ಏನೋ ಸಮಸ್ಯೆ ಇರಬೇಕು; 'ಆಸ್ಕರ್'ನಿಂದ ಹೊರ ಬಿದ್ದ ಕಾಶ್ಮೀರ್ ಫೈಲ್ಸ್ ಬಗ್ಗೆ ಮೌನ ಮುರಿದ ನಟ ಅನುಪಮ್ ಖೇರ್

By Shruthi KrishnaFirst Published Jan 27, 2023, 12:22 PM IST
Highlights

ದಿ ಕಾಶ್ಮೀರ್ ಫೈಲ್ಸ್ ಆಸ್ಕರ್ ನಿಂದ ಹೊರಬಿದ್ದ ಬಗ್ಗೆ ನಟ ಅನುಪಮ್ ಖೇರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಿಮ ನಾಮನಿರ್ದೇಶನಗಳನ್ನು ಪ್ರಕಟಿಸಲಾಗಿದ್ದು ಭಾರತದ RRR ಚಿತ್ರದ ನಾಟು-ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಭಾರತದಿಂದ ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದ ಉಳಿದ ಸಿನಿಮಾಗಳು ಹೊರಬಿದ್ದಿವೆ. ಆರ್ ಆರ್ ಆರ್ ಸಿನಿಮಾದ ಹಾಡು ಈಗ ಭಾರಿ ನಿರೀಕ್ಷೆ ಮೂಡಿಸಿದೆ. ಈ ನಡುವೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿವೇಕ್ ಅಗ್ನಿಹೋತ್ರಿ ಕಾಲೆಳೆಯುತ್ತಿದ್ದಾರೆ.  

ಕಾಶ್ಮೀರ್ ಫೈಲ್ಸ್ ಸಿನಿಮಾ ಆಸ್ಕರ್‌ನಿಂದ ಹೊರ ಬಿದ್ದ ಬಳಿಕ ಮೊದಲ ಬಾರಿಗೆ ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನುಪಮ್ ಖೇರ್, 'RRR ಈಗಾಗಲೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ವಿಮರ್ಶಕರ ಆಯ್ಕೆ ಮತ್ತು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಇದು ಭಾರತೀಯ ಸಿನಿಮಾರಂಗಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಾವ್ಯಾಕೆ ಇದನ್ನು ಸಂಭ್ರಮಿಸಬಾರದು? ಖಂಡಿತವಾಗಿಯೂ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕೆಲವು ಸಮಸ್ಯೆಗಳು ಇರಬೇಕು. ನಾಟು ನಾಟು....ಹಾಡು ವಾವ್ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ' ಎಂದು ಹೇಳಿದ್ದಾರೆ. 

ಕಾಶ್ಮೀರ್ ಫೈಲ್ಸ್ ಟ್ರೋಲ್ 

ಆರ್ ಆರ್ ಆರ್ ಸಿನಿಮಾ ನಾಮನಿರ್ದೇಶ ಆಗುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಾಜಮೌಳಿ ಮತ್ತು ಕೀರವಾಣಿ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಮಯಕ್ಕೆ ಅನೇಕರು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕಾಲೆಳೆಯುತ್ತಿದ್ದಾರೆ. 'ಕಾಶ್ಮೀರ್ ಫೈಲ್ಸ್ ಕೂಡ ಹೋಗುತ್ತೆ ಅಂತ ಕೇಳಿದ್ವಿ' ಎಂದು ವ್ಯಂಗ್ಯ ಆಡುತ್ತಿದ್ದಾರೆ. 'ಕಾಶ್ಮೀರ್ ಫೈಲ್ಸ್ ಎಲ್ಲಿದೆ ಎಲ್ಲೂ ಕಾಣ್ತಿಲ್ವಲ್ಲಾ' ಎಂದು ಕೇಳುತ್ತಿದ್ದಾರೆ.  ವಿವೇಕ್ ಅಗ್ನಿಹೋತ್ರಿ ಎಲ್ಲಿ ಎಂದು ಪ್ರಶ್ನಿಸುತ್ತಿದ್ದರು. ಇದೀಗ ಅನುಪಮ್ ಖೇರ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಸಿನಿಮಾದಲ್ಲೇ ಏನು ಸಮಸ್ಯೆ ಇದೆ ಎಂದು ಹೇಳಿರುವುದು ಅಚ್ಚರಿ ವ್ಯಕ್ತವಾಗುತ್ತಿದೆ.  

ದಿ ಕಾಶ್ಮೀರ್ ಫೈಲ್ಸ್ ಎಲ್ಲಿ, ಕಾಣಿಸ್ತಿಲ್ಲ; ವಿವೇಕ್ ಅಗ್ನಿಹೋತ್ರಿಗೆ RRR ಫ್ಯಾನ್ಸ್ ಟಾಂಗ್

ಆಸ್ಕರ್ ರೇಸ್‌ನಲ್ಲಿ RRR ಮತ್ತು ಎರಡು ಸಾಕ್ಷ್ಯಚಿತ್ರ 

ಆರ್ ಆರ್ ಆರ್ ಜೊತೆಗೆ ಎರಡು ಭಾರತೀಯ ನಿರ್ಮಿತ ಸಾಕ್ಷ್ಯಚಿತ್ರಗಳು ಸಹ ಆಸ್ಕರ್‌ ನಲ್ಲಿರುವುದು ವಿಶೇಷ.  ಆಲ್ ದಟ್ ಬ್ರೀಥ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಭಾರತದ ಅಧಿಕೃತ ಆಸ್ಕರ್ ಪ್ರವೇಶ ಆಗಿದ್ದ ಚೆಲೋ ಶೋ (ದಿ ಲಾಸ್ಟ್ ಫಿಲ್ಮ್ ಶೋ) ಅತ್ಯುತ್ತಮ ವಿದೇಶಿ ಚಲನಚಿತ್ರ ಕಿರುಪಟ್ಟಿಗೆ ಸೇರಿತ್ತು. ಆದರೆ, ಅಂತಿಮ ನಾಮನಿರ್ದೇಶನಕ್ಕೇರಲು ವಿಫಲವಾಯಿತು. 'ಅರ್ಜೆಂಟೀನಾ, 1985' ಚಿತ್ರದ ಎದುರು ಸೋಲು ಕಂಡಿತ್ತು. ಇದೇ ಚಿತ್ರ ಈ ತಿಂಗಳ ಆರಂಭದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ (ಇಂಗ್ಲಿಷ್ ಅಲ್ಲದ ಭಾಷೆ) ವಿಭಾಗದಲ್ಲಿ ಭಾರತದ ಆರ್‌ಆರ್‌ಆರ್‌ ಚಿತ್ರವನ್ನು ಸೋಲಿಸಿತ್ತು.

'ಕಾಶ್ಮೀರ್ ಫೈಲ್ಸ್ ಗಾರ್ಬೇಜ್' ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ತಿರುಗೇಟು

ಮಾರ್ಚ್ 12ಕ್ಕೆ ಪ್ರಶಸ್ತಿ ಸಮಾರಂಭ

ಆಸ್ಕರ್‌ಗೆ ನಾಮನಿರ್ದೇಶನಗಳನ್ನು ನಟರಾದ ರಿಜ್ ಅಹ್ಮದ್ ಮತ್ತು ಅಲಿಸನ್ ವಿಲಿಯಮ್ಸ್ ಪ್ರಕಟಿಸಿದ್ದಾರೆ. 95 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಚಾಟ್ ಶೋ ಹೋಸ್ಟ್ ಜಿಮ್ಮಿ ಕಿಮ್ಮೆಲ್ ಮೂರನೇ ಬಾರಿಗೆ ಹೋಸ್ಟ್ ಮಾಡಲಿದ್ದಾರೆ. 
 

click me!