ಗಂಡನ ಸಾವಿನಿಂದ ಮದ್ಯವ್ಯಸನಿಯಾಗಿದ್ದ ಡಿಸ್ಕೋಶಾಂತಿ ಬದಲಾಗಿದ್ದು ಹೇಗೆ?

Published : May 01, 2025, 01:21 PM ISTUpdated : May 01, 2025, 03:14 PM IST
ಗಂಡನ ಸಾವಿನಿಂದ ಮದ್ಯವ್ಯಸನಿಯಾಗಿದ್ದ ಡಿಸ್ಕೋಶಾಂತಿ ಬದಲಾಗಿದ್ದು ಹೇಗೆ?

ಸಾರಾಂಶ

ಒಂದು ಕಾಲದ ಖ್ಯಾತ ಕ್ಯಾಬರೆ ನರ್ತಕಿ ಡಿಸ್ಕೋ ಶಾಂತಿ, ಪತಿ ಶ್ರೀಹರಿಯ ಸಾವಿನ ನಂತರ ಮದ್ಯವ್ಯಸನಕ್ಕೆ ಬಲಿಯಾಗಿದ್ದರು. ಏಳು ವರ್ಷಗಳ ಕುಡಿತದ ಚಟದಿಂದ ಮಕ್ಕಳ ಕಣ್ಣೀರಿನ ಮೂಲಕ ಎಚ್ಚೆತ್ತುಕೊಂಡ ಶಾಂತಿ, ಈಗ ಕುಡಿತ ತ್ಯಜಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳು ಅಮ್ಮನ ಬೆನ್ನೆಲುಬಾಗಿ ನಿಂತಿದ್ದಾರೆ.

ಬೆಂಗಳೂರು: ಥಳಕು ಬಳಕಿನ ಮೈಮಾಟವೀಗ ದಢೂತಿಯಾಗಿದೆ. ಕಣ್ಣುಗಳಲ್ಲಿ ಮಾದಕತೆ ಬದಲು ನಶೆ. ಜೀವನವೇ ಬೇಡೆಂದು ಕುಡಿತಕ್ಕೆ ದಾಸಿಯಾಗಿ, ಮಕ್ಕಳನ್ನೂ ಕಡೆಗಣಿಸಿ, ಸಾವಿಗೆ ಹಪಹಪಿಸುತ್ತಾ ಬದುಕು ಸಾಗಿಸುತ್ತಿದ್ದಳು ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿ. ಅದಕ್ಕೆ ಕಾರಣ, ತಾನು ಪ್ರೀತಿಸಿ ಮದುವೆಯಾಗಿ, 23 ವರ್ಷ ಸುಖ ದಾಂಪತ್ಯ ನಡೆಸಿ, ಇಬ್ಬರು ಗಂಡು ಮಕ್ಕಳ ತಾಯಿಯಾಗಿ, ಅಪ್ಪಟ ಗೃಹಿಣಿಯಂತೆ ಜೀವನ ಸಾಗಿಸುತ್ತಿದ್ದ ಡಿಸ್ಕೋಶಾಂತಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು ಆಕೆಯ ಗಂಡ, ತೆಲುಗಿನ ಖ್ಯಾತ ನಟ ಶ್ರೀಹರಿ ಅಕಾಲಿಕ ಸಾವು.

