25ನೇ ಚಿತ್ರ ಆಯ್ಕೆ ಮಾಡಿಕೊಳ್ಳಲು 84 ಕತೆ ಕೇಳಿದೆ: ನೆನಪಿರಲಿ ಪ್ರೇಮ್‌

By Suvarna News  |  First Published Feb 19, 2021, 9:02 AM IST

ಚಿತ್ರರಂಗದ ಪಾಲಿಗೆ ನೆನಪಿರಲಿ ಪ್ರೇಮ್‌, ಅಭಿಮಾನಿಗಳ ಪಾಲಿಗೆ ಲವ್ಲಿ ಸ್ಟಾರ್‌ ಆಗಿರುವ ಪ್ರೇಮ್‌ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. 24 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ತುಂಬಾ ವಿಶೇಷವಾಗಿ ಸೆಟ್ಟೇರಿ, ಟೀಸರ್‌ ಬಿಡುಗಡೆ ಮಾಡಿಕೊಂಡಿದೆ. ಈ ಹೊತ್ತಿನಲ್ಲಿ ತಮ್ಮ 25 ಹೆಜ್ಜೆ ಗುರುತುಗಳನ್ನು ಪ್ರೇಮ್‌ ನೆನಪಿಸಿಕೊಂಡಿದ್ದು ಹೀಗೆ...


ಆರ್‌ ಕೇಶವಮೂರ್ತಿ

ಚಿತ್ರರಂಗಕ್ಕೆ ಬಂದು 19 ವರ್ಷ, 24 ಚಿತ್ರಗಳಲ್ಲಿ ನಟಿಸಿದ್ದೀರಿ. ಈ ನಂಬರ್‌ ನೋಡಿದಾಗ ಏನಿಸುತ್ತದೆ?

Tap to resize

Latest Videos

undefined

ಇಲ್ಲಿ ಅವಮಾನಗಳು ಇವೆ, ನೋವು, ನಲಿವು, ದುಃಖ ಇದೆ. ಜತೆಗೆ ಸನ್ಮಾನವೂ ಸಿಕ್ಕಿದೆ. ಗೆದ್ದಿದ್ದೇನೆ, ಸೋತಿದ್ದೇನೆ. ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವನು. ಎಲ್ಲರೂ ‘ನೆನಪಿರಲಿ’ ಪ್ರೇಮ್‌ ಅಂದರು. ಎಲ್ಲಕ್ಕಿಂತ ಮುಖ್ಯವಾಗಿ 19 ವರ್ಷ ಕಳೆದರೂ ನನ್ನ ಇನ್ನೂ ಚಿತ್ರರಂಗದಲ್ಲಿ ಉಳಿಸಿಕೊಂಡ ಅಭಿಮಾನಿಗಳು, ಚಿತ್ರೋದ್ಯಮ, ಮಾಧ್ಯಮಗಳ ಪ್ರೀತಿ... ಎಲ್ಲವೂ ನೆನಪಾಗುತ್ತಿದೆ.

ಇಷ್ಟುವರ್ಷಗಳಲ್ಲಿ ನಿಮ್ಮನ್ನು ನೀವೇ ಕೇಳಿಕೊಂಡ ಪ್ರಶ್ನೆ ಯಾವುದು?

ಮಗನೇ ನೀನು ಚಿತ್ರರಂಗಕ್ಕೆ ಬಂದು 19 ವರ್ಷ ಆಯಿತು. 24 ಸಿನಿಮಾ ಮಾಡಿದ್ದೀಯಾ. 25ನೇ ಚಿತ್ರ ಈಗಷ್ಟೆಟೀಸರ್‌ ಬಿಡುಗಡೆ ಮಾಡಿಕೊಂಡಿದೆ. ಆದರೆ, ಸಿನಿಮಾಗೆ ನೀನು ಏನು ಮಾಡಿದೆ ಎಂದು ಕನ್ನಡಿ ಮುಂದೆ ನಿಂತಾಗ ನನ್ನ ನಾನೇ ಕೇಳಿಸಿಕೊಂಡೆ.

