ಯಶ್, ರವಿಚಂದ್ರನ್, ಉಪೇಂದ್ರ...ರ ಯಶಸ್ವಿ ದಾಂಪತ್ಯದ ಗುಟ್ಟೇನು?

Suvarna News   | Asianet News
Published : Feb 14, 2020, 06:03 PM ISTUpdated : Feb 15, 2020, 11:59 AM IST
ಯಶ್, ರವಿಚಂದ್ರನ್, ಉಪೇಂದ್ರ...ರ ಯಶಸ್ವಿ ದಾಂಪತ್ಯದ ಗುಟ್ಟೇನು?

ಸಾರಾಂಶ

ಇಂದು ಪ್ರೇಮಿಗಳ ದಿನ. ಪ್ರೇಮಿಸಿ ವಿವಾಹಿತರಾಗಿರುವಂಥವರು ನಮ್ಮ ಸಮಾಜದಲ್ಲಿ ಅನೇಕರು ಇದ್ದಾರೆ. ಅವರಲ್ಲಿ ಒಂದಷ್ಟು ಗಣ್ಯರು ತಮ್ಮ ದಾಂಪತ್ಯದ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

- ಶಶಿಕರ ಪಾತೂರು

ಪ್ರೀತಿ ಪ್ರೇಮ ಪುಸಕ್ತದ ಬದನೆಕಾಯಿ ಎಂದು ಸಿನಿಮಾಗಳ ಮೂಲಕ ಹೇಳಿ ಜನಪ್ರಿಯರಾದ ತಾರೆ ಉಪೇಂದ್ರ ನಿಜ ಜೀವನದಲ್ಲಿ ತಮ್ಮ ಪತ್ನಿಯನ್ನು ಎಷ್ಟು ಪ್ರೀತಿ, ಕಾಳಜಿಯಿಂದ  ನೋಡಿಕೊಳ್ಳುತ್ತಾರೆ ಎನ್ನುವ ಬಗ್ಗೆ ಖುದ್ದು ಪ್ರಿಯಾಂಕಾ ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಂಬಂಧಗಳಿಗೆ ಸಮಯ ನೀಡುವುದು ಮುಖ್ಯ

ನಮ್ಮಿಬ್ಬರ ಮಧ್ಯೆ ಲವ್ ಆಗಿದ್ದು ಹೇಗೆ ಅಂತ ಎಕ್ಸಾಕ್ಟ್  ರೀಸನ್, ಮೂಮೆಂಟ್ ಹೇಳಕ್ಕಾಗಲ್ಲ. ಅವರ ಸ್ವಭಾವ ಬಿಹೇವಿಯರ್ ಇಷ್ಟ ಇತ್ತು ಬಬಗೆ. ಮುಖ್ಯವಾಗಿ ಬೇರೆಯವರ ಬಗ್ಗೆ ಕೇರಿಂಗ್ ಇದ್ರು. ಅಂಥ ಕ್ವಾಲಿಟೀಸ್ ಇಷ್ಟ ಆಗಿತ್ತು. ಆದರೆ ಆವಾಗ ನಾನು ಲೈಫ್ ಪಾರ್ಟ್ ನರ್ ಆಗ್ತೀನಿ ಅಂತ ಗೊತ್ತಿರಲಿಲ್ಲ. ಮದುವೆ ಆದ್ರೆ ಈ ಸ್ವಭಾವ ಇರಬೇಕು ನನ್ನ ಹಸ್ಬೆಂಡ್ ಗೆ ಎಂದುಕೊಂಡಿದ್ದೆ. ಅವರ ಕ್ರಿಯೇಟಿವಿಟಿ ನನಗೆ ಇಷ್ಟ ಆಗ್ತಿತ್ತು. ಆಮೇಲೆ ಇನ್ನೊಂದು ವಿಷಯ ಏನು ನನಗೆ ತುಂಬಾ ಇಷ್ಟ ಆಗಿದ್ದೆಂದರೆ ಅವರು ಸೆಲ್ಫ್ ಮೇಡ್. ಮದುವೆಯಾದ ಮೇಲೆ ಇಬ್ಬರೂ ಜೊತೆಯಾಗಿಯೇ ಹೋಗೋದು. ಮದುವೆಯಾದ ಮೇಲೆ ರೋಮ್ಯಾನ್ಸ್ ಗಿಂತ ಕೇರಿಂಗ್ ತುಂಬಾ ಮುಖ್ಯ ಆಗುತ್ತೆ. ಹುಷಾರಿಲ್ಲದೇ ಇರೋ ಸಮಯದಲ್ಲಿ ನನ್ನ ಮನೆ ಕಡೆಯವರು ಬಂದಾಗ ಅವರ ಜೊತೆಗಿನ ವರ್ತನೆ... ಇದೆಲ್ಲ ಮ್ಯಾಟರ್ ಆಗುತ್ತೆ. ಯಾವುದೇ ರಿಲೇಷನ್ ಶಿಪ್ ಗೆ ಕೇರ್, ಟೈಮ್ ಕೊಡಬೇಕು. ಆಗ ಎಲ್ಲರ ದಾಂಪತ್ಯವೂ ಸಕ್ಸಸ್ ಫುಲ್ ಆಗಬಹುದು. ಎಲ್ಲರಿಗೂ ವೆಲೆಂಟೈನ್ ಡೇ ಶುಭಾಶಯಗಳು.