80-90ರ ದಶಕದ ಸಿನಿಪ್ರಿಯರ ಹಾಟ್ ಫೇವರಿಟ್ ಡಿಸ್ಕೋ ಶಾಂತಿ. ಮಡಿವಂತರು ಮೂಗು ಮುರಿಯುತ್ತಿದ್ರೆ ಪಡ್ಡೆಗಳ ನಿದ್ದೆ ಕೆಡಿಸುವಂತಿದ್ದಳು. ಈಗಿನ ಐಟಂ ಡಾನ್ಸ್ ಅಂದಿನ ಕ್ಯಾಬರೆ. ಅದರಲ್ಲಿ ಡಿಸ್ಕೋ ಶಾಂತಿ ಟಾಪ್. ಅಂಥ ಡಿಸ್ಕೋ ಶಾಂತಿಗೆ ಈಗ 60 ವರ್ಷ. ಮೊನ್ನೆ ತಮಿಳು ಯೂಟ್ಯೂಬ್‌ವೊಂದರಲ್ಲಿ ಡಿಸ್ಕೋ ಶಾಂತಿ ಸಂದರ್ಶನ ನೋಡಲು ಸಿಕ್ಕಿತು. ಅಂದಿನ ತನ್ನ ಮಾದಕ ಮೈಮಾಟದಿಂದ ದಕ್ಷಿಣ ಭಾರತವಷ್ಟೇ ಅಲ್ಲ ಬಾಲಿವುಡ್‌, ಒಡಿಯಾ ಸೇರಿ 900 ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಗೊತ್ತಾ? ಕ್ಯಾಬರೆ ಡಾನ್ಸ್‌ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಶಾಂತಕುಮಾರಿ ಅಲಿಯಾಸ್‌ ಡಿಸ್ಕೋ ಶಾಂತಿ ಬದುಕು ಮತ್ತೊಂದು ಮಗ್ಗಲಿಗೆ ಹೊರಳಿದೆ. 

ಅಂದಿನ ಕ್ಯಾಬರೆ ನಟಿಯರ  ಲೈಫು ಕರಾಳವಾಗಿರುತ್ತೆ. ಮದುವೆ ಇಲ್ಲದೇ ಒಂಟಿಯಾಗಿ ತೆರೆಮರೆಯಲ್ಲಿರುವ ಹಲವು ಕ್ಯಾಬರೆ ನಟಿಯರ ಮಧ್ಯೆ, ಡಿಸ್ಕೋ ಶಾಂತಿ, ಜೀವನ ಮಾತ್ರ ಸುಂದರವಾಗಿತ್ತು. ಕಾರಣ ಆಕೆಯ ಗಂಡ, ತೆಲುಗಿನ ಖ್ಯಾತ ನಟ ‍ಶ್ರೀಹರಿ. ಕ್ಯಾಬರೆ ಡ್ಯಾನ್ಸ್‌ ಮೂಲಕವೇ ಖ್ಯಾತಿಯ ತುತ್ತ ತುದಿಗೇರಿದ್ದ ಡಿಸ್ಕೋ ಶಾಂತಿಯನ್ನು ಪ್ರೀತಿಸಿ ಮದುವೆಯಾಗಿದ್ದರು ಶ್ರೀಹರಿ. ಡಿಸ್ಕೋಶಾಂತಿ ಬಗೆಗಿನ ಯಾವ ಪುಕಾರುಗಳಿಗೂ ತಲೆಕೆಡಿಸಿಕೊಳ್ಳದ ಶ್ರೀಹರಿ, ಆಕೆಯನ್ನು ಮಗುವಿನಂತೆ ನೋಡಿಕೊಳ್ತಿದ್ದರಂತೆ. ಶಾಂತಿಯನ್ನು ತಲ್ಲಿ ಎಂದೇ ಕರೆಯುತ್ತಿದ್ದ ಶ್ರೀಹರಿ, ಆಕೆಯ ಪಾಲಿಗೆ ಪ್ರೀತಿಪಾತ್ರ ಭಾವ.

