`ಫ್ಯಾಂಟಮ್' ಸುದೀಪ್‌ಗೆ ಇಷ್ಟವಾಗಿದ್ದೇಕೆ ಗೊತ್ತಾ? ಅನೂಪ್ ಸಂದರ್ಶನ

By Suvarna NewsFirst Published Apr 11, 2020, 5:53 PM IST
Highlights

`ಒಂದು ವೇಳೆ ನಾನು ಸಿನಿಮಾ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದೇನೋ! ಆದರೆ ನನ್ನ ಚಿತ್ರದ ಡ್ಯುರೇಶನ್ ಮಾತ್ರ  ಲಿಮಿಟ್ ದಾಟುವುದಿಲ್ಲ' ಎಂದು ನಕ್ಕರು ಅನೂಪ್ ಭಂಡಾರಿ. ಕೊರೋನ ವೈರಸ್‌ ಕಾಟದಿಂದ ಲಾಕ್‌ಡೌನ್ ಆಗಿ ಸಿಕ್ಕ ಬಿಡುವಿನಲ್ಲಿ `ಫ್ಯಾಂಟಮ್' ಚಿತ್ರ ಕೂಡ ತಡವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಹಾಗೆ ಪ್ರತಿಕ್ರಿಯಿಸಿದರು. ಚಿತ್ರದ ನಿರ್ದೇಶಕರಾಗಿರುವ ಅನೂಪ್ ಭಂಡಾರಿ ತಮ್ಮ ಸಿನಿಮಾ ಮತ್ತು ಅದರ ನಾಯಕ ಸುದೀಪ್ ಬಗ್ಗೆ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಶೇಷ ಮಾಹಿತಿ ಇಲ್ಲಿದೆ.

 

`ಒಂದು ವೇಳೆ ನಾನು ಸಿನಿಮಾ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದೇನೋ! ಆದರೆ ನನ್ನ ಚಿತ್ರದ ಡ್ಯುರೇಶನ್ ಮಾತ್ರ  ಲಿಮಿಟ್ ದಾಟುವುದಿಲ್ಲ' ಎಂದು ನಕ್ಕರು ನಿರ್ದೇಶಕ ಅನೂಪ್ ಭಂಡಾರಿ. ಕೊರೋನ ವೈರಸ್‌ ಕಾಟದಿಂದ ಲಾಕ್ಡೌನ್ ಆಗಿ ಸಿಕ್ಕ ಬಿಡುವಿನಲ್ಲಿ `ಫ್ಯಾಂಟಮ್' ಚಿತ್ರ ಕೂಡ ತಡವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಹಾಗೆ ಪ್ರತಿಕ್ರಿಯಿಸಿದರು. `ಫ್ಯಾಂಟಮ್' ಸಿನಿಮಾ ಕೂಡ ಎರಡು ಗಂಟೆ ಹದಿನೈದೇ ನಿಮಿಷಗಳಲ್ಲಿ ಮುಗಿಸುವ ಲೆಕ್ಕಾಚಾರ ಇದೆ. ಅಷ್ಟು ಪರ್ಫೆಕ್ಟ್ ಆಗಿ ಪೂರ್ವ ತಯಾರಿಯಾಗಿದೆ. ಆದರೆ ಫ್ಯಾಂಟಮ್ ಎನ್ನುವ ಹೆಸರು ಸೇರಿದಂತೆ ಯಾವುದನ್ನೂ ನಾನು ಹೊರಗೆ ಬಿಟ್ಟಿರಲಿಲ್ಲ. ಹೀಗಿದ್ದರೂ ಹೊರಗಡೆ ಸುದ್ದಿಯಾದ ಬಳಿಕ ಚಿತ್ರದ ಹೆಸರನ್ನು ಒಪ್ಪಿಕೊಂಡೆವು. ಶೀರ್ಷಿಕೆಯ ಲೋಗೋ ಕೂಡ ರಿವೀಲ್ ಮಾಡಿಲ್ಲ. ಅದು ಮಾಡಬೇಕು ಎನ್ನುವ ತಯಾರಿ ಇದೆ. ಆದರೆ ಕೊರೋನ ಸಮಸ್ಯೆಯಂತೂ ಮುಗಿಯಬೇಕು ಎನ್ನುವ ಅನೂಪ್ ಭಂಡಾರಿ ತಮ್ಮ ಸಿನಿಮಾ ಮತ್ತು ಅದರ ನಾಯಕ ಸುದೀಪ್ ಬಗ್ಗೆ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಶೇಷ ಮಾಹಿತಿ ಇಲ್ಲಿದೆ.

