Actor Pramod: ಪ್ರೀಮಿಯರ್ ಪದ್ಮಿನಿ ಹುಡುಗನ ಕೈಯಲ್ಲಿ 6 ಚಿತ್ರಗಳು

By Kannadaprabha NewsFirst Published Jan 10, 2022, 10:12 AM IST
Highlights

‘ಅಲಂಕಾರ್ ವಿದ್ಯಾರ್ಥಿ’ ಇದು ಕಾಲೇಜು ಹುಡುಗನ ಕಾಮಿಡಿ ಕತೆ. ಕೊನೆಯ ಬೆಂಚಿನ ವಿದ್ಯಾರ್ಥಿಯ ಕತೆ. ಟೈಟಲ್‌ನಲ್ಲೇ ನನ್ನ ಪಾತ್ರವಿದೆ. ಈಗಷ್ಟೆ ಶೂಟಿಂಗ್ ಶುರುವಾಗಿದೆ. ಈ ಹುಟ್ಟು ಹಬ್ಬಕ್ಕೆ ಮತ್ತೊಂದು ಹೊಸ ಸಿನಿಮಾ ಒಪ್ಪಿರುವೆ ಎಂದು ಪ್ರಮೋದ್‌ ಹೇಳಿದರು.

ಆರ್.ಕೇಶವಮೂರ್ತಿ

ಇಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿರುವ ಕನ್ನಡ ಚಿತ್ರರಂಗದ ಭರವಸೆಯ ನಟ ಪ್ರಮೋದ್ (Pramod) ಅವರ ಸಂದರ್ಶನ.

* ತುಂಬಾ ಸಿನಿಮಾಗಳು ಒಪ್ಪಿಕೊಳ್ಳುತ್ತಿದ್ದೀರಲ್ಲ?
ಖಂಡಿತ ಇಲ್ಲ. ಬಂದಿರುವ ಎಲ್ಲ ಚಿತ್ರಗಳಿಗೂ ನಾನು ಓಕೆ ಅಂದಿದ್ದರೆ ನನ್ನ ಹುಟ್ಟು ಹಬ್ಬದ ಹೊತ್ತಿಗೆ ನನ್ನ ಕೈಯಲ್ಲಿ ಕನಿಷ್ಠ 10 ರಿಂದ 20 ಸಿನಿಮಾ ಇರುತ್ತಿದ್ದವು. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಇದ್ದಕ್ಕಿದ್ದಂತೆ ತುಂಬಾ ಸಿನಿಮಾಗಳು ಒಪ್ಪಿ, ಮೂಲೆ ಸೇರಿಬಿಡುತ್ತೀನಾ ಎನ್ನುವ ಭಯ ಇಲ್ಲ. ಇಲ್ಲಿವರೆಗೂ ನಾನು ಆಯ್ಕೆ ಮಾಡಿಕೊಂಡಿರುವ ಚಿತ್ರಗಳು ನಾನು ಇಷ್ಟಪಟ್ಟ, ನನಗೆ ಸೂಕ್ತ ಅನಿಸಿದ ಕತೆಗಳೇ.

* ಇಂದು ನಿಮ್ಮ ಹುಟ್ಟುಹಬ್ಬ. ಈ ಸಂಭ್ರಮ ಹೇಗನಿಸುತ್ತಿದೆ?
ಹೇಳಿಕೊಳ್ಳಲಾಗದಷ್ಟು ಖುಷಿ ಆಗುತ್ತದೆ. ನಾಟಕ, ಧಾರಾವಾಹಿ ಅಂತ ಇದ್ದವನಿಗೆ ಬೆಳ್ಳಿತೆರೆ ಮೇಲೆ ಬೆಳಗುವ ಅವಕಾಶ ಸಿಕ್ಕಿತು. ಸದ್ಯ ಆರು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಪ್ರತಿ ದಿನ ಒಬ್ಬರಲ್ಲ ಒಬ್ಬರು ಬಂದು ಕತೆ ಹೇಳುತ್ತಾರೆ. ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿ ಜಾಹೀರಾತು ಕೊಡುವ ಮಟ್ಟಕ್ಕೆ ನನ್ನನ್ನು ಚಿತ್ರರಂಗ ಬೆಳೆಸಿದೆ. ತೀರಾ ಹಳ್ಳಿಯಿಂದ ಬಂದ ಒಬ್ಬ ಸಾಮಾನ್ಯ ಹುಡುಗನಿಗೆ ಇದಕ್ಕಿಂತ ದೊಡ್ಡ ಉಡುಗೋರೆ ಮತ್ತೊಂದು ಇಲ್ಲ ಅನಿಸುತ್ತದೆ.

