ಮೂಡುಬಿದರೆಯಲ್ಲಿ ಮೂಡಿದ ಕನಸು ಯಶಾ; Exclusive ಸಂದರ್ಶನ!

By Kannadaprabha NewsFirst Published Dec 26, 2020, 9:47 AM IST
Highlights

ಸಿನಿಮಾದಲ್ಲಿ ಗೆಲ್ಲಬೇಕು, ನಿಲ್ಲಬೇಕು ಎಂದರೆ ಒಳ್ಳೆಯ ಕತೆ, ಟೀಮ್‌ ಸಿಕ್ಕಬೇಕು. ಇದರ ಜೊತೆಗೆ ಪ್ರತಿಭೆಯೂ ಇದ್ದರೆ ಅವಕಾಶಗಳು ಮನೆ ಬಾಗಿಲಿಗೆ ಬರುತ್ತವೆ. ಹೀಗೆ ಮೊದಲ ಚಿತ್ರ ಚಿತ್ರೀಕರಣದ ಹಂತದಲ್ಲಿ ಇದ್ದಾಗಲೇ ಮತ್ತೊಂದು ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡವರು ಯಶಾ ಶಿವಕುಮಾರ್‌. ಯೋಗರಾಜ್‌ ಭಟ್ಟರ ಶಿಷ್ಯ ಹರಿಪ್ರಸಾದ್‌ ನಿರ್ದೇಶನ ‘ಪದವಿ ಪೂರ್ವ’ ಚಿತ್ರಕ್ಕೆ ನಾಯಕಿಯಾಗಿದ್ದ ಯಶಾ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ಪೃಥ್ವಿ ಅಂಬರ್‌ ನಟನೆಯ ‘ಶಿವಪ್ಪ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗ ಎರಡೂ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಭರವಸೆಯ ನಟಿ ಯಶಾ ಶಿವಕುಮಾರ್‌ ಅವರೊಂದಿಗೆ ಮಾತುಕತೆ.

ಕೆಂಡಪ್ರದಿ

ನಿಮ್ಮ ಹಿನ್ನೆಲೆ ಏನು ಯಶಾ?

ಹುಟ್ಟಿಬೆಳೆದದ್ದೆಲ್ಲಾ ಬೆಂಗಳೂರು. ಓದಿದ್ದೂ ಅಲ್ಲಿಯೇ. ಮೊದಲಿನಿಂದಲೂ ನನಗೆ ನಟನೆ, ಭರತನಾಟ್ಯದಲ್ಲಿ ಆಸಕ್ತಿ ಇತ್ತು. ಡಿಗ್ರಿ ಮಾಡಲು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿಗೆ ಸೇರಿದೆ. ಅಲ್ಲಿ ಕಥಕ್‌, ಮಣಿಪುರಿ ಮೊದಲಾದ ನೃತ್ಯಗಳನ್ನು ಕಲಿತುಕೊಂಡೆ. ಜೊತೆಗೆ ತುಳು ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡೆ. ಇದರಿಂದಾಗಿ ನನಗೆ ರಾಜ್‌ ಬಿ. ಶೆಟ್ಟಿಅವರ ತಂಡ ನಿರ್ಮಾಣ ಮಾಡುತ್ತಿರುವ ‘ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌’ ಎನ್ನುವ ತುಳು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯಿತು.

ಪದವಿಪೂರ್ವ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?

