`ಮಗಳು ಜಾನಕಿ' ಧಾರಾವಾಹಿ ನೋಡಿದವರಿಗೆ ರಾಕೇಶ್ ಮಯ್ಯ ಅವರು ನಿರಂಜನ್ ಆಗಿ ಪರಿಚಯವಿರುತ್ತಾರೆ. ಹಾಗೆ ಅದರಲ್ಲಿ ಫೇಕ್ ಐ.ಎ.ಎಸ್ ಸರ್ಟಿಫಿಕೇಟ್ ಇರಿಸಿಕೊಂಡು ನಾಯಕಿ ಜಾನಕಿಗೆ ವಂಚಿಸುವ ಪಾತ್ರದಲ್ಲಿ ರಾಕೇಶ್ ಮಯ್ಯ ನಟಿಸಿದ್ದರು. ಇದೀಗ ರಾಕೇಶ್ ಮಯ್ಯ ಹೊಸದೊಂದು ಧಾರಾವಾಹಿ ಒಪ್ಪಿಕೊಂಡಿದ್ದಾರೆ. ಅದರ ಹೆಸರು `ಸಂಘರ್ಷ'. ಅಂದಹಾಗೆ ಇದರಲ್ಲಿ ಇವರ ಪಾತ್ರಕ್ಕೆ ನಿಜವಾದ ಹೆಸರನ್ನೇ ಇಡಲಾಗಿದೆ. ಮಾತ್ರವಲ್ಲ ಒರಿಜಿನಲ್ ಐಎಎಸ್ ಎಂದು ಹೇಳಲಾಗಿದೆ. ಹಾಗಾಗಿ ಕೊನೆಗೂ ಒರಿಜಿನಲ್ ಐಎಎಸ್ ರಾಕೇಶ್ ಮಯ್ಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.
- ಶಶಿಕರ ಪಾತೂರು
ನಿಮಗೂ ಐಎಎಸ್ ಗೂ ಇರುವ ನಂಟೇನು?
ನಿಜವಾದ ರಾಕೇಶ್ ಮಯ್ಯನಿಗೂ ಐಎಎಸ್‌ಗೂ ಸಂಬಂಧವಿಲ್ಲ. ನಾನು ಬಿಕಾಮ್ ನಂತರ ಎಂ.ಬಿ.ಎ ಮಾಡಿದ್ದೀನಿ ಅಷ್ಟೇ. ಆದರೆ ನನಗೆ ಹೆಸರು ತಂದುಕೊಟ್ಟ ಧಾರಾವಾಹಿ `ಮಗಳು ಜಾನಕಿ'ಯಲ್ಲಿ ನಾನು ಫೇಕ್ ಐಎಎಸ್ ಪಾತ್ರ ಮಾಡಿದ್ದೆ. ಇದೀಗ ಶ್ರುತಿ ನಾಯ್ಡು ಅವರ ಸಂಸ್ಥೆಯ `ಸಂಘರ್ಷ' ಧಾರಾವಾಹಿಯಲ್ಲಿ ರಿಯಲ್ ಐಎಎಸ್ ಪಾತ್ರ ಮಾಡುತ್ತಿದ್ದೀನಿ. ಅಂದಹಾಗೆ ಇಲ್ಲಿ ನನ್ನ ಪಾತ್ರಕ್ಕೆ ರಾಕೇಶ್ ಮಯ್ಯ ಎನ್ನುವ ನಿಜವಾದ ಹೆಸರನ್ನೇ ಇಡಲಾಗಿದೆ.
ಹೊಸ ಸೆಟ್‌ನಲ್ಲಿ ನಿಮ್ಮೊಳಗಿನ ನಿರಂಜನ್ ಗೆ ಜಾನಕಿಯ ಅಭಾವ ಕಾಡುವುದೇ?