-ಪ್ರಿಯಾಂಕ ಉಪೇಂದ್ರ

ದಾಂಪತ್ಯದ ಯಶಸ್ಸಿಗೆ ಒಂದೇ ಗುಟ್ಟು ಅದು ಗುಟ್ಟನ್ನು ರಟ್ಟು ಮಾಡದೇ ಇರೋದು - ರಿಯಲ್ ಸ್ಟಾರ್ ಉಪೇಂದ್ರ.

ಜೋಗಿ ಕನ್ನಡ ಸಿನಿಮಾ, ಸೀರಿಯಲ್ ಲೋಕದ ಬರಹಗಾರರಾಗಿ, ಅದಕ್ಕಿಂತಲೂ ಕಾದಂಬರಿಕಾರರಾಗಿ ಮತ್ತು ಪತ್ರಕರ್ತರಾಗಿ ಜನಪ್ರಿಯರಾದವರು. ಅವರ ಹೆಸರೇ ಪ್ರೀತಿಯ ಸಂಕೇತ. ಪತ್ನಿ ಜ್ಯೋತಿಯ ಹೆಸರಿನಲ್ಲಿರುವ ಜೋ ಅಕ್ಷರಕ್ಕೆ ತನ್ನ ಗಿರೀಶ್ ಎಂಬ ಹೆಸರಲ್ಲಿರುವ ಗಿ ಯನ್ನು ಸೇರಿಸಿ ತಮ್ಮ ಪ್ರೇಮದ ಕುರುಹಾಗಿ ಹೊಸ ಹೆಸರಲ್ಲಿ ಗುರುತಿಸಿಕೊಂಡವರು. ಅವರು ತಮ್ಮ ಪ್ರೇಮ ದಾಂಪತ್ಯದ ಬಗ್ಗೆ ಏನು ಹೇಳಿದ್ದಾರೆ ಎನ್ನುವ ಜೊತೆಗೆ ಅವರ ಪತ್ನಿ ಜ್ಯೋತಿಯವರ ಮಾತುಗಳು ಕೂಡ ಇಲ್ಲಿವೆ.

ಪ್ರೀತಿ-ಪ್ರೇಮ ಎಂದರೆ ಇವರೇನು ಹೇಳ್ತಾರೆ ಕೇಳಿ

'ಮುಂದುವರಿಯೋದು ಹೆಂಗೇ ಹೇಳು ಒಬ್ಬರಿಗೊಬ್ರು ಸೋಲದೇ..'

'ಲವ್ ಕಮ್ ಆರೇಂಜ್ ಮ್ಯಾರೇಜ್ ನಮ್ಮದು. ಅಂದರೆ ನಮಗಿಬ್ಬರಿಗೆ ಮಾತ್ರವಲ್ಲ. ನಮ್ಮ ತಂದೆ ತಾಯಿಗೂ ನಾವಿಬ್ಬರು ಮದುವೆಯಾಗಬೇಕು ಎನ್ನುವ ಇಷ್ಟ ಇತ್ತು. ಇದೀಗ ವಿವಾಹವಾಗಿ ವರ್ಷಗಳನ್ನು ಕಳೆದಿದ್ದೇವೆ. ನಮ್ಮ ಖುಷಿಯ ಪ್ರತೀಕವಾಗಿ ಮಗಳು ಖುಷಿ ಕೂಡ ಇದ್ದಾಳೆ.

