
ನವದೆಹಲಿ (ಜ. 26): ಭಾರತದಲ್ಲಿ 5ಜಿ ಟೆಕ್ನಾಲಜಿಯ ಅನುಷ್ಠಾನವನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ ಅರ್ಜಿಯನ್ನು ತಿರಸ್ಕರಿಸಿ ಕೋರ್ಟ್ ದಂಡವನ್ನೂ ವಿಧಿಸಿತ್ತು. ಆದರೆ ಈಗ 5ಜಿ ತಂತ್ರಜ್ಞಾನದ ಬಿಡುಗಡೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ಹೈಕೋರ್ಟ್ 2 ಲಕ್ಷಕ್ಕೆ ಇಳಿಸಿದೆ. 2021 ಜೂನ್‌ನಲ್ಲಿ 5ಜಿ ನೆಟ್‌ವರ್ಕ್ ಟೆಕ್ನಾಲಜಿ ಅನುಷ್ಠಾನವನ್ನು ವಿರೋಧಿಸಿ ನಟಿ ಜೂಹಿ ಚಾವ್ಲಾ ಅರ್ಜಿ ಸಲ್ಲಿಸಿದ ನಂತರ ಸುದ್ದಿಯಾಗಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲೂ ಸಾಕಷ್ಟು ಚರ್ಚೆಯಾಗಿತ್ತು.
ದಂಡವನ್ನು ಈಗ 2 ಲಕ್ಷಕ್ಕೆ ಇಳಿಸಿರುವ ಹೈಕೋರ್ಟ್ ಆರೋಗ್ಯದ ಅಪಾಯದ ಕಾರಣ ನೀಡಿ ದೇಶದಲ್ಲಿ 5G ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದನ್ನು ಪ್ರಶ್ನಿಸಿ ಮೊಕದ್ದಮೆ ಹೂಡಿದ್ದ ನಟಿ ಜೂಹಿ ಚಾವ್ಲಾ ವಿರುದ್ಧ ನ್ಯಾಯಾಧೀಶರು ಮಾಡಿದ್ದ ಟೀಕೆಗಳನ್ನು ಕೂಡ ತೆಗೆದುಹಾಕಿದೆ. ಹಿಂದುಳಿದ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾದೊಂದಿಗೆ (DSLSA) ಕೆಲಸ ಮಾಡಲು ಸಿನಿ ತಾರೆ ಒಪ್ಪಿಕೊಂಡ ನಂತರ ವಿಭಾಗೀಯ ಪೀಠವು ಈ ಆದೇಶವನ್ನು ಅಂಗೀಕರಿಸಿದೆ. ಡಿಎಸ್‌ಎಲ್‌ಎ ಜತೆ ಭಾಗವಹಿಸುವ ಮೂಲಕ ಸಮಾಜ ಸೇವೆಯನ್ನು ಸಲ್ಲಿಸುವುದು ನನಗೆ ಗೌರವ ತರುವಂತದ್ದು ಎಂದು ಚಾವ್ಲಾ ಹೇಳಿದ್ದಾರೆ. ಬಾಲಿವುಡ್ ಖ್ಯಾತ ನಟಿ ಜುಹಿ ಚಾವ್ಲಾ ವರ್ಚುವಲ್ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: 5G ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇಕೆ ? ಜೂಹಿ ಹೇಳಿದ್ರು ಅಸಲಿ ಕಾರಣ
ಜೂನ್ 4, 2021 ರ ಆದೇಶವನ್ನು ರದ್ದು: ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರ ಪೀಠವು ಜೂಹಿ ಚಾವ್ಲಾ ಅವರ ಮೇಲಿನ ದಂಡವನ್ನು ₹ 20 ಲಕ್ಷದಿಂದ ₹ 2 ಲಕ್ಷಕ್ಕೆ ಇಳಿಸಿದ್ದು ಅವರು 5G ಸಮಸ್ಯೆಯನ್ನು "ಕ್ಷುಲ್ಲಕ ಮತ್ತು ಸಾಂದರ್ಭಿಕ ರೀತಿಯಲ್ಲಿ" ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ವಿಭಾಗೀಯ ಪೀಠವು ಚಾವ್ಲಾ ಅವರ ಮೇಲ್ಮನವಿಯನ್ನು ಅಂಗೀಕರಿಸಿ ಜೂಹಿ ಚಾವ್ಲಾ ಮತ್ತು ಇತರ ಇಬ್ಬರ ಮೊಕದ್ದಮೆಯನ್ನು "ದೋಷಪೂರಿತ", "ಕಾನೂನಿನ ಪ್ರಕ್ರಿಯೆಯ ದುರುಪಯೋಗ" ಹಾಗೂ "ಪ್ರಚಾರಕ್ಕಾಗಿ" ಎಂದು ಗಮನಿಸಿ ವಜಾಗೊಳಿಸಿದ್ದ ನ್ಯಾಯಾಧೀಶರ ಜೂನ್ 4, 2021 ರ ಆದೇಶವನ್ನು ರದ್ದುಗೊಳಿಸಿದೆ.
ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕನ್ವಾಲ್ ಜೀತ್ ಅರೋರಾ ಅವರು ಈ ಹಿಂದೆ ನ್ಯಾಯಾಲಯಕ್ಕೆ ಚಾವ್ಲಾ ಅವರು ಸ್ವಯಂಪ್ರೇರಣೆಯಿಂದ ಪ್ರಾಧಿಕಾರದ ಬ್ರಾಂಡ್ ಅಂಬಾಸಿಡರ್ ಆಗುತ್ತಾರೆ ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.
ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಕುರಿತು ಕಳವಳ: 5ಜಿ ತಂತ್ರಜ್ಞಾನ ಭೂಮಿ ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮನುಷ್ಯರ ಜೀವಕೋಶ, ಅಂಗಾಗಗಳನ್ನು 5ಜಿ ರೇಡಿಯೇಶನ್ ಹಾನಿಮಾಡಲಿದೆ ಅನ್ನೋದು ಕ್ಲಿನಿಕಲ್ ಟ್ರಯಲ್‌ನಲ್ಲಿ ಪತ್ತೆಯಾಗಿದೆ. ರೆಡಿಯೇಶನ್ ಪ್ರಮಾಣ ಹೆಚ್ಚಾಗಿರುವ ಕಾರಣ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿದೆ. ಈ ಕುರಿತು ಅಧ್ಯಯನದ ಅವಶ್ಯಕತೆ ಇದೆ. ಹೀಗಾಗಿ ಮಾರಕವಾಗಿರುವ 5ಜಿ ಅನುಷ್ಠಾನಕ್ಕೂ ಮೊದಲು ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜೂಹಿ ಜಾವ್ಲಾ ಆಗ್ರಹಿಸಿದ್ದರು.
ಇದನ್ನೂ ಓದಿ: 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!
ಇದಾದ ಬಳಿಕ ದೆಹಲಿ ಹೈಕೋರ್ಟ್ ತಮ್ಮ ಮನವಿಯನ್ನು ತಿರಸ್ಕರಿಸಿದ ಬಗ್ಗೆ ನಟಿ, ಪರಿಸರವಾದಿ ಜೂಹಿ ಚಾವ್ಲಾ ಅವರು ಪ್ರತಿಕ್ರಿಯಿಸಿದ್ದರು. ಕಳೆದ 10 ವರ್ಷಗಳ ಅವಧಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಾನು ನಡೆಸಿದ ಪ್ರಯತ್ನವನ್ನು ದಾಖಲಿಸುವ ವೀಡಿಯೊವನ್ನು ಹೊರಬಿಟ್ಟಿದ್ದರು. ನಾನು ಸಲ್ಲಿಸಿದ ಅರ್ಜಿ ಬಗ್ಗೆ ಹೆಮ್ಮೆಯಾಗಿದೆ. ನನ್ನ ದೇಶದ ಸಾಮಾನ್ಯ ಜನರಿಗಾಗಿ ನಾನು ಧ್ವನಿ ಎತ್ತಿದ್ದೇನೆ. ಸಮಯೋಚಿತವಾಗಿ ನಾನು ಪ್ರಶ್ನೆ ಮಾಡಿದೆ ಎಂದಿದ್ದರು. ಈ ಎಲ್ಲಾ ಸಮಯದಲ್ಲಿ ನಾನು ಮೌನವಾಗಿದ್ದೆ. ಏಕೆಂದರೆ ಮೌನವು ತನ್ನದೇ ನಿರ್ಲಕ್ಷ್ಯದ ಶಬ್ದವನ್ನು ಹೊಂದಿದೆ ಎಂದು ನಾನು ನಂಬಿದ್ದೇನೆ. ಆದರೆ ಈಗ ನಾನು ಇಎಮ್‌ಎಫ್ ವಿಕಿರಣ, ಅದರ ಆರೋಗ್ಯ ಪರಿಣಾಮಗಳ ಕುರಿತು ನನ್ನ 11 ವರ್ಷಗಳ ಪ್ರಯಾಣದಲ್ಲಿ ಸಿಕ್ಕಿದ ಕೆಲವು ಪ್ರಮುಖ ಮತ್ತು ಆಘಾತಕಾರಿ ವಿವರಗಳನ್ನು ತರಲು ಬಯಸುತ್ತೇನೆ ಈ ವಿಷಯದಲ್ಲಿ ಕೆಲವು ಅಧಿಕಾರಿಗಳ ಅಜ್ಞಾನವಿದೆ ಎಂದು ಚಾವ್ಲಾ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.