
ಸದ್ಯ ಅಕ್ಷಯ್ ಕುಮಾರ್ ಅವರ ವಿಮಲ್ ಪಾನ್ ಮಸಾಲಾ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದರಿಂದ ಅಕ್ಷಯ್ ಕುಮಾರ್ ಸಕತ್ ಟ್ರೋಲ್ ಕೂಡ ಆಗುತ್ತಿದ್ದಾರೆ. ಈ ಜಾಹೀರಾತಿನಲ್ಲಿ ಬಾಲಿವುಡ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಹಾಗೂ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಈ ಮೂವರ ಜೋಡಿ ವಿಮಲ್ ಪಾನ್ ಮಸಾಲಾ ಜಾಹೀರಾತು ಮಾಡುತ್ತಾ ಬಂದಿದ್ದು ಬಹಳ ವರ್ಷಗಳೇ ಕಳೆದಿವೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು. ಯಾವಾಗಲೂ ಫಿಟ್ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಿದ್ದರು. 2022ರ ಏಪ್ರಿಲ್ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್ಮೆಂಟ್ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್.
ಆದರೆ ಇದೀಗ ಮತ್ತೊಮ್ಮೆ ಆ ಜಾಹೀರಾತು ಕಾಣಿಸಿಕೊಂಡಿದೆ. ಇದರಿಂದ ಅಕ್ಷಯ್ ಕುಮಾರ್ ಅವರಿಗೆ ತಾವು ಕ್ಷಮೆ ಕೋರಿದ್ದು ಮರೆತು ಹೋಯಿತಾ? ದುಡ್ಡಿನ ಆಸೆಗೆ ಏನು ಮಾಡಲೂ ಹೇಸದವರು ನೀವು ಎಂದೆಲ್ಲಾ ಕಳೆದೊಂದು ದಿನದಿಂದ ಸಕತ್ ಟೀಕೆ ಕೇಳಿಬಂದಿತ್ತು. ಅದಕ್ಕೆ ಈಗ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ಅಕ್ಷಯ್ ಕುಮಾರ್ ಹೇಳಿದ್ದು ಏನೆಂದರೆ, ‘ಈ ಜಾಹೀರಾತು ಶೂಟ್ ಆಗಿದ್ದು 2021ರ ಅಕ್ಟೋಬರ್ 13ರಂದು. ನನಗೂ ಆ ಬ್ರ್ಯಾಂಡ್ಗೂ ಈಗ ಯಾವುದೇ ಸಂಬಂಧ ಇಲ್ಲ. ಈಗಾಗಲೇ ಶೂಟ್ ಮಾಡಿಕೊಂಡಿರುವ ಜಾಹೀರಾತನ್ನು ಮುಂದಿನ ತಿಂಗಳ ಕೊನೆಯವರೆಗೆ ಪ್ರಸಾರ ಮಾಡುವ ಹಕ್ಕು ಅವರಿಗೆ ಇದೆ. ಅಲ್ಲಿಯವರೆಗೆ ಸಹಿಸಿಕೊಳ್ಳಿ’ ಎಂದಿದ್ದಾರೆ. ಈ ಮೂಲಕ ಇದು ಹಳೆಯ ಜಾಹೀರಾತು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ನನಗೆ ನನ್ನ ಮಾತು ನೆನಪಿದೆ. ನಾನು ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿರುವುದು ತಿಳಿದಿದೆ. ಹಳೆಯ ಜಾಹೀರಾತಿನ ಗಡುವು ಮುಂದಿನ ತಿಂಗಳು ಮುಗಿಯುತ್ತದೆ. ಆದ್ದರಿಂದ ನಾನು ಅಲ್ಲಿಯವರೆಗೆ ಏನೂ ಮಾಡಲು ಆಗುವುದಿಲ್ಲ. ದಯವಿಟ್ಟು ಕ್ಷಮಿಸಿ. ಸುಮ್ಮನೇ ಇಲ್ಲಸಲ್ಲದ ಸುಳ್ಳು ಸುದ್ದಿ ಹರಡಬೇಡಿ ಎಂದಿದ್ದಾರೆ ಅಕ್ಷಯ್ ಕುಮಾರ್.
ಅಲ್ಲಿಗೆ ಅಕ್ಷಯ್ ಕುಮಾರ್ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರುಖ್ ಮತ್ತು ಅಜೆಯ್ ದೇವಗನ್ ಅವರು ಮೌನವಾಗಿದ್ದಾರೆ. ಇದರಿಂದ ಅವರ ವಿರುದ್ಧ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇಂಥವರನ್ನು ದೇವರು ಎಂದು ಪೂಜಿಸುತ್ತಾರೆ ಎಷ್ಟೋ ಮಂದಿ, ನಾಚಿಕೆ ಇಲ್ಲದವರು ಇವರು. ತಾವುಕೋಟಿ ಕೋಟಿ ಹಣ ಪಡೆದು ತಮ್ಮನ್ನು ನಂಬಿ ಪೂಜಿಸುವವರ ಜೀವವನ್ನೇ ಬಲಿ ತೆಗೆಯುವ ಕಟುಕರು ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಲಾಗುತ್ತಿದೆ.
KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್-ಬಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.