ದರ್ಶನ್‌, ದುನಿಯಾ ವಿಜಯ್‌ ಜತೆಗೆ ಪಾತ್ರ ಮಾಡುವ ಆಸೆ ಇದೆ: ಸತೀಶ್ ನೀನಾಸಂ

By Kannadaprabha NewsFirst Published Oct 27, 2023, 8:29 PM IST
Highlights

ಲೂಸಿಯಾ... ನನ್ನ ಹೀರೋ ಮಾಡಿದ ಚಿತ್ರ. ನೂರು ದಿನ ಓಡಿದ ಚಿತ್ರ, ಹಾಡುಗಳು ಹಿಟ್‌, ಥಿಯೇಟರ್‌ ಗಳಿಕೆ ಸೂಪರ್‌, ಎರಡು ಶೇಡ್‌ ಪಾತ್ರ ಕೊಟ್ಟ ಚಿತ್ರ, ನನ್ನೊಳಗಿನ ನಟನನ್ನು ಪರಿಚಯಿಸಿದ ಸಿನಿಮಾ. 

ಆರ್‌. ಕೇಶವಮೂರ್ತಿ

* ಹೀರೋ ಆಗುವುದಕ್ಕಿಂತ ಹಿಂದಿನ ಸತೀಶ್‌ ಹೇಗಿದ್ದರು?
ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ, ಅಣ್ಣಬಾಂಡ್‌, ಡ್ರಾಮಾ ಚಿತ್ರಗಳ ನಟ ಎನಿಸಿಕೊಂಡಿದ್ದೆ. ಈ ಪೈಕಿ ನನಗೆ ಡ್ರಾಮಾ ನನಗೆ ತುಂಬಾ ವಿಶೇಷ.

* ಡ್ರಾಮಾ ಸಿನಿಮಾ ಯಾಕೆ ವಿಶೇಷ?
ನಾನು ಹೀರೋ ಆಗಲು ಮೂಲ ಕಾರಣ ಆಗಿದ್ದೇ ಈ ಡ್ರಾಮಾ. ನನ್ನ ಬದುಕು ಬದಲಾಯಿಸಿತು. ಏಕಕಾಲದಲ್ಲಿ ಪ್ರೇಕ್ಷಕರಿಗೆ ಹಾಗೂ ನಿರ್ದೇಶಕರಿಗೆ ತಲುಪಿದೆ. ನಾನು, ಯಶ್‌, ರಾಧಿಕಾ ಪಂಡಿತ್‌, ಸಿಂಧು ಲೋಕನಾಥ್‌ ಸೂಪರ್‌ ಕಾಂಬಿನೇಶನ್‌. ರೈಟಿಂಗ್‌ ಸೂಕ್ಷ್ಮತೆ ಇದ್ದ ಸಿನಿಮಾ ಅದು. ಮೊನ್ನೆಯಷ್ಟೆ ಈ ಸಿನಿಮಾ ನೋಡಿದೆ. ನಿರ್ದೇಶಕ ಯೋಗರಾಜ್‌ ಭಟ್‌ ಅವರ ಮೇಲಿನ ಗೌರವ ಮತ್ತು ಪ್ರೀತಿ ಮತ್ತಷ್ಟು ಹೆಚ್ಚಾಯಿತು.

ನಾನು ಬೇರೆ ಭಾಷೆಯ ಪ್ರೇಕ್ಷಕರ ಮುಂದೆ ಹೋಗಲು ಸೂಕ್ತ ಚಿತ್ರವಿದು: ಸತೀಶ್‌ ನೀನಾಸಂ

* ಆದರೆ, ನಿಮ್ಮನ್ನು ಹೀರೋ ಮಾಡಿದ್ದು ಲೂಸಿಯಾ ಸಿನಿಮಾ ಅಲ್ವಾ?
ಲೂಸಿಯಾ ಚಿತ್ರದಲ್ಲೂ ನಾನು ಹೀರೋ ಆಗಕ್ಕೆ ಕಾರಣ ಇದೇ ಡ್ರಾಮಾ ಸಿನಿಮಾ. ಹೀಗಾಗಿ ನಾಯಕ ನಟನಿಗೆ ಸಿಗಬೇಕಾದ ಜನಪ್ರಿಯತೆ ಲೂಸಿಯಾ ತಂದುಕೊಟ್ಟರೆ, ಡ್ರಾಮಾ ನಾನು ಹೀರೋ ಆಗುವ ಮಾನದಂಡವಾಯಿತು.