ನಟನೆಯಲ್ಲಿ ನನಗೆ ಆಸಕ್ತಿ ಇದ್ದ ಕಾರಣ ಅವಕಾಶಗಳಿಗಾಗಿ ಕಾಯುತ್ತಿದ್ದೆ. ಸೆಲಬ್ರಿಟಿ ಮ್ಯಾನೇಜ್‌ಮೆಂಟ್‌ ಕಂಪನಿಯೊಂದು ಆಯೋಜಿಸಿದ್ದ ಈವೆಂಟ್‌ನಲ್ಲಿ ಭಾಗವಹಿಸಿ ಮಿಸ್‌ ಬೆಂಗಳೂರು, ಮಿಸ್‌ ಕರ್ನಾಟಕ ಪ್ರಶಸ್ತಿಯನ್ನೂ ನನ್ನದಾಗಿಸಿಕೊಂಡಿದ್ದೆ. ಇವೆಲ್ಲಾ ಆಗುತ್ತಿದ್ದಾಗಲೇ ಯೋಗರಾಜ್‌ ಭಟ್‌ ಅವರನ್ನು ಭೇಟಿಯಾಗಿ ಆಡಿಷನ್‌ ಕೊಟ್ಟು ಬಂದಿದ್ದೆ. ಕೆಲ ದಿನಗಳ ನಂತರ ಅವರೇ ನನಗೆ ಕಾಲ್‌ ಮಾಡಿ ನಾನು ಆಯ್ಕೆಯಾಗಿರುವ ವಿಷಯ ತಿಳಿಸಿದರು. ಮೊದಲ ಚಿತ್ರ ‘ಪದವಿಪೂರ್ವ’ದ ಮೂಲಕ ನಾನು ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದುಕೊಂಡೆ.

ಭಟ್ಟರ ಪದವಿಪೂರ್ವ ಸೇರಿದ ಯಶಾ ಶಿವಕುಮಾರ್, ಮಂಗಳೂರು ಬಾಲೆ! 

ನಟಿಯಾಗಿ ನಮ್ಮ ತಯಾರಿ ಯಾವ ರೀತಿ ಇದೆ?

ಪ್ರಾರಂಭದ ಹೆಜ್ಜೆಗಳನ್ನು ಇಡುತ್ತಿರುವ ನನಗೆ ಎಲ್ಲಾ ಬಗೆಯ ಅವಕಾಶಗಳೂ ತುಂಬಾ ಮುಖ್ಯ. ಈಗ ಪದವಿಪೂರ್ವ ಚಿತ್ರಕ್ಕೆ ಒಂದೂವರೆ ತಿಂಗಳ ವರ್ಕ್ಶಾಪ್‌ ಮಾಡಿದ್ದಾರೆ. ಹಿಂದಿನಿಂದಲೂ ನನಗೆ ನಾಟ್ಯ, ನಟನೆಯ ಬಗ್ಗೆ ಆಸಕ್ತಿ ಇದ್ದುದ್ದರಿಂದ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಅದೆಲ್ಲವೂ ಈಗ ನನಗೆ ಕ್ಯಾಮಾರಾ ಮುಂದೆ ನಿಂತು ಧೈರ್ಯವಾಗಿ ನಟಿಸಲು ಸಹಾಯ ಮಾಡುತ್ತಿವೆ.

ಪದವಿಪೂರ್ವದಲ್ಲಿ ಯಾವ ರೀತಿಯ ಪಾತ್ರ ನಿಮ್ಮದು?

ಇದೊಂದು ಕಾಲೇಜ್‌ ಸ್ಟೋರಿ. ರಾಜಿ ಎನ್ನುವ ಪಾತ್ರ ಮಾಡುತ್ತಿದ್ದೇನೆ. ಮೂರು ಮುಖ್ಯ ಪಾತ್ರಗಳಲ್ಲಿ ನನ್ನದೂ ಒಂದು. ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ಡೀಸೆಂಟ್‌ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ತುಂಬಾ ಹೆಚ್ಚು ಸ್ಪೇಸ್‌ ಇದೆ ನನಗೆ. ಸ್ನೇಹ, ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಸೂಕ್ಷ್ಮವಾದ ಕತೆಯುಳ್ಳ ಚಿತ್ರವಿದು. ಈಗಾಗಲೇ ಮೊದಲ ಶೆಡ್ಯೂಲ್‌ ಶೂಟಿಂಗ್‌ ಬೆಂಗಳೂರಿನಲ್ಲಿ ಕಂಪ್ಲೀಟ್‌ ಆಗಿದೆ. ಸೆಕೆಂಡ್‌ ಶೆಡ್ಯೂಲ್‌ ಶೂಟಿಂಗ್‌ ನಡೆಯುತ್ತಿದೆ.