ನನ್ನ ಪ್ರಕಾರ ದಾಂಪತ್ಯದಲ್ಲಿ ಅವರವರ ಖಾಸಗಿತನ, ಸ್ವಾತಂತ್ರ್ಯ, ಅವರವರಿಗೆ ಮೀಸಲಾಗಿರಬೇಕು. ನಮ್ಮ ಕೆಲಸ ಏನು ಅದನ್ನು ನಾವು ಸರಿಯಾಗಿ ನಿಭಾಇಸುವುದು, ದಾಂಪತ್ಯವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತದೆ ಎಂದು ನನ್ನ ನಂಬಿಕೆ. ಎಲ್ಲರ ದಾಂಪತ್ಯದಲ್ಲಿರವ ಹಾಗೆ ಜಗಳ, ಕೋಪ ಇದ್ದೇ ಇರುತ್ತದೆ. ಆದರೆ ಅದನ್ನೆಲ್ಲ ಅಲ್ಲಲ್ಲೇ ಮರೆತು ಬಿಟ್ಟು ಮುಂದೆ ಸಾಗಬೇಕು. ಭಟ್ಟರು 'ದನಕಾಯೋನು' ಚಿತ್ರ ಹಾಡಿನ ನಡುವೆ ಬರೆದ ಹಾಗೆ, 'ಮುಂದುವರಿಯೋದು ಹೆಂಗೇ ಹೇಳು ಒಬ್ಬರಿಗೊಬ್ಬರು ಸೋಲದೇ..' ಎನ್ನುವುದೇ ನನ್ನ ನಂಬಿಕೆ.

