Russia Ukraine War: ಕದನವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

Published : Mar 10, 2022, 08:24 AM ISTUpdated : Mar 10, 2022, 08:37 AM IST
Russia Ukraine War: ಕದನವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

ಸಾರಾಂಶ

*ಜನರ ಸ್ಥಳಾಂತರಕ್ಕಾಗಿ ರಷ್ಯಾ-ಉಕ್ರೇನ್‌ 12 ತಾಸಿನ ಜಂಟಿ ಕದನವಿರಾಮ *ಈ ವೇಳೆ ಸುಮಿ ಸೇರಿ 5 ನಗರಗಳಿಂದ ಜನರ ಸ್ಥಳಾಂತರ *ಹೆಚ್ಚಿನ ಬಾಂಬ್‌, ಶೆಲ್‌, ಕ್ಷಿಪಣಿ ದಾಳಿ ಇಲ್ಲ *ಕೀವ್‌ನಲ್ಲಿ ರೆಡ್‌ ಅಲರ್ಟ್‌ ಘೋಷಣೆ, ಆದರೆ ದಾಳಿಯಿಲ್ಲ  

ಕೀವ್‌ (ಮಾ. 10) : ಉಕ್ರೇನ್‌-ರಷ್ಯಾ ನಡುವೆ ನಡೆಯುತ್ತಿರುವ ಕದನ ಬುಧವಾರ ಕೊಂಚ ತಣ್ಣಗಾಗಿದೆ. ನಾಗರಿಕರ ರಕ್ಷಣೆಗೆ ರಷ್ಯಾ ಹಾಗೂ ಉಕ್ರೇನ್‌ ಕದನ ಬುಧವಾರ 12 ತಾಸಿನ ಜಂಟಿ ಕದನವಿರಾಮ ಘೋಷಿಸಿದ ಕಾರಣ, ಅಲ್ಲಲ್ಲಿ ಸಣ್ಣಪುಟ್ಟದಾಳಿಗಳನ್ನು ಹೊರತುಪಡಿಸಿದರೆ ಈ ಹಿಂದಿನಂತೆ ಎಲ್ಲೂ ಭಾರೀ ಶೆಲ್‌, ಬಾಂಬ್‌ ಅಥವಾ ಕ್ಷಿಪಣಿ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ.ಈ ದಿನ ಯುದ್ಧಪೀಡಿತ ಸುಮಿ, ಮರಿಯುಪೋಲ್‌, ಎನೆಎರ್ಹೊಡಾರ್‌, ವೊಲ್ನೊವೋಖಾ, ಲೈಝಮ್‌ ಹಾಗೂ ಇತರ ಕೆಲವು ನಗರಗಳಲ್ಲಿ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ಕದನವಿರಾಮಕ್ಕೆ ರಷ್ಯಾ ಹಾಗೂ ಉಕ್ರೇನ್‌ ಸಹಮತ ಪ್ರಕಟಿಸಿದ್ದವು.

ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕದನವಿರಾಮ ಸಾರಿದ್ದವು. ಹೀಗಾಗಿ ಈ ನಗರಗಳಲ್ಲಿ ಯುದ್ಧದ ಅಬ್ಬರ ತಗ್ಗಿತ್ತು ಹಾಗೂ ರೆಡ್‌ಕ್ರಾಸ್‌ ಸಹಯೋಗದಲ್ಲಿ ವಾಹನಗಳ ಮೂಲಕ ಹೆಚ್ಚಿನ ಸಂಖ್ಯೆಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಉಕ್ರೇನ್‌ ಉಪಪ್ರಧಾನಿ ಐರೀನಾ ವೆರ್ಸೆಶ್‌ಚುಕ್‌ ಹೇಳಿದ್ದಾರೆ. ಸುಮಿ ನಗರದಲ್ಲೊಂದರಲ್ಲೇ 5000 ಜನರನ್ನು ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ದ ಸಾರಿದಾಗ ಮೌನವಿದ್ದ ಅಮೆರಿಕದಿಂದ ಮಹತ್ವದ ಹೆಜ್ಜೆ, ರಷ್ಯಾಗೆ ಶಾಕ್!

ಕೀವ್‌ನಲ್ಲಿ ರೆಡ್‌ ಅಲರ್ಟ್‌, ಆದರೆ ದಾಳಿಯಿಲ್ಲ: ರಾಜಧಾನಿ ಕೀವ್‌ ನಗರದಲ್ಲಿ ಬುಧವಾರ ರೆಡ್‌ ಅಲರ್ಟ್‌ ಸಾರಲಾಗಿತ್ತು. ರಷ್ಯಾ ದಾಳಿ ನಡೆಸಬಹುದು ಎಂಬ ಎಚ್ಚರಿಕೆ ಸಂದೇಶ ಸಾರಿ ಜನರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಹಾಗೂ ಬಂಕರ್‌ನಲ್ಲಿರುವಂತೆ ಪದೇ ಪದೇ ಸರ್ಕಾರ ಸೂಚನೆ ನೀಡಿತು. ಆದರೆ, ರಾಜಧಾನಿಯಲ್ಲಿ ಭಾರೀ ದಾಳಿ ನಡೆದ ಬಗ್ಗೆ ವರದಿಯಾಗಿಲ್ಲ.

‘ರಾಜಧಾನಿ ಕೀವ್‌ನತ್ತ ರಷ್ಯಾ ಮುಂದುವರೆಯುತ್ತಿಲ್ಲ’ ಎಂದು ಬ್ರಿಟನ್‌ ರಕ್ಷಣಾಧಿಕಾರಿಗಳು ಹೇಳಿದ್ದಾರೆ. ಕೀವ್‌ ಪ್ರವೇಶಿಸದಂತೆ ತಡೆಯಲು ಉಕ್ರೇನ್‌ ತನ್ನ ವಾಯುರಕ್ಷಣಾ ಪಡೆಯನ್ನು ಸಿದ್ಧವಾಗಿಟ್ಟುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Operation Ganga: ಏರ್‌ಲಿಫ್ಟ್‌ ಬಹುತೇಕ ಅಂತ್ಯ: ಉಕ್ರೇನ್‌ನಿಂದ ಈವರೆಗೆ 18,000 ಮಂದಿ ರಕ್ಷಣೆ

ಆದರೆ, ‘ರಷ್ಯಾದ ಸೇನಾಪಡೆಗಳು ಈಗಾಗಲೇ ನಗರವನ್ನು ಸುತ್ತುವರೆದಿವೆ. ಕೀವ್‌ನಲ್ಲಿ ರಷ್ಯಾ ಕೃತಕವಾಗಿ ಮಾನವೀಯತೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ನೀರು, ಆಹಾರ ಮತ್ತು ಔಷಧದ ಕೊರತೆಯಾಗುವಂತೆ ನೋಡಿಕೊಳ್ಳುತ್ತಿದೆ. ಶೆಲ್‌ ದಾಳಿ ಭೀತಿಯ ಕಾರಣ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ’ ಎಂದು ಕೀವ್‌ ಆಡಳಿತದ ಮುಖ್ಯಸ್ಥ ಒಲೆಕ್ಸೀಯ್‌ ಕುಲೇಬಾ ಹೇಳಿದ್ದಾರೆ.

ವಾಯುದಾಳಿಗೆ 10 ಬಲಿ: ದೇಶದ ಬಹುತೇಕ ಕಡೆ ಶಾಂತ ಸ್ಥಿತಿ ಇದ್ದರೂ ಕೀವ್‌ ಸಮೀಪದ ಸೆವೆರೊಡೊನೆಸ್ಟಕ್‌ ನಗರದ ಮೇಲೆ ನಡೆಸಿದ ದಾಳಿಯಲ್ಲಿ 10ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ ಈಗಾಗಲೇ 20 ಲಕ್ಷ ಜನರು ಉಕ್ರೇನ್‌ ತೊರೆದು ನಿರಾಶ್ರಿತರಾಗಿದ್ದಾರೆ.

ರಷ್ಯಾದಲ್ಲಿ ಮಾಸ್ಟರ್‌ಕಾರ್ಡ್‌, ವೀಸಾ ಕಾರ್ಯಾಚರಣೆ ಸ್ಥಗಿತ:  ಉಕ್ರೇನಿನ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದಕ್ಕಾಗಿ ರಷ್ಯಾದಲ್ಲಿ ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿವೆ ಎಂದು ಕಂಪನಿ ಶನಿವಾರ ಹೇಳಿದೆ. ರಷ್ಯಾದಲ್ಲಿ ಶೇ.74 ರಷ್ಟುಹಣಕಾಸಿನ ವಹಿವಾಟಿಗಾಗಿ ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾಗಳನ್ನೇ ಬಳಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿಯ ಈ ಕ್ರಮದಿಂದಾಗಿ ರಷ್ಯಾದ ಜನಸಾಮಾನ್ಯರೂ ಭಾರೀ ಬೆಲೆ ತೆರಬೇಕಾಗಿದೆ.

‘ರಷ್ಯಾದ ಬ್ಯಾಂಕುಗಳು ನೀಡಿದ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಇತರೆ ದೇಶಗಳ ಮಾಸ್ಟರ್‌ ಕಾರ್ಡ್‌ ಸಹ ರಷ್ಯಾದ ಮಾರುಕಟ್ಟೆಹಾಗೂ ಎಟಿಎಂಗಳಲ್ಲಿ ಇನ್ನು ಕಾರ್ಯ ನಿರ್ವಹಿಸುವುದಿಲ’್ಲ ಎಂದು ಮಾಸ್ಟರ್‌ ಕಾರ್ಡ್‌ ಕಂಪನಿ ಹೇಳಿದೆ. ಅದರಂತೇ ಮುಂಬರುವ ದಿನಗಳಲ್ಲಿ ವೀಸಾ ಕಾರ್ಡಿನ ಎಲ್ಲ ವಹಿವಾಟುಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ವೀಸಾ ಕಂಪನಿಯ ಮುಖ್ಯಸ್ಥ ಎ.ಐ. ಕೆಲ್ಲಿ ಹೇಳಿದ್ದಾರೆ.

ಉಕ್ರೇನಿನ ಅಧ್ಯಕ್ಷ ವ್ಲಾದಿಮಿರ್‌ ಜೆಲೆನ್‌ಸ್ಕಿ ರಷ್ಯಾದಲ್ಲಿ ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅಮೆರಿಕದ ಶಾಸಕರೊಂದಿಗಿನ ಖಾಸಗಿ ಸಂವಾದದಲ್ಲಿ ವಿನಂತಿಸಿಕೊಂಡಿದ್ದರು. ನಂತರ ಕೇವಲ 16 ನಿಮಿಷಗಳ ಅಂತರದಲ್ಲಿ ಎರಡೂ ಕಂಪನಿಗಳು ತಮ್ಮ ಸೇವೆಯನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು