ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿದ್ದ ಅಫ್ಘಾನಿಸ್ತಾನ ನಿರಾಶ್ರಿತರನ್ನು ಹೊರದಬ್ಬುವುದಕ್ಕೆ ನಟಿ ಏಂಜಲೀನಾ ಜೋಲೀ ಕಂಬನಿ ಮಿಡಿದಿದ್ದಾರೆ. ನೆಟ್ಟಿಗರು ಏನಂತಿದ್ದಾರೆ?
ಪಾಕಿಸ್ತಾನ (Pakistan) ಈಗಾಗಲೇ ಆರ್ಥಿಕ ಬಿಕ್ಕಟ್ಟು, ಉಗ್ರಗಾಮಿಗಳ ಹಿಂಸಾತ್ಮಕ ಕೃತ್ಯಗಳಿಂದ ನರಳುತ್ತಿದೆ ‘. ಇದರ ಬೆನ್ನಲ್ಲೇ ಪಾಕಿಸ್ತಾನ ನೆರೆಯ ಅಫ್ಘಾನಿಸ್ತಾನ ಸೇರಿದಂತೆ ದಾಖಲೆರಹಿತ ವಲಸಿಗರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡಿದೆ. ಸರ್ಕಾರವು ಅಕ್ರಮ ವಲಸಿಗರಿಗೆ ಅಕ್ಟೋಬರ್ 31 ರ ಗಡುವನ್ನು ನೀಡಿತ್ತು, ನಂತರ ಅಕ್ರಮ ವಲಸಿಗರ ಬಂಧನ ಮಾಡುವುದಾಗಿ ಮತ್ತು ಅವರನ್ನು ಹೊರಹಾಕುವುದಾಗಿ ಪಾಕ್ ಸರ್ಕಾರ ತಿಳಿಸಿತ್ತು. ಇದೀಗ ಅವರನ್ನು ಹೊರದಬ್ಬುವ ಕೆಲಸ ಮಾಡುತ್ತಿದೆ. ಬಂಧನ ಮತ್ತು ಗಡಿಪಾರು ತಪ್ಪಿಸಲು ಸ್ವದೇಶಕ್ಕೆ ವಾಪಸಾಗುತ್ತಿರುವ ಈ ನಾಗರಿಕರ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ದು, ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ. ಪಾಕಿಸ್ತಾನದ ಗಡಿ ದಾಟಿದ ತಕ್ಷಣ ಅವರಿಗೆ ಸಂಕಷ್ಟಗಳ ಬೆಟ್ಟವೇ ಎದುರಾಗಿದೆ. ಆಹಾರ ಮತ್ತು ಕುಡಿಯುವ ನೀರಿನಂಥ ಅಗತ್ಯ ಸೌಕರ್ಯಗಳು ಅವರಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದ ನಾಗರಿಕರಿಗೆ ವಾಸಿಸಲು ಮನೆಗಳಿಲ್ಲ, ಶೌಚಾಲಯ, ಆಹಾರ ಸೇರಿದಂತೆ ಮೂಲಸೌಕರ್ಯಗಳ ಸೌಲಭ್ಯಗಳಿಲ್ಲ. ಜನರು ಬಯಲಿನಲ್ಲೇ ಮಲಗಿ ಕಾಲಕಳೆಯಬೇಕಾಗಿ ಬಂದಿದ್ದು, ಮಕ್ಕಳಿಗೂ ಸಮಸ್ಯೆಗಳು ಎದುರಾಗಿವೆ.
