ನಟಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಇಬ್ಬರೂ ರಷ್ಯಾಗೆ ತೆರಳಿದ್ದಾರೆ. ರಾಷ್ಯಾದಲ್ಲಿರುವ ಫೋಟೋ ವೈರಲ್ ಆಗಿದೆ.
ನಟಿ ರಶ್ಮಿಕಾ ಮಂದಣ್ಣ ಕಳೆದ ಕೆಲವು ದಿನಗಳಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ಸನ್ನೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ರಶ್ಮಿಕಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ನಟಿ ರಶ್ಮಿಕಾ ರಷ್ಯಾಗೆ ಹಾರಿದ್ದಾರೆ. ಅಲ್ಲು ಅರ್ಜುನ್ ಜೊತೆ ರಷ್ಯಾದಲ್ಲಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ರಶ್ಮಿಕಾ ಮಂದಣ್ಣ ದಿಢೀರ್ ರಷ್ಯಾ ಪ್ರವಾಸ ಕೈಗೊಂಡಿದ್ದು ಪುಷ್ಪ ಸಿನಿಮಾಗಾಗಿ. ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಪುಷ್ಪ ಸಿನಿಮಾದ ವಿಶೇಷ ಪ್ರದರ್ಶನವನ್ನು ರಷ್ಯಾದಲ್ಲಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಇಡೀ ತಂಡ ರಷ್ಯಾ ಪ್ರವಾಸ ಕೈಗೊಂಡಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸುಕುಮಾರ್ ಸೇರಿದಂತೆ ಪುಷ್ಪ-2 ಸಿನಿಮಾತಂಡ ರಷ್ಯಾಗೆ ತೆರಳಿದೆ. ರಷ್ಯಾದಲ್ಲಿ ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ರಷ್ಯಾಗೆ ಭೇಟಿ ನೀಡಿದ ಫೋಟೋಗಳನ್ನು ಪುಷ್ಪ-2 ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಡಿಸೆಂಬರ್ 1ರಂದು ಮಾಸ್ಕೋದಲ್ಲಿ ಸೂಪರ್ ಹಿಟ್ ಪುಷ್ಪ ಸಿನಿಮಾದ ವಿಶೇಷ ಪ್ರದರ್ಶನ ನಡೆಯಲಿದೆ. ಬಳಿಕ ಡಿಸೆಂಬರ್ 3ರಂದು ಸೆಂಟ್ ಪೀಟರ್ಸ್ ಬರ್ಗ್‌ನಲ್ಲಿ ಮತ್ತೊಂದು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವಿಶೇಷ ಪ್ರದರ್ಶನದಲ್ಲಿ ಇಡೀ ಪುಷ್ಪ ತಂಡ ಹಾಜರಿರಲಿದೆ.
ಜೇಮ್ಸ್ ಕ್ಯಾಮೆರಾನ್ 'ಅವತಾರ್-2'ಗು ಅಲ್ಲುಅರ್ಜುನ್ 'ಪುಷ್ಪ-2'ಗೂ ಇದೆ ಲಿಂಕ್; ಏನದು?
ವಿಶೇಷ ಎಂದರೆ ಭಾರತದ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳ ಪ್ರದರ್ಶನ ಕೂಡ ನಡೆಯಲಿದೆ. SS ರಾಜಮೌಳಿ ಅವರ RRR, ಕರಣ್ ಜೋಹರ್ ಅವರ ಮೈ ನೇಮ್ ಈಸ್ ಖಾನ್, ಬಬ್ಬರ್ ಸುಭಾಷ್ ಅವರ ಡಿಸ್ಕೋ ಡ್ಯಾನ್ಸ್, ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ ದಂಗಲ್ ಮತ್ತು ಸಿದ್ಧಾರ್ಥ್ ಆನಂದ್ ಅವರ ವಾರ್ ಸೇರಿದಂತೆ ಭಾರತೀಯ ಚಿತ್ರರಂಗದ ಇತರ ಐದು ಹಿಟ್‌ಗಳನ್ನು ಪ್ರದರ್ಶಿಸಲಾಗುತ್ತಿದೆ.
ಕೇರಳ ವಿದ್ಯಾರ್ಥಿನಿಗೆ ಅಲ್ಲು ಅರ್ಜುನ್ ನೆರವು; ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ
ಪುಷ್ಪ-2 ಬಗ್ಗೆ
ಪುಷ್ಪ ಸೂಪರ್ ಹಿಟ್ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮುಂದುವರೆಯಲಿದ್ದಾರೆ. ಇನ್ನೂ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಫಹಾದ್ ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದರು. ಎರಡನೇ ಭಾಗದಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಹಾದ್ ಕಾಳಗ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಅಂದಹಾಗೆ ಇತ್ತೀಚಿಗಷ್ಟೆ ಪುಷ್ಪ-2 ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿತ್ತು. ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಸಿನಿಮಾತಂಡ ರಷ್ಯಾದಲ್ಲಿ ನಡೆಯುತ್ತಿರುವ ವಿಶೇಷ ಪ್ರದರ್ಶನಕ್ಕೆ ಹಾಜರಿ ಹಾಕಿದೆ.