* ನಿಮ್ಮನ್ನು ಹೀರೋ ಮಾಡಿದ ಮೊದಲ ಚಿತ್ರದ ಬಗ್ಗೆ ಹೇಳುವುದಾದರೆ?
ಲೂಸಿಯಾ... ನನ್ನ ಹೀರೋ ಮಾಡಿದ ಚಿತ್ರ. ನೂರು ದಿನ ಓಡಿದ ಚಿತ್ರ, ಹಾಡುಗಳು ಹಿಟ್‌, ಥಿಯೇಟರ್‌ ಗಳಿಕೆ ಸೂಪರ್‌, ಎರಡು ಶೇಡ್‌ ಪಾತ್ರ ಕೊಟ್ಟ ಚಿತ್ರ, ನನ್ನೊಳಗಿನ ನಟನನ್ನು ಪರಿಚಯಿಸಿದ ಸಿನಿಮಾ. ಪರಭಾಷೆಗಳಿಗೆ ರೀಮೇಕ್‌ ಆಯಿತು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಬಂದವು. ಒಬ್ಬ ಕಮರ್ಷಿಯಲ್‌ ನಟನೆಗೆ ಏನೆಲ್ಲ ಸಿಗಬೇಕೋ ಅದು ಮೊದಲ ಚಿತ್ರದಲ್ಲೇ ಸಿಕ್ಕಿದ್ದು ಲೂಸಿಯಾ ಚಿತ್ರದ ಹೆಗ್ಗಳಿಕೆ.

* ನೀವು ಹೀರೋ ಆಗಬಹುದು ಅಂತ ನಿಮಗೇ ಅನಿಸಿದ್ದು ಯಾವಾಗ?
ಲೈಫು ಇಷ್ಟೇನೆ ಚಿತ್ರದ ಸಮಯದಲ್ಲಿ. ಒಮ್ಮೆ ಯೋಗರಾಜ್‌ ಭಟ್‌ ಅವರ ಅಫೀಸ್‌ನಿಂದ ಬರುತ್ತಿದ್ದಾಗ ಯಾರೋ ಒಬ್ಬರು ನನ್ನ ಕರೆದು ಹೀರೋ ರೀತಿ ಇದ್ದಿಯಾ ಅಂತ ಹೇಳಿ ನನ್ನ ನಟನೆ ಮೆಚ್ಚಿ ಮಾತನಾಡಿದರು. ಹೀಗೆ ಬೇರೆಯವರು ಗುರುತಿಸಿದ ಮೇಲೆ ನನ್ನೊಳಗಿನ ಹೀರೋ ನನಗೂ ಕಾಣಿಸಿಕೊಂಡ.

* ಲೂಸಿಯಾ ನಿಮಗೆ ಸಿಗದೆ ಹೋಗಿದ್ದರೆ?
ನನ್ನ ಕೆರಿಯರ್‌ನಲ್ಲಿ ಅಂಥ ದೊಡ್ಡ ವ್ಯತ್ಯಾಸ ಏನೂ ಆಗುತ್ತಿರಲ್ಲ. ಸೋಲೋ ಹೀರೋ ಆಗುವುದಕ್ಕೆ ಇನ್ನೊಂದಿಷ್ಟು ಸಮಯ ತೆಗೆದುಕೊಳ್ಳುತ್ತಿದ್ದೆ ಅಷ್ಟೆ. ಆದರೆ, ಡ್ರಾಮಾ ಸಿನಿಮಾ ಸಿಗದೆ ಹೋಗಿದ್ದರೆ ಮತ್ತೆ ಹೋರಾಟ, ಅಲೆದಾಟ ಮಾಡಬೇಕಿತ್ತು.

