
ಪ್ರಿಯಾ ಕೆರ್ವಾಶೆ
* ನೀವು ಏರಿರುವ ಎತ್ತರದ ಬಗ್ಗೆ ನಿಮಗೆ ತೃಪ್ತಿ ಇದೆಯಾ?
ನಮ್ಮ ಹೋರಾಟದಿಂದ ಕನ್ನಡ ಯಾವ ಮಟ್ಟಕ್ಕೆ ಬೆಳೆಯಬೇಕಾಗಿತ್ತೋ ಆ ಮಟ್ಟಕ್ಕೆ ಬೆಳೆದಿಲ್ಲ ಎಂಬ ನೋವಿನ್ನೂ ಇದೆ. ನಮ್ಮ ಸರ್ಕಾರಗಳು ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವ ಕೆಲಸಗಳನ್ನು ಗಮನಿಸಿ ಇಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡಬೇಕು. ನೂರಾರು ಆದೇಶಗಳು ಈ ಬಗ್ಗೆ ಬಂದಿದ್ದರೂ ಇನ್ನೂ ಕೆಲವು ವಲಯಗಳಲ್ಲಿ ಕನ್ನಡ ಕಡ್ಡಾಯ ಆಗಿಲ್ಲ. ಈಗ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ 33 ಶೇಕಡ ಮಾತ್ರ. ಅವತ್ತು ರಾಜ್‌ಕುಮಾರ್ ಅಭಿಮಾನಿಗಳ ಸಂಘಟನೆ ಇಲ್ಲದೆ ಹೋಗಿದ್ದರೆ ಇಷ್ಟೆಲ್ಲ ಕನ್ನಡದ ಕೆಲಸ ಆಗುತ್ತಿರಲಿಲ್ಲ. ಇಡೀ ಕನ್ನಡಿಗರ ಕಣ್ಣನ್ನು ತೆರೆಸಿದ್ದು ಗೋಕಾಕ್ ಚಳವಳಿ. ಅವತ್ತಿನ ಸರಕಾರ ಬಿದ್ದುಹೋಗಲು ಕಾರಣವೇ ಗೋಕಾಕ್ ಚಳವಳಿ.
* ರಾಜ್‌ಕುಮಾರ್ ಅವರನ್ನು ಗೋಕಾಕ್ ಚಳವಳಿಗೆ ಕರೆತಂದದ್ದೇ ನೀವು ಅಲ್ಲವೇ?
ಎಲ್ಲ ಸಾಹಿತಿಗಳೂ ಗೋಕಾಕ್ ಚಳವಳಿಯಲ್ಲಿ ತೊಡಗಿಕೊಂಡಿದ್ದರು. ಕಬ್ಬನ್ ಪಾರ್ಕ್‌ನಲ್ಲಿ ಲಂಕೇಶ್, ಪಾಪು, ಚಂಪಾ, ಚಿದಾನಂದ ಮೂರ್ತಿ ಎಲ್ಲರೂ ಪ್ರತಿಭಟಿಸುತ್ತಿದ್ದರು. ಸರ್ಕಾರ ಇವರನ್ನು ಕಡೆಗಣಿಸಿತು. ಸಾಹಿತಿಗಳೆಲ್ಲ ಸೇರಿ, ಈ ಚಳವಳಿಗೆ ರಾಜ್‌ಕುಮಾರ್ ಸೇರಬೇಕು ಎಂದು ಪತ್ರಿಕಾ ಹೇಳಿಕೆ ಕೊಟ್ಟರು. ಆಗ ರಾಜ್ ಚೆನ್ನೈ ಶೂಟಿಂಗಿನಲ್ಲಿದ್ದರು. ನಾವು ಚೆನ್ನೈಗೆ ಹೋಗುವಾಗ, ಬೆಂಗಳೂರು ಸ್ಟೇಷನ್ ಹೊರಗೆ ಪೋಸ್ಟರ್ ಅಂಟಿಸುತ್ತಿದ್ದರು. ಅದನ್ನು ರಾಜ್‌ಕುಮಾರ್ ಅವರಿಗೆ ಕೊಟ್ಟೆ. ಗೋಕಾಕ್ ಚಳವಳಿ ಬಗ್ಗೆ, ಅವರು ಹೋರಾಟಕ್ಕೆ ಇಳಿಯಬೇಕು ಎಂಬ ಸಾಹಿತಿಗಳ ಬೇಡಿಕೆ ಬಗ್ಗೆ ವಿವರಿಸಿದೆ. ರಾಜ್ ಕನ್ನಡಕ್ಕಾಗಿ ಹೋರಾಡೋಕೆ ನಾನು ಸಿದ್ಧ. ಮೂವತ್ತು ವರ್ಷಗಳಿಂದ ಕನ್ನಡಿಗರು ನನಗೆ ಇಷ್ಟೆಲ್ಲ ಸ್ಥಾನಮಾನ ಕೊಟ್ಟಿದ್ದಾರೆ. ನಾನು ಇಷ್ಟಾದರೂ ಮಾಡಬೇಡವೇ ಎಂದರು. ಅವರು ಕರೀಬೇಕಾಗಿಲ್ಲ. ಕನ್ನಡಕ್ಕೆ ಅನ್ಯಾಯ ಆಗ್ತಾ ಇದ್ದರೆ ನಾನು ಮನೆಯಲ್ಲಿ ಕುಳಿತಿರುವುದಕ್ಕೆ ಆಗುತ್ತಾ? ನಾನು ನಾಯಕನಾಗಿ ಅಲ್ಲ, ಎಲ್ಲರ ಜೊತೆ ಒಬ್ಬನಾಗಿ ಬರ್ತೀನಿ ಅಂದರು. ಅಣ್ಣಾವ್ರು ಮೂವತ್ತು ದಿನ ತಮ್ಮ ಶೂಟಿಂಗ್ ಅನ್ನೇ ಕ್ಯಾನ್ಸಲ್ ಮಾಡಿ ಹೋರಾಟಕ್ಕೆ ಸೇರಿದರು. ಇಡೀ ರಾಜ್ಯವನ್ನು ಬಿರುಗಾಳಿಯಂತೆ ಸುತ್ತಿದರು. ಮೊದಲ ಸಭೆ ಬೆಳಗಾವಿಯಲ್ಲೇ ನಡೆಯಲಿ ಅಂತ ರಾಜ್ ಸೂಚಿಸಿದರು. ಅಲ್ಲಿ ಸೇರಿದ ಜನಸ್ತೋಮ ನೋಡಿ ಸರಕಾರ ಬೆಚ್ಚಿಬಿತ್ತು.
ಚಿತ್ರರಂಗವೇ ತಲೆತಗ್ಗಿಸುವಂತೆ ಆಗಿದೆ: ಹೇಗೆ ಬದುಕಬೇಕೆಂದು ಡಾ.ರಾಜ್ ನೋಡಿ ಕಲಿಯಿರಿ: ಸಾರಾ
* ಈಗ ಯಾವ ಕಲಾವಿದರೂ ಭಾಷೆಗಾಗಿ ಬೀದಿಗಿಳಿಯಲು, ಮಾತನಾಡಲು ಮುಂದೆ ಬರುತ್ತಿಲ್ಲ?
ಅದೆಲ್ಲ ರಾಜ್‌ಕುಮಾರ್ ಅವರ ಕಾಲಕ್ಕೇ ಆಗಿಹೋಯಿತು. ಕೆಲವರು ತೊಡಗಿಸಿಕೊಳ್ಳುತ್ತಾರೆ. ಆದರೆ ಯಾವುದಾದರೊಂದು ಪಕ್ಷಕ್ಕೆ ಸೀಮಿತವಾಗಿರ್ತಾರೆ. ರಾಜ್‌ಕುಮಾರ್ ಅವರು ಹಾಗಲ್ಲ, ಅವರು ಎಲ್ಲರಿಗೆ ಸೇರಿದ್ದವರು.
* ಅಂಥವರಿಗೆ ಅಭಿಮಾನಿ ಸಂಘ ಕಟ್ಟಬೇಕು ಅಂತ ನಿಮಗೆ ಅನಿಸಿದ್ದು ಹೇಗೆ?
ರಾಜ್‌ಕುಮಾರ್ ಅವರನ್ನು ನೋಡಲು ಬಂದವರನ್ನು ಶೂಟಿಂಗ್ ನಡುವಿನ ಕೆಲವು ನಿಮಿಷಗಳ ಬಿಡುವಿನಲ್ಲಿ ಭೇಟಿ ಮಾಡಿಸುತ್ತಿದ್ದೆ. ಹೀಗಾಗಿ ರಾಜಣ್ಣ ಅಭಿಮಾನಿಗಳಿಗೆ ನನ್ನನ್ನು ಕಂಡರೆ ಪ್ರೀತಿ. ಮೊದಲು ರಾಜ್‌ಕುಮಾರ್ ಅಭಿಮಾನಿಗಳ ಸಂಘ ಮೈಸೂರಿನಲ್ಲಿತ್ತು. ನಾನು ಆ ಸಂಸ್ಥೆಗೆ ಸೇರಿದೆ. ರಾಜ್ ಪಿಕ್ಚರ್ ರಿಲೀಸ್ ಆದಾಗ ಹಾಕುತ್ತಿದ್ದ ಅವರ ಪೋಸ್ಟರ್‌ಗಳನ್ನು ನೂರೆಂಟು ಅಡಿ ಎತ್ತರಕ್ಕೆ ಬೆಳೆಸಿದೆ. ನಾನು ಅಧ್ಯಕ್ಷನಾದ ಬಳಿಕ ಅದರ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ತರಲು ಸಾಧ್ಯವಾಯಿತು. ಒಂದು ಹೋರಾಟಕ್ಕೆ ಕರೆಕೊಟ್ಟರೆ ಇಪ್ಪತ್ತು ಮೂವತ್ತು ಸಾವಿರ ಜನ ಸೇರುತ್ತಿದ್ದರು. ಸಂಸ್ಥೆ ಬೆಂಗಳೂರಿಗೆ ಸೀಮಿತವಾಗಬಾರದು ಅಂತ ಇಡೀ ರಾಜ್ಯದಲ್ಲಿ 9700 ಸಂಘಟನೆಗಳನ್ನು ರೂಪಿಸಿದೆ.