ಹೇಯ್ ಆ ತರಹ ಏನಿಲ್ಲ. ನಾವು ಹೊಸ ಪಾತ್ರ ಮುಂದೆ ಹೋಗುತ್ತಾ ಇರೋದಷ್ಟೇ. ಹೆಸರು, ಐಎಎಸ್ ವಿಚಾರದಲ್ಲಷ್ಟೇ ಅಲ್ಲ; ಎಲ್ಲದರಲ್ಲಿಯೂ ಇದು ನಿರಂಜನ್‌ಗಿಂತ ಕಾಂಟ್ರಾಸ್ಟ್ ಆಗಿರುವ ಪಾತ್ರ. ಇಲ್ಲಿ ನಾನೇ ಪ್ರೇಯಸಿಯನ್ನು ಪರೀಕ್ಷಿಸಲು ದೆಹಲಿಯಿಂದ ಬಂದಿರುತ್ತೇನೆ. ಆಕೆ ಕೂಡ ತಾನು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರನ್ನೇ ಮದುವೆಯಾಗುತ್ತೇನೆ ಎಂದು ಹೇಳಿರುತ್ತಾಳೆ. ಆದರೆ ಆಕೆ ಹಾಗೆಲ್ಲ ಅಷ್ಟು ಬೇಗ ಬೇರೆ ಯಾರದೋ ಲವ್ ಗೆ ಬೀಳುವವಳಲ್ಲ. ಅದನ್ನು ಚೆಕ್ ಮಾಡಲು ಎಂಟ್ರಿ ಕೊಟ್ಟಂಥ ಪಾತ್ರ ನನ್ನದು. ಇಲ್ಲಿ ನನ್ನ ಪ್ರೇಯಸಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ತೆಲುಗು, ತಮಿಳಲ್ಲಿ ಮಾಡುವುದರ ಜತೆಗೆ ಇದೇ ಸಂಸ್ಥೆಯ ಬೇರೆ ಧಾರಾವಾಹಿಯಲ್ಲಿಯೂ ನಟಿಸಿದ ಅನುಭವಿ. ಒಂದು ರೀತಿ ಧಾರಾವಾಹಿ ವಿಚಾರದಲ್ಲಿ ನನಗಿಂತ ಸೀನಿಯರ್ ಎಂದೇ ಹೇಳಬಹುದು. ಇನ್ನೊಂದು ಪ್ರಧಾನ ಪಾತ್ರದಲ್ಲಿ ರೋಹಿತ್ ರಂಗಸ್ವಾಮಿ ಎನ್ನುವ ನಟ ಇದ್ದಾರೆ. ನಟನೆಯ ವಿಚಾರದಲ್ಲಿ ಅವರು ಕೂಡ ನನಗಿಂತ ಸೀನಿಯರ್.
ಸುಮಲತಾ ಕೊರೋನಾ ಗೆದ್ದಿದ್ದು ಹೇಗೆ?
ಟಿಎನ್ ಸೀತಾರಾಮ್ ಮತ್ತು ಶ್ರುತಿ ನಾಯ್ಡು ಅವರ ಶೈಲಿಯಲ್ಲಿ ಕಾಣಿಸಿದ ಪ್ರಮುಖ ವ್ಯತ್ಯಾಸ ಏನು?
ಶ್ರುತಿ ನಾಯ್ಡುರವರ ಸಂಸ್ಥೆಯಲ್ಲಿ ಇದೇ ಪ್ರಥಮ ಬಾರಿಗೆ ಕೆಲಸ ಮಾಡುತ್ತಿದ್ದೇನೆ. ಅನುಭವ ಚೆನ್ನಾಗಿದೆ. ಸೀತಾರಾಮ್ ಸರ್ ತಂಡದ್ದು ಮತ್ತು ಈ ಧಾರಾವಾಹಿಯ ಫಾರ್ಮ್ಯಾಟ್ ಎರಡೂ ವಿಭಿನ್ನ. ಹಾಗಾಗಿ ಹೋಲಿಕೆ ಮಾಡುವಂತಿಲ್ಲ. ಶ್ರುತಿ ಮೇಡಂ ಕ್ಯಾರೆಕ್ಟರ್ ಬಗ್ಗೆ ಮಾತನಾಡಬೇಕಾದರೆ ಮಗಳು ಜಾನಕಿಗಿಂತ ಬಹಳ ವಿಭಿನ್ನವಾಗಿ ಮಾಡುವ ಅಂತಾನೇ ಹೇಳಿದ್ದರು. ಉದ್ದಗೂದಲು ಬಿಟ್ಟಿದ್ದೆ ಅದನ್ನೆಲ್ಲ ತೆಗೆದಿದ್ದೇನೆ. ನನ್ನ ಪಾತ್ರ ಮಗಳು ಜಾನಕಿಯನ್ನು ನೆನಪಿಸದ ರೀತಿಯಲ್ಲಿ ಕಾಸ್ಟ್ಯೂಮ್ಸ್ ಹೊಂದಿರಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ನಾನು ಅದನ್ನು ಗಮನದಲ್ಲಿರಿಸಿಕೊಂಡು ಹೋಗಿದ್ದೇನೆ. ಅವರು ಕೂಡ ಪ್ರಸಾರವಾದ ದೃಶ್ಯದ ಬಗ್ಗೆ ನನ್ನ ಬಗ್ಗೆ ಮಾತನಾಡಿ ಚೆನ್ನಾಗಿದೆ ಎಂದು ನನಗೆ ಸಪೋರ್ಟಿವ್ ಆಗಿ ಒಳ್ಳೆಯ ಅಭಿಪ್ರಾಯಗಳನ್ನು ಹೇಳಿದ್ದಾರೆ. ನನ್ನ ಆರಂಭದ ದೃಶ್ಯಗಳನ್ನೆಲ್ಲ ಖುದ್ದು ರಮೇಶ್ ಇಂದ್ರ ಅವರೇ ಚಿತ್ರೀಕರಿಸಿದ್ದಾರೆ. ಅವರು ನನಗೆ ನಿರಂಜನ್ ಪಾತ್ರದ ಒಬಿಡಿಯೆಂಟ್ ಮಾದರಿಯನ್ನು ಬಿಟ್ಟು ಹೆಚ್ಚು ಆತ್ಮ ವಿಶ್ವಾಸದಿಂದ ವರ್ತಿಸುವ ಮ್ಯಾನರಿಸಮ್ ತೋರಿಸುವಂತೆ ಹೇಳಿದ್ದಾರೆ. ನನ್ನ ಪಾತ್ರದ ಬಗ್ಗೆ ಇಷ್ಟೆಲ್ಲ ಕಾಳಜಿ ತೋರಿಸಿರುವುದು ಕಂಡು ಖುಷಿಯಾಗಿದೆ.
