ಅಚ್ಚಗನ್ನಡದ ನಟಿಯಾಗಿ ಗುರುತಿಸಿಕೊಂಡ ಪ್ರತಿಭಾವಂತೆಯರಲ್ಲಿ ತಾರಾ ಅನುರಾಧ ಪ್ರಮುಖರು. ಆದರೆ ದಶಕದಿಂದ ಅವರ ವ್ಯಾಪ್ತಿ ನಟಿಯಾಗಿ ಮಾತ್ರವಲ್ಲ ಸಮಾಜಸೇವಕಿಯಾಗಿ, ರಾಜಕಾರಣಿಯಾಗಿಯೂ ಹಬ್ಬಿಕೊಂಡಿದೆ. ಹಾಗಾಗಿ ಪ್ರಸ್ತುತ ದೇಶ ಲಾಕ್ಡೌನ್‌ಗೊಳಗಾಗಿರುವ ಸಂದರ್ಭದಲ್ಲಿಅವರು ಏನು ಮಾಡುತ್ತಿದ್ದಾರೆ? ಅವರ ಚಟುವಟಿಕೆಗಳಲ್ಲಿ ಉಂಟಾಗಿರುವ ಬದಲಾವಣೆಗಳೇನು ಎನ್ನುವ ಪ್ರಶ್ನೆಗಳನ್ನು ಅವರಲ್ಲೇ ಕೇಳಲಾಯಿತು. ಸುವರ್ಣ ನ್ಯೂಸ್.ಕಾಮ್‌ಗೆ ಅವರು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
- ಶಶಿಕರ ಪಾತೂರು
ಲಾಕ್ಡೌನ್ ಬಳಿಕದ ದಿನಗಳು ಹೇಗಿವೆ?
ವೈಯಕ್ತಿಕವಾಗಿ ಹೇಳಬೇಕಾದರೆ ನಾನು ಲಾಕ್ಡೌನ್ ಬಳಿಕ ಕೂಡ ಕಾರ್ಯನಿಮಿತ್ತ ಮನೆಯಿಂದ ಹೊರಗಡೆ ಕಾಲಿಡುವಂಥ ಹಲವು ಸಂದರ್ಭಗಳಿದ್ದವು. ಸಮಾಜಮುಖಿ ಕೆಲಸಗಳಿಗಾಗಿ ಓಡಾಡಿದ್ದೇನೆ. ಇವತ್ತು ಕೂಡ ಕನ್ನಡ ಚಿತ್ರರಂಗದ ಒಂದು ತಂಡದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಯೋಜನೆ ಇತ್ತು. ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದೇನೆ. ಆದರೆ ಮನೆಯಲ್ಲಿ ಇರುವ ದಿನಗಳೇ ಹೆಚ್ಚು. ಹೊರಗೆ ಹೋಗಬೇಕಾದರೆ ಖಂಡಿತವಾಗಿ ನಾನು ಕೂಡ ಗ್ಲೌಸು, ಮಾಸ್ಕ್ ಹಾಕಿಕೊಂಡೇ ಹೋಗುತ್ತೇನೆ. ಒಳಗೆ ಬರುವ ಮುನ್ನ ಕೈಕಾಲು ಮುಖ ತೊಳೆದುಕೊಂಡು ಸ್ಯಾನಿಟೈಸರ್ ಬಳಸಿಯೇ ಒಳಗೆ ಬರುತ್ತೇನೆ. ಅದಕ್ಕೆ ಕಾರಣ, ನನ್ನ ಮನೆಯಲ್ಲಿ ಕೂಡ ಮೂರು ತಲೆಮಾರಿನ ವ್ಯಕ್ತಿಗಳಿದ್ದೇವೆ. ನನ್ನ ಬಗ್ಗೆ ಕಾಳಜಿ ವಹಿಸಿದಷ್ಟೇ ಎಚ್ಚರವನ್ನು ನನ್ನ ಕುಟುಂಬದ ಬಗ್ಗೆಯೂ ವಹಿಸಬೇಕಾಗಿರುವುದು ಕರ್ತವ್ಯ ಅಲ್ಲವೇ?
ಸೀತಾಪರಣಕ್ಕೆ ಮಾಡಿದ್ದಕ್ಕೆ ಭಾವುಕರಾದ 'ರಾವಣ'
ನಿಮ್ಮ ಸಹಾಯ ಹಸ್ತದ ಬಗ್ಗೆ ಹೇಳಿದರೆ ಉಳಿದವರಿಗೆ ಸ್ಫೂರ್ತಿಯಾಗಬಹುದಲ್ಲವೇ?
ವೈಯಕ್ತಿಕವಾಗಿ ಮಾಡಿರುವುದನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ನಾವು ದಾನ ಮಾಡಲು ಇನ್ನೊಬ್ಬರ ಸ್ಫೂರ್ತಿಯ ಅಗತ್ಯವಿಲ್ಲ ಎಂದು ನನ್ನ ಅನಿಸಿಕೆ. ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ ಕಂಡಾಗ ಸಹಾಯಹಸ್ತ ಚಾಚುವಷ್ಟು ಶಕ್ತಿ ನಮ್ಮಲ್ಲಿದ್ದರೆ ಆ ಮನೋಭಾವ ನಮ್ಮೊಳಗೆ ಖಂಡಿತವಾಗಿ ಮೂಡಲೇಬೇಕು. ಅದು ಮನುಷ್ಯತ್ವ. ಹಾಗಾಗಿಯೇ ಅದನ್ನು ಪ್ರಚಾರ ಮಾಡುವುದು ಸರಿಯಲ್ಲ. ನಾನು ಮಾಡಿರುವ ಸಹಾಯದ ಬಗ್ಗೆ ಯಾವುದೇ ಸಾಮಾಜಿಕ ತಾಣಗಳಲ್ಲಿ ಕೂಡ ಹಂಚಿಕೊಂಡಿಲ್ಲ ಯಾರಿಗೂ ಮೊಬೈಲಲ್ಲಿ ಫೊಟೊ ತೆಗೆಯಲು ಅವಕಾಶ ನೀಡಿರಲಿಲ್ಲ. ನಾನು ಕೂಡ ತೆಗೆದುಕೊಂಡಿಲ್ಲ. ನನ್ನ ಜತೆ ಫೊಟೋ ಬೇಕು ಎಂದವರಿಗೆ ಕಿಟ್ ಕೊಟ್ಟ ಮೇಲೆ ಪ್ರತ್ಯೇಕವಾಗಿ ಫೊಟೊ ತೆಗೆಸಿ ಕೊಟ್ಟಿದ್ದೇನೆ. ಇನ್ನು ನಮ್ಮ ವಾರ್ಡ್‌ನ ಬಿಬಿಎಂಪಿ ಸದಸ್ಯರು, ಶಾಸಕರು ಸಾರ್ವಜನಿಕರಿಗೆ ರೇಶನ್ ವಿತರಣೆ ಮಾಡುವಾಗ ನಾನು ಅತಿಥಿಯಾಗಿ ಹೋಗಿದ್ದೇನೆ. ಅಲ್ಲಿ ನಾನು ಪಾಲ್ಗೊಂಡಿದ್ದೇನೆಯೇ ಹೊರತು ಅಲ್ಲಿ ನನ್ನ ಸಹಾಯವೇನೂ ಇರಲಿಲ್ಲ. ಇನ್ನು ಸ್ಫೂರ್ತಿಯ ವಿಚಾರಕ್ಕೆ ಬಂದರೆ ಕೊರೋನ ವೈರಸ್ ವಿರುದ್ಧ ಹೋರಾಡುವವರ ಪರ ಒಂದು ಹಾಡು ಮಾಡಲು ಸಂಗೀತ ಗುರುಕಿರಣ್ ಅವರಿಗೆ ಸ್ಫೂರ್ತಿ ನೀಡಿದ್ದೇನೆ. ಸ್ಫೂರ್ತಿ ಎನ್ನುವುದಕ್ಕಿಂತ ಸಲಹೆ ನೀಡಿದ್ದೇನೆ ಎನ್ನಬಹುದು.