"

ಈ ಪ್ರಶ್ನೆಯಲ್ಲಿ ನಿಮಗೆ ಕಂಡ ಉತ್ತರವೇನು?

25ನೇ ಚಿತ್ರದಿಂದ ನನ್ನ ಪ್ರತಿ ಚಿತ್ರವೂ ವಿಶೇಷವಾಗಿ ಇರಬೇಕು. ಮನಸಿಗೆ ಇಷ್ಟವಾಗುವ, ಪ್ರೇಮ್‌ ಈ ರೀತಿಯಲ್ಲೂ ಸಿನಿಮಾ ಮಾಡುತ್ತಾರೆ ಎನ್ನುವಂತೆ ಅಚ್ಚರಿಗೊಳ್ಳುವ ಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನನ್ನೊಳಗಿನ ಕಲಾವಿದನಿಗಾಗಿ ಸಿನಿಮಾ ಮಾಡಬೇಕು. ನಾನು ಸೋತರು, ಗೆದ್ದರೂ ಜತೆಗೇ ಇರುವ ಅಭಿಮಾನಿಗಳ ಮುಖದಲ್ಲಿ ನನ್ನ ಚಿತ್ರಗಳು ಖುಷಿ ಮೂಡಿಸಬೇಕು. ಅಂಥ ಚಿತ್ರಗಳು ಮುಂದಿನ ದಿನಗಳಲ್ಲಿ ನನ್ನದಾಗಬೇಕು. ಇದರ ಮೊದಲ ಹೆಜ್ಜೆಯೇ ‘ಪ್ರೇಮಂ ಪೂಜ್ಯಂ’.

ಇಲ್ಲಿಯವರೆಗೂ ಮಾಡಿದ ಚಿತ್ರಗಳು ನಿಮಗೆ ಇಷ್ಟವಿರಲ್ಲವೇ?

ನನಗೂ ಕುಟುಂಬ ಇದೆ. ನನ್ನ ನಂಬಿರುವ ಹೆತ್ತವರು ಇದ್ದಾರೆ. ಹೊಟ್ಟೆಪಾಡಿನ ಪ್ರಶ್ನೆ. ನಮಗೆ ಏನೇ ಸಿದ್ಧಾಂತಗಳು ಇದ್ದರೂ ಹಸಿವಿಗೆ ಅದು ಅರ್ಥ ಆಗಲ್ಲ. ಹೊಟ್ಟೆತುಂಬಿಸಬೇಕು, ಮಕ್ಕಳನ್ನು ಓದಿಸಬೇಕು, ಸ್ವಂತ ಮನೆ ಬೇಕು, ಓಡಾಡಲು ಕಾರು ಬೇಕು, ಅಪ್ಪ- ಅಮ್ಮ, ಕೈ ಹಿಡಿದ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜತೆಗೆ ನನ್ನ ನಾನೂ ಸಾಕಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಇಲ್ಲಿವರೆಗೂ ಸಿನಿಮಾಗಳನ್ನು ಮಾಡಿಕೊಂಡು ಬಂದೆ.

ಪ್ರೇಮ್ ಪುತ್ರಿ ಹುಟ್ದಬ್ಬ; ಅಪ್ಪ ಮಗಳ ಫೋಟೋದಲ್ಲಿ ಒಂದೇ ಸಿಮಿಲ್ಯಾರಿಟಿ! 

ನಿಮ್ಮ ವೃತ್ತಿಯಲ್ಲಿ ನೀವು ಎಂದಾದರೂ ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಾ?