-ಜ್ಯೋತಿ ಗಿರೀಶ್, ಡೋಂಟ್ ಫಾಲ್ ಇನ್ ಲವ್ , ರೈಸ್ ಇನ್ ಲವ್

ಪ್ರೇಮ ವಿವಾಹದ ಬಳಿಕ ಯಶಸ್ವಿ ದಾಂಪತ್ಯದ ರಹಸ್ಯ ಪ್ರೇಮವಲ್ಲ. ಅದು ಪರಸ್ಪರರ ಬಗ್ಗೆ ಇರುವ ಗೌರವ. ಅದು ಪ್ರೇಮಕ್ಕಿಂತಲೂ ದೊಡ್ಡದು. ಎರಡನೆಯದಾಗಿ ಅವರಿಗೆ ನಾವು ನೀಡುವಂಥ ಜಾಗ. ಅದು ಮುಖ್ಯವಾಗುತ್ತದೆ. ಪ್ರೇಮ ಎನ್ನುವುದು ನಮ್ಮ ಕೈಯಲ್ಲಿರುವ ಹಕ್ಕಿ ಅಥವಾ ಚಿಟ್ಟೆಯ ಹಾಗೆ, ಗಟ್ಟಿಯಾಗಿ ಹಿಡಿದರೆ ಸಾಯುತ್ತದೆ. ತುಂಬ ಲೂಸಾಗಿ ಬಿಟ್ಟರೆ ಹಾರಿ ಹೋಗುತ್ತದೆ. ಅದನ್ನು ಹಿಡಿಯಬೇಕು. ಹಿಡಿಯಬಾರದು ಎನ್ನುವಂತಿರಬೇಕು. ಅದೆಲ್ಲ ಹೇಳಿಕೊಟ್ಟು ಕಲಿಯುವಂಥದ್ದಲ್ಲ. ಬೆಳೆದು ಬಂದ ರೀತಿಗೆ ತಕ್ಕಂತೆ ನಾವು ಕಲಿಯುವ ವರ್ತನೆಯಾಗಿರುತ್ತದೆ. ನಿಮ್ಮ ಕಡೆಯಿಂದ ನೀವು ಚೆನ್ನಾಗಿದ್ದರೆ ನಿಮ್ಮ ಪ್ರೀತಿಯೂ ಚೆನ್ನಾಗಿರುತ್ತದೆ. ಯಾಕೆಂದರೆ ಪ್ರೇಮ ಬದುಕಿನ ಒಂದುಭಾಗ. ಮುಖ್ಯವಾಗಿ ಅವರಿಗೆ ಉಸಿರು ಕಟ್ಟಿಸುವಂತಿರಬಾರದು. ಹೆಚ್ಚು ಗಾಳಿಗೆ ಒಡ್ಡುವುದು ಅಥವಾ ಗಾಳಿಯಿರದ ಕಡೆ ಅಡಗಿಸುವುದು ಎರಡೂ ತಪ್ಪು. ಸಹಜವಾದ ಉಸಿರಾಟಕ್ಕೆ ಅವಕಾಶ ಇರಬೇಕು.
ಸಿನಿಮಾ ನಟನಾಗಿ, ಕತೆಗಾರನಾಗಿ, ಒಬ್ಬರನ್ನು ಇಷ್ಟಪಡೋದು ಬೇರೆ. ಈ ಪ್ರೀತಿ ಬೇರೆ. ಇಷ್ಟಪಡುವವರನ್ನೆಲ್ಲ ಪ್ರೀತಿಸಲು ಸಾಧ್ಯವಿಲ್ಲ. ಪ್ರೀತಿಸದವರನ್ನೆಲ್ಲ ಇಷ್ಟಪಡಲು ಸಾಧ್ಯವಾಗಬೇಕೆಂದೇನಿಲ್ಲ. ಅವುಗಳ ನಡುವೆ ಅದ್ಭುತವಾದ ಒಂದು ಬ್ಯಾಲೆನ್ಸ್ ಇರುತ್ತದೆ. ಸೈಕಲ್ ಮೇಲೆ ಕುಳಿತು ಪಯಣಿಸುವಾಗ ನೀವು ರೈಟ್ ಸೈಡ್ ಗೆ ವಾಲಿದರೆ ಮಾತ್ರ ಸೈಕಲನ್ನು ಬಲಭಾಗಕ್ಕೆ ತಿರುಗಿಸಲು ಸಾಧ್ಯ. ಅದುವೇ ಬ್ಯಾಲೆನ್ಸ್. ಇನ್ನೊಂದು ವಿಷಯ ಏನೆಂದರೆ ಜೀವನದಲ್ಲಿ ಶಾಶ್ವತ ಸತ್ಯ ಎನ್ನುವುದೇನು ಇಲ್ಲ. ಉದಾಹರಣೆಗೆ ಹರಿಯುವ ನದಿಯಲ್ಲಿ ಪ್ರತಿಬಿಂಬಗಳು ಕಾಣುವುದಿಲ್ಲ. ನಿಂತ ನೀರಲ್ಲಿ ಮಾತ್ರ ಕಾಣುತ್ತದೆ. ನಮ್ಮ ಬದುಕು ಕೂಡ ಹರಿಯುತ್ತಾ ಇರುತ್ತದೆ. ಹಾಗಾಗಿ ಸ್ಪಷ್ಟ ಪ್ರತಿಬಿಂಬಗಳು ಗೋಚರಿಸದೇ ಹೋಗಬಹುದು. ಅದು ತಪ್ಪಲ್ಲ. ಅದು ಸಹಜ ಗುಣ. ಲವ್ ಎನ್ನುವುದು ನಾಮಪದವಲ್ಲ. ಅದೊಂದು ವರ್ಬ್. ಅದು ಪ್ರೀತಿ ಅಲ್ಲ, ಪ್ರೀತಿಸು ಅಂತ.

ಪ್ರೇಮಿಗಳ ದಿನಕ್ಕೆ ಒಂಟಿತನವೇ ಬೆಸ್ಟ್

ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ಓಶೋ ಫ್ಯಾನ್ ಆಗಿದ್ದೆ. ಆಗ ಓದಿದ್ದಂಥ ಅವರದೊಂದು ಸಾಲು ನೆನಪಾಗುತ್ತದೆ. ಎಲ್ಲರೂ ಹೇಳುತ್ತಾರೆ 'ಫೆಲ್ ಇನ್ ಲವ್' ಅಂತ. ಬಟ್ ಡೋಂಟ್ ಫಾಲ್ ಇನ್ ಲವ್, ರೈಸ್ ಇನ್ ಲವ್' ಎಂದು ಬರೆದಿದ್ದರು. ಅದು ಮಾತಿನ ಚಮತ್ಕಾರವಾದರೂ ಅದನ್ನು ಮೀರಿದ ಒಂದು ಅರ್ಥವಾಗಿ ಕಾಣುವಾಗ ನನಗೆ ಇಷ್ಟವಾಗಿತ್ತು. ಪ್ರೀತಿ ಎನ್ನು ವುದು ಒಂದೇ ಕಂಪಾರ್ಟ್ ಮೆಂಟ್ ನಲ್ಲಿ ಸಾಗುವುದಿಲ್ಲ. ನಾನು ನನ್ನ ಪತ್ನಿಯನ್ನು ನಿಮ್ಮನ್ನು ನನ್ನ ಮಗಳನ್ನು ಎಲ್ಲರನ್ನೂ ಪ್ರೀತಿಸುತ್ತೇನೆ. ಹಾಗಾಗಿ ಪ್ರೀತಿಯ ವ್ಯಾಪಕತೆಯನ್ನು ಅರ್ಥಮಾಡಿಕೊಂಡಂತೆ ದಾಂಪತ್ಯದಲ್ಲಿ ಯಶಸ್ಸು ಕೂಡ ಕಾಣಬಹುದು. ನಾವು ಆ ನಿಟ್ಟಿನಲ್ಲಿ ಸಾಗಬೇಕು.

