ಕರೀನಾ ಕಪೂರ್, ಸೈಫ್ ಅಲಿ ಖಾನ್ಗೆ ಎರಡನೆಯ ಪತ್ನಿಯಾಗಿ ಹೋದರೂ ಮೊದಲ ಪತ್ನಿಯ ಮಕ್ಕಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವ ಕ್ಯೂಟ್ ಫೋಟೋ ವೈರಲ್ ಆಗಿದೆ. ಏನಿದೆ ಇದರಲ್ಲಿ?
ಬಾಲಿವುಡ್ ಬೇಬೋ ಕರೀನಾ ಕಪೂರ್ (Kareena Kapoor), ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ 11 ವರ್ಷಗಳಾಗುತ್ತಾ ಬಂದಿವೆ. 2012ರ ಅಕ್ಟೋಬರ್ 16ರಂದು ಇವರ ಮದುವೆ ನಡೆದಿದೆ. ಸೈಫ್ ಅಲಿ ಖಾನ್ ಅವರಿಗೆ ಕರೀನಾ ಕಪೂರ್ ಎರಡನೆಯ ಪತ್ನಿ. ಸೈಫ್ ಅವರ ಮೊದಲ ಪತ್ನಿ ಅಮೃತಾ ಸಿಂಗ್. ಇವರು ಸೈಫ್ ಅವರಿಗಿಂತಲೂ 12 ವರ್ಷ ದೊಡ್ಡವರು. ಅವರಿಬ್ಬರ ವಿಚ್ಛೇದನದ ಬಳಿಕ 10 ವರ್ಷ ಚಿಕ್ಕವಳಾಗಿರುವ ಕರೀನಾ ಕಪೂರ್ ಜೊತೆ ಸೈಫ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿದಾಗ ಭಾರಿ ಸುದ್ದಿಯಾಗಿತ್ತು. ಅದಾದ ಬಳಿಕ ಕರೀನಾ ಜೊತೆ ಸೈಫ್ ಮದುವೆಯಾದಾಗಂತೂ ಇದು ಕೋಲಾಹಲವನ್ನೇ ಸೃಷ್ಟಿಸಿತ್ತು. ಇದಕ್ಕೆ ಕಾರಣ, ಕೆಲವು ನಟಿಯರಂತೆ ಕಪೂರ್ ಕುಟುಂಬದ ನಟಿ ಕರೀನಾ ಕೂಡ ಮುಸ್ಲಿಂ ಧರ್ಮದ ಖಾನ್, ಅದೂ ಇಬ್ಬರು ಮಕ್ಕಳ ತಂದೆಯನ್ನು ಮದುವೆಯಾಗಿದ್ದಾದರೆ, ಇನ್ನೊಂದು ಕುತೂಹಲದ ವಿಷಯವೆಂದರೆ, ಸೈಫ್ ಅಲಿಯವರು ತಮ್ಮ ಮೊದಲ ಮದುವೆಯ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಸಂಬೋಧಿಸಿದ್ದರು. ದಾಂಪತ್ಯ ಜೀವನದ ನಂತರ ಬಹಳ ಟ್ರೋಲ್ ಆಗಿದ್ದರೂ ಸುಖಿ ಸಂಸಾರವನ್ನು ನಡೆಸುತ್ತಿದೆ ಈ ಜೋಡಿ. ಈಗ ಈ ಜೋಡಿ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳ ಪಾಲಕರು. ಇದಕ್ಕೂ ಮುನ್ನ ಸೈಫ್ ಅಲಿ ಅವರಿಗೆ ಅಮೃತಾ ಸಿಂಗ್ (Amrutha Singh) ಅವರಿಂದ ಇಬ್ಬರು ಮಕ್ಕಳಿದ್ದಾರೆ, ಮಗಳು ಸಾರಾ ಅಲಿ ಖಾನ್ ಮತ್ತು ಮಗ ಇಬ್ರಾಹಿಂ ಅಲಿ ಖಾನ್. ಆದರೆ ಎಲ್ಲರೂ ಚೆನ್ನಾಗಿಯೇ ಹೊಂದಿಕೊಂಡು ಬಾಳುತ್ತಿದ್ದಾರೆ.