1996ರಲ್ಲಿ ಮದುವೆಯಾದ ಡಿಸ್ಕೋ ಶಾಂತಿ
ಶ್ರೀಹರಿ ದಂಪತಿಗೆ ಎರಡು ಗಂಡು ಮತ್ತು ಒಬ್ಬಳು ಮಗಳು. ಆದರೆ, ಮಗಳು ಅಕ್ಷರಾ ಹುಟ್ಟಿ ನಾಲ್ಕು ತಿಂಗಳಿಗೆ ಕೊನೆಯುಸಿರೆಳೆದಳು. ಇವಳ ನೆನಪಲ್ಲಿಯೇ ಅಕ್ಷರಾ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಹಳ್ಳಿಗಳಿಗೆ ಶುದ್ಧ ನೀರು ಮತ್ತು ಶಾಲೆಗೆ ಬೇಕಾದ ಸೌಕರ್ಯ ನೀಡುವ ಸಾರ್ಥಕ ಕೆಲಸ ಮಾಡ್ತಿದ್ರು. ಆದರೆ, ಡಿಸ್ಕೋಶಾಂತಿ ಬಾಳಲ್ಲಿ ಮತ್ತೊಂದು ಬಿರುಗಾಳಿ. 2013ರಲ್ಲಿ ಶ್ರೀಹರಿ, ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದರು. ತನ್ನ ಪ್ರೀತಿಯ ಭಾವನನ್ನು ಕಳೆದುಕೊಂಡ ಡಿಸ್ಕೋ ಶಾಂತಿ, ಮದ್ಯವ್ಯಸನಿ ಆಗಿಬಿಟ್ರು. 

‍ಶ್ರೀಹರಿಯೇ ತನ್ನ ಜೀವ, ಜೀವನವಾಗಿಸಿಕೊಂಡಿದ್ದ ಶಾಂತಿಗೆ, ‍ಶ್ರೀಹರಿಯ ಸಾವು ಅರಗಿಸಿಕೊಳ್ಳಲಾಗಲಿಲ್ಲ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನನ್ನು ಮರೆಯಲಾರದ ಶಾಂತಿ, ಕುಡಿತಕ್ಕೆ ಶರಣಾಗಿಬಿಟ್ಟಳು. ಮನೆ, ಮಕ್ಕಳು ಯಾವುದರ ಬಗ್ಗೆಯೂ ಗಮನವಿಲ್ಲದೇ, ಮೂರು ಹೊತ್ತು ಕುಡಿತ, ಕುಡಿತ. ಎಚ್ಚರವಾದಾಗ ಎದ್ದು, ಭಾವನ ಫೋಟೋ ಎದುರು ಕಣ್ಣೀರು. ಒಂದಲ್ಲ, ಎರಡಲ್ಲ ಸತತ ಏಳು ವರ್ಷ, ಶಾಂತಿ ಕುಡಿತಕ್ಕೆ ದಾಸಿಯಾಗಿಬಿಟ್ಟಿದ್ದಳು. ಆಗಲೇ ಎದೆಯೆತ್ತರಕ್ಕೆ ಬೆಳೆದಿದ್ದ ಮಕ್ಕಳು, ತಾಯಿ ಕುಡಿದು ಬಿದ್ದು ಆರೋಗ್ಯ ಹದಗೆಟ್ಟಾಗಲೆಲ್ಲ, ಆಸ್ಪತ್ರೆಗೆ ಸೇರಿಸಿ ಟ್ರೀಟ್ಮೆಂಟ್‌ ಕೊಡಿಸುತ್ತಿದ್ದರಂತೆ. ದಿನೇ ದಿನೇ ಶಾಂತಿಯ ಆರೋಗ್ಯ ಹದಗೆಡುತ್ತಿದ್ದಂತೆ, ಮಕ್ಕಳು ಕಂಗಾಲಾಗಿ ಬಿಟ್ಟರು. ಒಂದು ದಿನ ಶಾಂತಿಯ ಕೈಹಿಡಿದು, ಅಪ್ಪನೂ ಇಲ್ಲ, ನೀನೂ ಹೋಗಿಬಿಟ್ಟರೆ ನಮ್ಮ ಗತಿ ಏನೆಮ್ಮ ಎಂದು ಕಣ್ಣೀರಾದರಂತೆ. ಮಕ್ಕಳ ಕಣ್ಣೀರು ಶಾಂತಿಯ‌ ಕಣ್ತೆರೆಸಿತು. 

ಇದನ್ನೂ ಓದಿ: ಸಿನಿ ಜರ್ನಿ ಶುರು ಮಾಡಿದ ಡಿಸ್ಕೋ ಶಾಂತಿ ಪುತ್ರ!