* ನಿಮ್ಮ ಜೀವನದಲ್ಲಿ ಇದೆಲ್ಲ ಘಟಿಸುತ್ತದೆ ಅಂತ ನಿರೀಕ್ಷೆ ಇತ್ತಾ?
ಖಂಡಿತ ಇರಲಿಲ್ಲ. ಆದರೆ ಏನೋ ಗೊತ್ತಿಲ್ಲದ ಒಂದು ವಿಶ್ವಾಸ ಅಂತೂ ಇದ್ದೇ ಇತ್ತು. ಅದೇ ನನ್ನ ಬಣ್ಣದ ಜಗತ್ತಿಗೆ ಕರೆದುಕೊಂಡು ಬಂತು. ಮನೆಯಲ್ಲಿ ಇಂಜಿನಿಯರ್ ಆಗು ಅಂದ್ರು. ಬೇಡ ನಾನು ಐಎಫ್‌ಎಸ್ ಆಗಬೇಕು ಅಂತ ಬಿಎಸ್ಸಿಗೆ ಸೇರಿದೆ. ಯಾಕೋ ಅದೂ ನನಗೆ ಸೂಕ್ತ ಅಲ್ಲ ಅನಿಸಿ ರಂಗಭೂಮಿಗೆ ಕಡೆ ಬಂದೆ. ಬೆನಕ ತಂಡವನ್ನು ಹಿಂಬಾಲಿಸಿದೆ. ಅಲ್ಲಿ ನಟ ಯಶ್ ಅವರು ಕೂಡ ಇದ್ದರು. ನಾಟಕಗಳಲ್ಲಿ ನಟಿಸಲು ಶುರು ಮಾಡಿದೆ. ಕಿರುತೆರೆ ಕರೆಯಿತು. ಮುಂದೆ ‘ಗೀತಾ ಬ್ಯಾಂಗಲ್ ಸ್ಟೋರ್’ ಚಿತ್ರಕ್ಕೆ ನಾಯಕನ್ನಾಗಿಸಿತು. ‘ಈ ಹುಡುಗ ತುಂಬಾ ಚೆನ್ನಾಗಿ ಅಭಿನಯಿಸುತ್ತಾನಲ್ಲ’ ಎಂದುಕೊಂಡೇ ನಿರ್ಮಾಪಕಿ ಶ್ರುತಿ ನಾಯ್ಡು ಅವರು ನನ್ನ ಕರೆದು ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಪಾತ್ರ ಕೊಟ್ಟರು. ಈ ಚಿತ್ರದ ಯಶಸ್ಸು ನಿಮಗೇ ಗೊತ್ತಿದೆ. ಇದು ನನ್ನ ಬದುಕಿನಲ್ಲಿ ಸಿಕ್ಕ ಮತ್ತೊಂದು ದೊಡ್ಡ ತಿರುವು ಪ್ರಾಮಾಣಿಕತೆ, ನಾವು ಮಾಡೋ ಕೆಲಸದಲ್ಲಿ ಆಸಕ್ತಿ ತೋರಿಸಿ, ಶ್ರಮ ಹಾಕಿದರೆ ಇಂಥ ಯಶಸ್ಸಿನ ಸಂಭ್ರಮಗಳು ಜೀವನದಲ್ಲಿ ದಕ್ಕುತ್ತವೆ ಎನ್ನುವ ಸತ್ಯ ಗೊತ್ತಾಯಿತು.