* ಈ ಹತ್ತು ವರ್ಷಗಳಲ್ಲಿ ನೀವು ಮಾಡಿದ ಚಿತ್ರಗಳ ಬಗ್ಗೆ ಹೇಳುವುದಾದರೆ?
ಬಿಡುಗಡೆ ಆಗಬೇಕಿರುವ ಮೂರು ಚಿತ್ರಗಳು ಸೇರಿದರೆ ಇಲ್ಲಿವರೆಗೂ 15 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಅಂಜದ ಗಂಡು, ದ್ಯಾವ್ರೆ, ಲವ್‌ ಇನ್‌ ಮಂಡ್ಯ, ಬ್ಯೂಟಿಫುಲ್‌ ಮನಸ್ಸುಗಳು, ಕ್ವಾಟ್ಲೆ ಸತೀಶ, ಅಯೋಗ್ಯ, ಚಂಬಲ್‌, ಡಿಯರ್‌ ವಿಕ್ರಮ್‌, ಬ್ರಹ್ಮಚಾರಿ ಮುಂತಾದ ಚಿತ್ರಗಳು ನನ್ನ ಸಿನಿ ಬದುಕಿನ ದೊಡ್ಡ ತಿರುವುಗಳ‍ು. ಟೈಗರ್‌ ಗಲ್ಲಿ ಸಿನಿಮಾ ಬರೀ ಹಿಂದಿಯಲ್ಲಿ 10 ಮಿಲಿಯನ್‌ ವೀಕ್ಷಣೆ ಆಗಿದೆ. ಹೀಗಾಗಿ ನನಗೆ ಸೋಲು- ಗೆಲುವಿಗಿಂತ ಎಲ್ಲವೂ ನನ್ನದೇ ಚಿತ್ರಗಳು.

* ತುಂಬಾ ಸಲ ನೀವೇ ನೋಡಿರುವ ನಿಮ್ಮ ಚಿತ್ರ?
ಕ್ವಾಟ್ಲೆ ಸತೀಶ. ನಾನು ಮಾತ್ರವಲ್ಲ, ಜನ ಕೂಡ ಹೆಚ್ಚು ನೋಡಿದ ಸಿನಿಮಾ. ಈ ಚಿತ್ರ ಈಗ ಬಂದಿದ್ದರೆ ಖಂಡಿತ ಥಿಯೇಟರ್‌ನಲ್ಲೂ ಹಿಟ್‌ ಆಗುತ್ತಿತ್ತು.

* ನಿಮ್ಮ ಚಿತ್ರಗಳಿಗೆ ನೀವೇ ನಿರ್ಮಾಪಕರಾಗಿದ್ದು ಯಾಕೆ?
ನನ್ನ ನಾನು ಪ್ರೂವ್‌ ಮಾಡಿಕೊಳ್ಳಲು. ಹಾಗೆ ಮಾಡಿದ್ದೇ ರಾಕೆಟ್‌ ಸಿನಿಮಾ. ಕೆಲವು ಬಾರಿ ಇದು ಅಗತ್ಯ ಕೂಡ. ಮುಂದೆಯೂ ನಾನು ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ.

* ನೀವು ಯಾವ ಹೀರೋ ಜತೆಗೆ ಸ್ಕ್ರೀನ್‌ ಹಂಚಿಕೊಳ್ಳುವ ಆಸೆ ಇದೆ?
ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಯಶ್‌, ಧ್ರುವ ಸರ್ಜಾ, ಶ್ರೀಮುರಳಿ, ಗಣೇಶ್‌ ಹೀಗೆ ಬಹುತೇಕ ಎಲ್ಲರ ಜತೆಗೂ ನಾನು ನಟಿಸಿದ್ದೇನೆ. ಆದರೆ, ನಟರಾದ ದರ್ಶನ್‌, ಧನಂಜಯ್‌, ದುನಿಯಾ ವಿಜಯ್‌ ಅವರ ಜತೆಗೆ ಮಾಡಿಲ್ಲ. ಅವಕಾಶ ಸಿಕ್ಕರೆ ಈ ನಟರ ಜತೆಗೆ ಪಾತ್ರ ಮಾಡುವ ಆಸೆ ಇದೆ.

