
* ಕೋವಿಡ್ ನಂತರ ಸುದೀರ್ಘ ವಿರಾಮ ತಗೊಂಡ್ರಿ. ಏನೆಲ್ಲ ರಿಯಲೈಸೇಶನ್ ಆಯ್ತು?
ಈ ಬ್ರೇಕ್ ನನಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಕಷ್ಟು ಸಮಯ ಕೊಟ್ಟಿತು. ನನ್ನ ಬದುಕಿನ ಉದ್ದೇಶ ಏನು, ನಾನು ಯಾಕಾಗಿ ಹೀಗೆಲ್ಲ ಒದ್ದಾಡುತ್ತಿದ್ದೇನೆ, ಇದಕ್ಕೆಲ್ಲ ಅರ್ಥ ಇದೆಯಾ ಅಂತೆಲ್ಲ ಯೋಚಿಸಿದೆ. ಕೆಲವಕ್ಕೆ ಉತ್ತರ ಸಿಕ್ಕಿತು, ಮತ್ತೆ ಕೆಲವಕ್ಕೆ ಸಿಗಲಿಲ್ಲ. ಒಂದಂತೂ ಅರ್ಥ ಆಯ್ತು. ನನಗೆ ಖುಷಿ ಸಿಗುವುದು ಜನರಿಗೆ ಮನರಂಜನೆ ನೀಡುವುದರಲ್ಲಿ. ಅಭಿನಯವೇ ನನಗೆ ಒಲಿದ ಕಲೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ಅಂದುಕೊಂಡೆ.
* ಆಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದು ಅಂಥಾ ಸಮರ್ಥ ಸಿನಿಮಾಗಳ?
ನಾಗಬಂಧಂ, ಸ್ವಯಂಭೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪಾತ್ರಕ್ಕಿರುವ ಸ್ಕೋಪ್ ನೋಡಿ. ನಾಗಬಂಧಂನಲ್ಲಿ ಪಾರ್ವತಿ ಅನ್ನುವ ನನ್ನ ಪಾತ್ರಕ್ಕೆ ಸಾಕಷ್ಟು ಲೇಯರ್‌ಗಳಿವೆ. ಸ್ವಯಂಭೂ ಸಿನಿಮಾದಲ್ಲೂ ಉತ್ತಮ ಬೆಳವಣಿಗೆ ಇರುವ ಪಾತ್ರ.
* ಎರಡೂ ಪೌರಾಣಿಕ ಚಿತ್ರಗಳು, ಯಾಕೆ?
ಈಗಿನ ಟ್ರೆಂಡ್ ಹಾಗಿದೆ. ಈಗ ಜನ ಇಷ್ಟಪಡುತ್ತಿರುವುದು ಪೌರಾಣಿಕ, ಐತಿಹಾಸಿಕ ಕಥೆಗಳನ್ನು. ಅಂಥಾ ಪಾತ್ರ ಸಿಕ್ಕಾಗ ಒಪ್ಪಿಕೊಂಡೆ. ಮೊದಲ ಸಿನಿಮಾ ವಜ್ರಕಾಯದಲ್ಲಿ ನನ್ನ ಪಾತ್ರ ಪಟಾಕಾ ಪಾರ್ವತಿ. ನಾಗಬಂಧಂನಲ್ಲೂ ನನ್ನ ಪಾತ್ರ ಪಾರ್ವತಿ. ಆ ಪಾತ್ರಕ್ಕಿಂತ ಕಂಪ್ಲೀಟ್ ವಿರುದ್ಧ ಈ ಪಾರ್ವತಿ. ಆದರೆ ನನ್ನ ಸಿನಿಮಾ ಜರ್ನಿಯಲ್ಲಿ ಆ ಪಾರ್ವತಿಯಿಂದ ಈ ಪಾರ್ವತಿಗೆ ಒಂದು ಫುಲ್ ಸರ್ಕಲ್ ಆಗಿದೆ.