-ಜೋಗಿ ಹಿರಿಯ ಪತ್ರಕರ್ತರು
 

ಕೆಜಿಎಫ್ ನಂಥ ಚಿತ್ರ ಯಶಸ್ವಿಯಾಗಿ ಚಿತ್ರೀಕರಿಸಲು ಮನೆಯಲ್ಲಿದ್ದೇ ಸಹಕರಿಸಿದ ಪತ್ನಿ ರಾಧಿಕಾಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆ. ಯಾಕೆಂದರೆ ಮದುವೆಯ ಬಳಿಕ ಆಕೆಯತ್ತ ಸರಿಯಾಗಿ ಸಮಯ ನೀಡದೆ ಸದಾ ಚಿತ್ರೀಕರಣದಲ್ಲಿ ನಿರತನಾಗಿದ್ದ ತನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ಕೃತಜ್ಞನಾಗಿರುವುದಾಗಿ ಯಶ್ ಹೇಳಿಕೊಂಡಿದ್ದರು. ರಾಧಿಕಾ ನೇನಾದರೂ ಅಸಮಾಧಾನ ತೋರಿದ್ದರೆ ತಮಗೆ ಚಿತ್ರೀಕರಣದಲ್ಲಿ ತನ್ಮಯವಾಗಿ ಪಾಲ್ಗೊಳ್ಳಲು ಕಷ್ಟವಾಗುತ್ತಿತ್ತು. ಎಂದು ಯಶ್ ಹೇಳಿದ್ದರು. ಈ ಅರ್ಥೈಸುವಿಕೆಯ ಹಿಂದಿನ ರಹಸ್ಯವನ್ನು ರಾಧಿಕಾ ಇಲ್ಲಿ ನಮ್ಮ ಜೊತೆಗೆ ವಿವರಿಸಿದ್ದಾರೆ.

ದಾಂಪತ್ಯದ ಯಶಸ್ಸಿನ ಗುಟ್ಟೇ ಫ್ರೆಂಡ್ಶಿಪ್

ದಾಂಪತ್ಯದ ಯಶಸ್ಸಿನ ಗುಟ್ಟೇ ಫ್ರೆಂಡ್ ಶಿಪ್. ಯಾಕೆಂದರೆ ಸ್ನೇಹದಲ್ಲಿ ನಿರೀಕ್ಷೆಗಳು ಇರುವುದಿಲ್ಲ. ಒಂದು ಸಲ ಗಂಡ ಹೆಂಡಿ ಅಂದರೆ ಹೀಗೆಯೇ ಇರಬೇಕು. ಗಂಡ  ಅಂದರೆ ಹೀಗೆಯೇ ಇರಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೆ ನಿರಾಶೆ, ವಾದ, ಚರ್ಚೆ ಎಲ್ಲವೂ ಆಗುತ್ತದೆ. ಹಾಗಾಗಿ ಸ್ನೇಹಿತರಂತೆ ಇದ್ದು ಅರ್ಥಮಾಡಿಕೊಳ್ಳುವಂತೆ ಇದ್ದರೆ ಅದೇ ದಾಂಪತ್ಯದ ಯಶಸ್ಸಿಗೆ ಕಾರಣ ಎನ್ನಬಹುದು.