Alankar Vidyarthi: ಪ್ರಮೋದ್ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಕ್ಲ್ಯಾಪ್

* ಈಗ ಒಪ್ಪಿಕೊಂಡಿರುವ ಚಿತ್ರಗಳು ಯಾವುವು?
ಆ್ಯಕ್ಷನ್, ರೌಡಿಸಂ ಹಾಗೂ ಸ್ನೇಹದ ಸುತ್ತ ಸಾಗುವ ‘ಇಂಗ್ಲಿಷ್ ಮಂಜ’. ಇದಕ್ಕೆ ಶೂಟಿಂಗ್ ಮುಗಿದಿದ್ದು, ದುನಿಯಾ ಸೂರಿ ಅವರು ಇಂದು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಇದರಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ಮತ್ತೊಂದು ಚಿತ್ರ ‘ಅಲಂಕಾರ್ ವಿದ್ಯಾರ್ಥಿ’. ಇದು ಕಾಲೇಜು ಹುಡುಗನ ಕಾಮಿಡಿ ಕತೆ. ಕೊನೆಯ ಬೆಂಚಿನ ವಿದ್ಯಾರ್ಥಿಯ ಕತೆ. ಟೈಟಲ್‌ನಲ್ಲೇ ನನ್ನ ಪಾತ್ರವಿದೆ. ಈಗಷ್ಟೆ ಶೂಟಿಂಗ್ ಶುರುವಾಗಿದೆ. ಈ ಹುಟ್ಟು ಹಬ್ಬಕ್ಕೆ ಮತ್ತೊಂದು ಹೊಸ ಸಿನಿಮಾ ಒಪ್ಪಿರುವೆ. ಇದಕ್ಕೆ ಹೆಸರಿಟ್ಟಿಲ್ಲ. ಮುನಿಗೌಡ ನಿರ್ಮಾಣ, ಈ ಹಿಂದೆ ‘ರಾಜರು’ ಎನ್ನುವ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಮೂಲಿಮನೆ ನಿರ್ದೇಶನದ ಚಿತ್ರವಿದು. ಇವುಗಳ ಜತೆಗೆ ಮತ್ತೆ ಶ್ರುತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ನಿರ್ದೇಶನದ ಚಿತ್ರ ಇದೆ. ಜುಲೈ ತಿಂಗಳಲ್ಲಿ ಇದು ಶೂಟಿಂಗ್ ಆರಂಭವಾಗಲಿದೆ. ಹೆಸರಿಡದ ನನ್ನ ನಟನೆಯ ಮತ್ತೊಂದು ಚಿತ್ರ ಶೂಟಿಂಗ್ ಮಾಡಿಕೊಳ್ಳುತ್ತಿದೆ.

* ಓಟಿಟಿಯಲ್ಲಿ ಬಂದ ‘ರತ್ನನ್‌ಪ್ರಪಂಚ’ ಚಿತ್ರದಲ್ಲಿ ನಿಮ್ಮ ಪಾತ್ರ ತುಂಬಾ ಸೌಂಡು ಮಾಡಿತ್ತಲ್ಲ?
ಹೌದು. ನಿರ್ದೇಶಕರು ನನಗಾಗಿಯೇ ಬರೆದ ಪಾತ್ರ ಅದು. ಅವರು ಪಾತ್ರದ ರೀಡಿಂಗ್ ಕೊಟ್ಟಾಗಲೇ ತುಂಬಾ ಖುಷಿಪಟ್ಟು ಕೇಳಿದ್ದೆ. ತೆರೆ ಮೇಲೂ ನೋಡುಗರು ಖುಷಿಯಿಂದಲೇ ಅಪ್ಪಿಕೊಂಡರು. ಈ ಚಿತ್ರದಲ್ಲಿ ನನ್ನ ಪಾತ್ರ ಯಾವ ಮಟ್ಟಿಗೆ ಪ್ರಭಾವ ಬೀರಿತ್ತು ಎಂದರೆ 60 ರಿಂದ 70 ಕತೆ ಕೇಳುವಷ್ಟು