* ವಜ್ರಕಾಯ ಸಿನಿಮಾದ ಯಶಸ್ಸಿನ ನಂತರ ಕನ್ನಡ ಇಂಡಸ್ಟ್ರಿ ಕಡೆ ತಿರುಗೂ ನೋಡ್ಲಿಲ್ಲ?
ಹಾಗೆಲ್ಲ ಏನಿಲ್ಲ. ಕಲಾವಿದರಿಗೆ ಭಾಷೆಯ ಗಡಿ ಇರೋದಿಲ್ಲ. ನನಗೆ ತೃಪ್ತಿ ನೀಡುವಂಥಾ ಸಿನಿಮಾಗಳು ಸಿಕ್ಕಾಗ ಅದನ್ನು ಭಾಷೆಯ ವಿಚಾರಕ್ಕೆ ತಿರಸ್ಕರಿಸಲಾಗುವುದಿಲ್ಲ.
* ಪ್ರತಿಯೊಬ್ಬ ನಟಿಯೂ ಇದೇ ಮಾತು ಹೇಳ್ತಾರೆ, ಹೀಗಾದರೆ ಕನ್ನಡದಂಥಾ ಇಂಡಸ್ಟ್ರಿಗೆ ನಾಯಕಿಯರು ಸಿಗೋದು ಹೇಗೆ?
ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರೇ ಇರೋದು. ಇಲ್ಲಿ ಯಾವುದಕ್ಕೂ ಕೊರತೆ ಆಗೋದಿಲ್ಲ. ನನ್ನ ಮೊದಲ ಸಿನಿಮಾ ‘ವಜ್ರಕಾಯ’ಕ್ಕೆ ಅತ್ಯುತ್ತಮ ಸ್ವಾಗತ ಸಿಕ್ಕಿತು. ಆ ಸಿನಿಮಾದ ನನ್ನ ಪಾತ್ರ ಪಟಾಕಾ ಪಾರ್ವತಿ ಮೂಲಕ ಜನ ಇನ್ನೂ ನನ್ನ ಗುರುತಿಸುತ್ತಾರೆ. ನಂಗೆ ಅತಿಯಾಸೆ. ಬಂದರೆ ಇನ್ನೊಂದು ಬ್ಯಾಂಗರ್ ಜೊತೆಗೆ ಬರಬೇಕು. ಕನ್ನಡಿಗರಿಗೆ ಅರೆಬೆಂದ ಊಟ ಕೊಡೋದಕ್ಕೆ ಇಷ್ಟ ಇಲ್ಲ. ಕೊಟ್ರೆ ಮುದ್ದೆ, ನಾಟಿ ಕೋಳಿ ಸಾಂಬಾರ್ ಅನ್ನೇ ಬಡಿಸ್ಬೇಕು.
* ಶೃಂಗೇರಿ ನಿಮ್ಮ ಊರು. ಅಲ್ಲಿಗೆ ಭೇಟಿ?
ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ನೋಡಿ ತುಂಬ ಜನ ನಾನು ಆಂಧ್ರದಲ್ಲಿ ಸೆಟಲ್ ಆಗಿದ್ದೀನಿ ಅಂದ್ಕೊಂಡಿದ್ದಾರೆ. ಆದರೆ ಬೆಂಗಳೂರು ಮತ್ತು ಶೃಂಗೇರಿಗಳಲ್ಲೇ ನನ್ನ ವಾಸ. ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹೋಗಿ ಬಂದಿದ್ದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳೋದಿಲ್ಲ. ಕಡ್ಲೆ ಕಾಯಿ ಪರಿಷೆಯಲ್ಲಿ ಮಾಸ್ಕ್ ಹಾಕ್ಕೊಂಡು ಓಡಾಡ್ತೀನಿ, ಬೆಂಗಳೂರಲ್ಲಿ ಯಾವ ಉತ್ಸವ ಇದ್ದರೂ ನೀವು ಸೂಕ್ಷ್ಮವಾಗಿ ಹುಡುಕಿದ್ರೆ ನಾನು ಕಂಡೇ ಕಾಣ್ತೀನಿ. ಆದರೆ ಕಣ್ಣು ನೋಡಿ ಪತ್ತೆ ಹಚ್ಚಬೇಕಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.