‘ನಾನು ಇನ್ನು ಮುಂದೆ ರೀಮೇಕ್‌ ಚಿತ್ರಗಳಲ್ಲಿ ನಟಿಸಲ್ಲ’ ಎಂದು ಹೇಳಿಕೆ ಕೊಟ್ಟೆ. ಅದರ ಪರಿಣಾಮ 2 ವರ್ಷ ಖಾಲಿ ಕೂತೆ. ಇದು ತಪ್ಪು ಅಥವಾ ಸರಿ ನಿರ್ಧಾರವೋ ಗೊತ್ತಿಲ್ಲ. ರೀಮೇಕ್‌ ಸಿನಿಮಾ ಮಾಡ್ತೀನಿ ಅಂದ್ರೂ ಅವಕಾಶ ಬರಲಿಲ್ಲ. ಆ ಎರಡು ವರ್ಷ ಖಾಲಿ ಕೂತಾಗ ನನ್ನ ನಾನೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತು.

25ನೇ ಸಿನಿಮಾ ಯಾಕೆ ನಿಮಗೆ ಅಷ್ಟೂಮಹತ್ವ?

ನನಗಾಗಿ, ನನ್ನೊಳಗಿನ ಕಲಾವಿದನಿಗಾಗಿ ಸಿನಿಮಾ ಮಾಡಬೇಕು ಅನಿಸಿದಾಗ ನಿರ್ದೇಶಕ ಡಾ ರಾಘವೇಂದ್ರ ನನ್ನ ಮುಂದೆ ಕೂತರು. ಹತ್ತು ನಿಮಿಷದಲ್ಲಿ ಕತೆ ಕೇಳುತ್ತೇನೆ ಎಂದವನು, ನಾಲ್ಕೂವರೆ ಗಂಟೆ ಅವರ ಮುಂದೆ ಕೂತು ಕತೆ ಕೇಳಿದೆ. ಸಿನಿಮಾ ನನ್ನ ಕಣ್ಣ ಮುಂದೆ ಬಂತು. ಎಲ್ಲಕ್ಕಿಂತ ಮುಖ್ಯವಾಗಿ ನಾನೇ ಬೇಕು ಅಂತ ಹುಡುಕಿಕೊಂಡು ಬಂದ ಸಿನಿಮಾ ಇದು. ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ 84 ಕತೆಗಳನ್ನು ಕೇಳಿದ್ದೆ. 85ನೇ ಕತೆಯೇ ಈ ‘ಪ್ರೇಮಂ ಪೂಜ್ಯಂ’.

ಪ್ರೇಮಂ ಪೂಜ್ಯಂ ಎನ್ನುವ ಟೈಟಲ್‌ ನಿಮ್ಮ ಹೆಸರಿಗಾಗಿ ಇಟ್ಟಿದ್ದಾ?

ಖಂಡಿತ ಇಲ್ಲ. ನಿರ್ದೇಶಕರು ನನ್ನ ಬಳಿ ಬರುವ ಮುನ್ನವೇ ಕತೆಗೆ ಟೈಟಲ್‌ ಇಟ್ಟುಕೊಂಡಿದ್ದರು. ಆದರೂ ನಾನು ಹೆಸರು ಇದು ಬೇಕಾ ಎಂದು ಕೇಳಿದ್ದೆ. ಕತೆಗೆ ಸೂಕ್ತ ಅಂತ ಕತೆ ಕೇಳಿದ ಮೇಲೆ ಗೊತ್ತಾಯಿತು. ಹೀಗಾಗಿ ನನ್ನ ಹೆಸರು, ಬಿಲ್ಡಪ್‌ ಕಾರಣಕ್ಕೆ ಈ ಟೈಟಲ್‌ ಇಟ್ಟಿಲ್ಲ.

ಪ್ರೇಮಂ ಪೂಜ್ಯಂ ಟೀಸರ್ ರಿಲೀಸ್‌; ಲವ್ಲಿ ಸ್ಟಾರ್ ಲವ್ಲಿ ಕಮ್ ಬ್ಯಾಕ್! 