ಲಾ ಚಿತ್ರದಲ್ಲಿ ನಟಿಸಲು ಕಥೆಯೇ ಕಾರಣ: ರಾಗಿಣಿ ಪ್ರಜ್ವಲ್
`ಓ ಲವ್' ಕಿರುಚಿತ್ರ ಲಾಕ್ಡೌನ್ ಸಂದರ್ಭದಲ್ಲೇ ಮಾಡಿದ್ದೀರ?
ಇಲ್ಲ; ಅದನ್ನು ಕಿರುಚಿತ್ರ ಲಾಕ್ಡೌನ್ ಮೊದಲೇ ಚಿತ್ರೀಕರಿಸಿದ್ದರು. ಆದರೆ ಈಗ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. ಅದು ಒ ಹೆನ್ರಿಯ ಕತೆಯನ್ನು ಸ್ಫೂರ್ತಿಯಾಗಿ ಮಾಡಿರುವ ಚಿತ್ರ. ತುಂಬ ಮಂದಿ ಮೆಚ್ಚಿಕೊಂಡರು. ಅದನ್ನು ವರುಣ್ ಬಿ ಆರ್ ನಿರ್ದೇಶಿಸಿದ್ದಾರೆ. ಒಂದು ಸ್ಪೆಷಲ್ ಲೈಟ್ ಬಳಸುವ ಮೂಲಕ ಅದನ್ನು ವಿಶೇಷವಾಗಿಸಿದ್ದಾರೆ ಛಾಯಾಗ್ರಾಹಕ ವಿಕ್ರಮ್ ಶ್ರೀಧರ್. ಲಾಕ್ಡೌನ್ ಸಂದರ್ಭದಲ್ಲಿ ಮನೇಲೇ ಇದ್ದೆ. ನನಗೆ ಗ್ರಾಫಿಕ್ ಡಿಸೈನಿಂಗ್ ಗೊತ್ತು. ಅದರಲ್ಲಿ ತೊಡಗಿಸಿಕೊಂಡಿದ್ದೆ. ಜೊತೆಗೆ `ಲೋಲ್ ಭಾಗ್' ಯೂಟ್ಯೂಬ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದಿನಕಳೆದೆ. ಸದ್ಯಕ್ಕೆ `ಸಂಘರ್ಷ'ದಲ್ಲಿದ್ದೀನಿ. ಜೂನ್ ತಿಂಗಳಲ್ಲಿ ಶುರುವಾದ ಧಾರಾವಾಹಿಗೆ ನಾನು ಇತ್ತೀಚೆಗಷ್ಟೇ ಎಂಟ್ರಿಯಾಗಿದ್ದೇನೆ. ನನ್ನ ಪಾತ್ರ ಹೇಗೆ ಮುಂದುವರಿಯುತ್ತದೆ, ಎಷ್ಟು ದಿನ ಇರುತ್ತದೆ ಎನ್ನುವುದು ನಿರ್ದೇಶಕರ ಕೈಯ್ಯಲ್ಲಿರುತ್ತದೆ. ಹಾಗಾಗಿ ಕಲಾವಿದನಾಗಿ ಸದಾ ಶಾರ್ಟ್ ಫಿಲ್ಮ್ ಅಥವಾ ಸಿನಿಮಾಗಳಲ್ಲಿನ ವೈವಿಧ್ಯಮಯ ಪಾತ್ರಗಳ ಬಗ್ಗೆ ಸದಾ ಒಂದು ಕಣ್ಣು ನೆಟ್ಟಿರುತ್ತೇನೆ.