ಕ್ರೇಜಿ ಸ್ಟಾರ್ ಜೊತೆ ನಟಿಸಿದ 'ಮಲ್ಲ' ಚಿತ್ರ ಮರೆಯೋಕಾಗಲ್ಲ: ಪ್ರಿಯಾಂಕಾ

By Suvarna News  |  First Published Nov 25, 2020, 4:37 PM IST

ಎರಡು ದಶಕಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ ಸಿನಿಮಾಗಳ ಸಂಖ್ಯೆ  ಸುಮಾರು ನಲುವತ್ತರಷ್ಟಾಗಬಹುದು. ಬಂಗಾಳಿಯಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಒರಿಯಾ ಭಾಷೆಗಳಲ್ಲಿ ನಟಿಸಿದ್ದು, ಇಂದಿಗೂ ಕನ್ನಡದಲ್ಲಿ ಒಳ್ಳೆಯ ಮಾರುಕಟ್ಟೆ ಹೊಂದಿದ್ದಾರೆ. ಇಷ್ಟೆಲ್ಲ ಆದರೂ ತಮ್ಮ ಫೇವರಿಟ್ ಸಿನಿಮಾ ಕನ್ನಡದ `ಮಲ್ಲ' ಎಂದು ಪ್ರಿಯಾಂಕಾ ಅವರು ಸುವರ್ಣ ನ್ಯೂಸ್.ಕಾಮ್ ಜೊತೆ ಹೇಳಿದ್ದಾರೆ. 


ವಿವಾಹದ ಬಳಿಕ ಪೋಷಕ ಪಾತ್ರಗಳಿಗೆ ಸೀಮಿತವಾಗುತ್ತಿದ್ದ ದಕ್ಷಿಣದ ನಾಯಕಿಯರ ನಡುವೆ ತಾವು ಹಾಗಲ್ಲ ಎಂದು ತೋರಿಸಿಕೊಟ್ಟವರು ಪ್ರಿಯಾಂಕಾ ಉಪೇಂದ್ರ. ಅವರು ಮದುವೆಯ ಬಳಿಕ ಒಂದಷ್ಟು ಬಂಗಾಳಿ ಚಿತ್ರಗಳಲ್ಲಿ ನಟಿಸುವಾಗ ಕನ್ನಡಕ್ಕೆ ಬ್ರೇಕ್ ನೀಡಿದ್ದು ಬಿಟ್ಟರೆ ಇಬ್ಬರು ಮಕ್ಕಳ ತಾಯಿಯಾದ ಸಮಯದಲ್ಲಿ ಸ್ವಲ್ಪ ಕಾಲ ಪರದೆಯಿಂದ ದೂರವಿದ್ದರು. ಆದರೆ ಪತ್ನಿ, ತಾಯಿಯಾದ ಬಳಿಕ ತೀರ ಇತ್ತೀಚೆಗೆ ಕೂಡ ತಮ್ಮ ಜನ್ಮದಿನದಂದು ಎರಡೆರಡು ಸಿನಿಮಾಗಳ ಟೈಟಲ್ ಘೋಷಣೆ ಮಾಡುವ ಮೂಲಕ ತಾವು ಇಂದಿಗೂ ಬಿಡುವಿರದ ನಟಿ ಎಂದು ಸಾಬೀತು ಮಾಡಿದ್ದಾರೆ. ಮಾತ್ರವಲ್ಲ, ನಾಯಕಿ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಇಂಥ ಪ್ರಿಯಾಂಕ ತಮ್ಮ ವೃತ್ತಿ ಬದುಕಿನ ಮರೆಯಲಾಗದ ಸಿನಿಮಾಗಳ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಿದ್ದಾರೆ.

- ಶಶಿಕರ ಪಾತೂರು

Tap to resize

Latest Videos

undefined

ನಿಮ್ಮ ವೃತ್ತಿ ಬದುಕಿನಲ್ಲಿ ಮರೆಯಲಾಗದ ಸಿನಿಮಾ ಯಾವುದು?
ನನ್ನ ತಾಯಿ ಬಂಗಾಳಿ ಚಿತ್ರ ನಟಿಯಾಗಿದ್ದವರು. ಹಾಗಾಗಿ ನಾನು ಆರಂಭದಿಂದಲೂ ನಟನೆಗೆ ಒಳ್ಳೆಯ ಪ್ರಾಧಾನ್ಯತೆ ಇರುವ ಪಾತ್ರಗಳನ್ನೇ ಮಾಡುತ್ತಾ ಬಂದೆ. ಆದುರಿಂದ ಮಾಡಿರುವ ಎಲ್ಲ ಸಿನಿಮಾಗಳನ್ನು ಕೂಡ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ನಿಮಗೆ ಒಂದು ಸಿನಿಮಾದ ಹೆಸರು ಮಾತ್ರ ಬೇಕು ಎಂದರೆ ಹಾಗೆ ಆಯ್ಕೆ ಮಾಡುವುದು ನನ್ನಿಂದ ಕಷ್ಟವಾದೀತು. ಮೂವತ್ತರಷ್ಟು ಚಿತ್ರಗಳಲ್ಲಿ ಮಿನಿಮಮ್ ಎಂದರೂ ಮೂರು ಚಿತ್ರಗಳ ಹೆಸರನ್ನಾದರೂ ಹೇಳಬೇಕಲ್ಲ?