ಈ ಮುದ್ದಾದ ಸಂಸಾರದ ಅಷ್ಟೇ ಮುದ್ದಾದ ಫೋಟೋ ಒಂದು ಇದೀಗ ವೈರಲ್ ಆಗಿದೆ. ಕರೀನಾ ಮತ್ತು ಸೈಫ್ ಜೋಡಿಗೆ ತೈಮೂರ್ ಹುಟ್ಟಿದ್ದು 2016ರ ಡಿಸೆಂಬರ್ 20ರಂದು. ಅಂದರೆ ಮೊದಲ ಮಗನಿಗೆ ಈಗ ಆರೂವರೆ ವರ್ಷವಾದರೆ, ಎರಡನೆಯ ಮಗ ಜಹಾಂಗೀರ್ ಅಲಿ ಖಾನ್ (Jeh Ali Khan) ಹುಟ್ಟಿದ್ದು, 2021ರ ಫೆಬ್ರುವರಿ 21ರಂದು. ಆದರೆ ಈತನಿಗೆ ಇನ್ನೂ ಎರಡು ವರ್ಷ. ಅಂದಹಾಗೆ, ಮೊದಲ ಪತ್ನಿಯಿಂದ ಸೈಫ್ ಅಲಿಗೆ ಹುಟ್ಟಿದ ಸಾರಾ ಅಲಿ ಖಾನ್ ಬಾಲಿವುಡ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಅವರಿಗೆ ಈಗ 27 ವರ್ಷ ವಯಸ್ಸಾದರೆ, ಮಗ ಇಬ್ರಾಹಿಂ ಅಲಿ ಖಾನ್ಗೆ 22 ವರ್ಷ. ಮೊದಲ ಪತ್ನಿಯ ಮಕ್ಕಳು ಕೂಡ ಕರೀನಾ ಕಪೂರ್ ಅವರ ಜೊತೆ ಚೆನ್ನಾಗಿಯೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂಕರವಾದಂತೆ ಕ್ಯೂಟ್ ಫೋಟೋ ಒಂದು ಇದೀಗ ವೈರಲ್ ಆಗಿದೆ. ಅದರಲ್ಲಿ ಕರೀನಾ ತಮ್ಮ ಎರಡನೆಯ ಕಂದನನ್ನು ಹಿಡಿದುಕೊಂಡಿದ್ದರೆ, ಪಕ್ಕದಲ್ಲಿ ಸೈಫ್ ಅಲಿ ಖಾನ್ ನಿಂತಿದ್ದಾರೆ. ಈ ಕ್ಯೂಟ್ ಮಗುವಿನ ಮುದ್ದಾದ ಮುಖವನ್ನು ನೋಡುತ್ತಾ ಸಾರಾ ನಿಂತಿದ್ದಾರೆ. ಈ ಕಂದ ಅಕ್ಕನಿಗೆ ಏನನ್ನೋ ಹೇಳುವಂತೆ ತೋರುತ್ತಿದೆ. ಈ ಮುದ್ದಾದ ಫೋಟೋಗೆ ಕಮೆಂಟ್ಗಳ ಸುರಿಮಳೆಯೇ ಆಗಿದೆ. ಎಷ್ಟು ಮುದ್ದಾದ ಫ್ಯಾಮಿಲಿ, ಹೀಗೆ ಸಂತೋಷದಿಂದ ಇರಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಸೈಫ್ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor
ಅಂದಹಾಗೆ, ಇಬ್ಬರು ಅಷ್ಟು ದೊಡ್ಡ ಮಕ್ಕಳು ಇದ್ದರೂ ತಾವು ಸೈಫ್ ಅಲಿಯನ್ನು ಮದುವೆಯಾಗಿದ್ದು ಏಕೆ ಎನ್ನುವ ವಿಷಯವನ್ನು ಕರೀನಾ ಈಚೆಗೆ ಪ್ರಸ್ತಾಪಿಸಿದ್ದರು. ಇ -ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಕರೀನಾ, 'ನಟಿಯರು ಮದುವೆಯಾದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆ ಆಗುತ್ತದೆ ಎನ್ನುವ ಕಾಲದಲ್ಲೇ ನಾನು ಸೈಫ್ ಅವರನ್ನು ಮದುವೆಯಾದೆ. ಮದುವೆಯಾದ (Marraige) ಮೇಲೆಯೂ ನನ್ನ ನಟನೆಗೆ ಅವರು ಅವಕಾಶ ನೀಡುತ್ತಾರೆ ಎನ್ನುವ ಭರವಸೆಯಿಂದಲೇ ಸೈಫ್ ಅವರನ್ನು ಆಯ್ಕೆ ಮಾಡಿಕೊಂಡೆ' ಎಂದಿದ್ದರು. 'ನಾನು ಮದುವೆಯಾದ ಸಮಯದಲ್ಲಿ ವೃತ್ತಿ ಬದುಕಿನ ಭದ್ರತೆಯ (Security) ದೃಷ್ಟಿಯಿಂದ ನಟಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು. ಆದರೆ ನನ್ನ ವಿಷಯದಲ್ಲಿ ಮದುವೆ ನನ್ನ ಸ್ವಂತ ಆಯ್ಕೆಯಾಗಿತ್ತು. ನಾನು ಮದುವೆಯಾಗಿ, ಮಕ್ಕಳಾದ ಮೇಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಿನಿಮಾ ಹಾಗೂ ಸಾಂಸಾರಿಕ ಬದುಕು ಎರಡನ್ನೂ ಸಮನಾಗಿ ಸ್ವೀಕರಿಸಿದ್ದೇನೆ' ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ನಾನು ಯಾವಾಗಲೂ ನನಗೆ ಬೇಕಾದ್ದನ್ನೇ ನಾನು ಆಯ್ಕೆ ಮಾಡಿಕೊಂಡವಳು. ಮದುವೆ ವಿಷಯದಲ್ಲಿಯೂ ಅಷ್ಟೇ. ಅದಕ್ಕಾಗಿ ಎಲ್ಲದರಲ್ಲಿಯೂ ನಾನು ಅದೃಷ್ಟವಂತೆ. ಮದುವೆ ಆಗಬೇಕು ಎನಿಸಿದಾಗ ಮದುವೆ ಆದೆ. ಆ ಸಂದರ್ಭದಲ್ಲಿ ಬೇರೆ ಯಾವ ನಟಿಯರೂ ಮದುವೆ ಆಗುತ್ತಿರಲಿಲ್ಲ. ಈಗ ತುಂಬ ನಟಿಯರು ಮದುವೆ ಆಗುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬ ಸಹಜ ಎಂಬಂತಾಗಿದೆ. ಮೊದಲು ಮಕ್ಕಳಾದರೆ ಸಮಸ್ಯೆ ಎನ್ನುತ್ತಿದ್ದರು. ಆದರೆ ಈಗ ಮಕ್ಕಳಿಗೆ ಜನ್ಮ (Birth) ನೀಡಿದ ಬಳಿಕವೂ ಸಿನಿಮಾದಲ್ಲಿ ಕೆಲಸ ಮಾಡಬಹುದು’ ಎಂದು ಕರೀನಾ ಕಪೂರ್ ಹೇಳಿದ್ದರು.
ಮಗಳೇ ಎಂದು ಬಾಯ್ತುಂಬ ಕರೆದವಳನ್ನೇ ಮದ್ವೆಯಾದ ಈ ಬಾಲಿವುಡ್ ಸ್ಟಾರ್!