಟೆ. ಏರ್‌ಪೋರ್ಟ್‌ಗೆ ಹೋದಾಗ ಯಾರಾದರೂ ವಯಸ್ಸಾದವರ ಕೈಯಲ್ಲಿ ಬ್ಯಾಗ್‌ ಕಂಡರೆ ಹೋಗಿ ಕಿತ್ಕೊಂಡು ಬಿಡುತ್ತಿದ್ದ- ನಾನು ಹೊತ್ತುಕೊಂಡು ಬರ್ತೀನಿ ಅನ್ನುತ್ತಿದ್ದ. ಇಂಥದ್ದೆಲ್ಲ ಮೂಲ ಮನುಷ್ಯ ಗುಣಗಳು, ಬಿಡಬಾರದು ಅನ್ನುತ್ತಿದ್ದ- ಎನ್ನುತ್ತಾರೆ ಅರುಂಧತಿ.

‌ಅರುಂಧತಿ ಹೇಳಿದ ಇನ್ನೊಂದು ಘಟನೆ. ತಮ್ಮ ನಾಟಕ ತಂಡದಿಂದ ಹೆನ್ರಿಕ್‌ ಇಬ್ಸೆನ್ನನ ʼಎನಿಮಿ ಆಫ್‌ ದಿ ಪೀಪಲ್‌ʼ ನಾಟಕವನ್ನು ಮಾಡಬೇಕು ಎಂದು ಇಬ್ಬರೂ ಯೋಚಿಸಿ ಆ ಬಗ್ಗೆ ಚರ್ಚೆ ಮಾಡ್ತಾ ಇದ್ದರಂತೆ. ಅದು ಫ್ಯಾಕ್ಟರಿಯೊಂದರಿಂದ ಆಗುವ ಮಾಲಿನ್ಯ, ಅದರ ವಿರುದ್ಧ ಹೋರಾಡುವ ವ್ಯಕ್ತಿಗಳ ಕಥೆ ಇರುವ ನಾಟಕ. ಇದನ್ನು ಹರಿಹರ ಪಾಲಿಫೈಬರ್ಸ್‌ ಫ್ಯಾಕ್ಟರಿಯನ್ನು ಪರೋಕ್ಷವಾಗಿ ಸೂಚಿಸಿ ಮಾಡೋಣ ಎಂದೂ ಯೋಚಿಸಿದ್ದರು. ಇದೇ ಸಂದರ್ಭದಲ್ಲೇ ಹರಿಹರ ಪಾಲಿಫೈಬರ್ಸ್‌ ಫ್ಯಾಕ್ಟರಿಯವರೇ ಶಂಕರ್‌ ಬಳಿಗೆ ಬಂದು, ನಮ್ಮ ಫ್ಯಾಕ್ಟರಿ ಎಷ್ಟೊಂದು ಜನಸ್ನೇಹಿ- ಮಾಲಿನ್ಯರಹಿತ ಎಂದು ಡಾಕ್ಯುಮೆಂಟರಿ ಮಾಡಿಕೊಡಿ ಎಂದು ದುಂಬಾಲುಬಿದ್ದರು. ಈ ಪ್ರಸ್ತಾಪವನ್ನು ಶಂಕರ್‌ ಮನೆಯಲ್ಲಿ ಪ್ರಸ್ತಾಪಿಸಿದಾಗ ಗಂಡ- ಹೆಂಡತಿಗೆ ಜಗಳವೇ ಆಯಿತು. ನೀನು ಡಾಕ್ಯುಮೆಂಟರಿ ಮಾಡಿದರೆ ನಾನು ಹರಿಹರ ಪಾಲಿಫೈಬರ್ಸ್‌ ಫ್ಯಾಕ್ಟರಿಯೇ ಎದುರೇ ಎನಿಮಿ ಆಫ್‌ ದಿ ಪೀಪಲ್‌ ನಾಟಕ ಮಾಡುವೆ ಎಂದು ಅರುಂಧತಿ ಹಠ ಹಿಡಿದರು. ಕಡೆಗೂ ಶಂಕರ್‌ ಡಾಕ್ಯುಮೆಂಟರಿ ಯೋಚನೆ ಕೈಬಿಟ್ಟರಂತೆ.‌

ಶಂಕರ್ ನೆನಪು ಜೀವಂತ

ಶಂಕರ್ ನಾಗ್ ಇಹಲೋಕ ತ್ಯಜಿಸಿ 35 ವರ್ಷಗಳಾದರೂ, ಅವರ ನೆನಪುಗಳು ಮಾತ್ರ ಸದಾ ಜೀವಂತ. ಸದಾನಂದ ನಾಗರಕಟ್ಟೆ ಹಾಗೂ ಆನಂದಿ ನಾಗರಕಟ್ಟೆ ದಂಪತಿಯ ಮೂರನೇ ಮಗುವಾಗಿ 1954ರ ನವೆಂಬರ್​ 9ರ ಮಂಗಳವಾರದಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಲ್ಲಾಪುರದಲ್ಲಿ ಜನಿಸಿದ ಶಂಕರ್‌, ಭಟ್ಕಳದ ಶಿರಾಲಿ ಬಳಿಯ ಕೊಂಕಣಿ ಮಾತನಾಡುವ ಸಾರಸ್ವತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು​. ಶಂಕರ್ ನಾಗ್ ಮಾತೃಭಾಷೆ ಕೊಂಕಣಿ ಜೊತೆಗೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅನಂತ ನಾಗ್‌ ತಮ್ಮ ಸಹೋದರನನ್ನೂ ಈಗಲೂ ನೆನೆಪಿಸಿಕೊಂಡು ಆರ್ದ್ರರಾಗುತ್ತಾರೆ.

 

 

ಶಂಕರ್ ನಾಗ್ ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಮುಂಬೈಗೆ ತೆರಳಿದರು. ಅಲ್ಲಿ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅರುಂದತಿ ನಾಗ್ ಅವರನ್ನು ಸೆಟ್‌ ಒಂದರಲ್ಲಿ ಭೇಟಿಯಾದರು. ನಂತರ ಇಬ್ಬರೂ ದಾಂಪತ್ಯ ಜೀವನ ಆರಂಭಿಸಿದರು. ಮದುವೆ ಬಳಿಕ ದಂಪತಿ ಬೆಂಗಳೂರಿನ ಹೊರವಲಯದಲ್ಲಿರುವ ತೋಟದ ಮನೆಗೆ ಬಂದರು. ಕಾವ್ಯಾ ನಾಗ್ ಈ ದಂಪತಿಯ ಪುತ್ರಿ. ಶಂಕರ್ ನಾಗ್ ತಮ್ಮ ಪತ್ನಿ ಮತ್ತು ಮಗಳೊಂದಿಗೆ ತಮ್ಮ ಕಾರಿನಲ್ಲಿ 1990ರ ಸೆಪ್ಟೆಂಬರ್​​ 30 ರಂದು "ಜೋಕುಮಾರಸ್ವಾಮಿ" ಚಿತ್ರದ ಮಹೂರ್ತ ಸಮಾರಂಭಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್ ದಾವಣಗೆರೆಯ ಆನಗೋಡು ಎಂಬಲ್ಲಿ ಅಪಘಾತಕ್ಕೀಡಾದರು. ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದವು. ಅರುಂಧತಿ ಮತ್ತು ಮಗಳು ಕಾವ್ಯ ಅಪಘಾತದಲ್ಲಿ ಗಾಯಗೊಂಡು ಬದುಕುಳಿದರು. ಆದರೆ ಶಂಕರ್ ನಾಗ್​​ ಕೊನೆಯುಸಿರೆಳೆದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?