ಥೇಟರ್ ಕಾಲ್ತುಳಿತ ಪ್ರಕರಣ ಸಂಬಂಧ ಶುಕ್ರವಾರ ಸೆರೆವಾಸ ಅನುಭವಿಸಿದ ನಟ ಅಲ್ಲು ಅರ್ಜುನ್ ಚಂಚಲಗುಡ ಜೈಲಲ್ಲಿ ಸಾಧಾರಣ ಕೈದಿಯಂತೆ ಇದ್ದು, ಅನ್ನ ಹಾಗೂ ಸಾಂಬಾರ್ (ಕರಿ) ಸೇವಿಸಿದರು ಎಂದು ಚಂಚಲ್‌ಗುಡ ಜೈಲಿನ ಹಿರಿಯ ಅಧಿಕಾರಿ ತಿಳಿಸಿದರು.
ಹೈದರಾಬಾದ್ (ಡಿ.15): ಥೇಟರ್ ಕಾಲ್ತುಳಿತ ಪ್ರಕರಣ ಸಂಬಂಧ ಶುಕ್ರವಾರ ಸೆರೆವಾಸ ಅನುಭವಿಸಿದ ನಟ ಅಲ್ಲು ಅರ್ಜುನ್ ಚಂಚಲಗುಡ ಜೈಲಲ್ಲಿ ಸಾಧಾರಣ ಕೈದಿಯಂತೆ ಇದ್ದು, ಅನ್ನ ಹಾಗೂ ಸಾಂಬಾರ್ (ಕರಿ) ಸೇವಿಸಿದರು ಎಂದು ಚಂಚಲ್‌ಗುಡ ಜೈಲಿನ ಹಿರಿಯ ಅಧಿಕಾರಿ ತಿಳಿಸಿದರು. ನಟನನ್ನು ಜೈಲಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗಿತ್ತು ಎಂಬ ಮಾಹಿತಿ ನೀಡಿರುವ ಅವರು, ‘ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಅನ್ಯರಿಂದ ಅಲ್ಲು ಅರ್ಜುನ್‌ರನ್ನು ಪ್ರತ್ಯೇಕವಾಗಿಡಲಾಗಿತ್ತು.
ಅಂತೆಯೇ, ನ್ಯಾಯಾಲಯದ ಆದೇಶಾನುಸಾರ ಅವರನ್ನು ವಿಶೇಷ ಕೈದಿಯಂತೆ ನೋಡಿಕೊಳ್ಳಲಾಯಿತು. ಅವರು ಖಿನ್ನತೆಗೊಳಗಾಗದೆ ಸಾಮಾನ್ಯವಾಗಿದ್ದರು. ಜೈಲಲ್ಲಿ ಸಂಜೆ 5:30ಕ್ಕೆ ಊಟ ಕೊಡುವ ಪದ್ಧತಿಯಿದ್ದರೂ, ಅವರು ತಡವಾಗಿ ಬಂದ ಕಾರಣ ನಂತರ ಊಟ ಬಡಿಸಲಾಯಿತು. ಅವರಿಗೆ ಮಂಚ, ಮೇಜು ಹಾಗೂ ಕುರ್ಚಿಯನ್ನೂ ಒದಗಿಸಲಾಯಿತು. ಇದನ್ನು ಹೊರತುಪಡಿಸಿ ಅವರು ಅಧಿಕಾರಿಗಳ ಬಳಿ ಬೇರಾವ ಸೌಲಭ್ಯಕ್ಕೂ ಬೇಡಿಕೆ ಇಡಲಿಲ್ಲ’ ಎಂದರು.
ಅಲ್ಲು ಅರ್ಜುನ್ ಅರೆಸ್ಟ್: ರೇವಂತ್ ರೆಡ್ಡಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು, ಸಿಎಂ ತಿರುಗೇಟು
ನಟ ಅಲ್ಲುಗೆ ಮಡದಿ, ಮಕ್ಕಳ ಕಣ್ಣೀರ ಸ್ವಾಗತ: ಬಿಡುಗಡೆಯ ಬಳಿಕ ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಆಗಮಿಸಿದ ಅಲ್ಲು ಅರ್ಜುನ್‌ರನ್ನು ಅವರ ಪತ್ನಿ ಸ್ನೇಹಾ ರೆಡ್ಡಿ ಕಣ್ತುಂಬಿಕೊಂಡು ಬಿಗಿದಪ್ಪಿ ಸ್ವಾಗತಿಸಿದರು. ಪುತ್ರ ಅಯಾನ್ ಕೂಡ ಅವರತ್ತ ಧಾವಿಸಿದ್ದು, ಅಲ್ಲು ತಮ್ಮ ಪುತ್ರಿ ಆರ್ಹಾಳನ್ನು ಎತ್ತಿಕೊಂಡು ಸಂತೈಸಿದರು. ನಂತರ ಮನೆಯೊಳಗೆ ಹೋಗುವ ಮುನ್ನ ತಾಯಿಯ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಜೈಲಿಂದ ಬಿಡುಗಡೆ ಹೊಂದಿದ ನಟ ಅಲ್ಲು ಅರ್ಜುನ್ ಅವರನ್ನು ಕನ್ನಡದ ನಟ ಉಪೇಂದ್ರ ಹಾಗೂ ಲಹರಿ ಮ್ಯೂಸಿಕ್‌ನ ಲಹರಿ ವೇಲು ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಭಾರತ- ಪಾಕ್ ಯುದ್ಧದಲ್ಲಿ ಹೋರಾಡಿದ್ದಾರಾ?: ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಅವರ ನಡೆಗಳನ್ನು ಪ್ರಶ್ನಿಸಿದ್ದ ತೆಲಂಗಾಣ ಸಿಎಂ ರೇವಂತ ರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದು, ‘ಅಲ್ಲು ಅರ್ಜುನ್ ಒಬ್ಬ ಸಿನಿಮಾ ನಟ. ಗಡಿಯಲ್ಲಿ ಯಾವುದಾದರೂ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿ ದೇಶವನ್ನು ಗೆಲ್ಲಿಸಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ ಆಜ್ ತಕ್ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ರೆಡ್ಡಿ ಅಲ್ಲು ಅರ್ಜುನ್ ಬಂಧನದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಅಲ್ಲು ಅರ್ಜುನ್ ಸಿನಿಮಾ ನಟ.
