
ನವದೆಹಲಿ: ಭಾರತವೇನಾದರೂ ಸಿಂಧೂ ನದಿ ಒಪ್ಪಂದ ಮುರಿದು ಪಾಕಿಸ್ತಾನಕ್ಕೆ ಹರಿಯುವ ನೀರು ತಡೆಯಲು ಡ್ಯಾಂ ನಿರ್ಮಾಣ ಮಾಡಿದರೆ ಅದನ್ನು ನಾಶ ಮಾಡಲಾಗುವುದು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಂ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಸಚಿವ ಖ್ವಾಜಾ ಆಸಿಫ್ ಭಾರತವನ್ನು ಕೆಣಕುವ ಹೇಳಕೆ ನೀಡಿದ್ದಾರೆ.
ಪಹಲ್ಗಾಂ ಉಗ್ರ ದಾಳಿ ಬಳಿಕ ನೀರು ಮತ್ತು ರಕ್ತ ಜತೆ ಜತೆಯಾಗಿ ಹರಿಯಲು ಸಾಧ್ಯವಿಲ್ಲ ಎಂದು ಹೇಳಿರುವ ಭಾರತ, ಸಿಂಧೂ ನದಿ ಒಪ್ಪಂದಕ್ಕೆ ತಡೆ ಹಿಡಿದಿದೆ. ಪಾಕಿಸ್ತಾನದ ಶೇ.80ರಷ್ಟು ಭಾರತದಿಂದ ಹರಿದುಹೋಗುವ ನೀರನ್ನೇ ಅವಲಂಬಿಸಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ತಾನ ಭಾರತಕ್ಕೆ ಈ ರೀತಿ ಗೊಡ್ಡುಬೆದರಿಕೆ ಹಾಕಲು ಮುಂದಾಗಿದೆ.
‘ಭಾರತವೇನಾದರೂ ಪಾಕಿಸ್ತಾನಕ್ಕೆ ಹರಿಯುವ ನದಿ ನೀರು ತಿರುಗಿಸುವ ಯಾವುದೇ ಪ್ರಯತ್ನ ನಡೆಸಿದರೂ ಅದನ್ನು ‘ಆಕ್ರಮಣಶೀಲತೆ’ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಭಾರತ ನೀರು ತಡೆಯಲು ಡ್ಯಾಂ ನಿರ್ಮಿಸಿದರೆ ಪಾಕಿಸ್ತಾನ ಅದನ್ನು ಒಡೆದು ಹಾಕಲಿದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖ್ವಾಜಾ ಆಸಿಫ್ ಹೇಳಿದ್ದಾರೆ.
ಬಿಜೆಪಿ ಕಿಡಿ
ಆಸಿಫ್ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ತೀವ್ರ ವ್ಯಂಗ್ಯವಾಡಿದ್ದಾರೆ. ಇದೆಲ್ಲ ಟೊಳ್ಳು ಬೆದರಿಕೆಗಳು. ಇಂಥ ಹೇಳಿಕೆಗಳು ಪಾಕಿಸ್ತಾನಿಯರಲ್ಲಿ ಸೃಷ್ಟಿಯಾಗಿರುವ ಆತಂಕವನ್ನು ಪ್ರದರ್ಶಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
''ಖ್ವಾಜಾ ಆಸಿಫ್ ಆತಂಕಕ್ಕೊಳಗಾಗಿರುವುದು ಸ್ಪಷ್ಟ. ಅವರು ಪಾಕ್ ರಕ್ಷಣಾ ಸಚಿವರಾಗಿದ್ದರೂ ಅವರಿಗೆ ಸಚಿವಾಲಯದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅವರು ಒಬ್ಬ ಹೇಳಿಕೆಯ ಸಚಿವ. ಹೀಗಾಗಿ ಅವರು ಪದೇ ಪದೆ ಟೊಳ್ಳು ಬೆದರಿಕೆ ಹಾಕುತ್ತಲೇ ಇರುತ್ತಾರೆ. ಪಾಕಿಸ್ತಾನಿಯರು ರಾತ್ರಿ ನಿದ್ದೆಯೇ ಬರುತ್ತಿಲ್ಲ'' ಎಂದು ಹೇಳಿದ್ದಾರೆ.