`ಕನ್ನಡತಿ' ರಂಜನಿ ರಾಘವನ್ ಸಂದರ್ಶನ

ಸರಿ; ಹಾಗಾದರೆ ಮೂರು ಸಿನಿಮಾಗಳ ಹೆಸರು ಹೇಳಿ
ಮೂರು ಚಿತ್ರಗಳಲ್ಲಿ ಮೊದಲನೆಯದಾಗಿ ನಾನು ಬಂಗಾಳಿ ಚಿತ್ರವೊಂದರ ಬಗ್ಗೆ ಹೇಳಲೇಬೇಕು. ಚಿತ್ರದ ಹೆಸರು `ಸಾಥಿ' ಎಂದು. ಅದರಲ್ಲಿ ಹೊಸ ನಾಯಕನನ್ನು ಇಂಟ್ರಡ್ಯೂಸ್ ಮಾಡಲಾಗಿತ್ತು. ಆ ಚಿತ್ರ ಎಷ್ಟು ದೊಡ್ಡ ಹಿಟ್ ಆಯಿತೆಂದರೆ  ಆ ನಟ ಜೀತ್ ಈಗ ಅಲ್ಲಿ ದೊಡ್ಡಸ್ಟಾರ್ ಆಗಿ ಬೆಳೆದಿದ್ದಾನೆ. ನಾನು ಅದರ ಸೆಕೆಂಡ್ ಹಾಫ್ ನಲ್ಲಿ ಒಬ್ಬ ಅಂಧೆಯ ಪಾತ್ರ ಮಾಡಿದ್ದೆ. ಚಿತ್ರದ ಹಾಡುಗಳು ಇಂದಿಗೂ ಅಲ್ಲಿ ಜನಪ್ರಿಯ. ಅದು ಬಂಗಾಳಿ ಭಾಷೆಯಲ್ಲಿ ನನ್ನ ಕೆರಿಯರ್ ಬದಲಾಯಿಸಿದಂಥ ಚಿತ್ರ. ಮಾತ್ರವಲ್ಲ, ಬಂಗಾಳಿ ಭಾಷೆಗೂ ದೊಡ್ಡ ಮಾರ್ಕೆಟ್ ಇದೆ ಎನ್ನುವುದನ್ನು ತೋರಿಸಿಕೊಟ್ಟ ಚಿತ್ರ ಅದು. 

ಅಮೆರಿಕನ್ನರಿಗೆ ಕನ್ನಡ ಕಲಿಸಿದ ಯಮುನಾ ಶ್ರೀನಿಧಿ

ಇನ್ನೆರಡು ಮರೆಯಲಾಗದ ಸಿನಿಮಾಗಳು ಯಾವುವು?
ಇನ್ನೆರಡು ಚಿತ್ರಗಳು ಕನ್ನಡದ್ದು. ಅವುಗಳಲ್ಲಿ ಒಂದು `ಎಚ್ ಟು ಒ'. ಅದು ನನಗೆ ವೈಯಕ್ತಿಕವಾಗಿ ನನಗೆ ಹೆಚ್ಚು ಆತ್ಮೀಯವಾದ ಚಿತ್ರ. ಸುಮಾರು ಒಂದು ವರ್ಷಗಳ ಕಾಲ ಅದರ ಚಿತ್ರೀಕರಣ ನಡೆದಿತ್ತು. ಅದೇ ಚಿತ್ರದ ಮೂಲಕ ನನಗೆ ಉಪೇಂದ್ರ ಅವರು ಆತ್ಮೀಯರಾದರು. ನನಗೆ ಆಗ ಕನ್ನಡ ಚಿತ್ರರಂಗ ತುಂಬಾ ಹೊಸದು. ಆ ಡ್ರೆಸ್ಸು, ಲೊಕೇಶನ್, ಭಾಷೆ, ಕಾವೇರಿಯ ಪಾತ್ರ ಎಲ್ಲವೂ ಹೊಸದೆನ್ನುವ ಹಾಗಿತ್ತು. ನನ್ನ ವಯಸ್ಸು  ಕೂಡ ಚಿಕ್ಕದಾಗಿತ್ತು. ಸ್ವತಃ ಸ್ಟಂಟ್ಸ್ ಮಾಡೋದು ಕಷ್ಟವೂ ಇತ್ತು. ಹಾಗಾಗಿ ಭಾವನಾತ್ಮಕವಾಗಿ ನನಗೆ ಎಚ್ ಟು ಒ ತುಂಬಾನೇ ಆತ್ಮೀಯ. ಮೂರನೇ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಟನೆಯ `ಮಲ್ಲ' ಸಿನಿಮಾ.