ಇದೀಗ ಎಲ್ಲವನ್ನೂ ಕಳೆದುಕೊಂಡು ಪರದಾಡುತ್ತಿರುವ ನಿರಾಶ್ರಿತರಿಗಾಗಿ ನಿರಾಶ್ರಿತರು ಮತ್ತು ಮಾನವ ಹಕ್ಕುಗಳ ಪರ ಹೋರಾಡುವ ನಟಿ ಹಾಗೂ ವಕೀಲೆ ಏಂಜಲೀನಾ ಜೋಲೀ ಕಂಬನಿ ಮಿಡಿದಿದ್ದಾರೆ. ಪಾಕಿಸ್ತಾನದ ಕ್ರಮವನ್ನು ಖಂಡಿಸಿರೋ ಹಾಲಿವುಡ್ ನಟಿ, ಪಾಕಿಸ್ತಾನದ ನಿರ್ಧಾರದಿಂದ ಲಕ್ಷಾಂತರ ಅಫ್ಘಾನ್ ಕುಟುಂಬ ಬೀದಿಗೆ ಬಿದ್ದಿದೆ ಎಂದಿದ್ದಾರೆ. ಹಠಾತ್ ಗಡಿಪಾರು ಅಫ್ಘಾನಿಸ್ತಾನದಲ್ಲಿ ಭೀಕರ ಪರಿಸ್ಥಿತಿಯನ್ನು ನಿರ್ಮಿಸಿದೆ. ಮಹಿಳೆಯರು ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅನೇಕರಿಗೆ ಶಿಕ್ಷಣವೇ ಇಲ್ಲದಾಗಿದೆ. ಅನೇಕರು ಜೈಲುವಾಸವನ್ನು ಎದುರಿಸುತ್ತಿದ್ದಾರೆ. ತೀವ್ರವಾದ ಮಾನವೀಯ ಬಿಕ್ಕಟ್ಟು ತೆರೆದುಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಜೋಲೀ ಬರೆದುಕೊಂಡಿದ್ದಾರೆ.
ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್ ರಾಜ್ಗೆ ನೆಟ್ಟಿಗರ ತರಾಟೆ
ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಸಂಸ್ಥೆಗಳು ಕೂಡ ಅಫ್ಘಾನಿಸ್ತಾನಕ್ಕೆ ಬರುವ ಸಾವಿರಾರು ಜನರಿಗಾಗಿ ಶಿಬಿರಗಳನ್ನು ಸ್ಥಾಪಿಸುತ್ತಿವೆ. ಈ ಶಿಬಿರಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಲಭ್ಯವಿವೆ. ಇದರಿಂದ ಇಲ್ಲಿಗೆ ಬರುವ ಜನರಿಗೆ ವಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮೂಲಗಳು ಹೇಳಿವೆ. ನಟಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ, ಗಾಜಾ ಪರವಾಗಿ ದನಿಎತ್ತಿರುವವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿ ಮಹಿಳೆಯರು ಮಕ್ಕಳು ಎನ್ನದೇ ಎಲ್ಲರನ್ನೂ ಕೊಂದಾಗ ಮೌನವಾಗಿದ್ದವರು, ನಂತರ ಇಸ್ರೇಲ್ ಅದೇ ರೀತಿಯ ಪ್ರತಿಕಾರವನ್ನು ಗಾಜಾ ಪಟ್ಟಿಯ ಮೇಲೆ ತೀರಿಸಿಕೊಂಡಾಗ ಬೊಬ್ಬಿಡುತ್ತಿರುವ ಜನರು ಈಗ ಪಾಕಿಸ್ತಾನದ ಈ ಕ್ರಮವನ್ನು ಬೆಂಬಲಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಭಾರತ ಸೇರಿದಂತೆ ಕೆಲವು ಕಡೆಗಳಲ್ಲಿ ಹಮಾಸ್ ಉಗ್ರರು, ಗಾಜಾ, ಪ್ಯಾಲಿಸ್ತೀನ್ ಪರವಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿರುವವರಿಗೆ ಪಾಕಿಸ್ತಾನದ ಈ ಕಠೋರತನ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸುತ್ತಿರುವ ಜನರು, ಒಬ್ಬರೂ ಬೀದಿಗಿಳಿದು ಹೋರಾಟ ಮಾಡಿದ್ದು, ಕಾಣುತ್ತಿಲ್ಲವಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ಅಫ್ಘಾನ್ ನಿರಾಶ್ರಿತರ ಸ್ಥಿತಿ ಶೋಚನೀಯವಾಗಿದ್ದರೂ ಅವರ ಬಗ್ಗೆ ಮಾತನಾಡುವವರು ಯಾರೂ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ.
ನನ್ನನ್ನು ಸ್ಕೂಲ್ನಿಂದ ಓಡಿಸಿಬಿಟ್ರು! ಬಾಲ್ಯದ ಗೆಳೆಯ ರವಿಚಂದ್ರನ್ ಜತೆ ಡಿ.ಕೆ.ಶಿವಕುಮಾರ್ ಸವಿ ನೆನಪು