* ಸಿನಿಮಾ ಒಪ್ಪುವುದಕ್ಕೆ ನೀವು ಹಾಕಿಕೊಂಡಿರುವ ಮಾನದಂಡಗಳೇನು?
ನಿರ್ದೇಶಕ ಬಂದು ಕತೆ ಹೇಳುವಾಗ ಅದು ನಮಗೆ ಕನೆಕ್ಟ್ ಆಗಬೇಕು. ಯಾವ ರೀತಿ ಅಂದರೆ ಇದ್ದಕ್ಕಿದ್ದಂತೆ ಒಂದು ಹುಡುಗಿಯನ್ನು ನೋಡುತ್ತೇವೆ. ನೋಡಿದ ಮೊದಲ ನೋಟದಲ್ಲಿ ಆಕೆ ಮೇಲೆ ಏನೋ ಗೊತ್ತಿಲ್ಲದ ಭಾವನೆಗಳು ಹುಟ್ಟಿಕೊಂಡು ಲವ್ ಆಗುತ್ತದೆ. ದಟ್ಸ್ ಈಸ್ ಫಸ್ಟ್ ಕ್ರಶ್. ಕತೆ ಕೂಡ ಕೇಳುವಾಗಲೇ ಹುಡುಗಿಯಂತೆ ಕನೆಕ್ಟ್ ಆಗಿಬಿಡಬೇಕು. ಹಾಗೆ ಕನೆಕ್ಟ್ ಆದ ಯಾವುದೇ ಕತೆಯನ್ನು ನಾನು ಬಿಟ್ಟುಕೊಡಲ್ಲ. ಅದರಲ್ಲಿ ನಾನು ನಟಿಸುತ್ತೇನೆ

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

* ಯಾವ ರೀತಿಯ ಪಾತ್ರಗಳು ನಿಮಗೆ ಇಷ್ಟ?
ನನ್ನ ದೊಡ್ಡ ಸ್ಫೂರ್ತಿ ಡಾ ರಾಜ್‌ಕುಮಾರ್. ಅವರು ಮಾಡಿದ ಚಿತ್ರಗಳನ್ನು ನೋಡಿ ಬೆಳೆದವನು. ‘ಮಯೂರ’, ‘ನಾನೊಬ್ಬ ಕಳ್ಳ’ ರೀತಿಯ ಚಿತ್ರಗಳನ್ನು ಮಾಡುವಾಸೆ. ‘ಮಯೂರ’ದಲ್ಲಿ ಬರುವ ನಿನಗೆ ಈ ಸಿಂಹಾಸನ ಬೇಡವೇ, ಈ ಕಿರೀಟ ಬೇಡವೇ ಎನ್ನುವ ಡೈಲಾಗ್ ಇದೆಯಲ್ಲ, ಅದು ನನ್ನ ಕನಸಿನಲ್ಲಿ ಎಷ್ಟು ಸಲ ಬಂದಿದೆಯೋ ಲೆಕ್ಕವಿಲ್ಲ. ಅಣ್ಣಾವ್ರು ಮಾಡಿದ ಇಂಥ ಚಿತ್ರಗಳಲ್ಲಿ ನಟಿಸುವಾಸೆ. ಜತೆಗೆ ಹಿಂದಿಯಲ್ಲಿ ಬಂದ ‘ರಂಗದೇ ಬಸಂತಿ’ ರೀತಿಯ ಚಿತ್ರಗಳಲ್ಲಿ ಪಾತ್ರ ಮಾಡುವ ಕನಸು ನನ್ನದು.

click me!