-ರಾಧಿಕಾ ಪಂಡಿತ್- ಚಿತ್ರ ನಟಿ


ಮದುವೆ ದಿನ ಪ್ರೇಮಿಗಳ ದಿನ ಎಂದೇ ಗೊತ್ತಿರಲಿಲ್ಲ! ವಿ ರವಿಚಂದ್ರನ್

'ನಿಜ ಹೇಳೋದಾದ್ರೆ ನನಗೆ ಆಗ ಫೆಬ್ರವರಿ ೧೪ ವೆಲಂಟೈನ್ ಡೇ ಅಂತ ಗೊತ್ತೇ ಇರಲಿಲ್ಲ. ಆದರೆ ನನ್ನ ಮದುವಯಂತೂ ಅದೇ ದಿನ ಆಯಿತು. ಅದಕ್ಕೆ ತಕ್ಕ ಹಾಗೆ 'ಪ್ರೇಮಲೋಕ' ಎನ್ನುವ ಚಿತ್ರಾನೂ ಮಾಡಿದೆ. ಹಾಗಾಗಿ ಎಲ್ಲರಿಗೂ ಪ್ರೇಮಿಗಳ ಐಕಾನ್ ಥರ ಇದೆ. ಆದರೆ ಹುಡುಗಿಯನ್ನು ಪ್ರೀತಿಸ್ತೀನಿ ಅನ್ನೋದು ಮುಖ್ಯ ಅಲ್ಲ. ಬದುಕನ್ನು ಹೇಗೆ ಪ್ರೀತಿಸುತ್ತೀನಿ ಎಂದು ತೋರಿಸೋದು ಮುಖ್ಯ. ನನ್ನದು ಲವ್ ಮ್ಯಾರೇಜ್ ಅಲ್ಲದಿರಬಹುದು. ಆದರೆ ನನ್ನ ಫ್ಯಾಮಿಲಿಗೆ ಪ್ರೀತಿಗೆ ಕೊರತೆ ಮಾಡಿಲ್ಲ. ಮಾಡಲ್ಲ ಅಂತ ಅವರಿಗೂ ಗೊತ್ತು. ಗಂಡನನ್ನ ಅರ್ಥಮಾಡಿಕೊಳ್ಳುವ ಪತ್ನಿ ಸಿಗೋದು ಅದೃಷ್ಟ ಅಂತಾರೆ. ಆ ಅದೃಷ್ಟ ನನಗೆ ಸಿಕ್ಕಿದೆ'

ವಿ.ರವಿಚಂದ್ರನ್, ನಟ- ನಿರ್ದೇಶಕ
 

ಕ್ರೇಜಿಸ್ಟಾರ್ ಗೆ ಸಿನಿಮಾದಲ್ಲಿ ಇರುವ ಪ್ರೇಮಿಯ ಇಮೇಜ್ ಹಾಗೆಯೇ. ಕಿರುತೆರೆಯಲ್ಲಿ ಎಲ್ಲ ಹೆಂಗಳೆಯರ ಗಮನ ಸೆಳೆದಂಥ ತಾರೆ ವಿಜಯಸೂರ್ಯ. ಕಾಕತಾಳೀಯ ಎನ್ನುವ ಹಾಗೆ ಚಿತ್ರವೊಂದರಲ್ಲಿ ಅವರ ಪುತ್ರನಾಗಿಯೂ ನಟಿಸಿದ್ದಾರೆ. ರವಿಚಂದ್ರನ್ ಹಾಗೆ ಇವರು ಕೂಡ ಪ್ರೇಮಿಗಳ ದಿನದಂದೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ತಮ್ಮ ಜೋಡಿಯ ಕುರಿತಾದ ಅಭಿಪ್ರಾಯವನ್ನು ಅವರು ಹೀಗೆ ಹಂಚಿಕೊಂಡಿದ್ದಾರೆ.