ಅಮ್ಮನ ಬೆನ್ನಿಗೆ ನಿಂತ ಮಕ್ಕಳು
ಕುಡಿತ ಬಿಟ್ಟು, ಅವರ ಓದು, ಕೆಲಸದತ್ತ ಗಮನಹರಿಸಿದಳಂತೆ. ಕಳೆದ ಮೂರು ವರ್ಷದಿಂದ ಕುಡಿತ ಬಿಟ್ಟಿರುವ ಡಿಸ್ಕೋ ಶಾಂತಿ, ತನ್ನ ಜೀವವೇ ಆಗಿರುವ ಭಾವವನ್ನು ಮಾತ್ರ ಮರೆಯಲಾರದೇ ಕೊರಗುತ್ತಿದ್ದಾಳೆ. ಈ ಮಧ್ಯೆ ಹೈದರಾಬಾದ್ ಸಮೀಪ ಮೆಡ್ಚಲ್‌ನ ಸುತ್ತಮುತ್ತ ಅನೇಕ ಹಳ್ಳಿಗಳನ್ನು ದತ್ತು ಪಡೆದು, ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಶಾಂತಿ. ಮಕ್ಕಳಾದ ಮೇಘಶ್ಯಾಂ ಮತ್ತು ಶಶಾಂಕ್ ಅಮ್ಮನ ಬೆನ್ನಿಗೆ ನಿಂತಿದ್ದಾರೆ.

ಕ್ಯಾಬರೆ ಡಾನ್ಸರ್‌, ಅರೆಬೆತ್ತಲೆ ಕುಣಿಯುವ ಹೆಣ್ಣು ಎಂದೆಲ್ಲ ಮೂಗು ಮುರಿಯುತ್ತಿದ್ದ ಸಮಾಜ, ಕುಟುಂಬವನ್ನು ಎದುರು ಹಾಕಿಕೊಂಡು, ಡಿಸ್ಕೋ ಶಾಂತಿಯನ್ನು ಮದುವೆಯಾದ ಶ್ರೀಹರಿ, ಒಮ್ಮೆಯೂ ವಿವಾದಕ್ಕೆ ಸಿಕ್ಕವರಲ್ಲ. ಶಾಂತಿಗೂ ಗಂಡ, ಮಕ್ಕಳೇ ಪ್ರಪಂಚವಾಗಿತ್ತು. ಅಂಥ ಡಿಸ್ಕೋ ಶಾಂತಿ, ಗಂಡನ ಸಾವಿನ ಆಘಾತದಿಂದ ಹೊರಬರಲಾರದೇ ಪಟ್ಟಕಷ್ಟವನ್ನೆಲ್ಲ ಹೇಳುತ್ತಾ, ಮಾತಿಗೊಮ್ಮೆ, ಭಾವ ಭಾವ ಎಂದು ಗಂಡನ ನೆನಪಿಗೆ ಜಾರುತ್ತಾ, ಕಣ್ಣೀರಾಗುತ್ತಿದ್ದದ್ದು ನೋಡಿ, ಹೃದಯ ಭಾರವಾಯ್ತು.  ಕಣ್ಣೆದುರಲ್ಲೇ ಗಂಡ ಉಗ್ರರ ಗುಂಡಿಗೆ ಬಲಿಯಾಗಿದ್ದನ್ನು ಕಂಡು, ಮಗನಿಗಾಗಿ ಹೃದಯ ಗಟ್ಟಿ ಮಾಡಿಕೊಂಡ ಪಲ್ಲವಿ ನೆನಪಾದರು. ಇಬ್ಬರೂ ದುಃಖ ಗೆದ್ದವರೇ, ಮಕ್ಕಳಿಗಾಗಿ..!!

ಇದನ್ನೂ ಓದಿ: ಈ ಐಟಂ ಡ್ಯಾನ್ಸರ್‌ ಲವ್‌ ಲೆಟರ್‌ ಓದಲಿಕ್ಕೆಂದೇ ಅಸಿಸ್ಟೆಂಟ್‌ ನೇಮಿಸಿದ್ರಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?