ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಲವ್ ಮಾಕ್ಟೇಲ್ 2 ಚಿತ್ರ ಇಂದು ಬಿಡುಗಡೆಯಾಗಿದೆ. ಲವ್ ಮಾಕ್ಟೇಲ್ ಮಾಡಿ ಗೆದ್ದ ಕೃಷ್ಣ ಈಗ ಅವರ ಮುಂದುವರಿದ ಕಥೆಯ ಕುರಿತು ಮಾತನಾಡಿದ್ದಾರೆ.
ಆರ್.ಕೇಶವಮೂರ್ತಿ
ಲವ್ ಮಾಕ್ಟೇಲ್ 2ನಲ್ಲಿ ಏನಿದೆ?
ಒಂದು ಸಣ್ಣ ಕತೆ ಇದೆ. ಅದನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ಹೇಳಿದ್ದೇನೆ. ಆ ಸಣ್ಣ ಕತೆ ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಕನೆಕ್‌ಟ್ ಆಗುತ್ತದೆ ಎಂಬುದು ನನ್ನ ನಂಬಿಕೆ.
ಏನು ಆ ಸಣ್ಣ ಕತೆ?
ಲವ್ ಮಾಕ್ಟೇಲ್ ನೋಡಿದವರಿಗೆ ಗೊತ್ತಿರುತ್ತದೆ. ಅಂದರೆ ತುಂಬಾ ಪ್ರೀತಿಸಿ, ಮದುವೆಯಾದ ಸಂಗಾತಿಯನ್ನು ಕಳೆದುಕೊಂಡವನ ಕತೆ ಇದು. ಆತ ತನ್ನ ಹೆಂಡತಿಯನ್ನು ಮರೆತು ಹೇಗೆ ಮುಂದಿನ ಜೀವನ ರೂಪಿಸಿಕೊಳ್ಳುತ್ತಾನೆ ಅಥವಾ ಮುಂದಿನ ಹೆಜ್ಜೆ ಇಡುತ್ತಾನೆ ಎಂಬುದೇ ಚಿತ್ರದ ಕತೆ.
ಇದರಲ್ಲಿ ವಿಶೇಷತೆ ಏನಿದೆ?
ಕತೆ ಸರಳವಾಗಿ ಅಥವಾ ಸಣ್ಣದಾಗಿರಬಹುದು. ಆದರೆ, ಅದನ್ನು ತುಂಬಾ ಸೂಕ್ಷ್ಮವಾಗಿ ಹೇಳಿದ್ದೇನೆ. ಕೌಟುಂಬಿಕ ಅಂಶಗಳು ಇಲ್ಲಿವೆ. ಮೊದಲರ್ಧ ಮನರಂಜನೆಯ ನೆರಳಿನಲ್ಲಿ ಸಾಗಿದರೆ, ವಿರಾಮದ ನಂತರ ಕತೆ ತೆರೆದುಕೊಳ್ಳುತ್ತದೆ. ನಮ್ಮ ಸಿನಿಮಾ ಪ್ರತಿ ಕುಟುಂಬಕ್ಕೂ ಕನೆಕ್‌ಟ್ ಆಗಲಿದೆ.
ಎರಡನೇ ಬಾರಿ ನಿರ್ದೇಶಕರಾದ ಅನುಭವ ಹೇಗಿತ್ತು?
ಮೊದಲ ಭಾಗದ ಗೆಲುವಿನ ವಿಶ್ವಾಸ ಮನಸ್ಸಿನಲ್ಲಿತ್ತು. ಜತೆಗೆ ಜವಾಬ್ದಾರಿ ಕೂಡ ಇತ್ತು. ಈ ಎರಡೂ ಅಂಶಗಳ ಮೇಲೆ ನನ್ನ ನಿರ್ದೇಶನದ ನಡೆ ಸಾಗಿತ್ತು. ಬೇರೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ನಾನೇ ಒಂದು ಕತೆ ಹೇಳಬೇಕು ಎನಿಸಿದಾಗ ಅದನ್ನು ಪ್ರಾಮಾಣಿಕವಾಗಿ ತೆರೆ ಮೇಲೆ ತಂದರೆ ಗೆಲ್ಲಬಹುದು ಎನ್ನುವಷ್ಟು ಅನುಭವ ದಕ್ಕಿಸಿಕೊಂಡಿದ್ದೇನೆ.
ಈ ಚಿತ್ರದಲ್ಲಿ ಬರುವ ಪ್ರಮುಖ ಅಂಶಗಳೇನು?
ಸಿಂಪಲ್ ನಿರೂಪಣೆ, ಎಮೋಷನ್ ಹಾಗೂ ಮನರಂಜನೆ. ಈ ಮೂರು ಅಂಶಗಳ ಮೇಲೆ ಇಡೀ ಸಿನಿಮಾ ಸಾಗುತ್ತದೆ.
ಲವ್ ಮಾಕ್ಟೇಲ್ ಪಾರ್ಟ್ 3 ಕೂಡ ಬರುತ್ತದೆಯೇ?
ಮಾಡ್ತಾ ಇದ್ದರೆ ಮತ್ತಷ್ಟು ಪಾರ್ಟ್‌ಗಳನ್ನು ತೆರೆ ಮೇಲೆ ತರಬಹುದು. ಆದರೆ, ಈಗಲೇ ಆ ಬಗ್ಗೆ ಏನು ಹೇಳಲಾರೆ. ಪಾರ್ಟ್ 2 ಕತೆ ಜನ ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು.
ಈ ಸಿನಿಮಾ ಎಷ್ಟು ಕಡೆ ಬಿಡುಗಡೆ ಆಗುತ್ತಿದೆ?
ರಾಜ್ಯಾದ್ಯಾಂತ 170ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮತ್ತಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ.
ನಿಮ್ಮ ಮುಂದಿನ ಚಿತ್ರ ಯಾವುದು ಬಿಡುಗಡೆ?
ಲಕ್ಕಿ ಮ್ಯಾನ್ ಸಿನಿಮಾ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಪುನೀತ್‌ರಾಜ್‌ಕುಮಾರ್ ಅವರು ಕೂಡ ನಟಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ಪಾರ್ಟ್ 2ನಲ್ಲಿ ಮಿಲನ ಅವರ ಪಾತ್ರ ಎಷ್ಟಿರುತ್ತದೆ? ಕತೆಗೆ ತಕ್ಕಂತೆ ಇರುತ್ತದೆ. ಯಾಕೆಂದರೆ ಮೊದಲ ಭಾಗದಲ್ಲೇ ಅವರನ್ನು ನಾನು ಕಳೆದುಕೊಳ್ಳುತ್ತೇನೆ. ಹೀಗಾಗಿ ಫ್ಲಾಷ್ ಬ್ಯಾಕ್ ಗಳ ಮೂಲಕ ಆಗಾಗ ಬಂದು ಹೋಗುವಷ್ಟು ಅವರ ಪಾತ್ರ ಇರುತ್ತದೆ.