ಭಾರತವೇನಾದರೂ ಪಾಕಿಸ್ತಾನಕ್ಕೆ ಹರಿಯುವ ನದಿ ನೀರು ತಿರುಗಿಸುವ ಯಾವುದೇ ಪ್ರಯತ್ನ ನಡೆಸಿದರೂ ಅದನ್ನು ‘ಆಕ್ರಮಣಶೀಲತೆ’ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಭಾರತ ನೀರು ತಡೆಯಲು ಡ್ಯಾಂ ನಿರ್ಮಿಸಿದರೆ ಪಾಕಿಸ್ತಾನ ಅದನ್ನು ಧ್ವಂಸ ಮಾಡಲಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಪಾಕ್ ಸಚಿವನ ಎಕ್ಸ್ ಖಾತೆ ಬ್ಲಾಕ್
ಪಾಕ್ ಪ್ರಧಾನಿ ಸೇರಿದಂತೆ ಹಲವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಭಾರತ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ‘ಭಾರತವು 36 ಗಂಟೆಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ’ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಸಚಿವ ಅತಾವುಲ್ಲಾ ತರಾರ್ ಎಕ್ಸ್ ಖಾತೆಯನ್ನೂ ಭಾರತದಲ್ಲಿ ನಿರ್ಬಂಧಿಸಲಾಗಿದೆ
ಇದನ್ನೂ ಓದಿ: ಪಾಕ್‌ಗೆ ಪಾಠ ಕಲಿಸುವ ಸಮಯ, CWC ಸಭೆಯಲ್ಲಿ ಪೆಹಲ್ಗಾಂ ದಾಳಿ ಕುರಿತು ಕಾಂಗ್ರೆಸ್ ನಿರ್ಣಯ
ಪಾಕಿಸ್ತಾನದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಅತಾವುಲ್ಲಾ ಕಳೆದ ಬುಧವಾರ, ‘ಭಾರತವು 24 ರಿಂದ 36 ಗಂಟೆಗಳಲ್ಲಿ ನಮ್ಮ ದೇಶದ ಮೇಲೆ ಮಿಲಿಟರಿ ದಾಳಿ ನಡೆಸಬಹುದು ಎನ್ನುವ ಗುಪ್ತಚರ ಮಾಹಿತಿ ಇದೆ’ ಎಂದಿದ್ದರು. ಈ ಬೆನ್ನಲ್ಲೇ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ತರಾರ್ ಎಕ್ಸ್ ಖಾತೆಯನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದ್ದು, ಅವರ ಎಕ್ಸ್ ಖಾತೆಯ ಪ್ರೊಫೈಲ್ ಚಿತ್ರ ಮತ್ತು ಮುಖಪುಟವೂ ಗೋಚರಿಸುತ್ತಿಲ್ಲ.
ಪಾಕ್-ಭಾರತ ಗಡಿಯಲ್ಲಿ ಗುಂಡಿನ ಚಕಮಕಿ
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ವಿವಿಧ ವಲಯಗಳಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಸತತ 9ನೇ ರಾತ್ರಿಯೂ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಮೇ 2 ಮತ್ತು 3ರ ರಾತ್ರಿ, ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಉರಿ ಮತ್ತು ಅಖ್ನೂರ್ ಪ್ರದೇಶಗಳ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆಯು ತಕ್ಷಣ, ತಕ್ಕ ಪ್ರತಿಕ್ರಿಯೆ ನೀಡಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ’ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಜೈಲಲ್ಲೇ ಲೈಂಗಿಕ ದೌರ್ಜನ್ಯ, ಮೆಡಿಕಲ್ ರಿಪೋರ್ಟ್‌ನ ಅಸಲಿಯತ್ತೇನು..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.