- ಶಶಿಕರ ಪಾತೂರು

ಕಾರ್ಟೂನ್ ನಲ್ಲಿ ಬರುವ ಫ್ಯಾಂಟಮ್‌ಗೂ ಈ ಚಿತ್ರಕ್ಕೂ ಸಂಬಂಧ ಇದೆಯೇ?
ಫ್ಯಾಂಟಮ್‌ ಎಂದಕೂಡಲೇ ನಮಗೆ ಸಾಮಾನ್ಯವಾಗಿ ಕಾರ್ಟೂನ್ ನೆನಪಾಗುವುದು ಸಹಜ. ಆ ಕಾರ್ಟೂನ್‌ ಗೂ ನಮ್ಮ ಸಿನಿಮಾಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೂ ಫ್ಯಾಂಟಮ್ ಎನ್ನುವ ಹೆಸರು ಚಿತ್ರಕ್ಕೆ ತುಂಬ ಹೊಂದುತ್ತದೆ. ಅದು ಯಾಕೆ ಎನ್ನುವುದು ಸಿನಿಮಾ ನೋಡುವಾಗ ನಿಮಗೆ ಅರ್ಥವಾಗುತ್ತದೆ. ಸುದೀಪ್ ಸರ್‌ ಅವರ ಪಾತ್ರಕ್ಕೂ ಇದು ಮ್ಯಾಚ್ ಆಗುವಂಥ ಶೀರ್ಷಿಕೆ. ಸಬ್ಜೆಕ್ಟ್ ಗೆ ಆಪ್ಟ್ ಆಗಿರುತ್ತದೆ. ಫ್ಯಾಂಟಮ್ ಎಂದರೆ ಭ್ರಮೆ, ಇಲ್ಯೂಶನ್, ಭೂತ ಎನ್ನುವ ಅರ್ಥವೂ ಇದೆ. ಯಾವ ಅರ್ಥ ಎನ್ನುವುದು ಚಿತ್ರ ನೋಡಿದಾಗ ಗೊತ್ತಾಗುತ್ತದೆ.