ಏನಿದೆ ಈ ಚಿತ್ರದಲ್ಲಿ?

ಪ್ರೀತಿ ಎಂದಾಕ್ಷಣ ಹುಡುಗ- ಹುಡುಗಿ ನಡುವಿನ ಪ್ರೀತಿ ಎಂದುಕೊಳ್ಳುತ್ತಾರೆ. ಪ್ರಕೃತಿ, ಸಮಾಜ, ಸ್ನೇಹಿತರು, ವೃತ್ತಿ, ಅಪ್ಪ-ಅಮ್ಮ... ಹೀಗೆ ಎಲ್ಲವನ್ನೂ ಪ್ರೀತಿಸಿ ಎನ್ನುತ್ತದೆ ಸಿನಿಮಾ. ಜತೆಗೆ ಸಂಬಂಧಗಳ ಮಹತ್ವವನ್ನೂ ಹೇಳಿದೆ. ನಾನು ಈ ಚಿತ್ರದಲ್ಲಿ ಒಂದು ಮಗುವಿನಂತೆ ಕಾಣುತ್ತೇನೆ. ಇದನ್ನು ಎಷ್ಟುನವಿರಾಗಿ ಹೇಳಿದ್ದಾರೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.

ಈ ಚಿತ್ರದ ಶೂಟಿಂಗ್‌ ಸನ್ನಿವೇಶಗಳನ್ನು ನೆನಪಿಸಿಕೊಂಡರೆ?

ವಿಯೆಟ್ನಾಂನಲ್ಲಿ ಚಿತ್ರೀಕರಣ ಮಾಡಿದ್ದು. 80 ಜನರ ತಂಡದೊಂದಿಗೆ ಅಲ್ಲಿಗೆ ಹೋಗಿ, ಛಾಯಾಗ್ರಾಹಕ ನವೀನ್‌ ಕುಮಾರ್‌ ಹೇಳಿದಂತೆ ಮೇಕಪ್‌ ಇಲ್ಲದೆ ಕ್ಯಾಮೆರಾ ಮುಂದೆ ನಿಂತಿದ್ದು, ಡಿಸೆಂಬರ್‌ ತಿಂಗಳ ನಡುಗುವ ಚಳಿಯಲ್ಲಿ ನಟಿಸಿದ್ದು.

ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ನೀವು ಮತ್ತೊಂದು ಮೆಟ್ಟಿಲು ಹತ್ತುತ್ತಿದ್ದೀರಾ?

ನಾನು ಮಾತ್ರವಲ್ಲ, ಕನ್ನಡ ಚಿತ್ರರಂಗವೇ ದೊಡ್ಡ ಮಟ್ಟದಲ್ಲಿ ವಿಜಯ ಪತಾಕೆ ಹಾರಿಸುತ್ತಿದೆ. ಈಗ ಕನ್ನಡ ಸಿನಿಮಾ ಎಂದರೆ ಬುಜ್‌ರ್‍ ಖಲೀಫಾ ಮೇಲೆ ಹಾರಾಡುತ್ತಿದೆ, ಕನ್ನಡ ಸಿನಿಮಾ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ(ಕೆಜಿಎಫ್‌), ಕನ್ನಡ ಸಿನಿಮಾಗೆ ಚಿತ್ರಮಂದಿರ ತೊಂದರೆ ಆದರೆ ಪರಭಾಷೆಯವರೇ ಕರೆದು ಥಿಯೇಟರ್‌ಗಳನ್ನು ಕೊಡುತ್ತಿದ್ದಾರೆ (ರಾಬರ್ಟ್‌). ಇಂಥ ಕನ್ನಡ ಸಿನಿಮಾ ದಿನಗಳಲ್ಲಿ ನಾನೂ ಇದ್ದೇನೆ. ನನ್ನ ಸಿನಿಮಾ ಕೂಡ ಎಲ್ಲರನ್ನೂ ತಲುಪುತ್ತದೆ.

click me!