* ನಿಮ್ಮ ಸಂಘದಿಂದಾಗಿ ಏನೇನು ಮಾಡಲು ಸಾಧ್ಯವಾಯಿತು?
ಬೆಂಗಳೂರಿನ ವೀಲ್ ಆಂಡ್ ಆಕ್ಸೆಲ್ ಕಾರ್ಖಾನೆಯಲ್ಲಿ ಪರಭಾಷೆಯ ಕಾರ್ಮಿಕರೇ ತುಂಬಿದ್ದರು. ಬೆರಳೆಣಿಕೆಯ ಕನ್ನಡಿಗರು ಇದ್ದರು. ಇದನ್ನು ವಿರೋಧಿಸಿ ಹೋರಾಟ ಸಂಘಟಿಸಿದೆವು. ಅದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಕರ್ನಾಟಕಕ್ಕೆ ಬಂದಿದ್ದರು. ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಮನವಿ ಕೊಟ್ಟೆವು. ಕಾರ್ಖಾನೆಗೆ ಭೇಟಿ ನೀಡಿ ವರದಿ ಕೊಡಿ ಎಂದು ಇಂದಿರಾ ಅವರು ಪಕ್ಕದಲ್ಲಿದ್ದ ಜಾಫರ್ ಶರೀಫರಿಗೆ ಸೂಚಿಸಿದರು. ಅಲ್ಲಿಗೆ ಹೋದಾಗ ಪರಿಸ್ಥಿತಿ ನೋಡಿ ಬೇಸರ ಆಯ್ತು. ಹೋರಾಟ ಸಂಘಟಿಸಿದೆ. ಮೂರು ಲಕ್ಷ ಜನ ಸೇರಿದರು. ರಾಜ್ಯಪಾಲರ ಮನೆಯಿಂದ ಯಲಹಂಕದವರೆಗೆ ರ್‍ಯಾಲಿ ಹೋದೆವು. ದೇಶವ್ಯಾಪಿ ಸುದ್ದಿಯಾಯಿತು. ಮರುದಿನ ಕಮಿಷನರ್ ನನ್ನನ್ನು ಕರೆಸಿ, ಅಷ್ಟು ಜನ ಸೇರಿದ್ದರೂ ಒಂದೇ ಒಂದು ಕಲ್ಲು ಬೀಳಲಿಲ್ಲ, ನಿಮ್ಮ ನಾಯಕತ್ವ ಅದ್ಭುತ ಎಂದು ಶ್ಲಾಘಿಸಿದರು.
* ನೀವೇಕೆ ರಾಜಕೀಯಕ್ಕೆ ಇಳಿಯಲಿಲ್ಲ?
ರಾಜ್‌ಕುಮಾರ್ ಅವರು ಯಾವ ದಾರಿಯಲ್ಲಿ ನಡೆದರೋ ಅದೇ ನಮಗೆ ಮಾದರಿ. ನಾನೇನಾದರೂ ರಾಜಕೀಯಕ್ಕೆ ಇಳಿದಿದ್ದರೆ ನಾಲ್ಕಾರು ಬಾರಿ ಮಂತ್ರಿಯಾಗಿರುತ್ತಿದ್ದೆ.
ಫಿಲ್ಮ್ ಚೇಂಬರ್‌ನ ಮತ ಎಣಿಕೆ ಪಾರದರ್ಶಕವಾಗಿಲ್ಲ: ಸಾ.ರಾ.ಗೋವಿಂದು
* ಆಮೇಲೆ ನೀವು ಎರಡು ಬಾರಿ ಚೇಂಬರ್ ಅಧ್ಯಕ್ಷರಾದಿರಿ. ಆಗ ನೀವು ಮಾಡಿದ ಮಹತ್ವದ ಕೆಲಸಗಳು?
ಕ್ಷೇಮನಿಧಿ ಮಾಡಿಸಿದೆವು. ಸದಸ್ಯ ನಿಧಿ ಹೆಚ್ಚು ಮಾಡಿ, ಆರೋಗ್ಯ ಸಹಾಯವನ್ನು ರೂಪಿಸಿದೆವು. ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಅದನ್ನು ಕೊಡುತ್ತೇವೆ. ಕೊರೊನಾ ಸಮಯದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಸಹಾಯ ಮಾಡಿದ್ದೇವೆ. 70 ಚಿತ್ರಗಳಿಗೆ ಇದ್ದ ಸಬ್ಸಿಡಿಯನ್ನು 200 ಚಿತ್ರಗಳಿಗೆ ಸಿಗುವಂತೆ ಮಾಡಿದೆವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.