ಪದ್ಮಶ್ರೀ ಭಾರತಿ ವಿಷ್ಣುವರ್ಧನ್ ಅವರು ಕನ್ನಡದ ಹೆಮ್ಮೆಯ ನಟಿ. ಪಂಚಭಾಷಾ ತಾರೆಯಾಗಿ ಗುರುತಾಗಿರುವ ಇವರು ಸ್ವಾತಂತ್ರ್ಯ ದಿನಾಚರಣೆಯಂದೇ ಜನಿಸಿದವರು. ಹಾಗಾಗಿ ಅವರ ಸ್ವಾತಂತ್ರ್ಯ ದಿನಾಚರಣೆಯ ನೆನಪುಗಳು ನಿಜಕ್ಕೂ ಸ್ವಾರಸ್ಯಕರವಾದವು.
ನಾನು ನನ್ನ ಜನ್ಮದಿನಾಚರಣೆ ಮಾಡುವುದಕ್ಕಿಂತ ದೇಶದ ಸ್ವಾತಂತ್ರ್ಯ ದಿನಾಚರಣೆಯಲ್ಲಿಯೇ ಹೆಚ್ಚು ಖುಷಿ ಕಾಣುತ್ತೇನೆ. ನನಗೆ ವೈಯಕ್ತಿಕ ಆಚರಣೆ ಬೇಡವೆಂದರು ಮನೆಮಂದಿ ಮಕ್ಕಳು ಚಿಕ್ಕದಾಗಿ ಶುಭ ಹಾರೈಸುವುದು ನಡೆದೇ ನಡೆಯುತ್ತದೆ. ಆದರೆ ಅದೇ ಸಮಯ ಇಡೀ ದೇಶವೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿರುವುದನ್ನು ಕಾಣುವಾಗ ಇಡೀ ದೇಶವೇ ಸಡಗರದಲ್ಲಿದೆ ಎಂದು ನಾನು ಸಂಭ್ರಮಿಸಿದ್ದೇ ಹೆಚ್ಚು ಎನ್ನುತ್ತಾರೆ ಭಾರತಿ. ಅವರ ಜೊತೆಗೆ ನಡೆಸಿರುವ ವಿಶೇಷ ಮಾತುಕತೆ ಇದು.
ಶಶಿಕರ ಪಾತೂರು
ಸ್ವಾತಂತ್ರ್ಯ ದಿನ ಎಂದಾಗ ನಿಮ್ಮಲ್ಲಿ ಮೂಡುವ ಭಾವವೇನು?
ಸ್ವಾತಂತ್ರ್ಯ ಬಂದಿದೆ. ಆದರೆ ಎಷ್ಟು ಜನಕ್ಕೆ ಬಂದಿದೆ? ಅದನ್ನು ಯಾವ ರೀತಿ ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆ ಎನ್ನುವುದು ನನಗೆ ಗೊತ್ತಿಲ್ಲ! ಆದರೆ ಒಂದು ಖುಷಿ ಏನು ಅಂದರೆ ಈ ದಿನ ನನ್ನ ಜನ್ಮದಿನ. ನಾನು ಜನ್ಮದಿನಾಚರಣೆ ಮಾಡಿಕೊಳ್ತೀನೋ ಇಲ್ವೋ.. ಇಡೀ ದೇಶವೇ ಇವತ್ತು ಸಂಭ್ರಮದಲ್ಲಿರುತ್ತದೆ ಅಂತ ಖುಷಿಯಾಗುತ್ತೆ.
`ಬ್ರಹ್ಮಗಂಟು' ಹೆಚ್ಚಿಸಿತು ಬಣ್ಣದ ನಂಟು- ಹರ್ಷಗೌಡ
ಸ್ವಾತಂತ್ರ್ಯ ದಿನದಂದು ಹುಟ್ಟಿದ್ದಕ್ಕೇನೇ ನಿಮಗೆ ಭಾರತಿ ಎಂದು ಹೆಸರಿಟ್ಟರಾ?