ವೆಲಂಟೈನ್ ದಿನವೇ ಮದುವೆಗೆ ಯೋಗ ಕೂಡಿ ಬಂತು

ನನ್ನ ಮದುವೆ ಕಳೆದ ವರ್ಷ  ವೆಲೆಂಟೈನ್ ಡೇ ದಿನ ನಡೆಯಿತು. ಆದರೆ ಅದು ಬೇಕೆಂದೇ ಅರೇಂಜ್  ಹಾಕಿದ ಪ್ಲ್ಯಾನ್ ಅಲ್ಲ. ಮೊದಲನೆಯದಾಗಿ ನನ್ನದು ಅರೇಂಜ್ ಮ್ಯಾರೇಜ್. ಮನೆಯಲ್ಲಿ ಅಮ್ಮ ನೋಡಿ, ಜಾತಕ ನೋಡಿ ಆಮೇಲೆ ನನಗೆ ಹೇಳಿ ಆಮೇಲೆ ಓಕೆ ಆಯಿತು. ಹುಡುಗಿ ಹೆಸರು ಚೈತ್ರಾ. ಮುಹೂರ್ತ ವ್ಯಾಲಂಟೈನ್ ಡೇಯಂದೇ ಕೂಡಿ ಬಂದದ್ದು ಖುಷಿಯಾಗಿತ್ತು. ನನಗೆ ಅವಳಲ್ಲಿ ಇಷ್ಟ ಆದ ಗುಣ ಏನೆಂದರೆ ಆಕೆ ತುಂಬ ಪ್ರ್ಯಾಕ್ಟಿಕಲ್. ಇಂಡಿಪೆಂಡೆಂಟ್ ಹುಡುಗಿ. ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಟಿವಿಯಲ್ಲಿ ನೋಡಿ ಇಷ್ಟ ಪಡೋರು ಅಥವಾ ನಾನಿರುವ ಇಂಡಸ್ಟ್ರಿಯಿಂದಾಗಿ ಇಷ್ಟ  ಪಡೋ ಹುಡುಗಿ ನನಗೆ ಬೇಕಿರಲಿಲ್ಲ. ಅದೃಷ್ಟಕ್ಕೆ ಈಕೆಗೆ ಇಂಡಸ್ಟ್ರಿ ನೋಡಿ ಎಕ್ಸೈಟ್ಮೆಂಟ್ ಏನೂ ಇಲ್ಲ. ಅದೂ ಒಂದು ಕೆಲಸ ಎನ್ನುವಂತೆ ನೋಡ್ತಾರೆ. ಅದೇ ನನಗೆ ಇಷ್ಟ ಆಗಿದ್ದು. ಹೆಂಡ್ತಿ ಆಗೋವವಳು ನನ್ನನ್ನು ಆಕ್ಟರ್ ತರಹ ನೋಡಬಾರದು. ಲೈಫ್ ಪಾರ್ಟ್ನರ್ ತರಹ ನೋಡಬೇಕು. ಐ.ಟಿ. ಕೆಲಸದಲ್ಲಿದ್ದಾರೆ. ನನ್ನ ಎತ್ತರಕ್ಕೆ ತಕ್ಕ ಹಾಗೆ ಇದ್ದಾರೆ. ಒಟ್ಟಿನಲ್ಲಿ ಸಿಂಪಲ್ ಕಲ್ಚರ್ ಹುಡುಗಿ.

ವಿಜಯ್ ಸೂರ್ಯ- ಚಿತ್ರ ನಟ

ಪ್ರಸ್ತುತ ಮಮತಾಮಯಿ ತಾಯಿಯಾಗಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿರುವ ತಾರಾ, ದಶಕಗಳ ಹಿಂದೆ, ದಶಕಗಳ ಕಾಲ ಗ್ಲಾಮರಸ್ ತಾರೆಯಾಗಿ ಗಮನ ಸೆಳೆದವರು. ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇವರು ಖ್ಯಾತ ಛಾಯಾಗ್ರಾಹಕ ವೇಣುವಿನ ಜೊತೆಗಿನ ದಾಂಪತ್ಯ ಬದುಕಿನಲ್ಲಿಯೂ ಹಾಗೆ ಎನ್ನುವುದನ್ನು ತಮ್ಮ ಮಾತುಗಳಲ್ಲೇ ವ್ಯಕ್ತಪಡಿಸಿದ್ದಾರೆ.

ಸಲಿಂಗ್ ಕರಣ್‌ಗೆ ಸಂಗಾತಿ ಇದ್ದಾರಾ?

