ಮಾಸ್ಟರ್ ಆನಂದ್ ಎಲ್ಲದರಲ್ಲಿಯೂ ಮಾಸ್ಟರ್! ಬಾಲನಟನಾಗಿ ಬಂದು ನಾಯಕನಾಗಿ, ಪೋಷಕನಾಗಿ, ಹಾಸ್ಯದೊಂದಿಗೆ ಪ್ರಧಾನ ಪಾತ್ರಧಾರಿಯಾಗಿ ಹೀಗೆ ಎಲ್ಲ ವಿಭಾಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಂತೂ ನಿರ್ದೇಶನದಿಂದ ನಿರೂಪಣೆಯ ತನಕ ಎಲ್ಲದರಲ್ಲಿಯೂ ಹೆಸರಾದ ಇವರು ಇಲ್ಲಿ ಅಧ್ಯಾತ್ಮದ ಬಗ್ಗೆ ಮಾತನಾಡಿದ್ದಾರೆ!
ಆನಂದ್ ಆಧ್ಯಾತ್ಮದ ಬಗ್ಗೆ ಮಾತನಾಡುವುದು ಎಂದರೆ ಏನು ಎಂದು ಅಚ್ಚರಿಯಾಗಬಹುದು. ಅವರನ್ನು ನೇರವಾಗಿ ಪರಿಚಯವಿರುವವರಿಗೂ ಕೂಡ ಅವರು ತಮ್ಮ, ಹಾಸ್ಯದ ಮತ್ತು ಗಂಭೀರತೆಯ ಮುಖವನ್ನಷ್ಟೇ ಪರಿಚಯ ಮಾಡಿಕೊಟ್ಟಿದ್ದಾರೆ ಹೊರತಾಗಿ ಅಧ್ಯಾತ್ಮದ ಬಗ್ಗೆ ಮಾತನಾಡಿರುವುದಿಲ್ಲ. ಆದರೆ ಸುವರ್ಣ ನ್ಯೂಸ್ .ಕಾಮ್ ಜತೆಗೆ ಅಧ್ಯಾತ್ಮದ ಕುರಿತಾದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
- ಶಶಿಕರ ಪಾತೂರು
ಚಿತ್ರರಂಗದ ಚಟುವಟಿಕೆ ಸ್ಥಗಿತಗೊಂಡಾಗಿನ ಬದುಕು ಹೇಗಿತ್ತು?
ಎಲ್ಲರಂತೆ ನಾನು ಕೂಡ ಲಾಕ್ಡೌನ್ ಆದಾಗ ಇಷ್ಟೊಂದು ಮುಂದುವರಿಯುತ್ತೆ ಎಂದುಕೊಂಡಿರಲಿಲ್ಲ. ನಾನು ಮನೆಯಲ್ಲೇ ಇದ್ದೆ. ಒಂದು ತಿಂಗಳ ಬಳಿಕ ಕೂಡ ಪರಿಸ್ಥಿತಿ ಸುಧಾರಿಸದೇ ಇದ್ದಾಗ ನನಗೂ ಜನರಿಗೆ ಹೇಗಾದರೂ ನೆರವಾಗಲೇಬೇಕು ಅನಿಸಿತು. ಉತ್ತರಹಳ್ಳಿಯ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ಮತ್ತು ಕಸ್ತೂರ್ ಬಾ ಸೇವಾ ಟ್ರಸ್ಟ್ ನಡೆಸಿದ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಬೇರೆ ಬೇರೆ ಪ್ರದೇಶಗಳಲ್ಲಿ ಆಹಾರ ವಿತರಣೆ ಮಾಡುವಲ್ಲಿ ನಾನು ಕೂಡ ಸ್ವಯಂಸೇವಕನಾಗಿ ಕೆಲಸ ಮಾಡಿದ್ದೇನೆ. ನನ್ನ ಪತ್ನಿ ಊರು ಮಾಲೂರು ತಾಲೂಕಿನ ಚಿಕ್ಕ ತಿರುಪತಿ. ಪತ್ನಿ ಮತ್ತು ಮಕ್ಕಳು ಬೇಸಿಗೆ ರಜೆಗೆಂದು ಅದಾಗಲೇ ಅವರ ಅಜ್ಜಿ ಮನೆಗೆ ಹೋಗಿದ್ದರು! ನಾನು ಕೂಡ ಅವರನ್ನು ವಾಪಾಸು ಕರೆಸುವ ಪ್ರಯತ್ನವನ್ನೇ ಮಾಡಲಿಲ್ಲ. ಯಾಕೆಂದರೆ ಅದು ಗ್ರೀನ್ ಬೆಲ್ಟ್ ಆಗಿತ್ತು. ಈಗ ಲಾಕ್ಡೌನ್ ಎಲ್ಲ ಮುಗಿದು ಆರಾಮ ಆದ ಮೇಲೆ ಬಂದಿದ್ದಾರೆ. ಇಂದಿನವರೆಗೆ ಕೂಡ ಚಿತ್ರೀಕರಣ ಹಿಂದಿನ ರೀತಿಗೆ ಮರಳಿಲ್ಲ. ಆದರೆ ನಾನು ಮೊದಲೇ ಅಂತರ್ಮುಖಿ. ಪಾರ್ಟಿ ಮಾಡ್ತಾ ತಿರುಗಾಡುವಂಥ ಮನುಷ್ಯ ನಾನಲ್ಲ. ಹಾಗಾಗಿ ಮನೆಯಲ್ಲಿದ್ದುಕೊಂಡು ಸಿನಿಮಾ, ಸೀರೀಸ್ ನೋಡಿ ಸಮಯ ಕಳೆಯುವುದು ಕಷ್ಟವಾಗಲಿಲ್ಲ.