ಡಬಲ್ ಶೇಡ್‌ನಲ್ಲಿ ಗುರುಕಿರಣ್ ಕೊರೋನಾ ಹಾಡು
ಹಾಡನ್ನು ಸೇವಾನಿರತರಿಗೆ ಸಮರ್ಪಿಸುವ ಸಲಹೆ ನೀಡಲು ಕಾರಣವೇನು?
ತೆಲುಗು ಭಾಷೆಯಲ್ಲಿ ಸಂಗೀತ ನಿರ್ದಶಕ ಕೋಟಿ ಸಂಗೀತದಲ್ಲಿ ಕೊರೋನ ಬಗ್ಗೆ ಒಂದು ಹಾಡು ಬಂದಿತ್ತು. ಆ ಗೀತೆಗೆ ಚಿರಂಜೀವಿ, ನಾಗಾರ್ಜುನ ಮೊದಲಾದ ತಾರೆಯರು ಮನೆಯಿಂದಲೇ ನಟಿಸಿ ಸ್ಫೂರ್ತಿ ತುಂಬಿದ್ದರು. ನಾನು ಈ ಬಗ್ಗೆ ಗುರುಕಿರಣ್ ಅವರಿಗೆ ಫೋನ್ ಮಾಡಿ ಹೇಳಿದೆ. ಆದರೆ ಅವರು ಅದಾಗಲೇ ಅಂಥದೊಂದು ಹಾಡು ಮಾಡಿ ಮನೆಯಲ್ಲೇ ಚಿತ್ರೀಕರಿಸಿದ್ದರು. ಮನೆಯಲ್ಲಿ ಫ್ಯಾಮಿಲಿ ಜತೆಗಿದ್ದುಕೊಂಡೇ ಹೋರಾಡುವುದು ಅವರ ಕಾನ್ಸೆಪ್ಟ್ ಆಗಿತ್ತು. ನಾನು ಈ ವಿಚಾರ ಹೇಳಿ ಒತ್ತಾಯ ಮಾಡಿದೆ. "ನಮ್ಮ ಹೀರೋಗಳಲ್ಲಿ ಕೂಡ ವಿಷಯ ಹೇಳಿ ನಿಮಗೆ ವಿಡಿಯೋ ಕಳಿಸಲು ಹೇಳುತ್ತೇನೆ. ಟ್ರಾಫಿಕ್, ಲಾ ಆಂಡ್ ಆರ್ಡರ್, ಪೌರಕಾರ್ಮಿಕರನ್ನು ಬಳಸಿಕೊಂಡರೆ ಚೆನ್ನಾಗಿರುತ್ತದೆ" ಎಂದಿದ್ದೆ. ನಾನು ಸಲಹೆ ನೀಡಿರುವುದು ಬಿಟ್ಟರೆ ಇದಕ್ಕಾಗಿ ಒಂದು ಪೈಸಾ ನೀಡಿಲ್ಲ. ಗುರುಕಿರಣ್ ಅವರ ಫ್ಯಾಮಿಲಿ ಸಾಂಗ್ ಬಂದೊಡನೆ ನಾನು, ಗುರುವಿನಿಂದ ಅದರ ಆಡಿಯೋ ಪಡೆದು, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಹಾಡನ್ನು ಕಳಿಸಿಕೊಟ್ಟಿದ್ದೆ. ಜನ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ನೃತ್ಯವಾಡಲು ಕಮೀಷನರ್ ಅವರಿಂದ ಒಪ್ಪಿಗೆಯನ್ನು ಕೂಡ ಪಡೆಯಲಾಗಿತ್ತು. ಗುರುಕಿರಣ್ ಅವರ ಎರಡನೇ ವರ್ಶನ್‌ನಲ್ಲಿ ಪೊಲೀಸ್ ಇಲಾಖೆ, ರಾಜಕೀಯರಂಗದಲ್ಲಿ ಸಕ್ರಿಯರಾಗಿರುವವರು ಎಲ್ಲರನ್ನು ಬಳಸಿಕೊಳ್ಳುವ ಯೋಜನೆ ಇದೆ. ಅವೆಲ್ಲವನ್ನು ಸಂಕಲನಕಾರರ ಸಹಾಯದ ಮೂಲಕ ಹೊಸ ರೀತಿಯಲ್ಲಿ ಬೆರೆಸಿ ಹೊರತರಲಿದ್ದಾರೆ. ಅದರಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಮೊದಲಾದವರು ಕೂಡ ಕಾಣಿಸಿಕೊಂಡಿದ್ದಾರಂತೆ. ಹಾಗಾಗಿ ಎರಡನೇ ವರ್ಶನ್ ಬಗ್ಗೆ ನನಗಂತೂ ತುಂಬ ಕುತೂಹಲವಿದೆ.
ಫ್ಯಾಂಟಮ್ ಸುದೀಪ್‌ಗೇಕೆ ಇಷ್ಟವಾಯಿತು?
ಮನೆಯೊಳಗಿರುವ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ಇಷ್ಟುದಿನ ಹೊರಗಿನಿಂದ ಒಳಗೆ ಬಂದರೆ ಆರಾಮ, ವಿರಾಮಕ್ಕಾಗಿ ಮಾತ್ರ ಮನೆ ಒಳಗೆ ಬರುತ್ತಿದ್ದೆ. ಆದರೆ ಈಗ ಮನೆಯ ಆರಾಮವನ್ನು ಕೂಡ ನೋಡಿಕೊಳ್ಳಯವ ಮಟ್ಟಕ್ಕೆ ಬದಲಾಗಿದ್ದೇನೆ. ಈಗ ಮನೆಯ ಮೂಲೆ ಮೂಲೆ ಕೂಡ ಗೊತ್ತಾಗುತ್ತಿದ್ದೆ. ನಾನು ಎಂಎಲ್‌ಸಿಯಾಗುವ ಸಂದರ್ಭದಲ್ಲಿ ಸ್ವಲ್ಪ ಹೋಮ್ ವರ್ಕ್ ಮಾಡಿಕೊಳ್ಳುತ್ತಿದ್ದೆ. ಆಮೇಲೆ ಬರವಣಿಗೆಯ ಟಚ್ಚೇ ಹೋಗಿತ್ತು. ಈಗ ಮತ್ತೆ ಬರವಣಿಗೆಯ ಕಡೆಗೆ ಗಮನ ಹರಿಸುತ್ತಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲೇ ಸಿನಿಮಾಗೆ ಬಂದಿದ್ದ ಕಾರಣ ಅಡುಗೆ ಮಾಡಿದ್ದೇ ಕಡಿಮೆ. ಯಾವಾಗಲಾದರೊಮ್ಮೆ ಮಾತ್ರ ಅಡುಗೆ ಮಾಡುತ್ತಿದ್ದೆ ಅಷ್ಟೇ. ಈಗ ಯೂ ಟ್ಯೂಬ್ ನೋಡಿ ಮಾಡುತ್ತಿದ್ದೇನೆ. ಮನೆಯವರು ನನ್ನ ಅಡುಗೆ ತಿನ್ನುತ್ತಿದ್ದಾರೆ. ತಿಂದು ಆರಾಮಾಗಿದ್ದಾರೆ ಎಂದು ಖುಷಿಯಾಗಿದೆ.
"