
* ಮದರ್ ಪ್ರಾಮಿಸ್ ಚಿತ್ರದ ಸತ್ವ ಏನು? ಆತ್ಮ ಏನು?
ನಗುವೇ ಈ ಚಿತ್ರದ ಆತ್ಮ. ನಿರ್ದೇಶಕ ಪೂರ್ಣ ಬೆಂಗಳೂರಿನಲ್ಲಿ ಅವರು ನೋಡಿರುವ ಪಾತ್ರಗಳನ್ನು ಇಟ್ಟುಕೊಂಡು ಒಂದು ವಿಡಂಬನಾತ್ಮಕವಾಗಿ ಕತೆ ಹೇಳಿದ್ದಾರೆ. ಸಿನಿಮಾ ಪೂರ್ತಿ ನಗುವಿದೆ. ಹೊಸತನವಿದೆ. ಇದೊಂದು ಗ್ಯಾಂಗ್‌ಸ್ಟರ್ ಕಾಮಿಡಿ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲಾ ವಿಚಾರವೂ ಅನಾವರಣಗೊಂಡಾಗ, ಆ ಗ್ಯಾಂಗ್‌ಸ್ಟರ್‌ಗಳೆಲ್ಲಾ ಮಕ್ಕಳ ಥರ ಅನ್ನಿಸುತ್ತಾರೆ. ನಗುವೇ ತುಂಬಿರುವ ಒಂದು ಕತೆಯ ಅಂತ್ಯದಲ್ಲಿ ಸೊಗಸಾದ ಹೊಳಹು ಇದೆ. ಅದು ಈ ಸಿನಿಮಾದ ಬೆರಗು.
* ನಿಮ್ಮ ಪಾತ್ರದ ವೈಶಿಷ್ಟ್ಯವೇನು?
ಈ ಸಿನಿಮಾದಲ್ಲಿ ನನ್ನ ಪಾತ್ರ ಒಂದು ಟ್ರ್ಯಾಕ್ ಅಷ್ಟೇ. ಈ ಸಿನಿಮಾ ಬೇರೆಲ್ಲಾ ಪಾತ್ರಗಳ ಕತೆ. ಹಾಗೆ ನೋಡಿದರೆ ಅವರೆಲ್ಲರೂ ನಗಿಸಿದರೆ ನನ್ನದೊಂದು ಗಂಭೀರ ಪಾತ್ರ. ಗಂಭೀರವಾಗಿರುತ್ತೇನೆ. ಅಮ್ಮ ಕೊಡಿಸಿ ಸ್ಪೆಂಡ್ಲರ್ ಬೈಕಿನ ಸುತ್ತಾ ಈ ಕತೆ ಸಾಗುತ್ತದೆ. ಈ ಪಾತ್ರ ನೀನು ಮಾಡಿದರೆ ಮಾತ್ರ, ನಾನು ಸಿನಿಮಾ ಮಾಡುತ್ತೇನೆ ಅಂತ ಪೂರ್ಣ ಹೇಳಿದ್ದ. ಅದಕ್ಕಾಗಿ ಮತ್ತು ಆ ಪಾತ್ರಕ್ಕಾಗಿ ಒಪ್ಪಿದೆ. ಆ ಪಾತ್ರದಲ್ಲೊಂದು ಕದಡುವ ಮೌನವಿದೆ.
* ಈ ಸಿನಿಮಾ ನಿರ್ಮಾಣ ಯಾಕೆ ಮಾಡಿದಿರಿ?
ನಾವು ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಸೋಲು, ಗೆಲುವು ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾದ ಪ್ರಯತ್ನ ಇರಬೇಕು. ಪ್ರಾಮಾಣಿಕವಾಗಿ ಕತೆ ಹೇಳಬೇಕು. ಈ ಪ್ರಾಮಾಣಿಕತೆ ಸ್ಕ್ರಿಪ್ಟ್‌ನಲ್ಲಿ ಕಾಣಬೇಕು. ನನಗೆ ಈ ಸಿನಿಮಾದ ಸ್ಕ್ರಿಪ್ಟ್ ಓದುವಾಗಲೇ ಮಜಾ ಬಂದಿತ್ತು. ಯಾವ ಸ್ಕ್ರಿಪ್ಟ್‌ನಲ್ಲಿಯೇ ಮಜಾ ಕೊಡುತ್ತದೆಯೋ ಆ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ಈ ಸಿನಿಮಾ ನಂಬಿಕೆ ಉಂಟು ಮಾಡಿತ್ತು.