ಹೌದು. ನಾನು ಹುಟ್ಟಬೇಕಾದರೆ ಸ್ವಾತಂತ್ರ್ಯ ಬಂದಿತ್ತಲ್ವಾ? ಹಾಗಾಗಿಯೇ ಭಾರತಿ ಅಂತ ಇಟ್ಟಿರಬೇಕು. ಶಾಲೆಯಲ್ಲಿಯೂ ಅಷ್ಟೇ ಭಾರತ ಮಾತೆ ವೇಷವನ್ನೇ ಕೊಡುತ್ತಿದ್ದರು. ನಾನು ಹೈಸ್ಕೂಲಲ್ಲಿ ಇರಬೇಕಾದರೆ ಡಾನ್ಸ್ ಕಾರ್ಯಕ್ರಮಗಳಲ್ಲಿ “ಭಾರತಮಾತೆ ಯಾರು” ಅಂದರೆ ಅದು ಭಾರತಿಯೇ! ಯಾಕೆಂದರೆ ನಾನು ಎತ್ತರವಾಗಿರೋ ಕಾರಣ ಡಾನ್ಸ್‌ಗೆ ಆ ಕಡೆ, ಈ ಕಡೆ ಸೇರಿಸಿಕೊಳ್ಳುತ್ತಿರಲಿಲ್ಲ. ಧ್ವಜ ಹಿಡಿದುಕೊಂಡು ಮಧ್ಯದಲ್ಲಿ ನಿಲ್ಲಿಸಿಬಿಡುತ್ತಿದ್ದರು. ಅವತ್ತಿನಿಂದಲೂ ನಮ್ಮ ಫ್ಲ್ಯಾಗ್ ನೋಡೋದೇ ಒಂದು ಅಂದ. ನಮ್ಮ ಬಾವುಟಕ್ಕೆ ಇರುವ ಕಳೆ ವಿಶ್ವದ ಯಾವ ಫ್ಲ್ಯಾಗ್‌ನಲ್ಲಿಯೂ ನನಗೆ ಕಾಣಿಸಿಲ್ಲ.
`ಪಾರು' ಧಾರಾವಾಹಿಯಲ್ಲಿ ಸಿಕ್ತು ಅಪರೂಪದ ಅವಕಾಶ- ಶರತ್
ಬಹುಶಃ ಆ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಶಾಲಾಕಾರ್ಯಕ್ರಮಗಳೇ ನೆನಪಾಗುತ್ತಿರಬಹುದೇನೋ..?
ನಿಜ. ಯಾಕೆಂದರೆ ಆ ಸಮಯದಲ್ಲಿ ನಾನು ಸ್ಪೋರ್ಟ್ಸ್‌ನಲ್ಲಿರುತ್ತಿದ್ದೆ. ಅದರಲ್ಲೆಲ್ಲ ನನಗೆ ಟ್ರೋಫಿಗಳು ಬರುತ್ತಿದ್ದವು. ಛಾಂಪಿಯನ್ ಶಿಪ್ ಟ್ರೋಫಿ ಕೂಡ ಸಿಗುತ್ತಿತ್ತು. ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳು ಇರುತ್ತಿದ್ದವು. ನಾನಷ್ಟು ಬುದ್ಧಿವಂತಳಾಗಿರದ ಕಾರಣ ನಾನು ಅವುಗಳಲ್ಲೆಲ್ಲ ಪಾರ್ಟಿಸಿಪೇಟ್ ಮಾಡುತ್ತಿರಲಿಲ್ಲ. ಸಂಗೀತ ಅಂದರೆ ಇಷ್ಟವಿತ್ತು, ಹಾಡುತ್ತಿದ್ದೆ. ಅಂತರ್ಶಾಲಾ ಸ್ಪರ್ಧೆಗಳಿಗೆ ಕಳಿಸಿಕೊಡುತ್ತಿದ್ದರು. ಶಾಲೆಗೆ ಪ್ರಶಸ್ತಿ ತಂದುಕೊಡುತ್ತಿದ್ದೆ. ನಟಿಯಾದ ಮೇಲೆ ಸ್ವಾತಂತ್ರ್ಯ ದಿನಾಚರಣೆಗೆ ಅತಿಥಿಯಾಗಿ ಕರೆಸಿದ್ದೂ ಇದೆ. ಒಟ್ಟಿನಲ್ಲಿ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವುದು ಅಂದರೆ ತುಂಬಾನೇ ಖುಷಿಯಿರುತ್ತಿತ್ತು.
ಸಿನಿಮಾ ಸೆಟ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿಕೊಂಡ ಸಂದರ್ಭಗಳಿವೆಯೇ?
ಅಪರೂಪಕ್ಕೆ ಅಂಥ ಸಂದರ್ಭಗಳು ಸಹ ಕೂಡಿ ಬಂದ ಉದಾಹರಣೆಗಳಿವೆ. ಆ ದಿನಗಳಲ್ಲಿ ತಮಿಳುನಾಡಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿನ ಸಿನಿಮಾಸೆಟ್‌ನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಇರುತ್ತಿತ್ತು. ನನ್ನ ಜನ್ಮದಿನಾಚರಣೆಯೂ ಆಗಿದ್ದ ಕಾರಣ ಕೇಕ್ ತಂದು ಕತ್ತರಿಸಿದ ಸಂದರ್ಭವೂ ಇದೆ. ಒಮ್ಮೆ `ಸಬ್ ಕ ಸಾಥಿ’ ಎನ್ನುವ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾಗ ಒಂದು ವಿಶೇಷ ನಡೆದಿತ್ತು. ಅದರಲ್ಲಿ ವಿನೋದ್ ಖನ್ನಾ, ಸಂಜಯ್ ಖಾನ್ ಮತ್ತು ರಾಖಿಯವರೂ ನಟಿಸಿದ್ದರು. ರಾಖಿಯವರ ಜನ್ಮದಿನ ಕೂಡ ಆಗಸ್ಟ್ ಹದಿನೈದರಂದೇ ಆಗಿತ್ತು. ಹಾಗಾಗಿ ನಾವು ಜೊತೆಯಾಗಿಯೇ ಜನ್ಮದಿನಾಚರಣೆ ಮಾಡಿಕೊಂಡಿದ್ದೆವು.