ನನ್ನ ನಿಶ್ಚಿತಾರ್ಥ ನಡೆದಿದ್ದೇ ಪ್ರೇಮಿಗಳ ದಿನದಂದು

ಪ್ರೀತಿ ನಿಜವಾದ ಪ್ರೀತಿ ಆದರೆ ಸಾಕು, ಎನ್ನುವುದು ಒಂದು. ಇನ್ನೊಂದು ನಂಬಿಕೆ ಎನ್ನುವುದು ಮುಖ್ಯ. ಇಬ್ಬರಲ್ಲಿಯೂ ನಂಬಿಕೆ ಮುಖ್ಯ. ಪ್ರೀತಿ ಜೊತೆಗೆ ನಂಬಿಕೆಯೂ ಸಮವಾಗಿರಬೇಕು ಇಬ್ಬರೂ ಸಮಸಮವಾಗಿ ಸ್ನೇಹದಲ್ಲಿರಬೇಕು. ಹೆಣ್ಣು ಮಗಳಿಗೆ ತಂದೆ ಹೇಗೋ ಹಾಗೆಯೇ ಗಂಡನೂ ಆಗಿರಬೇಕು. ಪತಿ ಪತ್ನಿ ಸಂಬಂಧ ಏನೇ ಇರಬಹುದು. ಆದರೆ ತಂದೆಯನ್ನು ಕಾಣುವ ಪತ್ನಿಗೆ ಗಂಡ ಕೂಡ ಆಕೆಯನ್ನು ತಾಯಿಯ ಸ್ಥಾನದಲ್ಲಿ ನೋಡವವನಾಗಿರಬೇಕು. ನನ್ನ ಬದುಕನ್ನು ವೈಯಕ್ತಿಕವಾಗಿ ಹೇಳುವುದಾದರೆ ಮನೆ, ಮಗು, ಸಿನಿಮಾ, ರಾಜಕೀಯ, ಇವು ಯಾವುದು ಕೂಡ ನನಗೆ ಪ್ರತ್ಯೇಕ ಎಂದು ಅನಿಸಿಲ್ಲ. ಅದೇ ರೀತಿ ಯಾವುದನ್ನು ಯಾವುದಕ್ಕಾಗಿಯೂ ನಾನು ಪ್ರ್ಯಾಕ್ಟೀಸ್ ಮಾಡಿದವಳಲ್ಲ. ರಾಜಕೀಯಕ್ಕಾಗಿ ಸಿನಿಮಾ ಸಿನಿಮಾಗಾಗಿ ಮಗು ಎಂದು ಯಾವತ್ತಿಗೂ ದೂರ ಮಾಡಿಕೊಂಡವಳಲ್ಲ. ಹಾಗಾಗಿ ನಾನು ಯಾವುದನ್ನು ಕೂಡ ತ್ಯಾಗದಿಂದ, ಕಾಂಪ್ರಮೈಸ್ ನಿಂದ ಮಾಡಲ್ಲ. ಎಲ್ಲವನ್ನೂ ಹಂಡ್ರೆಡ್ ಪರ್ಸೆಂಟ್ ಇಷ್ಟದಿಂದಲೇ ಮಾಡಿದ್ದೇನೆ.

ಆಕ್ಚುವಲಿ ನಾನು ವ್ಯಾಲಂಟೈನ್ ಡೇ ಮಾಡಲ್ಲ. ನಿಜ ಹೇಳಬೇಕೆಂದರೆ ನಾವು ಭಾರತೀಯರಿಗೆ ನಮ್ಮ ಪ್ರೀತಿಯನ್ನು , ತಾಯಿಯನ್ನು, ತಂದೆಯನ್ನು ನೆನಪಿಸಿಕೊಳ್ಳೋಕೆ ಅಂತ ಪರ್ಟಿಕ್ಯುಲರ್ ಆಗಿ ಒಂದು ಡೇಯ ಅಗತ್ಯವಿಲ್ಲ. ವಿದೇಶದೋರು ಹದಿನೆಂಟು ವರ್ಷಕ್ಕೆ ಮನೆ ಬಿಡೋದ್ರಿಂದ ನೆನಪಿಗೋಸ್ಕರ ಹಾಗೆ ಮಾಡ್ತಾರೆ ಅಷ್ಟೇ. ಆದ್ರೆ, ಈ ದಿನ ನನ್ನ ಮಟ್ಟಿಗೆ ಮರೆಯಲಾರದ ದಿನ. ಯಾಕೆಂದರೆ ೨೦೦೫ ರಲ್ಲಿ ನನ್ನ ಮದುವೆ ಇದೇ ವೆಲಂಟೈನ್ ಡೇ ದಿನವೇ ಆಗಿತ್ತು. ಆದರೆ ಅದು ಕಾಕಾತಾಳೀಯ ಅಷ್ಟೇ. ನನ್ನ ಮತ್ತು ವೇಣು ಪಾಲಿಗೆ ಪ್ರತಿ ದಿನವೂ ವ್ಯಾಲಂಟೈನ್ ಡೇ ಯ ಹಾಗೆಯೇ.

ತಾರಾ ಅನುರಾಧ, ಚಿತ್ರ ನಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು