ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ 2' ಚಿತ್ರದ ಚಿತ್ರೀಕರಣ ತಯಾರಿ ಜೋರಾಗಿ ನಡೆಯುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ಜೊತೆ ಮಾತುಕತೆ...
- ರಾಜೇಶ್ ಶೆಟ್ಟಿ
ಸೈಮಾ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಗಳು, ದೊಡ್ಡ ದೊಡ್ಡ ಸ್ಟಾರ್‌ಗಳು ನಿಮ್ಮನ್ನು ಗುರುತಿಸಿ ಮೆಚ್ಚಿ ಮಾತನಾಡುವಾಗಿನ ಸಂಭ್ರಮ ಹೇಗಿರುತ್ತದೆ?
undefined
ನನಗೆ ಜನರೇ ದೊಡ್ಡ ಪ್ರಶಸ್ತಿ. ನನಗೆ ಅಷ್ಟು ದೊಡ್ಡ ಗೆಲುವು ಕೊಟ್ಟಿದ್ದಾರೆ. ಅವರ ಪ್ರೀತಿಯ ಮುಂದೆ ಏನೂ ಇಲ್ಲ. ಪ್ರಶಸ್ತಿಗಳು ಕೂಡ ಖುಷಿ ಕೊಡುತ್ತದೆ. ಶಾಲೆಯಲ್ಲಿ ಬಹುಮಾನ ಬಂದಾಗ ಎಲ್ಲರ ಮುಂದೆ ಪ್ರಶಸ್ತಿ ತೆಗೆದುಕೊಳ್ಳುವ ಸಂಭ್ರಮದ ಭಾವ ಇದೆಯಲ್ಲ, ಅದು ಸಂತೋಷ ಕೊಡುತ್ತದೆ. ಅದಕ್ಕಿಂತ ಹೆಚ್ಚಾಗಿ ನಾನು ಹಲವು ವರ್ಷಗಳಿಂದ ಸಿನಿಮಾ ನೋಡುತ್ತಾ ಬೆಳೆದ ಕಲಾವಿದರ ಮುಂದೆ ನಿಂತು ಪ್ರಶಸ್ತಿ ಪಡೆದದ್ದು ಹೆಚ್ಚು ಸಂತೋಷ ಕೊಟ್ಟಿತು. ಕಮಲ್ ಹಾಸನ್‌ರಂತಹ ಮಹಾನಟನ ಪಕ್ಕ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದೇ ದೊಡ್ಡ ಅದೃಷ್ಟ.
ಕಾಂತಾರದ ದೊಡ್ಡ ಗೆಲುವಿನಿಂದ ನೀವು ಪಡೆದುಕೊಂಡಿದ್ದೇನು, ಕಳೆದುಕೊಂಡಿದ್ದೇನು?
ನಾನು ರಿಕ್ಕಿ ಸಿನಿಮಾ ಮಾಡಿದ ಕಾಲದಿಂದಲೂ ನನಗೆ ಎಕ್ಸೈಟ್‌ಮೆಂಟ್ ಮತ್ತು ಎಕ್ಸ್‌ಪೆಕ್ಟೇಷನ್ ಇಲ್ಲ ಎಂದೇ ಹೇಳಿಕೊಂಡು ಬಂದಿದ್ದೇನೆ. ಅದೆರಡು ಇದ್ದಾಗ ಭ್ರಮ ನಿರಸನಗಳು ಆಗುತ್ತಿರುತ್ತದೆ. ಈ ಗೆಲುವು ದೊಡ್ಡ ಪ್ರಮಾಣದ ಪ್ರೇಕ್ಷಕರಿಗೆ ದೊಡ್ಡ ಸಿನಿಮಾ ಮಾಡುವ ವಿಶ್ವಾಸವನ್ನು ಕೊಟ್ಟಿದೆ. ಈ ಗೆಲುವು ನನಗೆ ಜನರನ್ನು ಕೊಟ್ಟಿದೆ. ಜನರ ಪ್ರೀತಿಯನ್ನು ಕೊಟ್ಟಿದೆ. ಒಂದು ಸಿನಿಮಾದ ಗೆಲುವು ಪ್ರತಿಯೊಬ್ಬ ಕಲಾವಿದನಿಗೂ ತುಂಬಾ ಮುಖ್ಯ. ಗೆಲುವು ಸಿಕ್ಕಾಗಲೇ ಮುಂದುವರಿಯೋಕೆ ಸಾಧ್ಯ, ಬದುಕೋಕೆ ಸಾಧ್ಯ, ಚಿತ್ರರಂಗದಲ್ಲಿರೋಕೆ ಸಾಧ್ಯ. ಹಾಗಾಗಿ ಈ ಗೆಲುವು ನನಗೆ ಅಪರಿಮಿತ ಸಾಧ್ಯತೆಗಳನ್ನು ನೀಡಿದೆ. ಇನ್ನು ದೊಡ್ಡ ಮಟ್ಟಕ್ಕೆ ಹೋದಾಗ ಮೊದಲಿನ ಥರ ಇರುವುದು ಸ್ವಲ್ಪ ಕಷ್ಟವಾಗುತ್ತದೆ. ಮೊದಲಾದರೆ ನಾನು ಎಲ್ಲಾದರೂ ಬೀದಿಯಲ್ಲಿ ಕ್ಯಾಮೆರಾ ಹಿಡಿದು ಚಿತ್ರೀಕರಣ ಮಾಡಬಹುದಿತ್ತು. ಆದರೆ ಈಗ ಅದು ಸ್ವಲ್ಪ ಕಷ್ಟ.
ಪುನೀತ್ ರಾಜ್‌ಕುಮಾರ್, ದೈವನರ್ತಕರಿಗೆ ಸೈಮಾ ಪ್ರಶಸ್ತಿ ಅರ್ಪಿಸಿದ ರಿಷಭ್: ವೈಟ್ & ವೈಟ್ ಧಿರಿಸಿನಲ್ಲಿ ಮಿಂಚಿದ ಲೀಲಾ
ಪ್ರಸ್ತುತ ನೀವು ಎದುರಿಸುವ ಸವಾಲುಗಳು?
ಕಾಂತಾರದ ಮುಂದಿನ ಭಾಗಕ್ಕೆ ಕುತೂಹಲ ಇದೆ. ಆ ಕಾರಣಕ್ಕೆ ಅನೇಕ ಡಿಜಿಟಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿಗಳು ಪ್ರಸಾರವಾಗುತ್ತವೆ. ಇನ್ನು ಮುಖ್ಯವಾದ ಮಾಹಿತಿ ಯಾರಾದರೂ ಲೀಕ್ ಮಾಡಿದರೆ ಅನ್ನುವ ಆತಂಕ ಕೂಡ ಇರುತ್ತದೆ. ಸಿನಿಮಾವನ್ನು ಅಭಿಮಾನಿಗಳು ಶುದ್ಧವಾಗಿ ನೋಡಬೇಕು ಅನ್ನುವುದು ನನ್ನ ಆಸೆ. ಈ ರೂಮರ್‌ಗಳಿಗೆ, ತಪ್ಪು ಮಾಹಿತಿಗಳಿಗೆ ಉತ್ತರ ಕೊಡುವುದು ಕಷ್ಟವಾಗಿದೆ. ಕೆಲವೊಂದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎನ್ನುವುದು ನನ್ನ ನಂಬಿಕೆ. ನನ್ನ ಕೆಲಸದಲ್ಲಿ ನಾನು ನಿರತನಾಗಿದ್ದೇನೆ.
ನಿರೀಕ್ಷೆ ಇಲ್ಲದಿದ್ದಾಗ ಕತೆ ಮಾಡುವುದಕ್ಕೂ ಈಗ ಕತೆ ಬರೆಯುವುದಕ್ಕೂ ವ್ಯತ್ಯಾಸ ಇದೆಯೇ?
ಇಲ್ಲ. ನನ್ನ ಕೆಲಸದ ರೀತಿ ಹಾಗೇ ಇದೆ. ನನ್ನದು ಎಲ್ಲಾ ರೀತಿಯ ಪ್ರೇಕ್ಷಕರಿಗೆ ತಲುಪುವ ಕತೆ ಹೇಳಬೇಕು ಎಂಬ ಉದ್ದೇಶ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಈ ಸಲವೂ ಊರಿಗೆ ಬಂದು ಒಂದು ಮನೆ ಮಾಡಿಕೊಂಡು ನಮ್ಮ ತಂಡದ ಜೊತೆ ಕೆಲಸ ಮಾಡುತ್ತಿದ್ದೆ. ಸಂಜೆ ಹೊತ್ತು ಕ್ರಿಕೆಟ್ ಆಡಿಕೊಂಡು ಸಹಜವಾಗಿಯೇ ಇದ್ದೇನೆ. ದೊಡ್ಡ ಸಿನಿಮಾ ಮಾಡುತ್ತಿದ್ದೇನೆ ಅಂತ ನಾನು ನನ್ನ ಬದುಕಿನ ರೀತಿ ಬದಲಿಸಲು ಆಗುವುದಿಲ್ಲ. ಒತ್ತಡದಲ್ಲಿ ಕೆಲಸ ಮಾಡುವಾಗ ಕತೆ ಹುಟ್ಟುವುದಿಲ್ಲ. ನಾನು ಇದುವರೆಗೆ ಮಾಡಿದ ಎಲ್ಲಾ ಚಿತ್ರಗಳಿಗೂ ಒಂದೇ ರೀತಿಯ ಶ್ರಮವನ್ನು ಹಾಕಿದ್ದೇನೆ. ಮುಂದೆಯೂ ಅಷ್ಟೇ ಶ್ರಮ ಹಾಕುತ್ತೇನೆ. ಕಾಂತಾರ ಚಿತ್ರವನ್ನು ಜನ ಮೇಲೆ ಎತ್ತಿದರು. ಅದರ ಕ್ರೆಡಿಟ್ ಪ್ರೇಕ್ಷಕರಿಗೆ ಸಲ್ಲಬೇಕು.