ಕ್ರೇಜಿಸ್ಟಾರ್ ಮೆಚ್ಚುಗೆ ಮರೆಯಲಾಗದ ಘಟನೆ- ಗಾಯಕಿ ಕಾವ್ಯ ಶ್ರೀ
ನೀವು ಮತ್ತು ಸುಹಾಸಿನಿ ಜೊತೆಯಾಗಿ ಬರ್ತ್ ಡೇ ಮಾಡಿಕೊಂಡ ಸಂದರ್ಭಗಳಿವೆಯೇ?
ಅಂದಹಾಗೆ ಸುಹಾಸಿನಿಯವರು ಕೂಡ ಸ್ವಾತಂತ್ರ್ಯ ದಿನಾಚರಣೆಯಂದೇ ಹುಟ್ಟಿದವರು. ಆದರೆ ನಾವಿಬ್ಬರೂ ಜೊತೆಯಾಗಿ ಬರ್ತ್ ಡೇ ಮಾಡಿಕೊಂಡ ಸಂದರ್ಭಗಳಿಲ್ಲ. ಅವರು ಮತ್ತು ನಮ್ಮ ಯಜಮಾನರು ಜೊತೆಗೆ ನಟಿಸಿ ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡವರು. ನಾವೆಲ್ಲ ಆ ದಿನಗಳಿಂದಲೇ ಕೌಟುಂಬಿಕವಾಗಿ ಆತ್ಮೀಯತೆ ಹೊಂದಿದ್ದೇವೆ. ಹಾಗಾಗಿ ಪ್ರತಿ ವರ್ಷವೂ ಫೋನ್ ಮೂಲಕ ಪರಸ್ಪರ ಶುಭ ಹಾರೈಸುವುದನ್ನು ಮರೆಯುವುದಿಲ್ಲ. ಅಂದಹಾಗೆ ಅಂದು ರಾಘವೇಂದ್ರ ರಾಜ್ ಕುಮಾರ್ ಅವರ ಜನ್ಮದಿನವೂ ಹೌದು.
ನಿಮ್ಮ ಪ್ರಕಾರ ಇಂದಿನ ಮಕ್ಕಳಲ್ಲಿ ದೇಶಭಕ್ತಿ ಮೈಗೂಡಿಸುವಂತೆ ಮಾಡಲು ಏನು ಮಾಡಬಹುದು?
ದೇಶಭಕ್ತಿ ಎನ್ನುವುದು ರಕ್ತದಲ್ಲೇ ಬಂದಹಾಗಿರಬೇಕು. ಆಗ ಅದನ್ನು ಸ್ವಾತಂತ್ರ್ಯ ದಿನದಂದು ಮಾತ್ರ ನೆನಪಿಸುವಂತಿರುವುದಿಲ್ಲ. ಯಾಕೆಂದರೆ ದೇಶಾಭಿಮಾನ ಎನ್ನುವುದು ಸುಮ್ಮನೇ ಒಂದು ದಿನ ಆಚರಣೆ ಮಾಡಿ ಆಮೇಲೇ ಮರೆಯುವಂಥ ಕಾರ್ಯಕ್ರಮವಲ್ಲ. ನಮ್ಮ ಜೀವನದಲ್ಲಿ ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಲೇ ಹೋಗಬೇಕು. ರಾಷ್ಟ್ರದ ಮೇಲಿನ ಗೌರವ ಉಸಿರಾಟದಂತೆ ಸಹಜವಾಗಿರಬೇಕು. ಆಗಲೇ ನಮ್ಮಿಂದ ದೇಶವನ್ನು ಬೇರೆಯಾಗಿ ಯೋಚಿಸೋಕೂ ಸಾಧ್ಯವಾಗದು. ನಮ್ಮ ಅಭಿಮಾನವನ್ನು ಬೇರೆಯವರಿಂದ ಕಿತ್ತುಕೊಳ್ಳೋದಕ್ಕೂ ಸಾಧ್ಯವಾಗದು.