ಅಪ್ಪನಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದು ಭಾರೀ ಆರಾಮವಾಗಿತ್ತು: ನಟೇಶ್‌ ಹೆಗಡೆ

By Kannadaprabha News  |  First Published Oct 22, 2021, 10:23 AM IST

‘ಪೆಡ್ರೋ’ ಎಂಬ ಸೂಕ್ಷ್ಮ ಕಥಾಹಂದರದ ಚಿತ್ರದ ನಿರ್ದೇಶನಕ್ಕೆ ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬೆಸ್ಟ್‌ ಡೈರೆಕ್ಟರ್‌ ಪ್ರಶಸ್ತಿ ಪಡೆದವರು ನಟೇಶ್‌ ಹೆಗಡೆ. ರಿಶಬ್‌ ಶೆಟ್ಟಿಈ ಚಿತ್ರದ ನಿರ್ಮಾಪಕರು. ಮನುಷ್ಯನ ಬದುಕಿನ ಡಿಗ್ನಿಟಿಯೇ ಅವಗಣನೆಗೆ ತುತ್ತಾಗುವುದು ತನ್ನನ್ನು ಘಾಸಿ ಮಾಡುತ್ತದೆ ಎನ್ನುವ ಶಿರಸಿಯ ನಟೇಶ್‌ ಇಲ್ಲಿ ಸಿನಿಮಾ, ಬದುಕಿನ ಬಗ್ಗೆ ಮಾತಾಡಿದ್ದಾರೆ.


ಪ್ರಿಯಾ ಕೆರ್ವಾಶೆ

ಪೆಡ್ರೋ ಅಂದ್ರೆ ಯಾರು?

Latest Videos

undefined

ನನ್ನ ಪ್ರಕಾರ ಆತ ನಮ್ಮ ಥರದವನೇ. ಅವನೊಬ್ಬ ಮಧ್ಯ ವಯಸ್ಸಿನ ಎಲೆಕ್ಟ್ರೀಷಿಯನ್‌. ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವನು. ಆ್ಯಕ್ಸೆಪ್ಟೆನ್ಸ್‌ಗೋಸ್ಕರ ಒದ್ದಾಡುವ ಮನುಷ್ಯ.

ಈ ಮನುಷ್ಯ ನಿಮಗೆಲ್ಲಿ ಸಿಕ್ಕಿದ?

ಚಿತ್ರದಲ್ಲಿ ಆತ್ಮಕತೆಗೆ ಹತ್ತಿರವಾಗುವ ಸಾಕಷ್ಟುಅಂಶಗಳಿವೆ. ಇಲ್ಲಿ ನನ್ನ ತಂದೆಯೇ ಎಲೆಕ್ಟ್ರಿಷಿಯನ್‌ ಆಗಿ ನಟಿಸುತ್ತಿದ್ದಾರೆ. ಅವರು ನಿಜ ಜೀವನದಲ್ಲೂ ಎಲೆಕ್ಟ್ರಿಷಿಯನ್‌ ಆಗಿದ್ದವರೇ. ಇದರಲ್ಲಿ ಬರುವ ಸಾಕಷ್ಟುಅಂಶಗಳು ನಮ್ಮ ಜೀವನದಲ್ಲಿ ಸಂಭವಿಸಿದವು. ಇದರ ಜೊತೆಗೆ ನಾವೀಗ ನೋಡುತ್ತಿರುವ ಹೊರಗಿನ ಜಗತ್ತೂ ಸೇರಿ ಪೆಡ್ರೋ ಪಾತ್ರ ಆಗಿರಬಹುದು.

ಫಿಲ್ಮ್ ಬಜಾರ್ ತೆಕ್ಕೆಗೆ ಕನ್ನಡ ಸಿನಿಮಾ ಪೆದ್ರೋ

ನಿಮ್ಮ ತಂದೆಗೆ ಆಕ್ಷನ್‌ ಕಟ್‌ ಹೇಳಿದ ಸನ್ನಿವೇಶ ಹೇಗಿತ್ತು?

ಭಾರೀ ಆರಾಮವಾಗಿತ್ತು. ಬಹಳ ವರ್ಷದಿಂದ ನೋಡಿದವ್ರಾದ್ದರಿಂದ. ಬದುಕಿನ ಸಾಕಷ್ಟುಏರಿಳಿತಗಳನ್ನು ನಾವಿಬ್ಬರೂ ಜೊತೆಯಾಗಿಯೇ ನೋಡಿದ್ದೇವೆ. ಅವರು ನನಗೆ ಸಾಕಷ್ಟುಪರಿಚಯ ಅಂತ ಅನಿಸುತ್ತೆ (ನಗು). ಕೆಲವೊಮ್ಮೆ ಕಷ್ಟಅಂತಲೂ ಅನಿಸ್ತಿತ್ತು, ಒಂದು ಸೀನ್‌ ವಿವರಿಸುವಾಗ ಅದರ ಮೂಲ ಏನು ಅಂತ ಅವ್ರಿಗೂ ಗೊತ್ತಿರುತ್ತೆ, ನಂಗೂ ಗೊತ್ತಿರುತ್ತೆ. ಇದೆಲ್ಲನ್ನೆಲ್ಲ ಅನುಭವಿಸೋದಕ್ಕೆ ಅವರು ಬಹಳ ಓಪನ್‌ ಆಗಿದ್ರು, ನಾನೂ ಓಪನ್‌ ಆಗಿದ್ದೆ. ಹೀಗಾಗಿ ಸಲೀಸಾಯ್ತು. ಅವರಿಗೆ ರಂಗಭೂಮಿ ಹಿನ್ನೆಲೆ ಎಲ್ಲ ಏನಿಲ್ಲ. ನಮ್ಮ ಡಿಓಪಿ ವಿಕಾಸ, ಸೌಂಡ್‌ ಡಿಸೈನರ್‌ ಶ್ರೇಯಾಂಕ್‌ ಸೇರಿದಂತೆ ಎಲ್ಲ ಅಸಿಸ್ಟೆಂಟ್‌ಗಳು ನನ್ನ ಫ್ರೆಂಡ್ಸೇ ಆಗಿದ್ರು.

ಪೆಡ್ರೋದಲ್ಲಿ ಬೇರೆ ಪಾತ್ರಗಳೇನಿವೆ?

ಪೆಡ್ರೋ ತಮ್ಮ ಬಸ್ತಾ್ಯವೊ, ಕೆಲ್ಸ ಕೊಟ್ಟಿರೋ ಹೆಗಡೆ, ಪೆಡ್ರೋ ತಮ್ಮನ ಹೆಂಡತಿ ಜ್ಯೂಲಿ, ಅವಳ ಮಗು ವಿನು ಇವಿಷ್ಟುಮುಖ್ಯಪಾತ್ರಗಳು. ರಾಜ್‌ ಬಿ ಶೆಟ್ಟಿ, ಮೇದಿನಿ ಕೆಳಮನೆ ಬಿಟ್ಟರೆ ಉಳಿದೆಲ್ಲ ನನ್ನೂರಿನ ಮಂದಿಯೇ ನಟಿಸಿದ್ದಾರೆ.

ನಿಮ್ಮನ್ನು ಕಂಗೆಡಿಸುವ, ನಿಮ್ಮೊಳಗೆ ಕತೆಯಾಗುವ ವಿಚಾರಗಳೇನು?

ಒಬ್ಬ ಮನುಷ್ಯನ ಬದುಕಿನ ಡಿಗ್ನಿಟಿಯನ್ನು ನಾವು ಕಡೆಗಣಿಸೋದು ನನ್ನನ್ನು ಯಾವಾಗಲೂ ಟ್ರಿಗರ್‌ ಮಾಡುತ್ತೆ. ಮೊದಲ ಬಾರಿ ಈ ಯೋಚನೆ ಬಂದಿದ್ದು ಎರಡ್ಮೂರು ವರ್ಷ ಹಿಂದೆ ಪರೇಶ್‌ ಮೇಸ್ತ ಕೊಲೆ ಆದಾಗ. ಕೊಲೆಯ ಬಳಿಕ ಎರಡು ಪಾರ್ಟಿಗಳ ನಡುವೆ ಈ ಬಗ್ಗೆ ಮಾತುಕತೆಗಳೆಲ್ಲ ಆದವು. ಆಮೇಲೆ ಎಲೆಕ್ಷನ್‌ ಆಂತೆಲ್ಲ ಆಯ್ತು, ಯಾರು ಕೊಂದರು, ಏನಾಯ್ತು ಅಂತಲೂ ಗೊತ್ತಾಗಲಿಲ್ಲ, ಅದಕ್ಕೊಂದು ಅಂತ್ಯವೇ ಸಿಗಲಿಲ್ಲ. ಬೆಳಗ್ಗೆ ಒಂದು ಹೆಣ ಸಿಕ್ತು ಅಷ್ಟೇ. ಇಷ್ಟುಸುಲಭನಾ ಮನುಷ್ಯನ ಜೀವ ಅನ್ನೋದು..