ಶ್ರೀನಿ ಪತ್ನಿಯ ಹೇಳಿದ ಶೂಟಿಂಗ್ ತಾಣಗಳ ಮಾಹಿತಿ
ನಿಮ್ಮಲ್ಲಿ ಬಹಳ ಬೇಗನೆ ಅಧ್ಯಾತ್ಮದ ಕಡೆಗಿನ ಒಲವು ಮೂಡಿರುವುದು ನಿಜವೇ?
ಇದು ಈಗ ಎಂದು ಅಲ್ಲ. ಸ್ವಲ್ಪ ಕಾಲ ಹಿಂದಿನಿಂದಲೇ ಈ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ. ಹಾಗಂತ ಅಧ್ಯಾತ್ಮ ಕಲಿಕೆಗೆ ವಯಸ್ಸಾಗಬೇಕು ಅಂತ ಏನಿಲ್ಲ. ಅಧ್ಯಾತ್ಮ ಎಂದರೆ ಎಲ್ಲವನ್ನೂ ಬಿಟ್ಟು ಸನ್ಯಾಸತ್ವ ಸ್ವೀಕರಿಸುವುದೂ ಅಲ್ಲ. ನಮಗೆ ಯಾವುದು ಮುಖ್ಯ ಎನ್ನುವುದನ್ನು ನಾವೇ ನಿರ್ಧಾರ ಮಾಡಿಕೊಳ್ಳಬೇಕು. ಉದಾಹರಣೆಗೆ ವಿವಿಧ ವಾಹನಗಳು ಯಾವುದೋ ವಿವಿಧ ವೇಗದಲ್ಲಿರುತ್ತವೆ. ನಮ್ಮಲ್ಲಿ ವಿಮಾನದ ಟಿಕೆಟ್ ಇಟ್ಟುಕೊಂಡು ಎತ್ತಿನ ಗಾಡಿಯನ್ನು ಆಯ್ದುಕೊಳ್ಳಬಾರದು. ಅದೇ ರೀತಿ ನನಗೆ ದುಡಿಮೆಗೆ ಸಾಧ್ಯತೆ ಇರುವ ಜೀವನಕ್ಕಾಗಿ ಗೊತ್ತಿರುವ ವಿದ್ಯೆಯಾದ ನಟನೆಯನ್ನೇ ಆಶ್ರಯಿಸಿದ್ದೀನಿ. ಹಾಗಂತ ನಟನೆಯನ್ನೇ ಪರಮ ಗುರಿಯಾಗಿಸಿದವನು ನಾನಲ್ಲ. ಯಾಕೆಂದರೆ ಒಬ್ಬ ನಟ, ನಿರ್ದೇಶಕನಾಗಿ ಮಾಡಬಹುದಾದ ಸಾಧನೆಯ ಮೂಲಕ ಅಬ್ಬಬ್ಬ ಅಂದರೆ ಆನಂದ್ ದೇವಾನಂದ್ ಮಟ್ಟಕ್ಕೆ ಹೋಗಬಹುದು. ಅಂದರೆ ಅವರಂತೆ ಚಿತ್ರರಂಗಕ್ಕೆ ಮಹಾನ್ ಎನ್ನಬಹುದಾದ `ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪಡೆಯಬಹುದು. ಅಷ್ಟೇ ತಾನೇ..? ಆದರೆ ಅವೆಲ್ಲವೂ ಬದುಕಿರುವ ತನಕ ಮಾತ್ರ. ನಿಜವಾದ ಬದುಕು ಸಾವಿನ ಬಳಿಕವೂ ಇದೆ ಎನ್ನುವುದೇ ಅಧ್ಯಾತ್ಮ.
`ಪ್ರಾಣಿ' ಪ್ರಿಯೆ ಪದ್ಮಜಾ ರಾವ್ ಪ್ರಾರ್ಥನೆ
ಚಿತ್ರರಂಗದಲ್ಲಿ ಇರಬೇಕಾದರೆ ದೇವಾನಂದ್ ಅವರಂತೆ ಆಗುವುದು ಕೂಡ ಒಳ್ಳೆಯ ಗುರಿಯೇ ಅಲ್ಲವೇ?
ನನಗೆ ದೇವಾನಂದ್ ಅವರ ಸಾಧನೆ ಬಗ್ಗೆ ಗೌರವ ಇದೆ. ಕಲಾವಿದನೊಬ್ಬ ಅವರನ್ನು ಮಾದರಿಯಾಗಿಸುವುದು ಕೂಡ ತಪ್ಪಲ್ಲ. ಆದರೆ ನನ್ನ ಪ್ರಶ್ನೆ ಏನೆಂದರೆ ಅವರು ತನ್ನ ಕೊನೆಯ ದಿನಗಳಲ್ಲಿಯೂ ಸಿನಿಮಾ ಮಾಡುವ ಬಗ್ಗೆಯೇ ಮಾತನಾಡುತ್ತಿದ್ದರು. ನಾನೇ ಈಗ ಅವರನ್ನು ಗುರಿಯಾಗಿಸಿ ಹೋದರೂ ಸಿನಿಮಾ ಕ್ಷೇತ್ರದಲ್ಲಿ ಅದೇ ಸ್ಥಾನ ಅಂತಿಮ. ಅಂದರೆ ಆಗಲೂ ಸಿನಿಮಾ ನಟನೆ ಮತ್ತು ನಿರ್ದೇಶನವೇ ನಮ್ಮ ಕೆಲಸ. ಹಾಗಾದರೆ ಫಾಲ್ಕೆ ಪ್ರಶಸ್ತಿ, ದುಡ್ಡು, ಹೆಸರು, ರೀಚು, ಚಪ್ಪಾಳೆ ಬಿಟ್ಟರೆ ನನಗೂ ಅವರಿಗೂ ಬೇರೆ ವ್ಯತ್ಯಾಸ ಇಲ್ಲ! ಹಾಗಾಗಿ ಲೌಕಿಕವಾಗಿ ಮಾಡುವ ಸಾಧನೆ ಎಲ್ಲವೂ ಅಷ್ಟರಲ್ಲಿದೆ. ಇಲ್ಲಿನ ಎಲ್ಲ ಕೆಲಸಗಳಿಗೂ ಆಯಾಯ ವ್ಯಕ್ತಿಗಳಿಗೆ ಅವರದೇ ಆದ ಸೀಮಿತ ವ್ಯಾಪ್ತಿ ಇದೆ. ಶ್ರೀಕೃಷ್ಣ ಹೇಳಿದ ಹಾಗೆ ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕೇ ಹೊರತು ಅದರ ಫಲ ಹೀಗೆಯೇ ಇರಬೇಕು ಎಂದು ನಿರೀಕ್ಷಿಸುವುದು ತಪ್ಪು. ಅದು ನೆರವೇರದೇ ಇದ್ದಾಗ ಆಗುವ ಕೋಪ, ನಿರಾಶೆಗೆ ಎಲ್ಲವೂ ನಾವೇ ಕಾರಣ ಹೊರತು ಬೇರೇನಲ್ಲ.
ಹಾಗಾದರೆ ಅಧ್ಯಾತ್ಮವನ್ನು ಅರಿತರೆ ಡಿಪ್ರೆಶನ್ ನಿಂದ ದೂರವಾಗಬಹುದು ಎನ್ನುತ್ತೀರ?
ನನಗೆ ತಿಳಿದಂತೆ ಡಿಪ್ರೆಶನ್‌ಗೆ ಎರಡು ಕಾರಣಗಳಿರುತ್ತವೆ. ಒಂದು ಬ್ರೇನ್ ಒಳಗಿನ ಯಾವುದೋ ಸಮಸ್ಯೆಯಿಂದ ಡಿಪ್ರೆಶನ್ ಸೃಷ್ಟಿಯಾಗುತ್ತದೆ. ಅದು ಅಂಗ ಊನವಾಗಿ ಹುಟ್ಟುವ ಮಕ್ಕಳಂತೆ ಹುಟ್ಟುತ್ತಲೇ ಬಂದಂಥ ಸಮಸ್ಯೆ. ಅದಕ್ಕೆ ವೈದ್ಯರ ಹತ್ತಿರ ಹೋಗಲೇಬೇಕು. ಆ ವಿಚಾರವನ್ನು ಬದಿಗಿಡೋಣ. ಎರಡನೆಯ ಡಿಪ್ರೆಶನ್ ಗೆ ನಮ್ಮ ಆಸೆ ಈಡೇರದಿರುವುದೇ ಕಾರಣವಾಗಿರುತ್ತದೆ. ಆಗ ಅವರು ಮೆಡಿಟೇಶನ್ ಮೂಲಕ ಆಸೆಗಳನ್ನು ಕಡಿಮೆ ಮಾಡಿಕೊಂಡು ನಮ್ಮ ವ್ಯಾಪ್ತಿ ಎಷ್ಟು ಸೀಮಿತ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಲಿಮಿಟ್ ಬಗ್ಗೆ ನನಗೂ ಅರಿವು ಇರಬೇಕು.