ಕಾಂತಾರ 2ಗೆ ಬಜೆಟ್ ತುಂಬಾ ದೊಡ್ಡದಾಗಿದೆ ಎಂಬ ಸುದ್ದಿ ಇದೆ, ಹೌದೇ?
ಕಾಂತಾರ ಸಿನಿಮಾ ಮಾಡುವಾಗಲೂ ನನ್ನ ತಲೆಯಲ್ಲಿ ನಾನು ಬಹಳ ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದೇನೆ ಅಂತಲೇ ಇತ್ತು. ಅಲ್ಲಿಯವರೆಗೆ ನಾನೊಬ್ಬ ಸಾಧಾರಣ ನಟ ಆಗಿದ್ದೆ. ನನ್ನ ಮೇಲೆ ₹16 ಕೋಟಿ ಬಜೆಟ್ ತುಂಬಾ ದೊಡ್ಡದೇ ಆಗಿತ್ತು. ಈಗ ಹೊಂಬಾಳೆ ಫಿಲಂಸ್‌ಗೆ ನಾನೊಂದು ಕತೆ ಹೇಳಿದ್ದೇನೆ. ಅವರಿಗೆ ಆ ಕತೆ ತುಂಬಾ ಇಷ್ಟವಾಗಿದೆ. ಅದಕ್ಕೆ ತಕ್ಕಂತೆ ಅವರು ಬಜೆಟ್ ಕೊಡುತ್ತಾರೆ. ಸಿನಿಮಾಗೆ ಏನೇನು ಬೇಕೋ ಅದನ್ನು ಸಿನಿಮಾ ಕೇಳುತ್ತದೆ. ನಾನು ಸಿನಿಮಾಗಾಗಿ ಏನೇನು ಕಲಿಯಬೇಕೋ ಅದನ್ನು ಸಿನಿಮಾನೇ ಕಲಿಸಿಕೊಡುತ್ತದೆ.
ಮಕ್ಕಳ ಜೊತೆ ಯಶೋಧೆಯಾಗಿ ಪ್ರಗತಿ; ರಿಷಬ್ ಶೆಟ್ಟಿ ಮನೆಯ ಕೃಷ್ಣ- ರಾಧಾ ಮುದ್ದೋ ಮುದ್ದು!
ಕಾಂತಾರ 2 ತಯಾರಿ ಹೇಗಿದೆ?
ಸ್ಕ್ರಿಪ್ಟ್ ಕೆಲಸ, ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಆ ಪಾತ್ರಕ್ಕಾಗಿ ನಾನೂ ತಯಾರಾಗುತ್ತಿದ್ದೇನೆ. ನಿರ್ದೇಶನಕ್ಕೆ ಬೇಕಾದ ಹೊಸ ತಂತ್ರಗಳನ್ನೂ ನನ್ನದಾಗಿಸಿಕೊಳ್ಳುತ್ತಿದ್ದೇನೆ. ಮೊದಲನೇ ಭಾಗ ನಮ್ಮ ಊರಿನಲ್ಲಿ ಮಾತ್ರ ಚಿತ್ರೀಕರಣ ಆಗಿತ್ತು. ಈ ಸಲ ಊರಿನಲ್ಲೂ ಶೂಟಿಂಗ್ ಇದೆ. ಅದ ಜೊತೆ ಬೇರೆ ಭಾಗಗಳಲ್ಲೂ ಚಿತ್ರೀಕರಣ ಮಾಡುತ್ತೇವೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಹೊರಡುತ್ತೇವೆ. ಕಾಂತಾರದ ಬಳಿಕ ಈಗ ಅನೇಕ ಕಡೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಬೀಳುತ್ತದೆ. ಇನ್ನು ಮುಂದೆ ಸಿನಿಮಾ ಮುಗಿಯುವವರೆಗೆ ಅನಿವಾರ್ಯ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೆ ಯಾವುದಕ್ಕೂ ಒಪ್ಪಿಕೊಳ್ಳುವುದಿಲ್ಲ. ಒಂದು ಅಚ್ಚರಿಯ ಸಿನಿಮಾದೊಂದಿಗೆ ನಿಮ್ಮ ಮುಂದೆ ಬರುತ್ತೇನೆ.