`ಮಲ್ಲ' ಸಿನಿಮಾದಲ್ಲಿ ನಿಮಗೆ ಮರೆಯಲಾಗದ ಅನುಭವಾಗಿದ್ದೇನು?
ಆ ಚಿತ್ರವೇ ಕನ್ನಡದಲ್ಲಿನ ನನ್ನ ವೃತ್ತಿ ಬದುಕಲ್ಲೊಂದು ಮೈಲ್ ಸ್ಟೋನ್. ಮದರ್, ವಿಲನಿಶ್, ನೆಗೆಟಿವ್, ಸಾಫ್ಟ್ ಹೀಗೆ ಎಲ್ಲ ಶೇಡ್ಸ್ ಪಾತ್ರವನ್ನು ಕೂಡ ಅದರಲ್ಲಿ ನಾನು ಮಾಡಿದ್ದೇನೆ. ಒಬ್ಬ ಕಲಾವಿದೆಯಾಗಿ ಅಷ್ಟೊಂದು ಶೇಡ್ಸ್ ಇರುವ ಪಾತ್ರ ಸಿಗುವುದು ಕಷ್ಟ. ಒಂದೊಂದು ಸೀನಲ್ಲಿ ಒಂದೊಂದು ರೀತಿ ಕಾಣಿಸಬೇಕಿತ್ತು. ನಾನು ಅದಾಗಲೇ ಮೂರು ನಾಲ್ಕು ವರ್ಷಗಳಿಂದ ಬೇರೆ ಭಾಷೆಗಳಲ್ಲಿ ನಟಿಸಿದ್ದೆ. ಆದರೆ ರವಿಚಂದ್ರನ್ ಅವರು ನೀಡಿದ ಪಾತ್ರ ಎಲ್ಲಕ್ಕಿಂತ ವಿಭಿನ್ನವಾಗಿತ್ತು. ರವಿ ಸರ್ ಅವರ ನಿರ್ದೇಶನದಲ್ಲಿ ನಟಿಸುವುದು ಅಷ್ಟು ಸುಲಭವೇನಲ್ಲ. ಅವರು ಪ್ರಾಂಮ್ಟಿಂಗ್ ತೆಗೆದುಕೊಂಡು ನಟಿಸಲು ಬಿಡುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಸಂಭಾಷಣೆ ಒಂದೇ ಬಾರಿ ಹೇಳಿದರೆ ಮಾತ್ರ ಅದರಲ್ಲಿ ಫೀಲ್ ಬರುತ್ತದೆ ಎನ್ನುವ ನಂಬಿಕೆ ಇತ್ತು. ಹಾಗಾಗಿ ಎಷ್ಟು ಹೊತ್ತಾದರೂ ಪರವಾಗಿಲ್ಲ ಸಂಭಾಷಣೆ ಕಂಠಪಾಠ ಮಾಡಿಯೇ ಟೇಕ್ ತೆಗೆದುಕೊಂಡರೆ ಸಾಕು ಎಂದು ಹೇಳುತ್ತಿದ್ದರು. 

`ಮೂರುಗಂಟು' ಜ್ಯೋತಿ ರೈ ನಿಜ ಮುಖದ ಪರಿಚಯ

ಚಿತ್ರಗಳ ಹಾಡುಗಳು ಕೂಡ ತುಂಬ ಹಿಟ್ ಆಗಿದ್ದವು?
ಹೌದು. ಅವುಗಳ ಚಿತ್ರೀಕರಣ ಕೂಡ ಮತ್ತೊಂದು ವಿಭಿನ್ನ ಅನುಭವ. `ನೋಡ್ದೆ ನೋಡ್ದೆ..' ಹಾಡು ತುಂಬ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಒಂದಷ್ಟು ಸೆಟ್‌ಗಳಲ್ಲಿ ಮತ್ತು ಇನ್ನೊಂದಷ್ಟು ಔಟ್‌ಡೋರ್‌ ಕೊಕೇಶನ್‌ಗಳಲ್ಲಿ ಅವುಗಳ ಚಿತ್ರೀಕರಣವೂ ಇತ್ತು. ಅದರಲ್ಲಿ ನನಗ ಹಾಕಿದಂಥ ಒಡವೆಯ ಬಟ್ಟೆಯೇ ಸುಮಾರು 25ಕೆಜಿ ತೂಕ ಇರಬಹುದು ಅನ್ಸುತ್ತೆ. ಅದು ಕೂಡ ಕೈಗಳಿಗೆ ಟೈಟ್‌ ಆಗಿ ಚುಚ್ಚಿಕೊಂಡು ರಕ್ತ ಬಂದಿತ್ತು. ಕೊಚ್ಚೆ ನೀರಲ್ಲಿ ಇಳಿದು ನಡೆಸಿದ ಚಿತ್ರೀಕರಣದಲ್ಲಿ ಹಾಗೆಯೇ ರಕ್ತವನ್ನು ಒರೆಸಿಕೊಂಡು ಚಿತ್ರೀಕರಣ ನಡೆಸಿದ್ದೂ ಇದೆ. ಆದರೆ ಫೈನಲಿ ಹಾಡಿನ ಜೊತೆಗೆ ಚಿತ್ರವೂ ಹಿಟ್ ಆಯಿತು.

click me!