ಬಡವರ ನೆನೆದು ಕಣ್ಣೀರಾದ ರವಿಶಂಕರ್ ಗೌಡ

ಫ್ಯಾಂಟಮ್ ಚಿತ್ರದ ಚಿತ್ರೀಕರಣ ಮತ್ತು ತೆರೆಗೆ ತರಲು ಯೋಜನೆಗಳ ಬಗ್ಗೆ ಹೇಳಿ
ಈ ವರ್ಷ ಬೇಗದಲ್ಲೇ ಬಿಡುಗಡೆ ಮಾಡುವ ಯೋಜನೆ ಹಾಕಿದ್ದೆವು. ಆದರೆ ಕೊರೋನದಿಂದಾಗಿ ತಡವಾಗುತ್ತಿದೆ. ಮಾರ್ಚ್ ನಲ್ಲಿ ಶೂಟಿಂಗ್ ಆರಂಭಿಸಿದ ನಮಗೆ ಕಂಟಿನ್ಯೂ ಚಿತ್ರೀಕರಣದ ಯೋಜನೆ ಇತ್ತು. ಆದರೆ ಹದಿನೈದು ದಿನಗಳ ಚಿತ್ರೀಕರಣವಷ್ಟೇ ನಡೆದಿದೆ.  ಸಂಕಲನವೆಲ್ಲ ಮಾಡಿ ಮುಗಿಸಲಾಗಿದೆ. ಡಬ್ಬಿಂಗ್ ಮಾಡಬೇಕಿತ್ತು. ರಿಸ್ಕ್ ಬೇಡ ಎಂದು ಸುಮ್ಮನಾದೆವು. ಸದ್ಯಕ್ಕೆ ನಾನು ಹಿನ್ನೆಲೆ ಸಂಗೀತದ ಕೆಲಸ ಮಾಡುತ್ತಿದ್ದೇನೆ. ಮೊದಲ ಹತ್ತು ದಿನ ಬೆಂಗಳೂರಲ್ಲೇ ಹೆಬ್ಬಾಳದಲ್ಲೇ ಚಿತ್ರೀಕರಿಸಲಾಗಿತ್ತು. ಚಿತ್ರದ ಎಂಬತ್ತರಷ್ಟು ಭಾಗ ಸೆಟ್ಟಲ್ಲೇ ಶೂಟಿಂಗ್ ನಡೆಯುತ್ತದೆ. ಸುಮಾರು 12ರಷ್ಟು ಸೆಟ್ ಹಾಕುವ ಯೋಜನೆ ಇದೆ. ಹೈದರಾಬಾದ್ ನಲ್ಲಿ ಎರಡು ಫ್ಲೋರ್ ನಲ್ಲಿ ಎರಡು ಸೆಟ್ ರೆಡಿಯಾಗಿದೆ. ಅದರಲ್ಲಿ ಒಂದರ ಚಿತ್ರೀಕರಣ ಮುಗಿಸಿ ಎರಡನೆಯದರಲ್ಲಿ ಶೂಟ್ ಮಾಡಬೇಕಾದರೆ ಮೊದಲ ಫ್ಲೋರಲ್ಲಿ ಮತ್ತೊಂದು ಸೆಟ್ ಕೆಲಸ ನಡೆಯುತ್ತದೆ. ಜತೆಗೆ ಅಲ್ಲಿನ ಅನ್ನಪೂರ್ಣ ಸ್ಟುಡಿಯೋ, ಫಿಲ್ಮ್ ಸಿಟಿಗಳಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ.

ಉಳಿದಂತೆ ಚಿತ್ರದ ಪ್ರಮುಖ ಆಕರ್ಷಣೆಗಳೇನು?
ಸದ್ಯಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಇವಿಷ್ಟರ ಹೊಣೆ ನಾನು ಹೊತ್ತಿದ್ದೇನೆ ಎಂದು  ಮಾತ್ರ  ಹೇಳುತ್ತೇನೆ. ಚಿತ್ರದಲ್ಲಿ ಸಾಹಸಕ್ಕೆ ಪ್ರಧಾನ್ಯತೆ ಇದೆ.  ಹಾಗಂತ ಹೊಡೆದಾಟಕ್ಕೆ ಸೀಮಿತವಾದ ಚಿತ್ರವಲ್ಲ. ಚಿತ್ರದಲ್ಲಿ ಹಾಡುಗಳೂ ಇವೆ. ಆದರೆ ಇದು ಪ್ರೇಮವನ್ನಾಗಲೀ, ಸಾಹಸವನ್ನಾಗಲೀ ಹೀಗೆ ಯಾವುದಾದರೂ ಒಂದನ್ನು ಮಾತ್ರ ಹೈಲೈಟ್ ಮಾಡುವಂಥ ಚಿತ್ರವಲ್ಲ. ಬೇರೆ ಬೇರೆ ಜಾನರ್‌ಗಳ ಮಿಕ್ಸ್ಚರ್ ಆಗಿರುತ್ತದೆ. ಸೆಟ್ ನೋಡಿದವರು ಅದನ್ನು ಒಂದು ಅರಮನೆ ನೋಡಿಕೊಂಡಂತೆ ಆಸ್ವಾದಿಸಿಕೊಂಡು ಹೋಗಿ ಮೆಚ್ಚಿ ಮಾತನಾಡಿದ್ದಾರೆ. ಹೊಸ ರೀತಿಯ ಸೆಟ್, ಕ್ವಾಲಿಟಿ ಅದರ ಕಲರ್ ಟೋನ್ ನಿಂದ ಹಿಡಿದು ಪ್ರತಿಯೊಂದು ವಿಚಾರಕ್ಕೂ ನಾವು ವರ್ಷಗಳ ಕಾಲ ರಿಸರ್ಚ್ ಮಾಡಿದ್ದೇವೆ. ಚಿತ್ರದ ಪ್ರಮುಖ ವಿಶೇಷತೆಗಳ ಬಗ್ಗೆ ಸುದೀಪ್ ಸರ್ ಸ್ವತಃ ಹೇಳಿದರೆ ಚೆನ್ನಾಗಿರುತ್ತದೆ. ನಿರ್ದೇಶಕ ನಾನಾದರೂ ಸಹ ಹೆಚ್ಚಿನ ಹೊಸ ವಿಚಾರಗಳು ಅವರ ಮೂಲಕವೇ ಹೊರಗೆ ಬರಬೇಕು. ಆಗ ಮಾತ್ರ ಅಭಿಮಾನಿಗಳಿಂದ ಅದಕ್ಕೆ ಹೆಚ್ಚು ಪ್ರಾಶಸ್ತ್ಯ ದೊರಕುತ್ತದೆ ಎಂದು ನನ್ನ ಅನಿಸಿಕೆ.  