* ಇನ್ನೂ ಈಡೇರದ ನಿಮ್ಮ ಆಸೆ ಯಾವುದು?
ಖಳನಾಯಕನ ಪಾತ್ರ ಮಾಡಬೇಕು ಎಂಬುದು. ಯಾವ ಹೀರೋ ಜತೆಗಾದರೂ ಸರಿ ಅಥವಾ ನನಗೇ ನಾನೇ ವಿಲನ್‌ ಆಗವುದು. ಅಂದರೆ ನೆಗೆಟಿವ್‌ ಪಾತ್ರ ಮಾಡುವ ಆಸೆ ಇದೆ. ಮುಂದೆ ಮಾಡುತ್ತೇನೆ. ಆ ನಿಟ್ಟಿನಲ್ಲಿ ತಯಾರಿ ಕೂಡ ನಡೆಯುತ್ತಿದೆ.

* ಒಂದರ ಹಿಂದೆ ಒಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದೀರಲ್ಲವಾ, ನಿಮ್ಮ ಮುಂದಿನ ಸಿನಿಮಾಗಳು ಹೇಗಿರಬಹುದು?
ಕೊರೋನಾಗಿಂತ ಮೊದಲು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ನನಗೂ ಅದು ಅತೀ ಅನಿಸಿತು. ಮುಂದೆ ಹೀಗೆ ಆಗಲ್ಲ. ನನ್ನ ಮುಂದಿನ ಚಿತ್ರಗಳು ಬೇರೆ ಹಂತದಲ್ಲಿ ಇರುತ್ತವೆ. ಅದರ ಮೊದಲ ಮೆಟ್ಟಿಲು ಅಶೋಕ ಬ್ಲೇಡ್‌ ಹಾಗೂ ಮ್ಯಾಟ್ನಿ ಸಿನಿಮಾ. ಅಶೋಕ ಬ್ಲೇಡ್‌ ಸಿನಿಮಾ ನೋಡಿದರೆ ನಾನೂ ಕೂಡ ಇಂಥ ಸಿನಿಮಾ ಮಾಡಲು ಸಾಧ್ಯವೆ ಎಂದು ಅಚ್ಚರಿ ಆಗುತ್ತೀರಿ.

ನಮ್ಮತನ ಇರುವ ನಮ್ಮ ಸಿನಿಮಾ ಟಗರು ಪಲ್ಯ: ಅಮೃತಾ ಪ್ರೇಮ್

ನನ್ನ ಯಾವ ಗುಂಪಿಗೂ ಬ್ರಾಂಡ್‌ ಮಾಡಬೇಡಿ: ಸಿನಿಮಾ, ನಟನೆ ಆಚೆಗೂ ಇತ್ತೀಚೆಗೆ ನಾನು ಹೇಳಿದ ಕೆಲವು ಮಾತುಗಳು ಪರ-ವಿರೋಧದ ಚರ್ಚೆಗೆ ದಾರಿ ಮಾಡಿದ್ದು ನಿಜ. ಇಲ್ಲಿ ಹಸಿವು, ಬಡತನ, ಅಸಮಾನತೆ, ಜಾತಿ ಸಮಸ್ಯೆ ನಿರುದ್ಯೋಗ ಇದೆ ಅಂತ ಹೇಳೋದು ತಪ್ಪು ಅಂತಾದರೆ ನಾನು ತಪ್ಪಿತಸ್ಥ ಆಗಕ್ಕೆ ರೆಡಿ. ಹಾಗಂತ ನನ್ನ ಯಾವ ಗುಂಪಿಗೂ ಬ್ರಾಂಡ್‌ ಮಾಡಬೇಡಿ. ನಾನು ಓಡಾಡೋ ರಸ್ತೆ ಸರಿ ಇಲ್ಲ ಅಂದಾಗ ಸಹಜವಾಗಿ ನಾನು ಆ ಬಗ್ಗೆ ಒಬ್ಬ ಮತದಾರನಾಗಿ ಕೇಳುತ್ತೇನೆ ಮತ್ತು ಪ್ರಶ್ನಿಸುತ್ತೇನೆ.

click me!