* ಪ್ರಮೋಷನ್ ವಿಚಾರದಲ್ಲಿಯೂ ಬೇರೆ ದಾರಿ ಹಿಡಿದಿದ್ದೀರಿ. ಯಾಕೆ?
ಯಾವುದೂ ಕೆಲಸ ಮಾಡದೇ ಇದ್ದಾಗ ನಮ್ಮನ್ನು ನಾವು ಮರುಶೋಧಿಸಿಕೊಳ್ಳಬೇಕು. ಹೊಸ ದಾರಿ ಹಿಡಿಯಬೇಕು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೀಗೆ ಎಲ್ಲರೂ ಅವರನ್ನು ಅವರು ಮರುಶೋಧಿಸಿಕೊಳ್ಳುತ್ತಿರಬೇಕು. ಈ ಸಿನಿಮಾ ಒಂದು ಭಿನ್ನ ಪ್ರಯತ್ನ. ಎಂಟರ್‌ಟೇನರ್. ಇದನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೂ ಭಿನ್ನ ದಾರಿ ಹಿಡಿಯುವ ಆಲೋಚನೆ ಮಾಡಿದೆವು. ಸೋಷಿಯಲ್ ಮೀಡಿಯಾದಲ್ಲಿ ಎಂಟರ್‌ಟೇನಿಂಗ್ ಕಂಟೆಂಟ್ ಮಾಡಿದೆವು. ಅದು ಅನಿವಾರ್ಯವಾಗಿತ್ತು. ಯಾಕೆಂದರೆ ನಾವು ಸಿನಿಮಾ ಕುರಿತು ಜಾಸ್ತಿ ಮಾತನಾಡಿದಷ್ಟೂ ವಿಚಾರ ತೆಳುವಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಬುದ್ಧಿವಂತ. ನಾವು ಅಪ್ರಾಮಾಣಿಕವಾಗಿ ಪ್ರಚಾರ ಮಾಡಿದಷ್ಟೂ ಅವನು ಹಿಂದೆ ಸರಿಯುತ್ತಾನೆ. ಹಾಗಾಗಬಾರದು ಎಂಬ ಕಾರಣಕ್ಕೆ ಸೋಮವಾರದಿಂದಲೇ ನೇರವಾಗಿ ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮಂಗಳೂರಲ್ಲಿ ಶುರುವಾಗಿದ್ದು, ಶಿವಮೊಗ್ಗ, ಮೈಸೂರು, ಬೆಂಗಳೂರು ಹೀಗೆ ಬೇರೆ ಬೇರೆ ಕಡೆಯ ಪ್ರೇಕ್ಷಕರಿಗೆ ತಲುಪಿ ಎಲ್ಲಾ ಕಡೆಯಿಂದ ಮೆಚ್ಚುಗೆ ಬರುತ್ತಿದೆ. ಸಂತೋಷ ಮತ್ತು ಕೃತಜ್ಞತೆ.
* ನೇರ ಪ್ರೇಕ್ಷಕರಿಗೆ ಸಿನಿಮಾ ತೋರಿಸುವ ನಿರ್ಧಾರ ತೆಗೆದುಕೊಂಡ ಕಾರಣ?
ವಿಶ್ವಾಸ ಇದ್ದಾಗ ಆ ನಿರ್ಧಾರ ತಗೋಬಹುದು. ಯಾಕೆಂದರೆ ಒಬ್ಬ ಪ್ರೇಕ್ಷಕ ಇನ್ನೊಬ್ಬ ಪ್ರೇಕ್ಷನಿಗೆ ಹೇಳಿದರೆ ಮಾತ್ರ ಆತ ನಂಬುತ್ತಾನೆ. ಬೇರೆ ಯಾರು ಹೇಳಿದರೂ ನಂಬುತ್ತಿಲ್ಲ. ಅಂಥಾ ಸ್ಥಿತಿಗೆ ಚಿತ್ರರಂಗ ಬಂದಿದೆ. ಹಾಗಾಗಿ ನೇರ ಪ್ರೇಕ್ಷಕರಿಗೆ ತೋರಿಸಿದೆವು. ಮಂಗಳೂರಿನಲ್ಲಿ 400+ ಸೀಟ್ ಇದ್ದ ಚಿತ್ರಮಂದಿರಲ್ಲಿ ಪ್ರದರ್ಶನವಿತ್ತು. ಜನ ಬರುತ್ತಾರಾ ಎಂಬ ಭಯವಿತ್ತು. ಜನ ಬಂದರು. ತುಂಬಾ ಒಳ್ಳೆಯ ರೀತಿಯಲ್ಲಿ ಮೆಚ್ಚಿಕೊಂಡರು. ಅವರೇ ಬೇರೆ ಬೇರೆ ಭಾಗದ ಪ್ರೇಕ್ಷಕರಿಗೆ ತಿಳಿಸಿದರು. ಹಾಗಾಗಿಯೇ ನಮ್ಮ 21+ ಪ್ರೀಮಿಯರ್ ಶೋಗಳು ಬಹುತೇಕ ಫುಲ್ ಆಗಿದ್ದು.