ಲವ್ ಮಾಕ್ಟೇಲ್ ಹಿಂದಿನ ಸೋಲಿನ ಕಥೆ

ಸುದೀಪ್ ಅವರಿಗೆ `ಫ್ಯಾಂಟಮ್' ಕತೆ ಇಷ್ಟವಾಗಿದ್ದೇಕೆ?
ಅವರಿಗೆ ಸಂಪೂರ್ಣವಾಗಿ ಕತೆಯನ್ನು ನರೇಟ್ ಮಾಡಿದೆ. ಚಿತ್ರ ಕಮರ್ಷಿಯಲ್ ಬೇಸ್ ನಲ್ಲಿದ್ದುಕೊಂಡು ಅಭಿನಯಕ್ಕೆ ಹೆಚ್ಚು ಅವಕಾಶ ಇದೆ ಎನ್ನುವುದೇ ಅವರಿಗೆ ಇಂಪ್ರೆಸ್ ಆಗಲು ಕಾರಣವಾದ ಅಂಶ. ಯಾಕೆಂದರೆ ಅವರಿಗೆ ಕಮರ್ಷಿಯಲ್ ಇಮೇಜ್‌ಗಷ್ಟೇ ಪ್ರಾಧಾನ್ಯತೆ ಇರುವ ಆಫರ್‌ಗಳು ಬರುತ್ತಿರುತ್ತವೆ. ಆದರೆ ನನಗೆ ಅವರೊಳಗಿನ ನಟ ಆರಂಭದಿಂದಲೂ ಇಷ್ಟ. ಹಾಗಾಗಿ ಆ ನಟನಿಗೆ ಅಭಿವ್ಯಕ್ತಿಗೊಳಿಸಲು ಉತ್ತಮ ಅವಕಾಶವಿರುವ ಕತೆ ಮಾಡಿದ್ದೇನೆ. ಅದೇ ವೇಳೆ ಒಬ್ಬ ಸುಪರ್ ಸ್ಟಾರ್ ಎನ್ನುವ ನಿಟ್ಟಿನಲ್ಲಿ ಆ ಇಮೇಜ್ ಗೆ ಬೇಕಾದ ದೃಶ್ಯಗಳನ್ನು ಹೊಂದಿದಂಥ ಕತೆ ಮಾಡಿದ್ದೇನೆ. ಹಾಗಾಗಿ ನನ್ನಂತೆ ಅವರ ಅಭಿನಯ ಇಷ್ಟಪಡುವವರಿಗೂ ಜತೆಗೆ ಅವರ ಸ್ಟಾರ್ ಇಮೇಜ್ ಇಷ್ಟಪಡುವವರಿಗೂ ಇದು ಖುಷಿ ನೀಡಬಹುದಾದ ಚಿತ್ರವಾಗಲಿದೆ. ಓವರ್‌ ದ ಟಾಪ್ ಅಲ್ಲವಾದರೂ ಒಬ್ಬ ಸ್ಟಾರನ್ನು ಇನ್ನಷ್ಟು ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಅದನ್ನು ಅರ್ಥ ಮಾಡಿಕೊಂಡೇ ಅವರು `ಫ್ಯಾಂಟಮ್'ನ ಮೆಚ್ಚಿರಬಹುದು ಎಂದು ನನ್ನ ಅನಿಸಿಕೆ.

ರಂಗಭೂಮಿಗೆ ರಂಗಭೂಮಿಯೇ ಸಾಕ್ಷಿ

click me!