ನಿಮ್ಮ ಎರಡನೇ ಚಿತ್ರ ಶಿವಪ್ಪದ ಬಗ್ಗೆ ಹೇಳುವುದಾದರೆ?

ಶಿವಪ್ಪ ನನಗೆ ಸಿಕ್ಕ ಎರಡನೇ ದೊಡ್ಡ ಅವಕಾಶ. ಪ್ರಾರಂಭದಲ್ಲಿಯೇ ದೊಡ್ಡ ದೊಡ್ಡ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ. ಪದವಿಪೂರ್ವ ಚಿತ್ರ ಅನೌನ್ಸ್‌ ಆಗಿ, ನನ್ನ ಆಯ್ಕೆಯ ಬಗ್ಗೆ ಮಾತುಕತೆಗಳು ಶುರುವಾಗಿದ್ದವು. ಆಗ ಶಿವಪ್ಪ ಚಿತ್ರತಂಡ ನನ್ನನ್ನು ಆಯ್ಕೆ ಮಾಡಿಕೊಂಡಿತು. ಇಲ್ಲಿ ಡಾಲಿ ಧನಂಜಯ್‌ಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದರ ಚಿತ್ರೀಕರಣವೂ ಆರಂಭವಾಗಿದೆ.

ಶಿವರಾಜ್‌ಕುಮಾರ್ ಅಭಿನಯದ 'ಶಿವಪ್ಪ' ಚಿತ್ರದಲ್ಲಿ ಡಾಲಿ ಜೊತೆ ಪೃಥ್ವಿ!

ಶಿವಪ್ಪ ಶೂಟಿಂಗ್‌ ಅನುಭವ ಹೇಗಿತ್ತು?

ಮೊದ ಮೊದಲು ಭಯವಾಗ್ತಿತ್ತು. ಶಿವಣ್ಣ, ಧನಂಜಯ್‌, ಅಂಜಲಿ, ನಿರ್ದೇಶಕ ವಿಜಯ್‌ ಮಿಲ್ಟನ್‌ ಇವರನ್ನು ಹೇಗೆ ಫೇಸ್‌ ಮಾಡುವುದು, ದೊಡ್ಡ ಸ್ಟಾರ್‌ಗಳ ನಡುವಲ್ಲಿ ನಾನು ಹೇಗೆ ನಡೆದುಕೊಳ್ಳಬೇಕು ಎನ್ನುವ ಅಳುಕು ಇತ್ತು. ಆದರೆ ಸೆಟ್‌ಗೆ ಹೋದ ಮೇಲೆ ಶಿವಣ್ಣ, ಧನಂಜಯ್‌ ಇವರೆಲ್ಲಾ ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಆಗ ಇದ್ದ ಭಯವೆಲ್ಲಾ ಹೋಗಿ ಅವರೊಂದಿಗೆ ಧೈರ್ಯವಾಗಿ ನಟಿಸಲು ಸಾಧ್ಯವಾಯತ್ತು. ಪೃಥ್ವಿ ಅಂಬರ್‌ ಅವರು ತುಳು ಮಾತನಾಡುತ್ತಾರೆ, ನನಗೂ ತುಳು ಚೆನ್ನಾಗಿ ಬರುವುದರಿಂದ ಇಬ್ಬರೂ ತುಳುವಿನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ನಟನೆ ವಿಚಾರದಲ್ಲಿ ಎಲ್ಲರೂ ನನಗೆ ಒಳ್ಳೆಯ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ.

click me!