ಅವರು ಗಡಿಯಲ್ಲಿ ಯಾವುದಾದರೂ ಭಾರತ- ಪಾಕಿಸ್ತಾನ ಯುದ್ಧ ಮಾಡಿ ಗೆದ್ದಿದ್ದಾರಾ? ಅವರು ಸಿನಿಮಾ ಮಾಡಿ, ಹಣ ಕಟ್ಟಿಕೊಂಡು ಮನೆಗೆ ಹೋದರು’ ಎಂದರು. ಈ ಮೂಲಕ ಅಲ್ಲು ದುಡ್ಡು ಮಾಡಿಕೊಂಡರೆ ಜನರಿಗೇನು ಸಿಕ್ಕಿತು ಎಂಬರ್ಥದಲ್ಲಿ ಪ್ರಶ್ನಿಸಿದರು.ಅಲ್ಲದೇ, ‘ಸಂವಿಧಾನ ಎಲ್ಲರಿಗೂ ಒಂದೇ. ಒಬ್ಬ ಮಹಿಳೆ ಅವರ ಚಿತ್ರ ಪ್ರದರ್ಶನದ ವೇಳೆ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದರೆ ಕ್ರಮ ಕೈಗೊಳ್ಳದೇ ಸುಮ್ಮನೇ ಕೂರಬೇಕಿತ್ತೇ? ಜನಸಾಮಾನ್ಯ ಆದರೆ ಒಂದೇ ದಿನದಲ್ಲಿ ಬಂಧಿತನಾಗುತ್ತಿದ್ದ. ಸೆಲೆಬ್ರಿಟಿಗಳಿಗೆ ಬೇರೆ ಕಾನೂನಿಲ್ಲ. ಎಲ್ಲರ ವಿಷಯದಲ್ಲಿ ನಮ್ಮ ಸರ್ಕಾರ ನಿಷ್ಪಕ್ಷವಾಗಿ ನಡೆದುಕೊಳ್ಳುತ್ತಿದೆ’ ಎಂದರು.
150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ
ಅಲ್ಲು ಬಂಧನಕ್ಕೆ ರೇವಂತ ರೆಡ್ಡಿ ರಾಜಕೀಯ ಸೇಡು ಕಾರಣ?: ಖ್ಯಾತ ತೆಲುಗು ನಟ ಅಲ್ಲು ಅರ್ಜುನ್ ಅವರ ಬಂಧನದವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯವೂ ಜೋರಾಗಿದ್ದು, ಇದರ ಹಿಂದೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಕೈವಾಡ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಈ ಹಿಂದೆ ಚಿತ್ರವೊಂದರ ಸಕ್ಸಸ್ ಪ್ರೆಸ್ ಮೀಟ್‌ನಲ್ಲಿ ನಟ ಅಲ್ಲು ಮಾತನಾಡುತ್ತಿದ್ದ ವೇಳೆ, ‘ತೆಲಂಗಾಣದ ಮುಖ್ಯಮಂತ್ರಿ..’ ಎಂದಷ್ಟೇ ಹೇಳಿ ರೇವಂತ್ ರೆಡ್ಡಿ ಅವರ ಹೆಸರನ್ನೇ ಮರೆತಿದ್ದರು. ಇದರಿಂದ ರೇವಂತ್ ಅವರು ಅವಮಾನಿತರಾಗಿದ್ದರು ಎನ್ನಲಾಗಿದೆ.ಅಂತೆಯೇ, ಅಲ್ಲು ಮೇಲೆ ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪವೂ ಇದ್ದು, ಆ ಪ್ರಕರಣದಲ್ಲಿ ಅವರಿಗೆ ಇತ್ತೀಚೆಗೆ ಕ್ಲೀನ್‌ಚಿಟ್ ದೊರಕಿತ್ತು. ಇದು ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದಲೇ ಸಮಯ ಸಾಧಿಸಿ ಅವರನ್ನು ಬಂಧಿಸಲಾಗಿತ್ತು ಎಂದ ವಿಶ್ಲೇಷಣೆಗಳು ಸದ್ದು ಮಾಡುತ್ತಿವೆ.