ನಿಮ್ಮ ಕಿರುಚಿತ್ರ ಕುರ್ಲಿಯಲ್ಲೂ ಈ ಚಿಂತನೆಯ ಛಾಯೆ ಕಂಡಿತು.. ಪೆಡ್ರೋದಲ್ಲೂ ಇದೆಯಾ?

ಒಂದು ಕತೆಯನ್ನೇ ನಾವು ಮತ್ತೆ ಮತ್ತೆ ಹೇಳ್ತಾ ಇರ್ತೀವಲ್ಲ.. ಎಷ್ಟಂದರೂ ನನ್ನ ತಲೆಯಿಂದಲೇ ಬಂದಿರುವ ಕತೆಗಳಲ್ವಾ. ಕುರ್ಲಿಗಿಂತಲೂ ಆ ನಂತರ ಬಂದ ‘ಡಿಸ್ಟಂಟ್‌- ನಮಗೆ ನಾವು ಗೋಡೆಗೆ ಮಣ್ಣು’ ಅನ್ನೋ ಕಿರುಚಿತ್ರಕ್ಕೂ ಪೆಡ್ರೋಗೂ ಸಾಮ್ಯತೆ ಇದೆ.

'ಪೆಡ್ರೋ' ಟೀಸರ್‌ ಬಿಡುಗಡೆ!

‘ಪೆಡ್ರೋ’ ಸಿನಿಮಾ ಬಗ್ಗೆ ನಮ್ಮ ಜನಕ್ಕೆ ಗೊತ್ತಾಗಿದ್ದು ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮೇಲೆ. ಯಾಕೆ ಹೀಗಾಗುತ್ತೆ?

ಬೇರೆ ದಾರಿಯೇ ಇಲ್ಲ. ಸುಮ್ನೆ ನಾನು ಸಿನಿಮಾ ಮಾಡಿದ್ದೀನಿ ಅಂದ್ರೆ ಇಲ್ಲಿ ಯಾವ ಬೆಲೆಯೂ ಇಲ್ಲ. ಯಾರೋ ಹೇಳಬೇಕು ಒಳ್ಳೆ ಸಿನಿಮಾ ಅಂತ, ಆವಾಗ ನೋಡ್ತೀವಿ ಅಂತಾರೆ. ಚಿತ್ರದಲ್ಲಿ ಸ್ಟಾರ್‌ ಇಲ್ಲದಿದ್ದಾಗಲಂತೂ, ಹೊರಗಡೆ ಸಿನಿಮಾಕ್ಕೆ ಹೆಸರು ಬಂದಾಗ ಮಾತ್ರ ತಿರುಗಿ ನೋಡ್ತಾರೆ. ನೋಡೋಣ, ನಮ್ಗೂ ಒಳ್ಳೆ ಕಾಲ ಬರಬಹುದು.

ಪೆಡ್ರೋ ರಿಲೀಸ್‌?

ಹೊಸ ವರ್ಷದ ಆರಂಭದಲ್ಲಿ. ಇನ್ನೂ ಡೇಟ್‌ ಫಿಕ್ಸ್‌ ಆಗಿಲ್ಲ.

ನಿಮ್ಮ ಹಿನ್ನೆಲೆ?

ನಮ್ಮದು ಶಿರಸಿ ಹತ್ರ ಕೊಟ್ಟಳ್ಳಿ ಅಂತ ಸಣ್ಣ ಊರು. ಧಾರವಾಡದಲ್ಲಿ ಜರ್ನಲಿಸಂ ಓದಿದ್ದು. ಸ್ವಲ್ಪ ಸಮಯ ಪತ್ರಕರ್ತನಾಗಿ ಪತ್ರಿಕೆಗಳಲ್ಲಿ, ಆಮೇಲೆ ಮನರಂಜನಾ ಚಾನೆಲ್‌ನಲ್ಲಿ ಕೆಲಸ ಮಾಡಿದೆ. ಆಮೇಲೆ ಸಾಕಾಯ್ತು ಅಂತ ವಾಪಾಸ್‌ ಊರಿಗೆ ಹೋದೆ. ಇಲ್ಲಿಂದಲೇ ಸಿನಿಮಾ ಮಾಡಬೇಕು ಅಂತ ಪ್ರಯತ್ನ ಮಾಡ್ತಿದ್ದೀನಿ. ಅಬ್ಬಾಸ್‌ ಕಿರೋಸ್ತೊಮಿ, ಸಿದ್ಧಲಿಂಗಯ್ಯ, ಥೈವಾನ್‌ನ ಒಬ್ಬ ನಿರ್ದೇಶಕರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ.

click me!