* ನಟನೆ, ನಿರ್ಮಾಣ ಎರಡೂ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ, ಎಷ್ಟು ಸುಲಭ?
ಗೀತ ಸಾಹಿತಿ ಕೂಡ. 3 ಹಾಡು ಬರೆದಿದ್ದೇನೆ. ಸಿನಿಮಾ ಮಾಡುವುದಕ್ಕೆಂದೇ ಇಲ್ಲಿ ಬಂದವನು. ನಟನೆ, ನಿರ್ಮಾಣ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಶ್ರಮ ಹಾಕುತ್ತೇನೆ. ಇನ್ನು ಹಾಡು ಬರೆಯುವುದು ನನ್ನ ಆತ್ಮತೃಪ್ತಿಗೆ, ನನ್ನ ಖುಷಿಗೆ.
* ಈ ಸಿನಿಮಾದ ನಿಮ್ಮ ಕಲಿಕೆ ಏನು?
ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕರು ಜೆನ್ ಜೀಗಳು. ಅವರ ಆಲೋಚನಾ ವಿಧಾನ, ಕೆಲಸದ ವೇಗ ಎಲ್ಲವೂ ತಿಳಿದು ಬೆರಗಾಗಿದ್ದೇನೆ. ಹೊಸ ನೀರಿನ ಜೊತೆ ಹರಿದು ನಾನೂ ಹೊಸತಾಗುವ ಪ್ರಯತ್ನವಿದು.
* ನಿಮ್ಮ ಹಾಡು ಕೇಳಿದರೆ ಬರ್ತಾ ಬರ್ತಾ ಹೆಚ್ಚು ಫಿಲಾಸಫಿಕಲ್ ಆಗುತ್ತಿದ್ದೀರಿ..
ವಯಸ್ಸಾಗುತ್ತಾ ಹಾಗಾಗುವುದು ಸಹಜವಲ್ಲವೇ. ನಮ್ಮದೂ ಒಂದು ಜವಾಬ್ದಾರಿ ಇರುತ್ತದೆಯಲ್ಲವೇ. ಏನೋ ಹೇಳಬೇಕು ಅನ್ನಿಸುತ್ತಿರುತ್ತದೆ. ಅದನ್ನು ಹಾಡಿನ ಮೂಲಕ ಹೇಳುತ್ತೇನೆ. ಯಾರಿಗಾದರೂ ತಲುಪಿದರೆ ಅಷ್ಟರ ಮಟ್ಟಿಗೆ ಸಾರ್ಥಕ ಭಾವ. ಈ ಸಿನಿಮಾದ ಕ್ಲ್ಯೈಮ್ಯಾಕ್ಸ್ ಕೂಡ ಈ ಕಾಲಕ್ಕೆ ಬೇಕಾದ ಒಂದು ಹೊಳಹು.
* ಬರವಣಿಗೆ, ನಿರ್ದೇಶನ ಆಸೆ ಇದೆಯೇ?
ಖಂಡಿತಾ ಇದೆ. ಆದರೆ ಆ ಜವಾಬ್ದಾರಿ ದೊಡ್ಡದು. ಅದಕ್ಕಾಗಿ ತಯಾರಾಗಬೇಕು.
* ಮುಂದಿನ ದಾರಿ?
ನಟನೆ, ನಿರ್ಮಾಣದ ಅಣ್ಣ ಫ್ರಂ ಮೆಕ್ಸಿಕೋ ಮತ್ತು ಹೆಗ್ಗಣ ಮುದ್ದು ಸಿದ್ಧವಿದೆ. ಬಿಡುಗಡೆಗೆ ಸಿದ್ಧವಾಗಬೇಕು. 666 ಡ್ರೀಮ್ ಥಿಯೇಟರ್ ಇನ್ನೂ 20 ದಿನಗಳ ಶೂಟಿಂಗ್ ಇದೆ. ಹಲಗಲಿ ಶೇ.50 ಚಿತ್ರೀಕರಣವಾಗಿದೆ. ಜಿಂಗೋ ಚಿತ್ರೀಕರಣ ಶುರುವಾಗಬೇಕಿದೆ. ದಾರಿ ಇನ್ನೂ ದೂರವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.