ಭಾರತೀಯ ಸಿನಿಮಾರಂಗದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ಉಪ್ಪಿನ ನೋಡೋಕೆ ಮಂಗಳೂರಿಗೆ ಬಂದಿದ್ರಂತೆ. ಅವರೇ ಹೇಳಿದ ಈ ವಿಷ್ಯ ಸಖತ್ ಇಂಟರೆಸ್ಟಿಂಗ್!
ಹಾಗೆ ನೋಡಿದರೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಅವರು ಎಂಥಾ ಪ್ರತಿಭಾವಂತ ಅನ್ನೋದು ನಮಗಿಂತ ಹೆಚ್ಚಾಗಿ ಬೇರೆ ಇಂಡಸ್ಟ್ರಿಯವರಿಗೆ ಗೊತ್ತು. ಕಳೆದ ವರ್ಷ ಒಂದು ಪ್ರೆಸ್‌ಮೀಟ್‌ನಲ್ಲಿ ಸೂಪರ್ ಹಿಟ್ ಸಿನಿಮಾ ಮಹಾರಾಜದ ನಿರ್ದೇಶಕ ನಿತಿಲನ್ ಉಪೇಂದ್ರ ಅವರ ಜಾಣ್ಮೆಯನ್ನು ಹಾಡಿ ಹೊಗಳಿದ್ರು. ಅದೇ ರೀತಿ 'ಆರ್‌ಎಕ್ಸ್‌೧೦೦' ನಿರ್ದೇಶಕ ಅಜಯ್ ಭೂಪತಿ ಸಹ ಆಂಧ್ರ, ತೆಲಂಗಾಣದ ಹೆಚ್ಚಿನ ಸ್ಟುಡಿಯೋಗಳಲ್ಲಿ ಉಪೇಂದ್ರ ಪೋಸ್ಟರ್ ನೋಡುತ್ತಿದ್ದೆ. ಅವರ ಬಗ್ಗೆ ಕುತೂಹಲ ಉಂಟಾಗಿ ಅವರನ್ನೇ ನೋಡುತ್ತ ಬೆಳೆದೆ ಎಂದಿದ್ದರು. ಇದೀಗ ಖ್ಯಾತ ಭಾರತೀಯ ನಿರ್ದೇಶಕ ಅನುರಾಗ್ ಕಶ್ಯಪ್ ಸರದಿ. ಅವರೂ ಉಪೇಂದ್ರ ಅವರ ಸಿನಿಮಾವನ್ನು ಹಾಡಿ ಹೊಗಳಿದ್ದು ಮಾತ್ರವಲ್ಲ, ಉಪ್ಪಿ ಅವರನ್ನು ಕಾಣಲು ಸೈಲೆಂಟಾಗಿ ಮಂಗಳೂರಿಗೆ ಬಂದಿದ್ದಾಗಿಯೂ ಹೇಳಿಕೊಂಡಿದ್ದಾರೆ. ಅವರ ಈ ಮಾತು ಸದ್ಯ ಎಲ್ಲೆಲ್ಲೂ ವೈರಲ್ ಆಗಿದೆ.
ಹಾಗೆ ನೋಡಿದರೆ ಅನುರಾಗ್ ಕಶ್ಯಪ್ ಗಟ್ಟಿ ಕಾನ್ಸೆಪ್ಟ್‌ನ ಅದ್ಭುತ ಸಿನಿಮಾಗಳನ್ನು ಜಗತ್ತಿಗೆ ಕೊಟ್ಟವರು. ಪಾಂಚ್, ಬ್ಲ್ಯಾಕ್ ಫ್ರೈಡೇ, ಗುಲಾಲ್, ದೇವ್ ಡಿ, ಗ್ಯಾಂಗ್ಸ್ ಆಫ್ ವಸೈಪುರ್, ಹೀಗೆ ಒಂದಕ್ಕಿಂತೊಂದು ಭಿನ್ನ-ವಿಭಿನ್ನ ಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಸೆಳೆದ ಅನುರಾಗ್ ಕಶ್ಯಪ್ ಇದೀಗ ಉಪ್ಪಿ ಫ್ಯಾನ್ಸ್ ಅಂತ ಹೇಳ್ಕೊಂಡಿದ್ದಾರೆ.
ನಟ ದಿಲೀಪ್ ಶಂಕರ್ ನಿಗೂಢ ಸಾವು, ಪೋಸ್ಟ್‌ಮಾರ್ಟಮ್ ನಿಂದ ಬಯಲಾಯ್ತು ಸಾವಿಗೆ ಕಾರಣ
ನನಗೆ ನೆನಪಿರುವಂತೆ ನಾನು ನೋಡಿದ ದಕ್ಷಿಣ ಭಾರತದ ಮೊದಲ ಚಿತ್ರಗಳು ಅಂದರೆ ಅವು ಉಪೇಂದ್ರ ಅವರ ಚಿತ್ರಗಳು ಎಂದಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್ ರಜಿನಿಕಾಂತ್, ಚಿರಂಜೀವಿ ಮತ್ತು ವೆಂಕಟೇಶ್ ಅವರ ಚಿತ್ರಗಳು ಆಗೆಲ್ಲ ಹಿಂದಿಗೆ ಡಬ್ ಆಗುತ್ತಿದ್ದವು ಈ ಕಾರಣಕ್ಕೆ ಇವರೆಲ್ಲರ ಕೆಲ ಸಿನಿಮಾಗಳನ್ನು ನಾನು ನೋಡಿದ್ದೇನೆ ಆದರೆ ಸಬ್ ಟೈಟಲ್ ಇಲ್ಲದ, ಡಬ್ ಆಗದ ದಕ್ಷಿಣ ಭಾರತದ ಚಿತ್ರವನ್ನು ನಾನು ಮೊದಲು ನೋಡಿದ್ದು ಅಂದರೆ ಅದು ಉಪೇಂದ್ರ ಅವರ ಎ ಮತ್ತು ಓಂ ಚಿತ್ರ ಎಂದಿದ್ದಾರೆ. ಎ ಮತ್ತು ಓಂ ಚಿತ್ರವನ್ನು ನನಗೆ ನೋಡುವಂತೆ ಹೇಳಿದ್ದು ರಾಮ್ ಗೋಪಾಲ್ ವರ್ಮಾ ಎಂದಿದ್ದಾರೆ.
ಎ ಚಿತ್ರವನ್ನು ನೋಡಿ ರಾಮ್ ಗೋಪಾಲ್ ವರ್ಮಾ ಬಹಳ ಥ್ರಿಲ್ ಆಗಿದ್ದರು ಎಂದಿರುವ ಅನುರಾಗ್ ಕಶ್ಯಪ್, ಎ ಚಿತ್ರವನ್ನು ನೋಡಲು ನನಗೆ ಅವರೇ ಮಾರ್ಗದರ್ಶಕರು. ತಾವೇ ಖುದ್ದಾಗಿ ಆ ಸಿನಿಮಾ ತೋರಿಸಿದ್ದರು ಎಂದು ಹೇಳಿದ್ದಾರೆ. ಆ ನಂತರ ನಾನು ಓಂ ಚಿತ್ರವನ್ನು ನೋಡಿ ಉಪೇಂದ್ರ ಅವರ ಅಭಿಮಾನಿಯಾದೆ ಎಂದಿರುವ ಅನುರಾಗ್ ಕಶ್ಯಪ್, ಮಂಗಳೂರಿಗೆ ನಾನು ಉಪೇಂದ್ರ ಅವರನ್ನು ಹುಡುಕಿಕೊಂಡು ಹೋಗಿದ್ದೆ. ಆಗ ಅಲ್ಲಿ ಅವರ ನಿರ್ದೇಶನದ ಉಪೇಂದ್ರ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಎಂದು ಹೇಳಿದ್ದಾರೆ.' ಓಂ' ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಅವರ ಸತ್ಯ ಚಿತ್ರ ಪ್ರೇರಣೆ ಎನ್ನುವ ವಾದವನ್ನು ಅನುರಾಗ್ ತಳ್ಳಿ ಹಾಕಿದ್ದಾರೆ. ಸತ್ಯ ಚಿತ್ರ ತೆರೆಗೆ ಬರುವ ಮುನ್ನ ಓಂ ಚಿತ್ರ ತೆರೆಗೆ ಬಂದಿತ್ತು. ಹೀಗಾಗಿ ಸತ್ಯ ಮತ್ತು ಓಂ ಚಿತ್ರಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಉಪೇಂದ್ರ ಅವರ ಬಗ್ಗೆ ಅನುರಾಗ್ ಕಶ್ಯಪ್ ಆಡಿದ ಈ ಮಾತು ಉಪ್ಪಿ ಮೈಲೇಜ್ ಹೆಚ್ಚಿಸಿದೆ.
ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಜೊತೆ ಹೊಸ ವರ್ಷ ಶುಭಾರಂಭ ಮಾಡಿದ ಮೇಘನಾ ಶಂಕರಪ್ಪ
ಕನ್ನಡ ಸಿನಿಮಾದಲ್ಲೂ ಸುದೀಪ್, ರಿಷಬ್, ರಕ್ಷಿತ್ ಸೇರಿದಂತೆ ಹಲವರು ತಾವು ಉಪೇಂದ್ರ ಸಿನಿಮಾ ನೋಡಿಕೊಂಡು ಬೆಳೆದವರು. ಅವರ ಸ್ಪೂರ್ತಿಯಿಂದಲೇ ಇಂದು ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಿದ್ದೇವೆ ಎಂಬ ಮಾತು ಹೇಳುತ್ತಿರುತ್ತಾರೆ. ಇದೀಗ ಅನುರಾಗ್ ಕಶ್ಯಪ್ ಅವರೂ ಉಪ್ಪಿ ಗ್ರೇಟ್ ಅನ್ನೋ ಮೂಲಕ ಕನ್ನಡಿಗರು ಹೆಮ್ಮೆ ಪಡೋ ಹಾಗೆ ಮಾಡಿದ್ದಾರೆ.